ಕನ್ನಡ ವಾರ್ತೆಗಳು

ಶ್ರೀಘ್ರದಲ್ಲೇ ಪುತ್ತೂರು ಸೀಮೆ ಎಣ್ಣೆ ಮುಕ್ತ ನಗರ.

Pinterest LinkedIn Tumblr

kerosene_foil_free_city

ಮಂಗಳೂರು, ಫೆ.4 : ಪುತ್ತೂರು ಸೀಮೆಎಣ್ಣೆ ಮುಕ್ತ ನಗರವಾಗಲಿದೆ. ಈಗಾಗಲೇ ಇದಕ್ಕಾಗಿ ಪ್ರಕ್ರಿಯೆಗಳು ಆರಂಭಗೊಂಡಿವೆ. ತೈಲ ನಿಗಮಗಳ ಎಲ್‌ಪಿಜಿ ಘಟಕಗಳ ಅಧಿಕಾರಿಗಳ ಸಹಕಾರದೊಂದಿಗೆ ಪುತ್ತೂರು ನಗರವನ್ನು ಸೀಮೆಎಣ್ಣೆ ಮುಕ್ತ ನಗರವನ್ನಾಗಿ ಮಾಡುವ ಯೋಜನೆಯನ್ನು ಪುರಸಭೆ ತಯಾರಿಸಿದೆ. ಬಿಪಿಎಲ್ ಕಾರ್ಡ್ ಇದ್ದು ಅಡುಗೆ ಅನಿಲ ಸಂಪರ್ಕ ಹೊಂದಿರದ ಕುಟುಂಬಗಳಿಗೆ ‘ಸಿಆರ್‌ಎಸ್’ ಯೋಜನೆಯಡಿ ಠೇವಣಿ ಇಲ್ಲದೆ ಅಡುಗೆ ಅನಿಲ ಸಂಪರ್ಕ ಒದಗಿಸುವ ಸರ್ಕಾರದ ಯೋಜನೆಯನ್ನು ಬಳಕೆ ಮಾಡಿಕೊಳ್ಳುವಂತೆ ಸ್ಥಳೀಯ ಸಂಸ್ಥೆಗಳು ಮಾಹಿತಿ ನೀಡಲಿವೆ

ಪುರಸಭೆಯ ವಾರ್ಡ್‌ಗಳಲ್ಲಿರುವ ಎಲ್ಲ ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡ್ ಹೊಂದಿದವರಿಗೆ ಉಚಿತವಾಗಿ ಗ್ಯಾಸ್ ಸಂಪರ್ಕ ನೀಡಲಾಗುತ್ತದೆ. ಜನವರಿ 30ರ ವರೆಗೆ ಬಿಪಿಎಲ್ ಹಾಗೂ ಅಂತ್ಯೋಯ ಕಾರ್ಡ್ ಹೊಂದಿದ ಸುಮಾರು 355 ಜನರು ಗ್ಯಾಸ್ ಸಂಪರ್ಕ ಪಡೆಯಲು ಅರ್ಜಿ ಸಲ್ಲಿಸಿದ್ದಾರೆ.

ಮಾರ್ಚ್ ಅಂತ್ಯದೊಳಗೆ ಬಿಪಿಎಲ್ ಕಾರ್ಡ್ ಹೊಂದಿ ಗ್ಯಾಸ್ ಹೊಂದಿರದ ಎಲ್ಲ ಕುಟುಂಬಗಳಿಂದ ಅರ್ಜಿಗಳನ್ನು ಸ್ವೀಕರಿಸಿ ಗ್ಯಾಸ್ ಸಂಪರ್ಕ ನೀಡುವ ಯೋಜನೆಗೆ ಚಾಲನೆ ನೀಡಲು ಅಧಿಕಾರಿಗಳು ಸಿದ್ಧತೆ ನಡೆಸುತ್ತಿದ್ದಾರೆ. ಸಿಲಿಂಡರ್ ಹಾಗೂ ರೆಗ್ಯುಲೇಟರ್‌ಗಳನ್ನು ಪ್ರತಿ ಬಿಪಿಎಲ್ ಕುಟುಂಬಗಳಿಗೆ ಉಚಿತವಾಗಿ ತೈಲ ಕಂಪನಿಯವರೇ ನೀಡಲಿದ್ದಾರೆ. ಪುರಸಭೆ ವ್ಯಾಪ್ತಿಯಲ್ಲಿರುವ ಒಟ್ಟು 27 ವಾರ್ಡ್‌ಗಳಲ್ಲಿ ಈಗಾಗಲೇ ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡ್‌ದಾರರು ಸೇರಿ ಒಟ್ಟು 2,643 ಕುಟುಂಬಗಳಿವೆ. ಇವುಗಳಲ್ಲಿ 480 ಅರ್ಜಿಗಳು ಬಂದಿದ್ದು, ಅರ್ಜಿಗಳನ್ನು ಸಲ್ಲಿಸಲು ಒಂದುವಾರಗಳ ಸಮಯಾವಕಾಶ ನೀಡಲಾಗಿದೆ.

ಬಿಪಿಎಲ್ ಹಾಗೂ ಅಂತ್ಯೋದಯ ಪಡಿತರ ಕಾರ್ಡ್ ಹೊಂದಿದವರಿಗೆ ಗ್ಯಾಸ್ ಸಂಪರ್ಕ ನೀಡಿದ ನಂತರ ಸೀಮೆಎಣ್ಣೆ ವಿತರಣೆ ಮಾಡುವುದನ್ನು ನಿಲ್ಲಿಸಲಾಗುತ್ತದೆ. ಉಳಿದಂತೆ ಪ್ರತಿ ತಿಂಗಳ ವಿತರಣೆಯಾಗುವ ಪಡಿತರ ವಿತರಣೆಯಾಗಲಿದೆ. ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿಯೊಂದು ತಾಲೂಕು ಸೀಮೆಎಣ್ಣೆ ಮುಕ್ತ ನಗರವಾಗಬೇಕು ಎಂಬುದು ಜಿಲ್ಲಾಧಿಕಾರಿಗಳ ಗುರಿಯಾಗಿದೆ. ಇದರ ಅನ್ವಯ ಮಂಗಳೂರು ಹಾಗೂ ಉಳ್ಳಾಲವನ್ನು ಸಂಪೂರ್ಣ ಸೀಮೆಎಣ್ಣೆ ಮುಕ್ತ ನಗರವನ್ನಾಗಿ ಮಾಡಲಾಗಿದೆ.

Write A Comment