ಕನ್ನಡ ವಾರ್ತೆಗಳು

ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸಮಾಲೋಚನಾ ಸಭೆ.

Pinterest LinkedIn Tumblr

dc_meeting_photo_1

ಮಂಗಳೂರು, ಫೆ.07 : ನಗರದ ಸುತ್ತಮುತ್ತ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ನಿಯಂತ್ರಣವಿಲ್ಲದೇ ವಿಶೇಷ ಆರ್ಥಿಕ ವಲಯದಂತಹ ಹಲವಾರು ಕೈಗಾರಿಕೆಗಳು ಕಾರ್ಯಾಚರಿಸುತ್ತಿವೆ. ಈ ಬಗ್ಗೆ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಥಮವಾಗಿ ಗಮನಹರಿಸುವ ಮೂಲಕ ಹವಾಮಾನ ಬದಲಾವಣೆಗೆ ಪೂರಕವಾದ ಕ್ರಿಯಾ ಯೋಜನೆ ತಯಾರಿಸಬೇಕು. ಹೀಗೊಂದು ಆಗ್ರಹ ಇಂದು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ವಾಯು ಮಾಲಿನ್ಯ ನಿಯಂತ್ರಣ ಮಂಡಳಿ ಹಮ್ಮಿಕೊಂಡಿದ್ದ ಸಮಾಲೋಚನಾ ಸಭೆಯಲ್ಲಿ ಸಾರ್ವಜನಿಕರಿಂದ ವ್ಯಕ್ತವಾಯಿತು.

ಸಿಟಿಝನ್ ಫೋರಂನ ಪದ್ಮನಾಭ ಉಳ್ಳಾಲ್ ಅಭಿಪ್ರಾಯ ವ್ಯಕ್ತಪಡಿಸುತ್ತ್ತ, ಸುಪ್ರೀಂಕೋರ್ಟ್ ನ ಆದೇಶದಂತೆ ಜನವಸತಿ ಸುತ್ತಲಿನ 20 ಕಿ.ಮೀ. ಸುತ್ತ ಕೈಗಾರಿಕಾವಲಯ ಇರಬಾರದೆಂಬ ನಿಯಮವಿದ್ದರೂ ಮಂಗಳೂರಿನಲ್ಲಿ ಆ ಬಗ್ಗೆ ಗಮನಹರಿಸಲಾಗಿಲ್ಲ. ಜನವಸತಿ ಪ್ರದೇಶಗಳಿಗೆ ತಾಗಿಕೊಂಡೇ ಕೈಗಾರಿಕೆಗಳು ನಿರ್ಮಾಣವಾಗುತ್ತಿದ್ದರೂ ಮಾಲಿನ್ಯ ನಿಯಂತ್ರಣ ಮಂಡಳಿಯ ನಿಯಂತ್ರ ಣವೇ ಇಲ್ಲವಾಗಿದೆ ಎಂದು ದೂರಿದರು. ಕೃಷಿ ವಲಯಗಳನ್ನು ಕೈಗಾರಿಕಾ ವಲಯಗಳನ್ನಾಗಿ ಪರಿವರ್ತಿಸುತ್ತಿರುವ ಬಗ್ಗೆಯೂ ಸೂಕ್ತ ಮಾಹಿತಿ ಇಲ್ಲವಾಗಿದೆ. ನದಿಯ ನೀರನ್ನು ನಗರ ಪ್ರದೇಶಗಳಿಗೆ ಕುಡಿಯಲು ಉಪಯೋಗಿಸಲಾಗುತ್ತದೆ. ಈ ನದಿಗಳಿಂದ ನೀರು ಪಂಪ್ ಮಾಡುವ ಸಂದರ್ಭ ಅದಕ್ಕೆ ನದಿಗೆ ಅಳವಡಿಸಲಾಗುವ ಪೈಪ್ ನದಿಯ ನೀರಿನ ಆಳದಿಂದ ಒಂದೂವರೆ ಮೀಟರ್ ಮೇಲಕ್ಕಿರಬೇಕು. ಇದರಿಂದಾಗಿ ನದಿಯ ನೀರು ಬತ್ತದೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೀರಿನ ಸೆಲೆ ದೊರೆಯಲು ಸಾಧ್ಯವಾಗುತ್ತದೆ. ನಗರ ಪ್ರದೇಶದಲ್ಲಿ ಫ್ಲಾಟ್‌ಗಳ ನಿರ್ಮಾಣ ಹೆಚ್ಚುತ್ತಿದ್ದು, ಹಸಿರು ಪರಿಸರವನ್ನು ಸಂರಕ್ಷಿಸುವ ಮೂಲಕ ಹವಾಮಾನ ವೈಪರೀತ್ಯವನ್ನು ತಡೆಗಟ್ಟುವ ಸಲುವಾಗಿ ಪ್ಲಾಟ್ ನಿರ್ಮಾಣದ ಸಂದರ್ಭ ಕನಿಷ್ಠ 2 ಮರಗಳನ್ನಾದರೂ ನೆಟ್ಟು, ಬೆಳೆಸಿ ಪೋಷಿಸುವ ಕಡ್ಡಾಯ ಕಾನೂನು ರೂಪಿಸಬೇಕು ಎಂದವರು ಅಭಿಪ್ರಾಯಿಸಿದರು.

