ಕನ್ನಡ ವಾರ್ತೆಗಳು

ಮಂದಾರ್ತಿ : ಟೈಲರಿಂಗ್ ಅಂಗಡಿಗೆ ಬೆಂಕಿ : ಕಿಡಿಗೇಡಿಗಳ ಕೃತ್ಯ ಶಂಕೆ

Pinterest LinkedIn Tumblr

ಕುಂದಾಪುರ: ಟೈಲರಿಂಗ್ ನಡೆಸುತ್ತಿದ್ದ ಅಂಗಡಿಯೊಂದಕ್ಕೆ ಶುಕ್ರವಾರ ತಡ ರಾತ್ರಿ ಬೆಂಕಿ ಹತ್ತಿಕೊಂಡಿದ್ದು, ಅಂಗಡಿ ಸಂಪೂರ್ಣ ನಾಶವಾಗಿದ್ದಲ್ಲದೇ ಹೊಲಿಯಲು ತಂದಿಟ್ಟಿದ್ದ ಸುಮಾರು ಎರಡು ಲಕ್ಷ ರೂಪಾಯಿ ಮೌಲ್ಯದ ಬಟ್ಟೆ ಸೇರಿ ಹೊಲಿಗೆ ಯಂತ್ರಗಳು ಹಾಗೂ ಪೀಠೋಪಕರಣಗಳು ಸಂಪೂರ್ಣ ಭಸ್ಮವಾದ ಘಟನೆ ಮಂದಾರ್ತಿ ದುರ್ಗಾಪರಮೇಶ್ವರಿ ದೇವಸ್ಥಾನದ ಸಮೀಪ ನಡೆದಿದೆ. ಸುಮಾರು ನಾಲ್ಕು ಲಕ್ಷ ರೂಪಾಯಿ ನಷ್ಟ ಅಂದಾಜಿಸಲಾಗಿದೆ.

ದೇವಸ್ಥಾನಕ್ಕೆ ಅನತಿ ದೂರದಲ್ಲಿರುವ ಚಂದ್ರಯ್ಯ ಆಚಾರಿ ಎಂಬುವರ ಒಡೆತನಕ್ಕೆ ಸೇರಿದ್ದ ಈ ಅಂಗಡಿಯನ್ನು ಸುಗುಣ ಎಂಬುವರು ಸುಮಾರು ಆರೇಳು ತಿಂಗಳಿನಿಂದ ಬಾಡಿಗೆಗೆ ಪಡೆದಿದ್ದರು. ಬೆಂಕಿ ಅನಾಹುತದಿಂದಾಗಿ ಸಂಪೂರ್ಣ ನಾಶವಾದ ಪರಿಣಾಮ ದಿಕ್ಕು ಕಾಣದಂತಾಗಿದ್ದಾರೆ.

Mandarthi_Fire_Tailor Shop (14) Mandarthi_Fire_Tailor Shop Mandarthi_Fire_Tailor Shop (1) Mandarthi_Fire_Tailor Shop (3) Mandarthi_Fire_Tailor Shop (4) Mandarthi_Fire_Tailor Shop (6) Mandarthi_Fire_Tailor Shop (7) Mandarthi_Fire_Tailor Shop (8) Mandarthi_Fire_Tailor Shop (9) Mandarthi_Fire_Tailor Shop (10) Mandarthi_Fire_Tailor Shop (12) Mandarthi_Fire_Tailor Shop (13)

ಘಟನೆಯ ವಿವರ: ಚಂದ್ರ ಆಚಾರ್ ಅವರಿಗೂ ಶ್ರೀ ಕ್ಷೇತ್ರ ಮಂದಾತಿ ದೇವಸ್ಥಾನದ ಆಡಳಿತ ಸಮಿತಿಗೂ ಈ ಹಿಂದೆಯೇ ಮನಸ್ಥಾಪವಿದ್ದಿತ್ತೆನ್ನಲಾಗಿದೆ. ಇದೇ ಕಾರಣಕ್ಕೆ ಎರಡು ತಿಂಗಳ ಹಿಂದೆ ಚಂದ್ರಯ್ಯ ಆಚಾರ್ ಅವರು ನಿರ್ಮಿಸಿದ್ದನ್ನು ಸರ್ಕಾರೀ ಜಾಗ ಎನ್ನುವ ಕಾರಣವೊಡ್ಡಿ ಆಡಳಿತ ಮಂಡಳಿ ಕೆಡವಿ ಹಾಕಿತ್ತು. ಈ ಸಂದರ್ಭ ಚಂದ್ರಯ್ಯ ಆಚಾರ್ ಅವರ ಮನೆಯ ಹೆಂಗಸರಿಗೂ ಗಾಯಗಳಾಗಿದ್ದು, ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿತ್ತು.

