ಕನ್ನಡ ವಾರ್ತೆಗಳು

ತುಳು ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತಿಗಳಿಗೆ “ತುಳು ಸಿರಿ ಪ್ರಶಸ್ತಿ” ಪ್ರಧಾನ.

Pinterest LinkedIn Tumblr

tulu_sahitya_sammelana

ವಿಟ್ಲ,ಜ.29 :ಒಡಿಯೂರು ಆತ್ರೇಯ ಸಭಾಂಗಣದ ಎಸ್.ಯು.ಪಣಿಯಾಡಿ ಚಾವಡಿಯಲ್ಲಿ ಬುಧವಾರ ನಡೆದ ತುಳು ಸಾಹಿತ್ಯ ಸಮ್ಮೇಳನವನ್ನು ಪಂಚ ದೀವಟಿಗೆಯನ್ನು ಉರಿಸಿ ಉದ್ಘಾಟಿಸಿ   ತುಳು ಭಾಷೆ ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಬೇಕೆಂಬುದು ಎಲ್ಲರ ಅಭಿಪ್ರಾಯವಾಗಿದ್ದು, ತುಳು ಮಣ್ಣಿನಲ್ಲಿರುವ ಬಜ್ಪೆ ವಿಮಾನ ನಿಲ್ದಾಣಕ್ಕೆ ಅಬ್ಬಕ್ಕ ರಾಣಿಯ ಹೆಸರು, ದಕ್ಷಿಣ ಕನ್ನಡ ಜಿಲ್ಲೆಗೆ ತುಳುನಾಡು ಎಂಬ ಹೆಸರು ಬರಲಿ ಎಂದು ಒಡಿಯೂರು ಗುರುದೇವದತ್ತ ಸಂಸ್ಥಾನದ ಗುರುದೇವಾನಂದ ಸ್ವಾಮೀಜಿ  ಅವರು ಆಶೀರ್ವಚನ ನೀಡಿದರು.

ಬದುಕು ಸತ್ವಯುತವಾದ ಸಾಹಿತ್ಯದಂತಿರಬೇಕು. ಸಾಹಿತ್ಯವಿಲ್ಲದ ಬದುಕು ಬರಡು. ಜಿಲ್ಲೆಯ ಜೀವನದಿಯನ್ನು ಆಪೋಷನ ಮಾಡುವ ಅಪಾಯವನ್ನು ಎದುರಿಸಲು ತುಳುವರು ಸನ್ನದ್ಧರಾಗಬೇಕು ಎಂದರು

ಯಾವೊಂದು ಭಾಷೆಯೂ ಇಂದು ಪರಿಶುದ್ಧವಾಗಿಲ್ಲ, ಭಾಷೆಗೆ ಶಸ್ತ್ರಚಿಕಿತ್ಸೆಯ ಅಗತ್ಯವಿದೆ. ಹೊರಗಿನಿಂದ ಬಂದ ಕಂಪೆನಿಗಳು ತುಳುನಾಡಿನ ಮಣ್ಣನ್ನು ನುಂಗುತ್ತಿವೆ. ತುಳುವಿನಲ್ಲಿರುವ ವಿಚಾರಗಳ ಮಂಥನ ನಡೆಯಬೇಕು. ಭಾಷೆಯ ರಸವನ್ನು ಸಾಹಿತ್ಯದ ಮೂಲಕ ತುಂಬಬೇಕು. ಸಂಸ್ಕಾರ ತಿಳಿಸಲು ಸಾಹಿತ್ಯದ ಅಗತ್ಯವಿದ್ದು, ಸಾಹಿತ್ಯವಿಲ್ಲದೇ ಧಾರ್ಮಿಕತೆಯನ್ನು ತಿಳಿಸಲು ಸಾಧ್ಯವಿಲ್ಲ. ಧರ್ಮದ ಒಳಗೆ ರಾಜಕೀಯ ಬೇಡ, ರಾಜಕೀಯದ ಒಳಗೆ ಧರ್ಮದ ಅಗತ್ಯ ಇದೆ ಎಂದ ಅವರು ತುಳು ಸಾಹಿತ್ಯ ಅಕಾಡೆಮಿಯಲ್ಲಿರುವ ತುಳು ಪುಸ್ತಕಗಳು ಜನರಿಗೆ ತಲುಪುವ ರೀತಿಯಲ್ಲಿ ಶ್ರೀ ಕ್ಷೇತ್ರದಿಂದಲೂ ಸಹಕರಿಸಲಾಗುವುದು ಎಂದು ತಿಳಿಸಿದರು.

ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಜಾನಕಿ ಎಂ. ಬ್ರಹ್ಮಾವರ ಅವರು ಮಾತನಾಡಿ, ತುಳು ಕಾವ್ಯಗಳು ಇನ್ನಷ್ಟು ಹುಟ್ಟಿ ಬರಬೇಕಾದ ಅವಶ್ಯಕತೆ ಇದೆ. ತುಳು ಸಾಹಿತ್ಯದ ಅಭಿವೃದ್ಧಿಗೆ ಬೇಕಾದ ಎಲ್ಲಾ ಕೆಲಸವನ್ನು ಅಕಾಡೆಮಿಯಿಂದ ನಡೆಸಲಾಗುವುದು ಎಂದರು.  ಕೇರಳ ತುಳು ಅಕಾಡೆಮಿ ಅಧ್ಯಕ್ಷ ಎ. ಸುಬ್ಬಯ್ಯ ರೈ ಮಾತನಾಡಿ, ಕೇರಳದಲ್ಲಿ ತುಳು ಬೆಳೆಯುತ್ತಿದ್ದು, ತುಳುನಾಡಿನಲ್ಲಿ ತುಳು ಕುಂಠಿತವಾಗುತ್ತಿದೆ. ಕೇರಳದಲ್ಲಿನ ಹೆಚ್ಚಿನ ದೇವಾಲಯಗಳಲ್ಲಿ ತುಳು ಅರ್ಚಕರಿದ್ದಾರೆ. ತುಳುನಾಡಿನಲ್ಲಿ ಭಾಷಾಪ್ರೇಮ ಮೊಳಗಬೇಕು ಎಂದು ಹೇಳಿದರು.

ಉಡುಪಿ ತುಳುಕೂಟದ ಡಾ. ಭಾಸ್ಕರಾನಂದ ಕುಮಾರ್ ಮಣಿಪಾಲ ಮಾತನಾಡಿ ‘ಇತಿಹಾಸದಲ್ಲಿ ತುಳುವಿಗೆ ಸರಿಯಾದ ರಾಜಾಶ್ರಯ ಸಿಕ್ಕಿಲ್ಲ. ತುಳು ಸಂಸ್ಕೃತಿಯ ನಾಶಕ್ಕೆ ನಾವೇ ಕಾರಣರಾಗಿದ್ದೇವೆ. ತುಳು ಮಕ್ಕಳ ಸಮ್ಮೇಳನ ಅಲ್ಲಲ್ಲಿ ನಡೆಯಲಿ’ ಎಂದು ಆಶಿಸಿದರು. ಮಲಾರು ಜಯರಾಮ ರೈ ಬರೆದ ‘ಬೋಡು ನಮ್ಮೊಂಜಿ ತುಳುನಾಡು’ ಪುಸ್ತಕ, ಜ್ಯೋತಿ ಚೇಳ್ಯಾರು ಅವರ ‘ಗೆಜ್ಜೆತ್ತಿ’ ಕವನ ಸಂಕಲನ, ರಾಷ್ಟ್ರೀಯ ಕಂಪ್ಯೂಟರ್ ಸಾಕ್ಷರತಾ ಸಮಿತಿಯ ಪ್ರವೀಣ್‌ರಾಜ್‌ ಎಸ್. ರಾವ್ ಅವರ ‘ತುಳುಲಿಪಿಯ ದಿನ ಪಟ್ಟಿ’ ಅನಾವರಣಗೊಳಿಸ ಲಾಯಿತು.

ಸಾಹಿತಿಗಳಾದ ಏರ್ಯ ಲಕ್ಷ್ಮೀನಾರಾಯಣ ಆಳ್ವ, ಪಾಲ್ತಾಡಿ ರಾಮಕೃಷ್ಣ ಆಚಾರ್, ದೈವಪಾತ್ರಿ ಕುಮಾರ ಪಾತ್ರಿ, ಶ್ಯಾಮ ಶೆಟ್ಟಿ ಗುಡ್ಡೆಅಂಗಡಿ, ನೃತ್ಯ ಕ್ಷೇತ್ರದ ಕುದ್ಕಾಡಿ ವಿಶ್ವನಾಥ ರೈ, ಸಂಘಟಕ ಅಡೂರು ಉಮೇಶ್ ನಾಯಕ್, ಸಾಹಿತಿ ಬೋಳ ಚಿತ್ತರಂಜನ್‌ದಾಸ್‌ ಶೆಟ್ಟಿ, ಸಂಶೋಧಕ ಕನರಾಡಿ ವಾದಿರಾಜ ಭಟ್, ನಾಟಿವೈದ್ಯೆ ಗೌರಮ್ಮ (ಪುಟ್ಟಮ್ಮ) ಕಾಯರ್‍ಪಳ್ಳ, ತುಳು ನಾಟಕಗಾರ ಎಂ.ಕೆ. ಸೀತಾರಾಮ ಕುಲಾಲ್, ತುಳು ರಂಗಭೂಮಿ ಕಲಾವಿದ ಜೆ.ಸೀತಾರಾಮ ಶೆಟ್ಟಿ, ಪ್ರಗತಿಪರ ಕೃಷಿಕ ಮೋನಪ್ಪ ಕರ್ಕೇರ ಮುಂಡೂರು, ನಾಟಿ ವೈದ್ಯ ಎಸ್.ಲಿಂಗ ಅಜಿಲ ಅಲಂಕಾರು, ಸಾಹಿತಿ ಮುಳಿಯ ಶಂಕರ ಭಟ್, ತುಳುಸೇವಾ ಕಾರ್ಯಕರ್ತ ಬೆಳ್ಳಿಪ್ಪಾಡಿ ಸತೀಶ್ ರೈ, ಯಕ್ಷಗಾನ ಕಲಾವಿದ ಕೊಳ್ತಿಗೆ ನಾರಾಯಣ ಗೌಡ ಅವರಿಗೆ ತುಳು ಸಿರಿ ಪ್ರಶಸ್ತಿ ನೀಡಲಾಯಿತು.

Write A Comment