ಕನ್ನಡ ವಾರ್ತೆಗಳು

`ವಿಜ್ಞಾನ ವಿದ್ಯಾರ್ಥಿಗಳು ನಿಸ್ವಾರ್ಥರಾಗಿ ಸೇವೆ ಸಲ್ಲಿಸಿ’: ಇಂದ್ರಾಣಿ ಕರುಣಾಸಾಗರ್

Pinterest LinkedIn Tumblr

alvas_biological_scaien_1

ಮೂಡುಬಿದಿರೆ, ಜ.28: `ವಿಜ್ಞಾನವೆಂಬುದು ವಿಸ್ಮಯಗಳ ಗೂಡು. ಈ ಕ್ಷೇತ್ರದಲ್ಲಿ ಪ್ರತಿದಿನ ಹೊಸ ಅವಿಷ್ಕಾರಗಳು ನಡೆಯುತ್ತಲೇ ಇವೆ. ಈ ಅವಿಷ್ಕಾರಗಳು ಮನುಷ್ಯನ ಜೀವನಮಟ್ಟವನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ. ಈ ದಿಸೆಯಲ್ಲಿ ಇನ್ನೂ ಹೆಚ್ಚಿನ ಸಂಶೋಧನೆಗಳ, ಪ್ರಯತ್ನಗಳ ಅವಶ್ಯಕತೆಯಿದೆ. ವಿಜ್ಞಾನ ವಿದ್ಯಾರ್ಥಿಗಳು ಇದಕ್ಕಾಗಿ ಹೆಚ್ಚಿನ ಆಸಕ್ತಿ ತೋರಿಸಬೇಕು’ ಎಂದು ನಿಟ್ಟೆ ವಿಶ್ವವಿದ್ಯಾಲಯದ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರದ ನಿರ್ದೇಶಕಿ ಇಂದ್ರಾಣಿ ಕರುಣಾಸಾಗರ್ ಹೇಳಿದರು.

ಆಳ್ವಾಸ್ ಕಾಲೇಜಿನಲ್ಲಿ ನಡೆದ “ಅಡ್ವಾನ್ಸಸ್ ಇನ್ ಬಯೋಲಾಜಿಕಲ್ ಸೈನ್ಸ್‌ಸ್” ವಿಷಯವಾಗಿ ಆಯೋಜಿಸಿದ ರಾಷ್ಟ್ರೀಯ ವಿಚಾರಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು. `ಸಮಾಜಮುಖಿ ಸಂಶೋಧನೆಗಳಲ್ಲಿ ನಿರತರಾದ ವಿದ್ಯಾರ್ಥಿಗಳು ಹಣಕ್ಕಾಗಿ ಎಂದೂ ಆಸೆ ಪಡಬಾರದು. ಮಾನವಕುಲದ ಅಭಿವೃದ್ಧಿಗಾಗಿ ನಡೆಸುವ ಸಂಶೋಧನೆಗಳಿಂದ ಸಿಗುವ ಸಾರ್ಥಕತೆ ಮತ್ತೆಲ್ಲೂ ಸಿಗಲಾರದು. ಆದ್ದರಿಂದ ವಿಜ್ಞಾನ ವಿದ್ಯಾರ್ಥಿಗಳು ನಿಸ್ವಾರ್ಥರಾಗಿ ಸೇವೆ ಸಲ್ಲಿಸಿ’ ಎಂದರು.