ಆವರಣ ಗೋಡೆ ಕೆಡವಿದ ಘಟನೆ ನಡೆದು ಎರಡು ತಿಂಗಳೊಳಗೆ ಈ ಬೆಂಕಿ ಅನಾಹುತ ನಡೆದಿರುವುದು ಸ್ಥಳೀಯರಿಗೆ ಅನುಮಾನಕ್ಕೆ ಕಾರಣವಾಗಿದೆ. ಕಟ್ಟಡ ಮಾಲೀಕರ ಪ್ರಕಾರ ರಾತ್ರಿ ಸುಮಾರು ಹನ್ನೊಂದು ಘಂಟೆ ಹೊತ್ತಿಗೆ ಚಂದ್ರಯ್ಯ ಆಚಾರ್ ಎದ್ದು ಬಂದು ನೋಡುವಾಗ ಎಲ್ಲವೂ ಶಾಂತವಾಗಿಯೇ ಇತ್ತು. ತಡರಾತ್ರಿ ಒಂದು ಗಂಟೆ ಸುಮಾರಿಗೆ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡ ಶಬ್ಧ ಕೇಳಿ ಬಂದಿದ್ದು, ಎದ್ದು ನೋಡಿದಾಗ ಇಡೀ ಕಟ್ಟಡ ಬೆಂಕಿಗಾಹುತಿಯಾಗಿತ್ತು. ತಕ್ಷಣ ಪಂಪ್ ಸಹಾಯದಿಂದ ನೀರು ಹಾಯಿಸಿ ಬೆಂಕಿ ನಂದಿಸಲು ಯತ್ನಿಸಲಾಗಿದ್ದು, ಸ್ಥಳೀಯರು ಬೆಂಕಿ ನಂದಿಸಲು ಸಹಕರಿಸಿದ್ದರು. ಬ್ರಹ್ಮಾವರ ಪೊಲೀಸರು ರಾತ್ರಿಯೇ ಸ್ಥಳಕ್ಕಾಗಮಿಸಿದ್ದು, ಪರಿಶೀಲನೆ ನಡೆಸಿದ್ದಾರೆ. ಶನಿವಾರ ಮದ್ಯಾಹ್ನ ಫೊರೆನ್ಸಿಕ್ ತಜ್ಞರು ಆಗಮಿಸಿ ಮಹಜರು ಮಾಡಿದ್ದಾರೆ.

ಅನುಮಾನದ ಹುತ್ತ : ಘಟನೆ ನಡೆದು ಸುಮಾರು ಒಂದು ಘಂಟೆಗಳ ಕಾಲ ವಿದ್ಯುತ್ ಸಂಪರ್ಕ ಹಾಗೇ ಇತ್ತು ಮತ್ತು ಕಟ್ಟಡ ಸಂಪೂರ್ಣ ಸುಟ್ಟು ಹೋದ ಮೇಲೆ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡಿರುವ ಹಿನ್ನೆಲೆಯನ್ನು ನೋಡಿದರೆ ಶಾರ್ಟ್ ಸರ್ಕ್ಯೂಟ್ ಅಥವಾ ಗ್ಯಾಸ್ ಸಿಲಿಂಡರ್ ಸ್ಫೋಟ ಸಾಧ್ಯವಿಲ್ಲ ಎನ್ನುವ ಅನುಮಾನ ಮೂಡುತ್ತಿದೆ. ಅಲ್ಲದೇ ಅಂಗಡಿ ಕೋಣೆಯೊಳಗೆ ದೀಪವಾಗಲಿ, ಬೆಂಕಿ ಹತ್ತಿಕೊಳ್ಳಂತಹಾ ಯಾವುದೇ ಸಾಧನಗಳಾಗಲೀ ಇಲ್ಲದಿರುವುದು ಇದೊಂದು ಆಕಸ್ಮಿಕ ಘಟನೆ ಅಲ್ಲ ಎನ್ನುವುದನ್ನು ದೃಢಪಡಿಸುತ್ತದೆ ಎನ್ನುತ್ತಾರೆ ಸ್ಥಳೀಯರು.

ತಪ್ಪಿದ ಅನಾಹುತ : ಬೆಂಕಿ ಹತ್ತಿಕೊಂಡು ಕಟ್ಟಡ ಸಂಪೂರ್ಣ ಭಸ್ಮವಾದಾಗ ಸ್ಪೋಟಗೊಂಡ ಗ್ಯಾಸ್ ಸಿಲಿಂಡರ್ ಶಬ್ದಕ್ಕೆ ಎಚ್ಚೆತ್ತುಕೊಂಡ ಪರಿಣಾಮ ಹೆಚ್ಚಿನ ಅನಾಹುತ ತಪ್ಪಿದೆ. ಕೆಳ ಅಂತಸ್ತಿನಲ್ಲಿ ಹಳೆ ಮನೆಯ ಮರದ ಸಾಮಾಗ್ರಿಗಳು ಹೇರಳವಾಗಿದ್ದು, ಒಂದೊಮ್ಮೆ ಕೆಳ ಮಹಡಿಗೆ ಬೆಂಕಿ ವ್ಯಾಪಿಸಿದ್ದಲ್ಲಿ ಇಡೀ ಮನೆಯ ಜೊತೆಗೆ ಒಳಗಿದ್ದವರೆಲ್ಲ ಸಂಪೂರ್ಣ ಭಸ್ಮವಾಗುವ ಹಾಗೂ ಪಕ್ಕದ ಕಟ್ಟಡಗಳಿಗೂ ಬೆಂಕಿ ತಗುಲಿ ಅಪಾರ ನಷ್ಟ ಸಂಭವಿಸುವ ಸಾಧ್ಯತೆ ಇತ್ತು.

ಹಿಂದಿನ ವೈಷಮ್ಯವೇ ಘಟನೆಗೆ ಕಾರಣ. ಈ ಘಟನೆಯಿಂದಾಗಿ ಮನೆಯಲ್ಲಿ ರಾತ್ರಿ ಮಲಗುವುದು ಹೇಗೆ ಎನ್ನುವ ಚಿಂತೆ ಮೂಡಿದೆ ಎಂದು ಚಂದ್ರಯ್ಯ ಆಚಾರಿ ಪೊಲೀಸರಿಗೆ ನೀಡಿದ ದೂರಿನನ್ವಯ ಬ್ರಹ್ಮಾವರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Write A Comment