ಕನ್ನಡ ವಾರ್ತೆಗಳು

ಪೂಜಾರಿ ಬಿಎಚ್‌ಪಿ ಸ್ಥಾಪಕ ಕಾವು ಹೇಮನಾಥ ಶೆಟ್ಟಿ ಪದಚ್ಯುತಿ ಸರಿಯಾದ ಕ್ರಮ : ಪೂಜಾರಿ ಸ್ಪಷ್ಟನೆ

Pinterest LinkedIn Tumblr

Poojari_Press_Meet_1

ಮಂಗಳೂರು, ಫೆ.2: ಪಕ್ಷದ ಜವಾಬ್ದಾರಿ ಯುತ ಸ್ಥಾನದಲ್ಲಿದ್ದುಕೊಂಡು ಕಾಂಗ್ರೆಸ್ ಪಕ್ಷ ಹಿಂದೂ ವಿರೋಧಿ ಎಂದು ಬಿಂಬಿಸುತ್ತಾ ಕೇವಲ ಅಧಿಕಾರಕ್ಕಾಗಿ ಬಿಎಚ್‌ಪಿ ಸ್ಥಾಪಿಸಿ, ಕೆಪಿಸಿಸಿ, ಡಿಸಿಸಿ ಮುಖಂಡರನ್ನು ಕೇವಲವಾಗಿ ಕಂಡಿದ್ದಲ್ಲದೆ ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತಕ್ಕೆ ತಿಲಾಂಜಲಿಯಿಟ್ಟ ಕಾವು ಹೇಮನಾಥ ಶೆಟ್ಟಿಯನ್ನು ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ಪದಚ್ಯುತಿಗೊಳಿಸುವ ಮೂಲಕ ಪಕ್ಷದ ಮುಖಂಡರು ಕೈಗೊಂಡ ತೀರ್ಮಾನ ಸರಿಯಾಗಿಯೇ ಇದೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ, ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿ ಹೇಳಿದ್ದಾರೆ.

ರವಿವಾರ ಪಕ್ಷದ ಜಿಲ್ಲಾ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬಿಎಚ್‌ಪಿ ಸ್ಥಾಪಿಸಿ ದುರಹಂಕಾರದಿಂದ ವರ್ತಿಸುವ ಮೂಲಕ ಪಕ್ಷದ ಸಾಮಾನ್ಯ ಕಾರ್ಯಕರ್ತನಿಗೂ ಮುಜುಗರವನ್ನುಂಟು ಮಾಡಿದ ಹೇಮನಾಥ ಶೆಟ್ಟಿಯನ್ನು ಅಧ್ಯಕ್ಷ ಸ್ಥಾನದಿಂದ ಪದಚ್ಯುತಿಗೊಳಿರುವ ಕ್ರಮ ಸ್ವಾಗತಾರ್ಹ. ಇದಕ್ಕಾಗಿ ಕೆಪಿಸಿಸಿ ಅಧ್ಯಕ್ಷರು ಹಾಗೂ ಮುಖ್ಯಮಂತ್ರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.

Poojari_Press_Meet_2

ಕಾಂಗ್ರೆಸ್ ಪಕ್ಷದ ಸಂವಿಧಾನದ ಬಗ್ಗೆ ಅರಿವು ಇಲ್ಲದ ಕೆಲವರು ಪಕ್ಷಕ್ಕೆ ಸೇರ್ಪಡೆಗೊಂಡು ಆ ಬಳಿಕ ಪಕ್ಷ ಮುಜುಗರ ಅನುಭವಿಸುವಂತೆ ಮಾಡುತ್ತಾರೆ ಎಂದ ಪೂಜಾರಿ, ನನ್ನನ್ನು ಜೋಕರ್ ಎಂದು ಹೇಮನಾಥ ಶೆಟ್ಟಿ ಲೇವಡಿ ಮಾಡಿದ್ದಾರೆ. ನನ್ನನ್ನು ನಾಳೆ ಯಾರೋ ಮಹಾತ್ಮಾ ಗಾಂಧಿ, ನಾರಾಯಣ ಗುರು ಸ್ವಾಮಿ ಎಂದಾಕ್ಷಣ ನಾನು ಅವರಂತೆ ಎಂದೂ ಆಗಲು ಸಾಧ್ಯವಿಲ್ಲ. ನಾನು ‘ಪೂಜಾರಿ’ಯಾಗಿ ಇರುತ್ತೇನೆ. ನಾನು ಜಾತಿ ಸಂಘಟನೆ ಕಟ್ಟಿದ್ದೇನೆ ಎಂದು ಹೇಮನಾಥ ಶೆಟ್ಟಿ ಹೇಳಿರುವುದರಲ್ಲಿ ಅರ್ಥವಿಲ್ಲ.