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವಾರ್ಷಿಕ 17 ಕೋಟಿ ರೂ. ವೆಚ್ಚದ ಘನತ್ಯಾಜ್ಯ ನಿರ್ವಹಣೆ ಯೋಜನೆಯು ವೈಜ್ಞಾನಿಕವಾಗಿಲ್ಲ. ಇಲ್ಲಿ ಪ್ಲಾಸ್ಟಿಕ್‌ನ್ನು ಬೆಂಕಿ ಹಾಕಿ ಸುಡುವ ವ್ಯವಸ್ಥೆ ಇದೆ. ಈ ಬಗ್ಗೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಗಮನಹರಿಸಬೇಕಾಗಿದೆ ಎಂದು ಪದ್ಮನಾಭ ಉಳ್ಳಾಲ್ ಹೇಳಿದರು. ಪರಿಸರ ಪೊಲೀಸ್ ಠಾಣೆ ಸ್ಥಾಪನೆ ಆಗಲಿ: ಕೈಗಾರಿಕೆಗಳಿಗೆ ಪರವಾನಿಗೆ ನೀಡುವ ಸಂದರ್ಭ ಅದರಿಂದ ಪರಿಸರಕ್ಕೆ ಆಗುವ ಹಾನಿಯ ಬಗ್ಗೆ ಸೂಕ್ತ ಅಧ್ಯಯನ ನಡೆಸಲಾಗುವುದಿಲ್ಲ. ಜಿಲ್ಲೆಯಲ್ಲೀಗ ಪಿಸಿಪಿಐಆರ್ ಪೆಟ್ರೋ ಹಬ್ ಸ್ಥಾಪನೆಗೆ ಸಿದ್ಧತೆ ನಡೆಯುತ್ತಿದೆ. ಎತ್ತಿನಹೊಳೆ ಯೋಜನೆಗೆ ಮುಂದಾಗಲಿದೆ. ಇಂತಹ ಯೋಜನೆಗಳ ಮೂಲಕ ಸರಕಾರವೇ ಪರಿಸರ ನಾಶಕ್ಕೆ ತೊಡಗಿರುವುದು ವಿಪರ್ಯಾಸ ಎಂದು ಪರಿಸರ ಹೋರಾಟಗಾರ ದಿನೇಶ್ ಪೈ ಹೇಳಿದರು. ಪಶ್ಚಿಮ ಘಟ್ಟದಲ್ಲಿ ಯಾವುದೇ ವಿಧ್ವಂಸಕ ಕೈಗಾರಿಕೆಗಳು ಬಾರದಂತೆ ಕ್ರಮ ಕೈಗೊಳ್ಳಬೇಕು ಎಂದು ಅಭಿಪ್ರಾಯಿಸಿದ ಅವರು, ಪರಿಸರ ಪೊಲೀಸ್ ಠಾಣೆಗಳನ್ನು ರಚಿಸುವ ಅಗತ್ಯವಿದೆ ಎಂದು ಹೇಳಿದರು.

