ಕನ್ನಡ ವಾರ್ತೆಗಳು

‘ಹೋವರ್ ಕ್ರಾಫ್ಟ್-196’ ಮರಕ್ಕೆ ಡಿಕ್ಕಿ : ಒಂದು ಕೋಟಿಗೂ ಹೆಚ್ಚು ರೂ. ನಷ್ಟ

Pinterest LinkedIn Tumblr

hower_crft_photo_2

ಮಂಗಳೂರು : ಮಂಗಳೂರಿನ ತಟರಕ್ಷಣಾ ಪಡೆಗೆ ಇತ್ತೀಚೆಗಷ್ಟೇ ಸೇರ್ಪಡೆಗೊಂಡಿದ್ದ ‘ಹೋವರ್ ಕ್ರಾಫ್ಟ್-196’ ವಾಹನ ಗುರುವಾರ ಮುಂಜಾನೆ ಪಣಂಬೂರು ಸಮೀಪ ನೆಲದ ಮೇಲೆಯೇ ಅವಘಡಕ್ಕೆ ಈಡಾಗಿದ್ದು, ದಿಕ್ಕುತಪ್ಪಿ ಗಾಳಿ ಮರಗಳಿಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಒಂದು ಕೋಟಿಗೂ ಹೆಚ್ಚು ರೂ. ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.

ವಾಹನವನ್ನು ಮುಂಜಾನೆ 5 ಗಂಟೆ ಸುಮಾರಿಗೆ ಸಮುದ್ರಕ್ಕೆ ಇಳಿಸುವಾಗ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಇದಕ್ಕೆ ಬಲವಾಗಿ ಬೀಸಿದ ಗಾಳಿ ಕಾರಣ ಎಂದು ಕೋಸ್ಟ್‌ಗಾರ್ಡ್ ಅಧಿಕಾರಿಗಳು ಪಣಂಬೂರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

hower_crft_photo_1

ಈ ವಾಹನ ಸೇರಿ ಎರಡು ಹೋವರ್ ಕ್ರಾಫ್ಟ್‌ಗಳನ್ನು ಪಣಂಬೂರು ಬೀಚ್ ಬಳಿಯ ಟವರ್ ಒಂದರ ಬಳಿ ನೆಲದ ಮೇಲೆ ನಿಲ್ಲಿಸಲಾಗಿತ್ತು. ಇತ್ತೀಚೆಗಷ್ಟೆ ರಾಜ್ಯಪಾಲರು ಇವುಗಳನ್ನು ಅಧಿಕೃತವಾಗಿ ಲೋಕಾರ್ಪಣೆ ಮಾಡಿದ್ದರು.

ಮಾಧ್ಯಮದವರಿಗೆ ಪ್ರವೇಶ ನಿರಾಕರಣೆ:

ಘಟನೆ ನಡೆದ ಬಗ್ಗೆ ವರದಿಗೆ ತೆರಳಿದ್ದ ಪತ್ರಕರ್ತರಿಗೆ ಫೋಟೋ ತೆಗೆಯದಂತೆ ಅಲ್ಲಿನ ಸಿಬ್ಬಂದಿ ನಿರ್ಬಂಧಿಸಿದ್ದು, ತೆಗೆದ ಫೋಟೋವನ್ನು ಡಿಲೀಟ್ ಮಾಡಿ ನಿಮ್ಮನ್ನು ಪೊಲೀಸರಿಗೆ ಒಪ್ಪಿಸುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ. ನೋಡಲು ಹೋಗಿದ್ದ ಆಸಕ್ತ ಸಾರ್ವಜನಿಕರನ್ನೂ ಸ್ಥಳದಿಂದ ಓಡಿಸಿದ್ದಾರೆ.

hower_crft_photo_3

ಬೆಲೂನ್ ಭಾಗಕ್ಕೆ ಹಾನಿ: ಇದು ನೀರು ಮತ್ತು ನೆಲದ ಮೇಲೆ ಸಂಚರಿಸುವ ಸಾಮರ್ಥ್ಯ ಹೊಂದಿದು,್ದ ವಿದೇಶಿ ನಿರ್ಮಿತವಾಗಿರುವ ಇದರ ತಲಾ ಮೌಲ್ಯ ಸುಮಾರು 60 ಕೋಟಿ ರೂ. ಅದರ ಬೆಲೂನ್‌ನಂಥ ಭಾಗಕ್ಕೆ ಹಾನಿಯಾಗಿದ್ದು ಕೋಟಿಗೂ ಮಿಕ್ಕಿ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.

ತನಿಖೆಗೆ ಸ್ಥಳೀಯರ ಆಗ್ರಹ:

ನೆಲ ಮತ್ತು ಸಮುದ್ರದ ಮೇಲೆ ಸಂಚರಿಸುವ ಶಕ್ತಿ ಹೊಂದಿರುವ ಇದು ಅತ್ಯಾಧುನಿಕವಾಗಿದ್ದು ಇಲ್ಲಿ ನಡೆದ ಅವಘಡ ಭಾರೀ ಸಂಶಯಕ್ಕೆ ಕಾರಣವಾಗಿದೆ. ಈ ಬಗ್ಗೆ ತನಿಖೆ ಅಗತ್ಯ ಎಂದು ಮೀನುಗಾರರು ಹಾಗೂ ಸ್ಥಳೀಯರು ಒತ್ತಾಯಿಸಿದ್ದಾರೆ.

Write A Comment