ಕನ್ನಡ ವಾರ್ತೆಗಳು

ಕಾರ್ಪರೇಟ್ ಆರ್ಥಿಕತೆ ಮತ್ತು ಜಾತೀಯವಾದ ಭಾರತವನ್ನು ಆಳುತ್ತಿದೆ : ಯಮ್ ಪಿ ಅಚ್ಚುತನ್

Pinterest LinkedIn Tumblr

sammelana_ralyy_photo_1

ಬಂಟ್ವಾಳ.ಫೆ.04 : ಅದಾನಿ ಅಂಬಾನಿ ಮುಂತಾದ ಬಂಡವಾಳ ಶಾಹೀ ಉದ್ಯೋಗಪತಿಗಳ ತನು ಮನ ಧನಗಳ ಸಹಕಾರ ಮತ್ತು ಸಂಘಪರಿವಾರದ ಪೂರ್ಣ ಬೆಂಬಲದೊಂದಿಗೆ ಬಹುಮತದಿಂದ ಆರಿಸಿ ಬಂದ ಮೋದಿ ಸರಕಾರ ಅನುಸರಿಸುತ್ತಿರುವ ಆರ್ಥಿಕತೆ ಉದ್ಯೋಗ ಪತಿಗಳ ಮತ್ತು ವಿದೇಶೀ ಬಂಡವಾಳಿಗರ ಅನುಕೂಲಕ್ಕಾಗಿದೆಯೇ ಹೊರತು ಭಾರತದ ಜನಸಾಮಾನ್ಯರ ಅನುಕೂಲಕ್ಕಾಗಿಯಲ್ಲ. ಧರ್ಮದ ಆಧಾರದಲ್ಲಿ ಜನರನ್ನು ಒಡೆಯುವ ಸಂಘ ಪರಿವಾರಗಳ ಅಜಂಡಾವನ್ನು ಸರಕಾರ ಪೂರ್ಣವಾಗಿ ಅನುಸರಿಸುತ್ತಿದೆ.’ ಎಂದು ಭಾರತ ಕಮ್ಯುನಿಸ್ಟ್ ಪಕ್ಷದ ರಾಜ್ಯಸಭಾ ಸಂಸದ ಮತ್ತು ಭಾರತ ಕಮ್ಯುನಿಸ್ಟ್ ಪಕ್ಷದ ಕೇರಳ ರಾಜ್ಯ ಸಮಿತಿ ಸದಸ್ಯರಾದ ಶ್ರೀ ಯಮ್ ಪಿ ಅಚ್ಚುತನ್ ಮಂಗಳವಾರ ಭಾರತ ಕಮ್ಯುನಿಸ್ಟ್ ಪಕ್ಷದ ದ ಕ ಮತ್ತು ಉಡುಪಿ ಜಿಲ್ಲಾ ಸಮ್ಮೇಳನವನ್ನು ಉಧ್ಘಾಟಿಸುತ್ತಾ ಹೇಳಿದರು.

ಅವರು ಮಂದುವರಿಯುತ್ತಾ ‘ಒಂದು ಅಂದಾಜಿನಂತೆ ಮೋದಿಯವರ ಚುನಾವಣಾ ಖರ್ಚು 10000  ಕೋಟಿಗಿಂತಲೂ ಜಾಸ್ತಿಯಾಗಿದೆ. ಅದನ್ನು ನೀಡಿದವರು ಉದ್ಯ್ಯೋಗಪತಿಗಳು. ಅವರ ಋಣವನ್ನು ಮೋದಿ ಸರಕಾರ ತೀರಿಸುತ್ತಿದೆ. ಇತ್ತೀಚಿನ ವರದಿಯಂತೆ ಅದಾನಿಯವರಿಗೆ ಆಸ್ಟ್ರೇಲಿಯಾದ ಒಂದು ಪ್ರೊಜೆಕ್ಟಿಗಾಗಿ 6500/- ಕೋಟಿ ರೂಪಾಯಿಗಳನ್ನು ಭಾರತೀಯ ಸ್ಟೇಟ್ ಬ್ಯಾಂಕಿನಿಂದ ಸಾಲವಾಗಿ ನೀಡಲಾಗಿದೆ. ಕಲ್ಲಿದ್ದಲು ಗಣಿಗಳನ್ನು ಖಾಸಗಿಯವರಿಗೆ ಮಾರಲಾಗುತ್ತಿದೆ. ಮೇಕ್ ಇನ್ ಇಂಡಿಯಾ ಹೆಸರಲ್ಲಿ ವಿದೇಶೀ ಬಂಡವಾಳವನ್ನು ಸ್ವಾಗತಿಸಲಾಗುತ್ತಿದೆ. ಒಳ್ಳೆಯ ದಿನಗಳು ಇವರಿಗೆಲ್ಲಾ ಬಂದಿದೆ. ಭಾರತದ ಜನಸಾಮಾನ್ಯರಿಗೆ ಒಳ್ಳೆಯ ದಿನಗಳು ಬಂದೇ ಇಲ್ಲ. ಬರುವ ಸಾಧ್ಯತೆಯೂ ಇಲ್ಲ.