ಎನ್‌ಐಟಿಕೆಯ ಎಲ್.ಲಕ್ಷ್ಮಣ್ ಮಾತನಾಡಿ, ತೀವ್ರ ರೀತಿಯಲ್ಲಿ ಪರಿಸರ ನಾಶಕ್ಕೆ ಗುರಿಯಾಗಿರುವ ಪ್ರದೇಶಗಳನ್ನು ಗುರುತಿಸಿ ಅದರ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು. ಜೊತೆಯಲ್ಲೇ ಹವಾಮಾನ ಬದಲಾವಣೆಯಿಂದ ಭವಿಷ್ಯದಲ್ಲಿ ಆಗಬಹುದಾದ ತೊಂದರೆಗಳ ಬಗ್ಗೆ ಗಮನಹರಿಸಬೇಕು ಎಂದರು. ಹವಾಗುಣ ಬದಲಾವಣೆಯ ಬಗ್ಗೆ ಭಾರತ ಸರಕಾರವು ರಾಷ್ಟ್ರೀಯ ಕ್ರಿಯಾ ಯೋಜನೆಯನ್ನು ತಯಾರಿಸುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರವು ರಾಜ್ಯ ಕ್ರಿಯಾ ಯೋಜನೆಯನ್ನು ತಯಾರಿಸುವ ಸಲುವಾಗಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ರಾಜ್ಯದ ವಿವಿಧ ಭಾಗಗಳಲ್ಲಿನ ಹವಾಮಾನ ಪರಿಸ್ಥಿತಿ ಕುರಿತಂತೆ ತಜ್ಞರು, ಪರಿಸರ ಪ್ರೇಮಿಗಳು ಹಾಗೂ ಸಾರ್ವಜನಿಕ ಅಭಿಪ್ರಾಯವನ್ನು ಸಂಗ್ರಹಿಸುತ್ತಿದೆ. ರಾಜ್ಯದಲ್ಲಿ ಒಟ್ಟು 15 ಇಂತಹ ಸಭೆಗಳನ್ನು ನಡೆಸಲು ಯೋಜಿಸಲಾಗಿದ್ದು,

ಸಭೆಯಲ್ಲಿ ವ್ಯಕ್ತವಾಗುವ ಅಭಿಪ್ರಾಯಗಳ ಸವಿಸ್ತಾರವಾದ ವರದಿ ತಯಾರಿಸಿ, ರಾಜ್ಯ ಸರಕಾರಕ್ಕೆ ನೀಡಲಾಗುವುದು. ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಹಿರಿಯ ಪರಿಸರ ಅಧಿಕಾರಿ ಎನ್.ಲಕ್ಷ್ಮಣ್ ತಿಳಿಸಿದರು. ಮಣಿಪಾಲ ವಿವಿಯ ಪ್ರೊ.ರಘುವೀರ್ ಪೈ, ದಿಶಾ ಟ್ರಸ್ಟ್‌ನ ಹೆನ್ರಿ ವಾಲ್ಟರ್, ಮಂಗಳೂರು ವಿವಿಯ ಡಾ.ಬಿ.ಆರ್.ಮಂಜುನಾಥ್, ಡಾ.ಸುಚೇತಾ, ಡಾ. ದಿನೇಶ್ ನಾಯಕ್, ಡಾ.ಶ್ರೀನಿಕೇತನ್, ಅನಿಲ್, ಎ.ಜಿ. ಪೈ, ಜಿತೇಂದ್ರ ಕುಮಾರ್, ಅನಂತರಾಮ, ಪ್ರೊ.ರಾಧಾಕೃಷ್ಣನ್, ಜುಡಿತ್ ಮಸ್ಕರೇನ್ಹಸ್, ದುರ್ಗಾಕುಮಾರ್ ಸೇರಿದಂತೆ ಸಾರ್ವಜನಿಕರನ್ನೊಳಗೊಂಡ ಹಲವಾರು ಪರಿಸರ ಪ್ರೇಮಿಗಳು ತಮ್ಮ ಅಭಿಪ್ರಾಯಗಳನ್ನು ಸಭೆಯಲ್ಲಿ ವ್ಯಕ್ತಪಡಿಸಿದರು. ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಮೈಸೂರು ಪವರ್ ಕನ್ಸಲ್ಟಂಟ್‌ನ ಶಂಕರ ಶರ್ಮಾ, ಎನ್‌ಐಟಿಕೆಯ ಪ್ರೊ.ಡಾ.ಜಿ.ಶ್ರೀನಿಕೇತನ್, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ಗಣೇಶ ಉಪಸ್ಥಿತರಿದ್ದರು.

