ಕನ್ನಡ ವಾರ್ತೆಗಳು

ಬೆಂಗಳೂರು : ಸರ್ಕಾರಿ ಮತ್ಸ್ಯಾಲಯದಲ್ಲಿ ಮೀನುಗಳ ಸಂಖ್ಯೆಯಲ್ಲಿ ಕುಸಿತ

Pinterest LinkedIn Tumblr

cubban_park_aqurim

ಬೆಂಗಳೂರು,ಫೆ .೦೩: ನಗರದ ಕಬ್ಬನ್‌ ಪಾರ್ಕ್‌ನಲ್ಲಿರುವ ಸರ್ಕಾರಿ ಮತ್ಸ್ಯಾಲಯದಲ್ಲಿ ಮೀನುಗಳ ಸಂಖ್ಯೆಯಲ್ಲಿ ಕುಸಿತವಾಗಿದ್ದು, ವಿದೇಶಿ ತಳಿಗಳಂತೂ ಅಪರೂಪವಾಗಿವೆ.

ಮೀನುಗಾರಿಕಾ ಇಲಾಖೆಯ ಮೂರು ಅಂತಸ್ತಿನ ಈ ಮತ್ಸ್ಯಾಲಯದಲ್ಲಿ 74 ಅಕ್ವೇರಿಯಂ ತೊಟ್ಟಿಗಳಿವೆ. ಕೆಲ ತೊಟ್ಟಿಗಳು ಖಾಲಿ ಬಿದ್ದಿವೆ. ಇನ್ನುಳಿದವುಗಳಲ್ಲಿ ಕಡಿಮೆ ಸಂಖ್ಯೆಯ ಮೀನುಗಳಿದ್ದು ಹಿಂದಿನ ಆಕರ್ಷಣೆ ಕಳೆದುಕೊಂಡಿದೆ. ವಿಶಿಷ್ಟ ಹಾಗೂ ಅಪರೂಪದ ತಳಿಯ ಮೀನುಗಳ ಸಂಖ್ಯೆಯಲ್ಲೂ ಕುಸಿತವಾಗಿದೆ. ಕೆಲ ಅಕ್ವೇರಿಯಂ ಪೆಟ್ಟಿಗೆಗಳ ಮೇಲೆ ಮೀನುಗಳ ಹೆಸರು ಹಾಗೂ ಇನ್ನಿತರ ಮಾಹಿತಿ ನೀಡುವ ಪಟ್ಟಿಯೂ ಇಲ್ಲ.

ಮೂರು ತಿಂಗಳಿನಿಂದ ಮೀನುಗಳ ಸಾವಿನ ಪ್ರಮಾಣ ಹೆಚ್ಚಾಗಿರುವುದು ಈ ಸ್ಥಿತಿಗೆ ಕಾರಣ ಎನ್ನುತ್ತಾರೆ ಮತ್ಸ್ಯಾಲಯದ ಸಿಬ್ಬಂದಿ.‘ಪ್ರತಿ ತಿಂಗಳು ಸುಮಾರು 500 ಮೀನುಗಳು ಸಾವನ್ನಪ್ಪುತ್ತಿವೆ. ಚಳಿಗಾಲದಲ್ಲಿ ಮೀನುಗಳ ಸಾವಿನ ಪ್ರಮಾಣ ಹೆಚ್ಚಾಗುತ್ತದೆ. ತಾಪಮಾನದಲ್ಲಿ ಕೊಂಚ ವ್ಯತ್ಯಾಸವಾದರೂ ಸಮಸ್ಯೆ ಉದ್ಭವಿಸುತ್ತದೆ’