sammelana_ralyy_photo_2

ಚುನಾವಣೆಗೆ ಮೊದಲು ಮೋದಿಯವರು ಅನೇಕ ಆಶ್ವಾಸನೆಗಳನ್ನು ನೀಡುತ್ತಾ ಬಂದರು. ಬೆಲೆಯೇರಿಕೆಯನ್ನು ತಡೆಗಟ್ಟುತ್ತೇವೆ ಎಂದಿದ್ದರು. ಆದರೆ ಪೆಟ್ರೋಲಿಯಂ ವಸ್ತುಗಳಿಗೆ ಬಿಟ್ಟರೆ ಬೇರಾವ ವಸ್ತುಗಳ ಬೆಲೆಯು ಇಳಿಯುತ್ತಿಲ್ಲ. ಅದರ ಬದಲು ಅದು ಹೆಚ್ಚಾಗುತ್ತಿದೆ. ಪೆಟ್ರೋಲಿಯಂ ಬೆಲೆ ಇಳಿದಿರುವುದು ಅಂತರ್ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅದರ ಬೆಲೆ ಕುಸಿದಿರುವುದರಿಂದ. ಆದರೆ ಈ ಕುಸಿತದ ಪೂರ್ಣಪಾಲು ಜನಸಾಮಾನ್ಯರಿಗೆ ತಲುಪಿಲ್ಲ. ಎಕ್ಸೈಸ್ ಸುಂಕವನ್ನು ಏರಿಸಿ ಪೆಟ್ರೋಲಿಯಂ ದರವನ್ನು ಸ್ವಲ್ಪ ಮಟ್ಟಿಗೆ ಮಾತ್ರ ಇಳಿಸಿದ್ದಾರೆ.

ಕಪ್ಪು ಹಣವನ್ನು 100 ದಿನಗಳೊಳಗೆ ವಿದೇಶಗಳಿಂದ ವಾಪಸು ತರಿಸುವೆವೆಂಬ ಆಶ್ವಾಸನೆಯನ್ನು ಕೊಟ್ಟಿರುವರು. ಆದರೆ 8 ತಿಂಗಳಾದರೂ ಯಾವುದೇ ಕಪ್ಪು ಹಣ ವಾಪಸು ಬಂದಿಲ್ಲ.
ಲಂಚಗುಳಿತನವನ್ನು ನಿರ್ಮೂಲನ ಮಾಡುವೆ ಎಂಬ ಆಶ್ವಾಸನೆ ಬಗ್ಗೆ ಮೋದಿಯವರು ಮಾತನಾಡುತ್ತಲೇ ಇಲ್ಲ. ಲಂಚವಿಲ್ಲದೆ ಕಾರ್ಪರೇಟ್‌ಗಳ ಹಾಗೂ ರಾಜಕಾರಿಣಿಗಳ ಜೇಬು ತುಂಬಲು ಸಾಧ್ಯವಿಲ್ಲ ಎಂಬ ಸತ್ಯ ಅವರಿಗೆ ತಿಳಿದಿದೆ. ಅದಕ್ಕಾಗಿಯೇ ಅವರು ಈ ಬಗ್ಗೆ ಏನೂ ಮಾತನಾಡುವುದಿಲ್ಲ.