ಇ-ಮೇಲ್‌ನಲ್ಲೂ ಮಾಹಿತಿ ಸಲ್ಲಿಕೆಗೆ ಅವಕಾಶ: 
ಜಲ, ನೈರ್ಮಲ್ಯ, ಭೂಮಿಯ ಉಪಯೋಗ ಮತ್ತು ಯೋಜನೆಗಳು, ತ್ಯಾಜ್ಯ ನಿರ್ವಹಣೆ, ವಾಯು ಗುಣಮಟ್ಟ, ಸಾರಿಗೆ, ಕೈಗಾರಿಕೆಗಳು, ಶಕ್ತಿ, ವ್ಯವಸಾಯ ಮತ್ತು ತೋಟಗಾರಿಕೆ, ಅರಣ್ಯ ಮತ್ತು ಜೀವ ವೈವಿಧ್ಯ, ನಗರೀಕರಣ ಕುರಿತಾಗಿ ಸಾರ್ವಜನಿಕರು ಮಾಹಿತಿ ನೀಡಬಹುದು. ಸಾರ್ವಜನಿಕರು ತಮ್ಮ ಪೂರಕ ಅಭಿಪ್ರಾಯವನ್ನು ಮಾರ್ಚ್ 31ರವರೆಗೆ ಇ-ಮೇಲ್ ಮೂಲಕವೂ ಸಲ್ಲಿಸಬಹುದಾಗಿದೆ. ಇ-ಮೇಲ್ ವಿಳಾಸ- sharma_sharma1955@hotmail.com ಅಥವಾ sharma.sharma2005@gmail.com

ಕರಾವಳಿಯನ್ನು ಕಾಡಲಿರುವ ಉಪ್ಪು ನೀರಿನ ಸಮಸ್ಯೆ:
ಕರಾವಳಿ ಪ್ರದೇಶವಾದ ದ.ಕ. ಜಿಲ್ಲೆ ಸಮುದ್ರದಿಂದ ಆವೃತವಾಗಿದೆ. ಕರಾವಳಿ ಪ್ರದೇಶದ ಬಹುತೇಕ ಜನರು ಮೀನುಗಾರಿಕೆಯಲ್ಲಿ ತೊಡಗಿಕೊಂಡಿದ್ದು, ಮೀನು ತಿನ್ನುವ ವರ್ಗವೂ ಇಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಅಂತರ್ಜಲ ಕ್ಷೀಣಿಸುತ್ತಿರುವುದರಿಂದ ಕುಡಿಯುವ ನೀರಿನ ಸಮಸ್ಯೆ ಹಾಗೂ ಸಮುದ್ರಗಳು ವಿಸ್ತಾರಗೊಳ್ಳುವ ಮೂಲಕ ಮುಂದಿನ ದಿನಗಳಲ್ಲಿ ಉಪ್ಪುನೀರಿನ ಸಮಸ್ಯೆಯನ್ನು ಜನಸಾಮಾನ್ಯರು ಎದುರಿಸುವ ಸಾಧ್ಯತೆ ಇದೆ. ಸಮುದ್ರ ಕೊರತೆಯನ್ನು ತಪ್ಪಿಸುವ ಸಮುದ್ರಕ್ಕೆ ಕಲ್ಲು ಹಾಕುವ ಕಾರ್ಯಕ್ರಮವಾಗಿ ಪ್ರತಿವರ್ಷ ಕೋಟಿಗಟ್ಟಲೆ ಹಣವನ್ನು ಸಮುದ್ರಕ್ಕೆ ಹಾಕಲಾಗುತ್ತಿದೆ. ಈ ಎಲ್ಲಾ ವಿಚಾರಗಳ ಬಗ್ಗೆ ಗಮನ ಹರಿಸುವ ಅಗತ್ಯವಿದೆ ಎಂದ ದ.ಕ. ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ಅಭಿಪ್ರಾಯಿಸಿದರು.

Write A Comment