ಕನ್ನಡ ವಾರ್ತೆಗಳು

ಎ.ಜಿ. ಕೊಡ್ಗಿ ಮೊಮ್ಮಗಳನ್ನು ಮದುವೆಯಾದ ವಿದೇಶಿ ಕುವರ: ಅಮಾಸೆಬೈಲಿನಲ್ಲಿ ಸಂಭ್ರಮವೋ ಸಂಭ್ರಮ

Pinterest LinkedIn Tumblr

ಕುಂದಾಪುರ: ತಾಲ್ಲೂಕಿನ ಮಲೆನಾಡ ಭಾಗದ ಹಳ್ಳಿಗಳಲ್ಲಿ ಒಂದಾದ ಅಮಾಸೆಬೈಲಿನ ಮಚ್ಚಟ್ಟಿನಲ್ಲಿ ನಿನ್ನೆ ಎರಡು ರೀತಿಯ ಸಂಭ್ರಮ. ಗಣರಾಜ್ಯೋತ್ಸವದ ಸಂಭ್ರಮ ಒಂದಾದರೆ, ಇನ್ನೊಂದು ನಮ್ಮೂರಿನ ಕುವರಿಯನ್ನು ಮದುವೆಯಾಗುವ ವಿದೇಶಿ ಕುವರನನ್ನು ಕಣ್‌ತುಂಬಾ ನೋಡುವ ಅಪೂರ್ವವಾದ ಸನ್ನಿವೇಶ.

ಈ ಅಪೂರ್ವವಾದ ಸನ್ನಿವೇಶಕ್ಕೆ ವೇದಿಕೆ ಒದಗಿಸಿದ್ದು, ರಾಜ್ಯದ ಹಿರಿಯ ಮುತ್ಸದ್ದಿ ಮಾಜಿ ಶಾಸಕ ಹಾಗೂ 3 ನೇ ಹಣಕಾಸು ಆಯೋಗದ ಅಧ್ಯಕ್ಷರಾದ ಎ.ಜಿ ಕೊಡ್ಗಿಯವರ ಮನೆಯಲ್ಲಿ ನಿನ್ನೆ ನಡೆದ ಅವರ ಮೊಮ್ಮಗಳು ಚೇತನಾ ಅವರ ವಿವಾಹ ಸಂಭ್ರಮ.

A.G. Kodgi_House_Marriage

ಕೊಡ್ಗಿಯವರ ಪುತ್ರಿ ಶಶಿ ಬಿಳಿಯಾರ್ ಅವರು ಡಾ.ವೇದವ್ಯಾಸ್ ಬಿಳಿಯಾರ್ ಅವರನ್ನು ಮದುವೆಯಾದ ಬಳಿಕ ಪತಿಯೊಂದಿಗೆ ಯು.ಎಸ್.ಎ ನಲ್ಲಿ ನೆಲೆಸಿದ್ದಾರೆ. ಈ ದಂಪತಿಗಳ ಪುತ್ರಿ ಚೇತನಾ ಹುಟ್ಟಿ ಬೆಳೆದದ್ದೆಲ್ಲಾ ಯು.ಎಸ್.ಎ ನಲ್ಲಿಯೇ. ಆದರೂ ಆಕೆಗೆ ಇಲ್ಲಿನ ಸಂಸ್ಕೃತಿಯ ಬಗ್ಗೆ ವಿಶೇಷವಾದ ಅಭಿಮಾನವಿದೆ. ಈ ಕಾರಣದಿಂದಲೆ ತಾನು ಆಯ್ಕೆ ಮಾಡಿಕೊಂಡ ವಿದೇಶಿ ನೆಲದ ಕೆವಿನ್ ವಿಲ್‌ಕಿನ್ಸ್ ಅವರಿಗೆ ಇಲ್ಲಿನ ಸಂಸ್ಕೃತಿಯ ಬಗ್ಗೆ ತಿಳಿಸಿದ್ದಾರೆ. ಮದುವೆಯನ್ನು ಅಜ್ಜನ ಮನೆಯಲ್ಲಿ ಮಾಡುವ ಬಗ್ಗೆ ಹೇಳಿದ್ದಾರೆ. ಎರಡು ಕಡೆಯವರ ಒಪ್ಪಿಗೆಯ ಬಳಿಕ ಮಚ್ಚಟ್ಟಿನ ಕೊಡ್ಗಿಯವರ ಮನೆಯಲ್ಲಿ ಅಪ್ಪಟ ಭಾರತೀಯ ಸಂಸ್ಕೃತಿಯಲ್ಲಿ ಹಸೆಮಣೆ ಏರುವ ತೀರ್ಮಾನವಾಗಿದೆ.

ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಪುರೋಹಿತ ಮಾರ್ಗದರ್ಶನದಲ್ಲಿ ಕೊಡ್ಗಿ ಕುಟುಂಬದ ಚೇತನಾ ಅವರನ್ನು ರೀಟಾ ವಿಲ್‌ಕಿನ್ಸ್ ಹಾಗೂ ರಾಯನ್ ವಿಲ್‌ಕಿನ್ಸ್ ಅವರ ಪುತ್ರ ಕೆವಿನ್ ವಿಲ್‌ಕಿನ್ಸ್ ಅವರು ಅಗ್ನಿ ಸಾಕ್ಷಿಯಾಗಿ ಕರಿಮಣಿ ಕಟ್ಟಿ ವಿವಾಹವಾದರು. ಎರಡು ಕುಟುಂಬದ ಹಿರಿಯರ ಹಾಗೂ ಬಂಧುಗಳ ಸಮ್ಮುಖದಲ್ಲಿ ನವ ದಂಪತಿಗಳು ಸಪ್ತಪದಿಗಳನ್ನು ತುಳಿದು, ಶಾಸ್ತ್ರೋಕ್ತವಾಗಿ ಸತಿ-ಪತಿಗಳಾದರು. ಈ ಅಪೂರ್ವವಾದ ಕಾರ್ಯಕ್ರಮಕ್ಕೆ ಯು.ಎಸ್.ಎ ಯಿಂದ ಬಂದಿದ್ದ ವರನ ಬಂಧುಗಳು ಸಾಕ್ಷಿಗಳಾದರು. ವಿಶೇಷತೆ ಎಂದರೆ, ಅವರೆಲ್ಲ ಅಪ್ಪಟ ಭಾರತೀಯ ಶೈಲಿಯ ಉಡುಗೆ-ತುಡುಗೆಗಳನ್ನು ತೊಟ್ಟು, ಸಂಭ್ರಮವನ್ನು ಹಂಚಿಕೊಂಡರು.

ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ವಿನಯಕುಮಾರ ಸೊರಕೆ, ಸಂಸದೆ ಶೋಭಾ ಕರಂದ್ಲಾಜೆ, ಶಾಸಕರುಗಳಾದ ಕೆ.ಪ್ರತಾಪ್‌ಚಂದ್ರ ಶೆಟ್ಟಿ, ಹಾಲಾಡಿ ಶ್ರೀನಿವಾಸ ಶೆಟ್ಟಿ, ಶ್ರೀನಿವಾಸ ಪೂಜಾರಿ, ಮಾಜಿ ಸಂಸದೆ ಮನೋರಮಾ ಮಧ್ವರಾಜ್, ಮಾಜಿ ಶಾಸಕರಾದ ಬಸ್ರೂರು ಅಪ್ಪಣ್ಣ ಹೆಗ್ಡೆ, ಹಾಡುಗಾರ ವಿದ್ಯಾಭೂಷಣ, ಉದ್ಯಮಿಗಳಾದ ಡಾ.ಜಿ ಶಂಕರ, ಎನ್.ರಾಘವೇಂದ್ರ ರಾವ್ ನೇರಂಬಳ್ಳಿ, ವಿ.ಕಿ ಮೋಹನ್ ಬೆಂಗಳೂರು ಮುಂತಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Write A Comment