ಭಾರತದಲ್ಲಿ ವಿದೇಶೀ ಬಂಡವಾಳ ಹೂಡಿಕೆಯಿಂದ ದೇಶದ ಭದ್ರತೆಗೆ ಆತಂಕವಿದೆ ಎಂದು ರಿಸರ್ವ ಬ್ಯಾಂಕಿನ ಗವರ್ನರ್ ಆಗಿರುವ ಶ್ರೀ ರಘುರಾಮ ರಾಜನ್‌ರವರು ಇತ್ತೀಚೆಗೆ ಹೇಳಿಕೆ ನೀಡಿರುವರು. ಇದು ನಾವು ಕಮ್ಯುನಿಸ್ಟರು ಹಿಂದಿನಿಂದಲೂ ಹೇಳಿಕೊಂಡು ಬರುತ್ತಿರುವ ಮಾತು. ಈ ಮಾತು  ಗವರ್ನರ್‌ರವರಿಂದ ಬಂದಿದೆಯೆಂದರೆ ಇದರ ಗಹನತೆ ಬಗ್ಗೆ ಆಲೋಚಿಸಬೇಕಾದುದು ಭಾರತ ಸರಕಾರದ ಕರ್ತವ್ಯ.

ಸರಕಾರ ಉದ್ದೇಶಿಸಿರುವ ಕಾರ್ಮಿಕ ಕಾನೂನುಗಳ ತಿದ್ದುಪಡಿಯಿಂದ ಕಾರ್ಪರೇಟ್‌ಗಳಿಗೆ ಬಹಳಷ್ಟು ಅನುಕೂಲವಾಗಲಿದ್ದು ಬಡ ಕಾರ್ಮಿಕ ವರ್ಗಕ್ಕೆ ಬಹಳಷ್ಟು ಅನಾನುಕೂಲವಾಗಲಿದೆ. ಮೊದಲೇ ಬಡತನದಿಂದ ನರಳುತ್ತಿರುವ ಈ ವರ್ಗ ಇನ್ನಷ್ಟು ನಿರ್ಗತಿಕವಾಗಲಿದೆ. ಸರಕಾರದ ಈ ಕ್ರಮವನ್ನು ನಾವು ತೀವ್ರವಾಗಿ ವಿರೋಧಿಸುತ್ತೇವೆ.

ಈ ಬೆಳವಣಿಗೆಗಳಿಂದ ಜನ ನೊಂದಿದ್ದಾರೆ. ಕಾರ್ಮಿಕರು, ಉದ್ಯೋಗಿಗಳು, ಸಣ್ಣ ಉದ್ಯಮಿಗಳು, ಸರಕಾರೀ ನೌಕರರು, ಮಧ್ಯಮವರ್ಗದವರು ಹಾಗೂ ಜನಸಾಮಾನ್ಯರು ಎಚ್ಚೆತ್ತು ಸರಕಾರದ ಧೋರಣೆಗಳ ವಿರುದ್ಧವಾಗಿ ಹೋರಾಡಲು ತಯಾರಿ ನಡೆಸುತ್ತಿದ್ದಾರೆ.

ಎಡ ಶಕ್ತಿಗಳ ಒಗ್ಗಟ್ಟು ಇಂದಿಗೆ ಅತೀ ಅಗತ್ಯವಾಗಿದೆ. ಇದನ್ನು ಸಾಧಿಸಲು ನಮ್ಮ ಪಕ್ಷ ಸರ್ವ ಪ್ರಯತ್ನ ನಡೆಸಲಿದೆ. ಈ ಒಗ್ಗಟ್ಟಿನ ಮೂಲಕ ಧರ್ಮನಿರಪೇಕ್ಷ ಹಾಗೂ ಪ್ರಜಾಪ್ರಭುತ್ವವಾದಿ ಶಕ್ತಿಗಳ ಒಗ್ಗಟ್ಟನ್ನು ಸಾಧಿಸಿ ಮುಂದಿನ ಹೆಜ್ಜೆಗಳನ್ನು ಜನಾಂದೋಲನಗಳಾಗಿ ಮಾರ್ಪಡಿಸಿ ಜನವಿರೋಧೀ ಧೋರಣೆಗಳ ವಿರುದ್ಧ ಹೋರಾಡುವ ಪಣ ತೊಡಲಿದ್ದೇವೆ.ಪಕ್ಷದ ಅಖಿಲ ಭಾರತ ಸಮ್ಮೇಳನ ಮಾರ್ಚಿ ತಿಂಗಳಲ್ಲಿ ಪುದುಚೇರಿಯಲ್ಲಿ ಸೇರಿ ಈ ಎಲ್ಲಾ ಬೆಳವಣಿಗೆಗಳ ಬಗ್ಗೆ ಚರ್ಚಿಸಿ ಮುಂದಿನ ಹೋರಾಟಗಳ ಬಗ್ಗೆ ತೀರ್ಮಾನಗಳನ್ನು ತೆಗೆದುಕೊಳ್ಳಲಿದೆ. ಈ ತೀರ್ಮಾನಗಳ ಅನುಷ್ಠಾನಗಳಿಗಾಗಿ ಹೋರಾಡಲು ಸಿದ್ದರಾಗಿ’ ಎಂದು ಕರೆಯಿತ್ತರು.

