ಕನ್ನಡ ವಾರ್ತೆಗಳು

ಸಿಐಟಿಯು ನೇತೃತ್ವದಲ್ಲಿ ಆಟೋರಿಕ್ಷಾ ಚಾಲಕರ ಧರಣಿ

Pinterest LinkedIn Tumblr

auto_rickow_protest_1

ಮಂಗಳೂರು,ಜ.27: ಪೆಟ್ರೋಲಿಯಂ ಉತ್ಪನ್ನಗಳ ದರ ಇಳಿಕೆಯಾಗಿರುವ ಹಿನ್ನೆಲೆಯಲ್ಲಿ ಆಟೋರಿಕ್ಷಾ ಪ್ರಯಾಣದರವನ್ನು ಇಳಿಸಿರುವ ಜಿಲ್ಲಾಡಳಿತದ ಕ್ರಮವನ್ನು ವಿರೋಧಿಸಿ ಹಾಗೂ ರಿಕ್ಷಾ ಪ್ರಯಾಣದರವನ್ನು ಪುನರ್ ಪರಿಶೀಲನೆ ಮಾಡಲು ಒತ್ತಾಯಿಸಿ ಆಟೋರಿಕ್ಷಾ ಚಾಲಕರು ಸಿಐಟಿಯು ನೇತೃತ್ವದಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಧರಣಿ ನಡೆಸಿದರು.

ಸಿಐಟಿಯು ನ ಜಿಲ್ಲಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಈ ಸಂಧರ್ಭದಲ್ಲಿ ಮಾತನಾಡಿ ಜಿಲ್ಲಾಧಿಕಾರಿಗಳು ಆಟೋರಿಕ್ಷಾ ಪ್ರಯಾಣ ದರ ಇಳಿಕೆ ಮಾಡಿರುವುದು ಸರಿಯಲ್ಲ. ಸಾರ್ವಜನಿಕ ಸೇವೆಯ ನೆಪದಲ್ಲಿ ದಿನಕ್ಕೆ 14 ಗಂಟೆಗೂ ಮಿಕ್ಕಿ ದುಡಿಯುವ ಆಟೋರಿಕ್ಷಾ ಚಾಲಕರ ಕಷ್ಟವನ್ನು ಅರ್ಥಮಾಡಿಕೊಳ್ಳುವ ಅವಶ್ಯಕತೆ ಇದೆ. ದುಡಿಯುವ ವರ್ಗದ ಭಾಗವಾದ ಆಟೋರಿಕ್ಷಾ ಚಾಲಕರ ಬದುಕನ್ನು ವಿಶೇಷವಾಗಿ ಗಣನೆಗೆ ತೆಗೆದು ಕೊಳ್ಳ ಬೇಕಾಗಿದೆ ಎಂದರು.

auto_rickow_protest_2

ಆಟೋರಿಕ್ಷಾ ಚಾಲಕರಿಗೆ ಇಂದಿನವರೆಗೂ ಸರಕಾರ ಕಲ್ಯಾಣ ಮಂಡಳಿಯನ್ನು ರಚಿಸಿಲ್ಲ. ಇದರಿಂದಾಗಿ ರಿಕ್ಷಾ ಚಾಲಕರಿಗೆ ವಸತಿ, ಆರೋಗ್ಯ, ನಿವೃತ್ತಿ ವೇತನ, ಮಕ್ಕಳಿಗೆ ವಿದ್ಯಾರ್ಥಿ ವೇತನ, ಸಾಮಾಜಿಕ ಭದ್ರತೆ ಇಲ್ಲ. ಪೆಟ್ರೋಲಿಯಂ ಉತ್ಪನ್ನಗಳ ದರ ಇಳಿಕೆಯಾದರೂ ಜೀವನಾವಶ್ಯಕ ವಸ್ತುಗಳ ಬೆಲೆ ಇಳಿಕೆಯಾಗಿಲ್ಲ. ಅಲ್ಲದೆ ಆಟೋ ರಿಕ್ಷಾಗಳ ಬಿಡಿಭಾಗಗಳು ದುಬಾರಿಯಾಗಿದೆ. ಆದ್ದರಿಂದ ಆಟೋ ರಿಕ್ಷಾ ಪ್ರಯಾಣದರವನ್ನು ಇಳಿಕೆ ಮಾಡಿದ ಜಿಲ್ಲಾಧಿಕಾರಿಗಳು ತಮ್ಮ ಆದೇಶವನ್ನು ಪುನರ್ ಪರಿಶೀಲಿಸಬೇಕೆಂದು ಆಗ್ರಹಿಸಿದರು.

ಫೆಡರೇಶನ್‌ ಆಫ್‌ ಕರ್ನಾಟಕ ಆಟೋರಿಕ್ಷಾ ಡ್ರೈವರ್ ಯೂನಿಯನ್‌ ಜಿಲ್ಲಾಧ್ಯಕ್ಷ ಸುನಿಲ್‌ ಕುಮಾರ್‌ ಬಜಾಲ್‌, ಪ್ರಧಾನ ಕಾರ್ಯದರ್ಶಿ ಎಲ್‌.ಟಿ. ಸುವರ್ಣ ಹಾಗೂ ನಗರ ಉಪಾಧ್ಯಕ್ಷರಾದ ಮಹಮ್ಮದ್‌ ಇರ್ಫಾನ್‌ , ಫೆಡರೇಶನ್‌ ನಗರ ಅಧ್ಯಕ್ಷ ಕೃಷ್ಣಪ್ಪ ಗೌಡ, ಪ್ರಧಾನ ಕಾರ್ಯದರ್ಶಿ ಮಹಮ್ಮದ್‌ ಅನ್ಸಾರ್‌, ಮುಖಂಡರಾದ ಅಂತಪ್ಪ ಪೂಜಾರಿ, ಜಯರಾಮ ಶೆಟ್ಟಿ, ಸ್ಟಾನ್ಲಿ ನೊರೋನ್ಹಾ, ಕೇಶವ, ಯೋಗೇಂದ್ರ, ಸಂಜೀವ ಮುಂತಾದವರು ಉಪಸ್ಥಿತರಿದ್ದರು.

Write A Comment