ಕನ್ನಡ ವಾರ್ತೆಗಳು

ಆಟೋರಿಕ್ಷಾ ಮುಷ್ಕರ;ಜನಪ್ರತಿನಿಧಿಗಳ ಮೌನ ರಾಜ್ಯ ಸರಕಾರದ ತಟಸ್ಥ ನಿಲುವಿನ ಬಗ್ಗೆ ಬಿಜೆಪಿ ಆಕ್ರೋಶ

Pinterest LinkedIn Tumblr

BJP Logo

ಮಂಗಳೂರು,ಜ.30 : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ಆಟೋ ರಿಕ್ಷಾ ಮುಷ್ಕರ ಸಮಸ್ಯೆಯನ್ನು ಬಗೆಹರಿಸುವಲ್ಲಿ ಸರಕಾರದ ಯಾವುದೇ ಜನಪ್ರತಿನಿಧಿಗಳು ಮುಂದಾಗದೆ ಇರುವುದರ ವಿರುದ್ಧ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಘಟಕ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಜಿಲ್ಲಾ ಉಸ್ತುವಾರಿ ಸಚಿವರಾಗಲಿ ಅಥವಾ ರಾಜ್ಯದ ಆಡಳಿತ ಪಕ್ಷದ ಪ್ರಮುಖ ನಾಯಕರಾಗಲಿ ಈ ಕುರಿತಂತೆ ಚರ್ಚಿಸಿ ಸಮಸ್ಯೆ ಬಗೆಹರಿಸುವ ಪ್ರಯತ್ನ ನಡೆಸದೆ ಇರುವುದು ವಿಪರ್‍ಯಾಸ. ಇಷ್ಟು ಸಣ್ಣ ವಿಷಯವನ್ನೇ ಬಗೆಹರಿಸಲಾಗದ ರಾಜ್ಯದ ಆಡಳಿತ ಪಕ್ಷದಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ ಎಂದು ಆಕ್ರೋಶ ಪಡಿಸಿರುವ ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಪ್ರತಾಪಸಿಂಹ ನಾಯಕ್ ತಕ್ಷಣ ಈ ಸಮಸ್ಯೆಯನ್ನು ಚರ್ಚಿಸಿ ಬಗೆಹರಿಸುವಂತೆ ಒತ್ತಾಯಿಸಿದ್ದಾರೆ.

ಶುಕ್ರವಾರ ಪಕ್ಷದ ಜಿಲ್ಲಾ ಕಚೇರಿಯಲ್ಲಿ ನಡೆದ ಜಿಲ್ಲಾ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು ಜನಪ್ರತಿನಿಧಿಗಳು ಮತ್ತು ಸರಕಾರದ ತಟಸ್ಥ ನಿಲುವಿನ ಬಗ್ಗೆ ಜನ ಪ್ರಶ್ನಿಸುತ್ತಿದ್ದಾರೆ . ಆದರೆ ಆಡಳಿತ ಪಕ್ಷ ಈ ವಿಷಯದಲ್ಲೂ ನಿದ್ದೆಯಿಂದ ಎಚ್ಚೆತ್ತುಕೊಂಡಿಲ್ಲ. ಸಂಬಂಧಪಟ್ಟವರು ಇನ್ನಾದರೂ ಎಚ್ಚೆತ್ತು ಸಮಸ್ಯೆ ಬಗೆಹರಿಸಬೇಕು ಎಂದವರು ಆಗ್ರಹಿಸಿದ್ದಾರೆ.

ಒಂದೆಡೆ ಸರಕಾರದ್ದೇ ಸಂಸ್ಥೆಯಾಗಿರುವ ಕೆ.ಎಸ್.ಆರ್.ಟಿ.ಸಿಯು ಕಾಟಾಚಾರಕ್ಕಾಗಿ ದರ ಕಡಿತಗೊಳಿಸಿದಂತಿದ್ದು, ಇದರಿಂದ ಸಾರ್ವಜನಿಕರಿಗೆ ಯಾವುದೇ ಪ್ರಯೋಜನವಿಲ್ಲ. ಕೆ.ಎಸ್.ಆರ್.ಟಿ.ಸಿ. ಬಸ್ಸುಗಳ ಪ್ರಯಾಣ ದರವನ್ನು ನ್ಯಾಯಯುತವಾಗಿ ಮತ್ತಷ್ಟು ಇಳಿಸಬೇಕು ಎಂದು ಪ್ರತಾಪಸಿಂಹ ನಾಯಕ್ ಸರಕಾರವನ್ನು ಒತ್ತಾಯಿಸಿದ್ದಾರೆ. ಅಲ್ಲದೆ ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳಿಗೂ ಮನವಿ ಸಲ್ಲಿಸಿರುವುದಾಗಿ ಅವರು ತಿಳಿಸಿದ್ದಾರೆ.

Write A Comment