ಭಾರತ ಕಮ್ಯುನಿಸ್ಟ್ ಪಕ್ಷದ ಕರ್ನಾಟಕ ರಾಜ್ಯ ಕಾರ್ಯದರ್ಶಿಯವರಾದ ಶ್ರೀ ಪಿ ವಿ ಲೋಕೇಶ್‌ರವರು ಮಾತನಾಡುತ್ತಾ ಭಾರತದಲ್ಲಿ ಓ‌ಆಂ ಸರಕಾರವಿದೆಯೇ ಅಥವಾ ಮೋದಿ ಸರಕಾರವಿದೆಯೇ ಎಂದು ಗೊತ್ತಾಗುತ್ತಿಲ್ಲ. ತೀರ್ಮಾನಗಳನ್ನು ಮೋದಿಯವರೇ ತೆಗೆದುಕೊಳ್ಳುತ್ತದ್ದಾರೆಯೇ ಹೊರತು ಓ‌ಆಂ ಅಲ್ಲ. ಪಾರ್ಲಿಮೆಂಟಿಗೆ ಗೌರವವಿಲ್ಲ. ಎಲ್ಲಾ ಕಾನೂನುಗಳನ್ನು ಸುಗ್ರೀವಾಜ್ಞೆಗಳ ಮೂಲಕ ಮಾಡಲಾಗುತ್ತಿದೆ. ಕಪ್ಪು ಹಣ ವಾಪಸಿ ಬದಲು ಘರ್ ವಾಪಸಿ ನಡೆಯುತ್ತಿದೆ. ಜನರ ನಿರಂತರ ಹೋರಾಟಗಳ ಫಲವಾಗಿ ಮೂಡಿಬಂದ 2014 ರ ಭೂಸ್ವಾಧೀನ ಕಾನೂನನ್ನು ತಿದ್ದುಪಡಿ ಮಾಡಿ ಕಾರ್ಪರೇಟ್‌ಗಳಿಗೆ ಅನುಕೂಲ ಮಾಡಿಕೊಡಲು ಮೋದಿ ಸರಕಾರ ಸುಗ್ರೀವಾಜ್ಞೆ ಮೂಲಕ ಮುಂದಾಗಿದೆ. ಇದು ತೀರ ಜನವಿರೋಧೀ ಕ್ರಮ. ಇದನ್ನು ವಿರೋಧಿಸಲು ಸಜ್ಜಾಗಿ ಎಂದು ಹೇಳಿದರು.

ಸಭೆಯ ಅಧಕ್ಷತೆಯನ್ನು ಜಿಲ್ಲಾ ಕಾರ್ಯದರ್ಶಿಯವರಾದ ಶ್ರೀ ಸಂಜೀವ ಪಿ ವಹಿಸಿದ್ದರು. ಜಿಲ್ಲಾ ಪದಾಧಿಕಾರಿಗಳಾದ ವಿ ಕುಕ್ಯಾನ್, ಪ್ರಭಾಕರರಾವ್, ಕೆ ವಿ ಭಟ್, ವಸಂತಿ ಶೆಟ್ಟಿ, ಯಚ್ ವಿ ರಾವ್ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶ್ರೀ ಶೇಖರ್ ಬಿ ಸ್ವಾಗತಿಸಿ ಶ್ರೀ ಸುರೇಶ್ ಬಂಟ್ವಾಳ್ ವಂದಿಸಿದರು. ಶ್ರೀ ಸೀತಾರಾಮ ಬೇರಿಂಜೆ ಕಾರ್ಯಕ್ರಮ ನಿರ್ವಹಿಸಿದರು.

ಸಮ್ಮೇಳನಕ್ಕೆ ಮುಂಚಿತವಾಗಿ ಸಾಧಾರಣ 3000  ಕೆಂಪು ಸೈನಿಕರ ಆಕಷಕ ಮೆರವಣಿಗೆ ಪೊಳಲಿ ಗೇಟ್ ನಿಂದ ತಾಲೂಕು ಆಫೀಸಿನ ವರೆಗೆ ನಡೆಯಿತು.

Write A Comment