ನಾನು ಯಾವ ಜಾತಿ ಸಂಘಟನೆಯ ಸಾಮಾನ್ಯ ಸದಸ್ಯನೂ ಅಲ್ಲ. ಅಲ್ಲದೆ, ಕಾಂಗ್ರೆಸ್‌ನಿಂದ ಸಾಧ್ಯವಿಲ್ಲ ಎಂದುಕೊಂಡು ಯಾರೂ ಕೂಡ ಬಿಲ್ಲವ ಸಂಘ, ಬಂಟರ ಸಂಘ, ಸೆಂಟ್ರಲ್ ಕಮಿಟಿ ಸ್ಥಾಪಿಸಿಲ್ಲ. ಬೇರೆ ಬೇರೆ ಪಕ್ಷದಲ್ಲಿರುವವರೂ ಅದರಲ್ಲಿದ್ದಾರೆ. ಆದರೆ, ಹಿಂದೂಗಳ ರಕ್ಷಣೆ ಕಾಂಗ್ರೆಸ್‌ನಿಂದ ಅಸಾಧ್ಯ ಎಂದು ಹೇಳುವ ಮೂಲಕ ಬಿಎಚ್‌ಪಿ ಸಂಘಟನೆಯನ್ನು ಸ್ಥಾಪಿಸಿ ಕಾಂಗ್ರೆಸ್ ಪಕ್ಷದಲ್ಲಿರುವ ವಿವಿಧ ಧರ್ಮೀಯರು ಕೂಡ ಪ್ರಶ್ನಿಸುವಂತಹ ಕೆಲಸವನ್ನು ಹೇಮನಾಥ ಶೆಟ್ಟಿ ಮಾಡಿದ್ದಾರೆ. ಶೆಟ್ಟಿಯ ರಾಜಕೀಯ ಗುರು ಮೊಯ್ಲಿ ಕೂಡ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ ಎಂದರು.

ಕೇಸರಿ ಬಣ್ಣದ ಮಹತ್ವವನ್ನು ನನಗೆ ಹೇಳಿಕೊಡಬೇಕಾಗಿಲ್ಲ. 25 ವರ್ಷಗಳ ಹಿಂದೆಯೇ ನಾನು ಗೋಕರ್ಣನಾಥ ದೇವಸ್ಥಾನಕ್ಕೆ ಕೇಸರಿ ಬಣ್ಣ ಬಳಿಸಿದ್ದೆ ಎಂದ ಪೂಜಾರಿ, ಪಕ್ಷದಲ್ಲಿದ್ದುಕೊಂಡು ಪಕ್ಷ ವಿರೋಧಿ ಚಟುವಟಿಕೆ ಮಾಡಿದ ಎಲ್ಲರಿಗೂ ಇಂತಹ ಶಿಕ್ಷೆ ಕಾದಿದೆ ಎಂದರು.

ಖಾದರ್‌ಗೆ ಓಟು, ಅಧಿಕಾರ ಮುಖ್ಯ : ಪೂಜಾರಿ ಆರೋಪ

ಬಿಎಚ್‌ಪಿ ಸ್ಥಾಪನೆಗೆ ನಿಮ್ಮ ಹೊರತು ಜಿಲ್ಲೆಯ ಸಚಿವರು, ಶಾಸಕರು ಕೂಡ ಬಲವಾಗಿ ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ ಸಚಿವ ಯು.ಟಿ.ಖಾದರ್ ಸಂಘ ಕಟ್ಟುವುದು ತಪ್ಪಲ್ಲ ಎಂದಿದ್ದಾರೆ. ಈ ಬಗ್ಗೆ ಏನು ಹೇಳುವಿರಿ? ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಪೂಜಾರಿ ‘ಖಾದರ್‌ಗೆ ಓಟು ಮುಖ್ಯ. ಅಧಿಕಾರ ಮುಖ್ಯ. ಅವರಿಗೆ ಪಕ್ಷ-ದೇಶ ಮುಖ್ಯವಾಗಿಲ್ಲ. ಅದಕ್ಕಾಗಿ ಹಾಗೇ ಹೇಳುತ್ತಾರೆ’ ಎಂದರು.

ಮೇಯರ್ ಮಹಾಬಲ ಮಾರ್ಲ, ಉಪಮೇಯರ್ ಕವಿತಾ ವಾಸು, ಪಕ್ಷದ ಮುಖಂಡರಾದ ಮುಹಮ್ಮದ್ ಬದ್ರುದ್ದೀನ್, ಪಿ.ವಿ.ಮೋಹನ್, ಕಳ್ಳಿಗೆ ತಾರನಾಥ ಶೆಟ್ಟಿ, ನಾಗೇಂದ್ರ ಕುಮಾರ್, ಅರುಣ್ ಕುವೆಲ್ಲೊ, ಕೃಪಾ ಆಳ್ವ, ಟಿ.ಕೆ. ಸುಧೀರ್ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು. .

Write A Comment