‘ಈ ಜಲಚರಗಳು ತುಂಬಾ ಸೂಕ್ಷ್ಮ. ಹೆಚ್ಚಿನ ಮುತುವರ್ಜಿಯಿಂದ ಸಾಕಬೇಕಾಗುತ್ತದೆ. ಒಂದಕ್ಕೆ ರೋಗ ಬಂದರೆ ಅಕ್ವೇರಿಯಂ ಪೆಟ್ಟಿಗೆಯೊಳಗಿನ ಎಲ್ಲಾ ಮೀನುಗಳು ಸತ್ತು ಹೋಗುತ್ತವೆ. ರೋಗದ ಲಕ್ಷಣಗಳು ಬೇಗ ಗೊತ್ತಾಗುವುದಿಲ್ಲ. ಇದೇ ಕಾರಣಕ್ಕಾಗಿ ವಿದೇಶಿ ತಳಿಗಳನ್ನು ಇತ್ತೀಚಿನ ದಿನಗಳಲ್ಲಿ ಹೆಚ್ಚು ಖರೀದಿಸುತ್ತಿಲ್ಲ. ಸದ್ಯ 50 ಪ್ರಭೇದಗಳ ಮೀನುಗಳಿದ್ದು, ಹೆಚ್ಚಿನವು ದೇಸಿ ತಳಿಗಳು’ ಎಂದು ಮಾಹಿತಿ ನೀಡಿದರು.

‘ಕೆಲ ದಿನಗಳ ಹಿಂದೆ ಶಾರ್ಟ್‌ ಸರ್ಕೀಟ್‌ನಿಂದ ಅಪಾರ ಮೀನುಗಳು ಸತ್ತು ಹೋಗಿದ್ದವು. ಕೆಲ ಅಕ್ವೇರಿಯಂ ಪೆಟ್ಟಿಗೆಗಳಲ್ಲಿ ಸೋರಿಕೆ ಸಮಸ್ಯೆ ಇದೆ. ಹಾಗಾಗಿ ಕೆಲವನ್ನು ಖಾಲಿ ಬಿಡಲಾಗಿದೆ. 1983ರಿಂದ ಅಕ್ವೇರಿಯಂ ಪೆಟ್ಟಿಗೆಗಳನ್ನು ಬದಲಾಯಿಸಿಲ್ಲ’ ಎಂದು ಹೇಳಿದರು.ಪ್ರವಾಸಿಗಳ ಸಂಖ್ಯೆಯಲ್ಲಿ ಕುಸಿತ: ಮತ್ಸ್ಯಾಲಯಕ್ಕೆ ಭೇಟಿ ನೀಡುವ ಪ್ರವಾಸಿಗಳ ಸಂಖ್ಯೆಯಲ್ಲೂ ಕುಸಿತವಾಗಿದೆ. ಮೂರು ತಿಂಗಳಿಂದ ದಿನಕ್ಕೆ ಸರಾಸರಿ ನೂರು ಮಂದಿ ಭೇಟಿ ನೀಡುತ್ತಿದ್ದಾರೆ.

‘ಚಳಿಗಾಲದಲ್ಲಿ ಪ್ರವಾಸಿಗರ ಸಂಖ್ಯೆ ಕಡಿಮೆ. ಇದರಿಂದ ಮತ್ಸ್ಯಾಲಯಕ್ಕೆ ಬರುವ ಆದಾಯವೂ ಕಡಿಮೆ. ಬೇಸಿಗೆ ಹಾಗೂ ದಸರಾ ರಜೆ ಅವಧಿಯಲ್ಲಿ ಮಾತ್ರ ದಿನಕ್ಕೆ 500 ಪ್ರವಾಸಿಗರು ಬರುತ್ತಾರೆ’ ಎಂದು ಚೇತನ್‌ ಹೇಳಿದರು. ‘ಮತ್ಸ್ಯಾಲಯದಿಂದ ಬರುವ ಆದಾಯದಿಂದ ತಿಂಗಳ ವಿದ್ಯುತ್‌ ಬಿಲ್‌ ಕಟ್ಟಲು ಕೂಡ ಸಾಧ್ಯವಾಗುತ್ತಿಲ್ಲ. ವಿದ್ಯುತ್‌ ಬಿಲ್‌ 15ರಿಂದ 18 ಸಾವಿರ ಬರುತ್ತದೆ. ನೀರಿನ ಬಿಲ್‌ 4ರಿಂದ 8 ಸಾವಿರ ಕಟ್ಟಬೇಕು. ಮೀನುಗಳ ಆಹಾರಕ್ಕೆ 10ರಿಂದ 15 ಸಾವಿರ ವೆಚ್ಚವಾಗುತ್ತದೆ. ದೂರವಾಣಿ ಬಿಲ್‌ 3 ಸಾವಿರ ಬರುತ್ತದೆ’ ಎಂದು ವಿವರಿಸಿದರು.
ಮತ್ಸ್ಯಾಲಯದ ವೀಕ್ಷಣೆಗೆ ವಯಸ್ಕರಿಗೆ ತಲಾ 5 ಮತ್ತು ಮಕ್ಕಳಿಗೆ 2 ದರ ನಿಗದಿಪಡಿಸಲಾಗಿದೆ.

