ಆಂಧ್ರಪ್ರದೇಶ,ಫೆ.06 : ಲೈಂಗಿಕ ಕಾರ್ಯಕರ್ತೆಯರ ಹಾಗೂ ಮಕ್ಕಳ ರಕ್ಷಣೆ, ಪುನರ್ವಸತಿಗಾಗಿ ಹೋರಾಟ ನಡೆಸುತ್ತಿರುವ ಸುನೀತಾ ಕೃಷ್ಣನ್ ಅವರ ಕಾರಿನ ಮೇಲೆ ಅಪರಿಚಿತ ವ್ಯಕ್ತಿಯೋರ್ವ ದಾಳಿ ನಡೆಸಿರುವುದಾಗಿ ಶುಕ್ರವಾರ ತಿಳಿದುಬಂದಿದೆ. ಫೆ.5 ರಂದು ಮಹಿಳೆಯೊಬ್ಬಳ ಮೇಲೆ ವ್ಯಕ್ತಿಯೋರ್ವ ಅತ್ಯಾಚಾರಕ್ಕೆ ಯತ್ನಿಸುತ್ತಿರುವ ವೀಡಿಯೊವೊಂದನ್ನು ವಾಟ್ಸ್ ಅಪ್ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸುನೀತಾ ಕೃಷ್ಣನ್ ಹಾಕಿದ್ದರು. ವೀಡಿಯೋದಲ್ಲಿ ಮಹಿಳೆಯ ಮೇಲೆ ವ್ಯಕ್ತಿ ಅತ್ಯಾಚಾರವೆಸಗಲು ಯತ್ನಿಸುವಾಗ ಕ್ಯಾಮೆರಾವನ್ನು ನೋಡುತ್ತಾ ನಗುತ್ತಿರುತ್ತಾನೆ. ಆಗ ಮಹಿಳೆ ಬಿಟ್ಟುಬಿಡುವುದಾಗಿ ಹೇಳಿ ಈ ರೀತಿಯ ವೀಡಿಯೋದಿಂದ ನನ್ನ ಜೀವನ ಹಾಳಾಗುತ್ತದೆ ಎಂದು ಬೇಡುತ್ತಿರುತ್ತಾಳೆ. ದೃಶ್ಯದಲ್ಲಿ ಅತ್ಯಾಚಾರಕ್ಕೆ ಯತ್ನಿಸುತ್ತಿರುವ ವ್ಯಕ್ತಿ ಮುಖ ಸ್ಪಷ್ಟವಾಗಿ ಕಾಣಿಸುತ್ತಿದ್ದು, ಮಹಿಳೆಯ ಮುಖವನ್ನು ಅಸ್ಪಷ್ಟತೆಯಿಂದಿರುವಂತೆ ಮಾಡಲಾಗಿದೆ. ನೋಡಿದವರಿಗೆ ಈ ದೃಶ್ಯ ವೀಡಿಯೋ ಮಾಡಲೆಂದೇ ಚಿತ್ರೀಕರಿಸಲಾಗಿದೆಯೇನೊ ಎಂದು ಅನಿಸುವಂತಿರುತ್ತದೆ.
ಇಂತಹ ದೃಶ್ಯವೊಂದನ್ನು ಸುನೀತಾ ಅವರು ಸಾಮಾಜಿಕ ಜಾಲತಾಣದಲ್ಲಿ ಫೆ.5 ರಂದು ಯುಟ್ಯೂಬ್ ಮೂಲಕ ಹಾಕಿದ್ದರು. ಈ ದೃಶ್ಯ ಅಪ್‌ಲೋಡ್ ಆದ 1 ದಿನದೊಳಗೆ ಸುನೀತಾ ಅವರ ಕಾರಿನ ಮೇಲೆ ಅನಾಮಿಕ ವ್ಯಕ್ತಿಯೋರ್ವ ಕಲ್ಲು ತೂರುವ ಮೂಲಕ ದಾಳಿ ನಡೆಸಿದ್ದಾನೆ. ಘಟನೆಯಲ್ಲಿ ಸುನೀತಾ ಅವರ ಕಾರಿನ ಕಿಟಕಿಯ ಗಾಜು ಪುಡಿಪುಡಿಯಾಗಿದೆ. ಅದೃಷ್ಟವಶಾತ್ ಸುನೀತಾ ಅವರಿಗೆ ಯಾವುದೇ ಗಾಯಗಳಾಗಿಲ್ಲ.
ಅತ್ಯಾಚಾರಿಗಳಿಗೆ ನಾಚಿಕೆಯಾಗಬೇಕು. ಅತ್ಯಾಚಾರಿಗಳ ವಿರುದ್ಧ ಹೋರಾಟ ಮಾಡುವ ನನ್ನ ವಾಹನದ ಮೇಲೆ ದಾಳಿ ನಡೆಸಿದ್ದಾರೆ. ನನ್ನ ಹೋರಾಟದಿಂದ ನಾನು ಉತ್ತಮ ದಾರಿಯಲ್ಲಿ ಹೋಗುತ್ತಿದ್ದೇನೆ ಎಂದು ಸಂತಸವಾಗುತ್ತಿದೆ. ಗೂಂಡಾಗಳು ಈ ರೀತಿಯ ದಾರಿಯಲ್ಲಿ ನನ್ನನ್ನು ಹೆದರಿಸಲು ಪ್ರಯತ್ನ ನಡೆಸಿದರೆ, ನಾನು ಹೆದರುವುದಿಲ್ಲ. ಈ ಕೃತ್ಯವನ್ನು ನಾನು ಖಂಡಿಸುತ್ತೇನೆ ಎಂದು ಹೇಳಿಕೊಂಡಿದ್ದಾರೆ. ಅಲ್ಲದೇ, ಖಾಸಗಿ ಸುದ್ದಿವಾಹಿನಿಯೊಂದರಲ್ಲಿ ಈ ಕೃತ್ಯವನ್ನು ಖಂಡಿಸಿರುವ ಸುನಿತಾ ‘ಶೇಮ್ ಆನ್ ರೇಪಿಸ್ಟ್ ಹಾಶ್‌ಟ್ಯಾಗ್’ ಅಭಿಯಾನವನ್ನು ಪ್ರಾರಂಭಿಸುವುದಾಗಿ ಹೇಳಿದ್ದಾರೆ.