ಕನ್ನಡ ವಾರ್ತೆಗಳು

ವೃತ್ತಿ ಶಿಕ್ಷಣ ಕಾಯ್ದೆ ತಿದ್ದುಪಡಿಗೆ ರಾಜ್ಯ ಸರ್ಕಾರ ನಿರ್ಧಾರ

Pinterest LinkedIn Tumblr

education_act_photo_1

ಬೆಂಗಳೂರು,ಫೆ.06  : ವೃತ್ತಿ ಶಿಕ್ಷಣ ಸಂಸ್ಥೆಗಳ ಪ್ರವೇಶ ಹಾಗೂ ಶುಲ್ಕ ನಿಯಂತ್ರಣ ಕಾಯಿದೆ-2006ಕ್ಕೆ ತಿದ್ದುಪಡಿ ತರಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಇದಕ್ಕಾಗಿ ವೈದ್ಯ ಹಾಗೂ ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳ ಪ್ರತಿನಿಧಿ ಗಳನ್ನೊಳಗೊಂಡ ಸಮಿತಿ ರಚಿಸಲಾಗಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ನಿಯಂತ್ರಿಸುವುದರ ಜತೆಗೆ ರಾಜ್ಯದ ಪ್ರತಿಭಾನ್ವಿತ ವಿದ್ಯಾರ್ಥಿಗಳ ಹಿತ ಕಾಪಾಡುವ ನಿಟ್ಟಿನಲ್ಲಿ ಸರ್ಕಾರ ಈ ನಿರ್ಧಾರಕ್ಕೆ ಮುಂದಾಗಿದೆ. ಆದರೆ ಕಾಯಿದೆ ತಿದ್ದುಪಡಿಗಾಗಿ ರಾಜ್ಯ ಸರ್ಕಾರ ನೇಮಿಸುತ್ತಿರುವ ಎರಡನೇ ಸಮಿತಿ ಇದಾಗಿದೆ.

ಈ ಹಿಂದೆ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು. ಖಾಸಗಿ ಕಾಲೇಜುಗಳಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳ ಶುಲ್ಕ ಹೆಚ್ಚಾಗದಂತೆ ನಿಗಾವಹಿಸಲು 2006ರ ಕಾಯಿದೆಗೆ ತಿದ್ದುಪಡಿ ತರಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಈ ಹಿನ್ನೆಲೆಯಲ್ಲಿ ಈಗ ಒಪ್ಪಂದದಲ್ಲಿ ಅಡಕವಾಗಿರುವ ಮೀಸಲು ಅಂಶಗಳೇ ಕಾಯಿದೆ ರೂಪ ಪಡೆಯುವ ಸಾಧ್ಯತೆಯಿದೆ. 2006ರ ಕಾಯಿದೆ ಪ್ರಕಾರ ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದ ವಿದ್ಯಾರ್ಥಿಗಳಿಗೆ ಶೇ.50 ಹಾಗೂ ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ ಶೇ.50ರಷ್ಟು ಸೀಟು ನೀಡಲು ಅವಕಾಶವಿತ್ತು. ಸಾಮಾನ್ಯ ವರ್ಗದ ಶೇ.50ರ ಸೀಟಿನಲ್ಲೇ ಆಡಳಿತ ಮಂಡಳಿ ಹಾಗೂ ಅನಿವಾಸಿ ಭಾರತೀಯರ ಕೋಟಾವೂ ಸೇರುತ್ತಿತ್ತು.

ಈ ಅಂಶಕ್ಕೆ ತಿದ್ದುಪಡಿ ತಂದು ಈಗ ಚಾಲ್ತಿಯಲ್ಲಿರುವ ವ್ಯವಸ್ಥೆಯಂತೆಯೇ ಶೇ.50ರಷ್ಟು ಸೀಟು ಸರ್ಕಾರಿ ಕೋಟಾ ಹಾಗೂ ಶೇ.25ರಷ್ಟು ಸೀಟುಗಳು ಕಾಮೆಡ್-ಕೆ ಹಾಗೂ ಉಳಿದ ಸೀಟುಗಳು ಆಡಳಿತ ಮಂಡಳಿಗೆ ಹೋಗಲಿವೆ. ಒತ್ತಡಕ್ಕೆ ಮಣಿದ ಸರ್ಕಾರ : 2006ರ ಕಾಯಿದೆ ಪ್ರಕಾರ ಆಡಳಿತ ಮಂಡಳಿ ಹಾಗೂ ಎನ್‍ಆರ್‍ಐ ಕೋಟಾದಲ್ಲಿ ಅರ್ಧದಷ್ಟು ಕಡಿತವಾಗುತ್ತಿತ್ತು. ಆದರೆ ಹಳೆಯ ವ್ಯವಸ್ಥೆಯಂತೆ ಖಾಸಗಿ ಸಂಸ್ಥೆಗಳಿಗೆ ಪ್ರವೇಶಕ್ಕೆ ಅನುಮತಿ ನೀಡುವ ಮೂಲಕ ಈ ಕೋಟಾದಲ್ಲಿ ಮತ್ತಷ್ಟು ಲೂಟಿಗೆ ಅವಕಾಶ ನೀಡಲು ಸರ್ಕಾರ ಮುಂದಾಗುವ ಸಾಧ್ಯತೆಯಿದೆ. ಅಲ್ಲಿ ಲೂಟಿ ಮಾಡಲು ಅವಕಾಶ ನೀಡಿ ಆ ಹಣವನ್ನು ಪ್ರತಿಭಾನ್ವಿತ ವಿದ್ಯಾರ್ಥಿಗಳ ಶುಲ್ಕಕ್ಕೆ ಸಬ್ಸಿಡಿ ನೀಡುವ ಚಿಂತನೆಯನ್ನು ಗುರುವಾರ ನಡೆದ ಸಭೆಯಲ್ಲಿ ಮಾಡಲಾಗಿದೆ.