40 ಅಕ್ವೇರಿಯಂಗಳ ನಿರ್ವಹಣೆ ಜವಾಬ್ದಾರಿ: ಸರ್ಕಾರಿ ಮತ್ಸ್ಯಾಲಯದ ಸಿಬ್ಬಂದಿಗೆ ನಗರದ ವಿವಿಧೆಡೆ ಇರುವ 40 ಅಕ್ವೇರಿಯಂಗಳ ನಿರ್ವಹಣೆ ಜವಾಬ್ದಾರಿ ಇದೆ. ಅಕ್ವೇರಿಯಂಗಳಿಗೆ ಮೀನು ಖರೀದಿಸಿ ತುಂಬಿಸುವುದು, ಸ್ವಚ್ಛಗೊಳಿಸುವುದು, ಅಕ್ವೇರಿಯಂ ಕೆಟ್ಟು ಹೋದರೆ ಸರಿಪಡಿಸುವುದು ಇವರ ಹೊಣೆ.

ಮುಖ್ಯಮಂತ್ರಿ ಕಚೇರಿ, ನಿವಾಸ, ವಿಧಾನಸೌಧ ಕಚೇರಿ. ರಾಜಭವನ, ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ನಿವಾಸ, ಸಚಿವರ ಅಧಿಕೃತ ನಿವಾಸ, ಲೋಕಾಯುಕ್ತ ಕಚೇರಿ, ಉನ್ನತ ಅಧಿಕಾರಿಗಳ ಕಚೇರಿ, ಸಾರ್ವಜನಿಕ ವೀಕ್ಷಣಾ ಸ್ಥಳಗಳಲ್ಲಿರುವ ಅಕ್ವೇರಿಯಂಗಳ ನಿರ್ವಹಣೆ ಇದರಲ್ಲಿ ಸೇರಿವೆ.

ಆದರೆ, ನಿರ್ವಹಣೆ ಕೆಲಸಕ್ಕಾಗಿ ಮತ್ಸ್ಯಾಲಯದಲ್ಲಿ ಇರುವುದು ಕೇವಲ 6 ಸಿಬ್ಬಂದಿ. ‘ಮತ್ಸ್ಯಾಲಯವನ್ನೂ ನಿರ್ವಹಿಸಬೇಕು. ಪ್ರವಾಸಿಗರಿಗೆ ಮಾರ್ಗದರ್ಶನ ನೀಡಬೇಕು. ಜೊತೆಗೆ 40 ಅಕ್ವೇರಿಯಂಗಳ ನಿರ್ವಹಣೆಯ ಹೊಣೆ ಹೊರಬೇಕು. ಇದರಿಂದ ಸಿಬ್ಬಂದಿಗೆ ಒತ್ತಡ ಹೆಚ್ಚಾಗಿದೆ’ ಎಂದು ಮತ್ಸ್ಯಾಲಯದ ಸಿಬ್ಬಂದಿಯೊಬ್ಬರು ತಿಳಿಸಿದರು.

Write A Comment