alvas_biological_scaien_2

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ.ಕುರಿಯನ್ ಮಾತನಾಡಿ,”ವಿಜ್ಞಾನದಿಂದ ಸಮಾಜಕ್ಕೆ ಒಳ್ಳೆಯದೇ ಆದರೂ ಈ ಕ್ಷೇತ್ರವನ್ನು ಅತ್ಯಂತ ಸೂಕ್ಷ್ಮವಾಗಿ ನಿಭಾಯಿಸಬೇಕಾದ ಜವಾಬ್ದಾರಿ ಅವಶ್ಯಕವಾಗಿದೆ. ಇಂದು ವಿಜ್ಞಾನಿಗಳು ಜೈವಿಕ ಆಯುಧಗಳ(ಬಯೊಲಾಜಿಕಲ್ ವೆಪನ್ಸ್) ಬಗ್ಗೆ ಮಾತನಾಡುವಂತಾಗಿದೆ. ಇದು ಅತಿ ದೊಡ್ಡ ಅಪರಾಧವಾಗಿ ಪರಿಗಣಿಸಲ್ಪಡುತ್ತದೆ. ಈ ಕ್ಷೇತ್ರವನ್ನು ಅತ್ಯಂತ ಸೂಕ್ಷ್ಮವಾಗಿ ನಡೆಸಬೇಕಾದ ಬಹುದೊಡ್ಡ ಜವಾಬ್ದಾರಿ ವಿಜ್ಞಾನ ವಿದ್ಯಾರ್ಥಿಗಳ ಮೇಲಿದೆ. ವಿಜ್ಞಾನ ಪ್ರಯೋಗಾಲಯಗಳು ಅಭಿವೃದ್ಧಿ ಕೇಂದ್ರಗಳಾಗಿ ಮಾರ್ಪಾಟಾಗಲಿ” ಎಂದರು.

alvas_biological_scaien_3

ಇದೇ ಸಂದರ್ಭದಲ್ಲಿ ಆಳ್ವಾಸ್ ಕಾಲೇಜಿನ ವಿಜ್ಞಾನ ವಿಭಾಗದ ವತಿಯಿಂದ ಪ್ರಕಟಗೊಂಡ ಕಿರು ಹೊತ್ತಿಗೆಯನ್ನು ಮೈಸೂರು ವಿವಿಯ ಜೈವಿಕ ತಂತ್ರಜ್ಞಾನ ವಿಭಾಗದ ಪ್ರಾಧ್ಯಾಪಕ ಡಾ.ಕ್ಲೆಟಸ್ ಜೆ.ಎಮ್. ಡಿ’ಸೋಜಾ ಬಿಡುಗಡೆಗೊಳಿಸಿದರು. ಉಪನ್ಯಾಸಕ ವೆಂಕಟಕೃಷ್ಣ ನಿರೂಪಿಸಿದರು. ವಿಚಾರ ಸಂಕಿರಣದ ಸಂಯೋಜಕಿ ರಮ್ಯಾ ರೈ ಸ್ವಾಗತಿಸಿದರು. ಉಪನ್ಯಾಸಕ ರಾಜೇಶ್ ವಂದಿಸಿದರು.

alvas_biological_scaien_6

ವಿಚಾರಸಂಕಿರಣದ ಹೈಲೈಟ್ಸ್:
ಆಳ್ವಾಸ್ ಕಾಲೇಜಿನ ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರ, ಸೂಕ್ಷ್ಮಾಣು ಜೀವಿಶಾಸ್ತ್ರ ಹಾಗೂ ಜೀವರಾಸಾಯನಿಕ ಶಾಸ್ತ್ರದ ವಿಭಾಗಗಳ ವತಿಯಿಂದ ಈ ರಾಷ್ಟ್ರೀಯ ವಿಚಾರಸಂಕಿರಣ ಆಯೋಜನೆಗೊಂಡಿದೆ. ಸಂಕಿರಣದಲ್ಲಿ ಜೀವ ವಿಜ್ಞಾನದ ವಿವಿಧ ವಿಷಯಗಳ, ಪ್ರಚಲಿತ ಸಂಶೋಧನೆಗಳ ಕುರಿತ ವಿಚಾರ ಗೋಷ್ಠಿಗಳು ನಡೆದವು. ಆಯಾ ಕ್ಷೇತ್ರದ ತಜ್ಞರು ಗೋಷ್ಠಿಗಳಲ್ಲಿ ವಿಚಾರಮಂಡನೆ ಮಾಡಿದರು. ಕರ್ನಾಟಕದ ವಿವಿಧ ಭಾಗಗಳ ಸಂಶೋಧಕರು, ಸಂಶೋಧನ ವಿದ್ಯಾರ್ಥಿಗಳು, ವಿಜ್ಞಾನ ವಿದ್ಯಾರ್ಥಿಗಳು ಸಂಕಿರಣದಲ್ಲಿ ಭಾಗವಹಿಸಿದ್ದರು.

Write A Comment