ರಾಜ್ಯದ ಪ್ರತಿಷ್ಠಿತ 30 ಕಾಲೇಜುಗಳ ಶುಲ್ಕ ಹೆಚ್ಚಾಗುವ ಸಾಧ್ಯತೆಯಿದೆ. ಶುಲ್ಕ ನಿಯಂತ್ರಣ ಸಮಿತಿಯ ವರದಿ ಬಂದ ಬಳಿಕ ಈ ಕಾಲೇಜುಗಳು ಎಷ್ಟರ ಮಟ್ಟಿಗೆ ಸಬ್ಸಿಡಿ ನೀಡಬಹುದೆಂದು ಕಾರ್ಯದರ್ಶಿಗಳ ನೇತೃತ್ವದ ಸಮಿತಿ ನಿರ್ಧಾರ ಮಾಡಲಿದೆ. ಆದರೆ ಈ ಅಂಶಗಳು ಕಾಯಿದೆ ರೂಪ ಪಡೆದು ಸ್ಪಷ್ಟವಾಗುತ್ತವೆಯೇ ಅಥವಾ ಪ್ರತಿ ವರ್ಷವೂ ಒಪ್ಪಂದ ಮಾಡಿಕೊಳ್ಳಲು ಅನುವು ಮಾಡಿಕೊಟ್ಟು ವ್ಯವಹಾರಕ್ಕೆ ಕಾರಣ ವಾಗುತ್ತದೆಯೇ ಎಂದು ಕಾದುನೋಡಬೇಕಿದೆ. ಸರ್ಕಾರದ ಈ ಪ್ರಸ್ತಾಪಕ್ಕೆ ಖಾಸಗಿ ಕಾಲೇಜುಗಳು ಒಪ್ಪಿಕೊಂಡಿದ್ದು ಇನ್ನೆರಡು ವಾರದಲ್ಲಿ ಶುಲ್ಕ ನಿಯಂತ್ರಣ ಸಮಿತಿಯ ವರದಿ ಬರಲಿದೆ. ಈ ವರದಿ ಆಧರಿಸಿ 30 ಕಾಲೇಜುಗಳ ರಿಯಾಯಿತಿ ಶುಲ್ಕ ನಿಗದಿಯಾಗಲಿದೆ. ಎಲ್ಲವೂ ಸುಸೂತ್ರವಾಗಿ ನಡೆದರೆ ಬಜೆಟ್ ಅಧಿವೇಶನದಲ್ಲಿ ತಿದ್ದುಪಡಿ ಕಾಯಿದೆ ಮಂಡನೆಯಾಗಲಿದೆ ಎಂದು ಉನ್ನತ ಶಿಕ್ಷಣ ಇಲಾಖೆ ಮೂಲಗಳು ತಿಳಿಸಿವೆ.

ಆಡಳಿತ ಮಂಡಳಿ ಹಾಗೂ ಅನಿವಾಸಿ ಭಾರತೀಯರ ಕೋಟಾ ಸೀಟುಗಳಿಗೆ ಪ್ರವೇಶ ಪರೀಕ್ಷೆಯ ಅರ್ಹತೆ ಆಧರಿಸಿ ದಾಖಲು ಮಾಡಿಕೊಳ್ಳಬೇಕೆಂಬ ಕೇಂದ್ರದ ಆದೇಶವನ್ನು ಕಾಯಿದೆಯಲ್ಲಿ ಸೇರಿಸುವ ಬಗ್ಗೆ ರಾಜ್ಯ ಸರ್ಕಾರ ಗೊಂದಲಕ್ಕೆ ಬಿದ್ದಿದೆ. ಖಾಸಗಿ ಕಾಲೇಜುಗಳಿಗೆ ಹಣ ಮಾಡಿಕೊಳ್ಳಲು ಇರುವ ಏಕೈಕ ಮಾರ್ಗ ಇದಾಗಿದೆ. ಇದಕ್ಕೂ ಅಡಕತ್ತರಿ ಬಿದ್ದರೆ ಕಷ್ಟವಾಗುತ್ತದೆ ಎನ್ನುವುದು ಆಡಳಿತ ಮಂಡಳಿಗಳ ವಾದವಾಗಿದೆ.

ಕೇಂದ್ರದ ಆದೇಶ ವಿರೋಧಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ಈಗಾಗಲೇ ವೈದ್ಯ ಕಾಲೇಜುಗಳು ಚಿಂತನೆ ನಡೆಸಿವೆ. ಏತನ್ಮಧ್ಯೆ ರಾಜ್ಯ ಸರ್ಕಾರವು ಕಾಯಿದೆ ಜಾರಿ ಮಾಡುವ ಅವಸರದಲ್ಲಿರುವುದರಿಂದ ಪ್ರವೇಶ ಪರೀಕ್ಷೆಯ ವಿನಾಯಿತಿ ಪಡೆಯಲು ಖಾಸಗಿ ಸಂಸ್ಥೆಗಳು ಒತ್ತಡ ಹೇರುತ್ತಿವೆ. ರಾಜ್ಯ ಸರ್ಕಾರಕ್ಕೆ ಖಾಸಗಿ ಕಾಲೇಜುಗಳ ಹಿತ ಮುಖ್ಯವಾಗುತ್ತದೋ ಅಥವಾ ಸುಪ್ರೀಂ ಕೋರ್ಟ್ ಆದೇಶ ಮುಖ್ಯವಾಗುತ್ತದೋ ಎಂದು ತಿದ್ದುಪಡಿ ವಿಧೇಯಕದಲ್ಲಿ ನೋಡಬೇಕಿದೆ.

Write A Comment