ಕನ್ನಡ ವಾರ್ತೆಗಳು

ಜ:30 ರಿಂದ ಫೆ :1 –  ‘ನಮ್ಮೂರ ಹಬ್ಬ 2015’

Pinterest LinkedIn Tumblr

nammura_habba_benglore

ಬೆಂಗಳೂರು, ಜ.28 : ಉದ್ಯಾನ ನಗರಿ ಬೆಂಗಳೂರಿನಲ್ಲಿ ಕರಾವಳಿಯ ಖಾದ್ಯ, ಕ್ರೀಡೆ ಹಾಗೂ ಸಾಂಸ್ಕೃತಿಕ ಉತ್ಸವ ‘ನಮ್ಮೂರ ಹಬ್ಬ 2015’ಕ್ಕೆ ವೇದಿಕೆ ಸಿದ್ಧವಾಗಿದೆ. ಜನವರಿ 31 ಮತ್ತು ಫೆಬ್ರವರಿ 1ರಂದು ನಮ್ಮೂರ ಹಬ್ಬ ನಡೆಯಲಿದೆ. ಸಿಎಂ ಸಿದ್ದರಾಮಯ್ಯ ಅವರು ಹಬ್ಬವನ್ನು ಉದ್ಘಾಟಿಸಲಿದ್ದಾರೆ.

ಜನವರಿ 31 ಶನಿವಾರ ಮತ್ತು ಫೆಬ್ರವರಿ 1 ಭಾನುವಾರ ಜಯನಗರ 5ನೇ ಬ್ಲಾಕ್‌ನಲ್ಲಿರುವ ಚಂದ್ರಗುಪ್ತ ಮೌರ್ಯ ಕ್ರೀಡಾಂಗಣ (ಶಾಲಿನಿ ಗ್ರೌಂಡ್) ನಲ್ಲಿ ‘ನಮ್ಮೂರ ಹಬ್ಬ 2015’ ನಡೆಯಲಿದೆ. ನಮ್ಮೂರ ಹಬ್ಬದಲ್ಲಿ ಕರಾವಳಿಯ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಅಭಿನಂದನ ಸಾಂಸ್ಕೃತಿಕ ಟ್ರಸ್ಟ್ ಮನವಿ ಮಾಡಿದೆ.

ಬೆಂಗಳೂರಿನಲ್ಲಿ ಜ.31ರಂದು ಕರಾವಳಿ ಜನರ ‘ನಮ್ಮೂರ ಹಬ್ಬ’:
ಜನವರಿ 31ರಂದು ಸಂಜೆ 6 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ‘ನಮ್ಮೂರ ಹಬ್ಬ 2015’ಅನ್ನು ಉದ್ಘಾಟಿಸಲಿದ್ದಾರೆ. ಇದು ಕರಾವಳಿ ಭಾಗರ ಜನರ ಹಬ್ಬ. ಬೆಂಗಳೂರಿನಲ್ಲಿ ಸುಮಾರು 15 ಲಕ್ಷ ಕರಾವಳಿ ಜನರು ನೆಲೆಸಿದ್ದಾರೆ. ಯುವ ಪೀಳಿಗೆಗೆ ಕರಾವಳಿ ಸಂಸ್ಕೃತಿ ಪರಿಚಯಿಸಲು ಹಬ್ಬ ನಡೆಸಲಾಗುತ್ತದೆ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.
‘ನಮ್ಮೂರ ಹಬ್ಬದ ಅಂಗವಾಗಿ ಫೆಬ್ರವರಿ 1 ರಂದು ಕ್ರೀಡಾ ಮತ್ತು ಮನೋರಂಜನಾ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. 50 ಮೀಟರ್ ಓಟ, ಒಂಟಿ ಕಾಲಿನ ಓಟ, ಚಿತ್ರಕಲೆ, ವಾಲಿಬಾಲ್ ಸೇರಿದಂತೆ ವಿವಿಧ ಸ್ಪರ್ಧೆಗಳು ನಡೆಯಲಿವೆ.

ಪ್ರಶಸ್ತಿ ವಿತರಣೆ : ನಮ್ಮೂರ ಹಬ್ಬವನ್ನು ಆಯೋಜಿಸುವ ಅಭಿನಂದನ ಟ್ರಸ್ಟ್ ‘ಕಿರೀಟ’ ಪ್ರಶಸ್ತಿಯನ್ನು ನೀಡುತ್ತದೆ. ಈ ಬಾರಿ ವೈಯಕ್ತಿಕ ಸಾಧನೆಯ ವಿಭಾಗದಲ್ಲಿ ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ಮತ್ತು ಕಬಡ್ಡಿ ವಿಶ್ವ ಕಪ್ ಗೆದ್ದು ತಂದ ಭಾರತೀಯ ಕಬಡ್ಡಿ ತಂಡದ ನಾಯಕಿ ಮಮತಾ ಪೂಜಾರಿಯವರಿಗೆ ಪ್ರಶಸ್ತಿಯನ್ನು ನೀಡಲಾಗುತ್ತದೆ.

ಸಂಘ ಸಂಸ್ಥೆಗಳ ವಿಭಾಗದಲ್ಲಿ 40 ವರ್ಷಗಳಿಂದ ಯಕ್ಷಗಾನದ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿರುವ ಮೋಹನ್ ಹೊಳ್ಳ ಅವರ ನೇತೃತ್ವದ ‘ಯಕ್ಷ ದೇಗುಲ’ ಸಂಸ್ಥೆಗೆ ಹಾಗು ವಿದೇಶದಲ್ಲಿ ಕನ್ನಡಪರ ವಾತಾವರಣ ನಿರ್ಮಿಸಿಕೊಂಡು ನಾಡು ನುಡಿಗಾಗಿ ದುಡಿಯುತ್ತಿರುವ ‘ಅಬುದಾಬಿ ಕನ್ನಡ ಸಂಘ’ಕ್ಕೆ ಪ್ರಶಸ್ತಿಯನ್ನು ನೀಡಲಾಗುತ್ತದೆ. ಹಬ್ಬದ ಬಗ್ಗೆ ಹೆಚ್ಚಿನ ಮಾಹಿತಿಗೆ 9886046878, 9844022692 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದಾಗಿದೆ.

Write A Comment