ಕನ್ನಡ ವಾರ್ತೆಗಳು

ಹಾಲಾಡಿ ಮನೆಗೆ ಯಡಿಯೂರಪ್ಪ, ಶೋಭಾ ಭೇಟಿ : ಪಕ್ಷಕ್ಕೆ ಆಹ್ವಾನ; ಹಾಲಾಡಿ ನಿರಾಕರಣೆ (updated)

Pinterest LinkedIn Tumblr

ಕುಂದಾಪುರ: ಬಿಜೆಪಿಯಿಂದ ಹೊರಬಂದು ಸ್ವತಂತ್ರವಾಗಿ ಸ್ಫರ್ದಿಸಿ ರಾಜ್ಯದಲ್ಲಿಯೇ ಅತೀ ಹೆಚ್ಚು ಅಂತರದಿಂದ ಜಯಗಳಿಸಿ ದಾಖಲೆ ಸೃಷ್ಟಿಸಿದ್ದ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರ ಮನೆಗೆ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ, ಶಿವಮೊಗ್ಗ ಲೋಕಸಭಾ ಸದಸ್ಯ ಬಿ.ಎಸ್. ಯಡಿಯೂರಪ್ಪ ಮತ್ತು ಚಿಕ್ಕಮಗಳೂರು ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ಭೇಟಿ ನೀಡಿ ಪಕ್ಷಕ್ಕೆ ಆಹ್ವಾನ ನೀಡಿದ್ದಾರೆ. ಆದರೆ ಭೇಟಿ ಸಂದರ್ಭ ಹಾಲಾಡಿ ತಮ್ಮ ಹಿಂದಿನ ನಿರ್ಧಾರಕ್ಕೆ ಅಂಟಿಕೊಂಡಿದ್ದು, ಅವಧಿ ಮುಗಿಯುವ ತನಕ ಪಕ್ಷೇತರರಾಗಿಯೇ ಉಳಿಯುವ ತೀರ್ಮಾನಕ್ಕೆ ಬದ್ಧರಾಗಿದ್ದಾರೆ.

Yadiyurappa_Meet_Haladi Shrinivasa shetty (1)

Yadiyurappa_Visit_Haladi Shrinivasa shetty (2) Yadiyurappa_Visit_Haladi Shrinivasa shetty Yadiyurappa_Visit_Haladi Shrinivasa shetty (1)

Yadiyurappa_Meet_Haladi Shrinivasa shetty (3) Yadiyurappa_Meet_Haladi Shrinivasa shetty (2) Yadiyurappa_Meet_Haladi Shrinivasa shetty

ಮಾತುಕತೆಯ ನಂತರ ಮಾತನಾಡಿದ ಬಿ.ಎಸ್. ಯಡಿಯೂರಪ್ಪ, ಹಾಲಾಡಿ ಶ್ರೀನಿವಾಸ ಶೆಟ್ಟಿಯವರು ತತ್ವ ಸಿದ್ದಾಂತಕ್ಕೆ ಬಧ್ದರಾದವರು. ಅವರಿಗೆ ೩ ವರ್ಷ ಅವಧಿ ಇದೆ. ಅಲ್ಲಿಯವರೆಗೆ ಅವಧಿ ಪೂರ್ಣಗೊಳಿಸುತ್ತಾರೆ. ಪಕ್ಷೇತರರಾಗಿ ಆಯ್ಕೆಯಾದ್ದರಿಂದ ಬಿಜೆಪಿಗೆ ಬಂದರೆ ಸಿದ್ದಾಂತಕ್ಕೆ ತಪ್ಪಾಗುತ್ತದೆ. ಆದರೆ ಅವರ ಹಾಗೂ ಅವರ ಕಾರ್ಯಕರ್ತರ ಬೆಂಬಲ ಸದಾ ಇರುತ್ತದೆ. ಕರ್ನಾಟಕದಲ್ಲಿ ಮುಂದಿನ ದಿನಗಳಲ್ಲಿ ಚುನಾವಣೆ ಬಂದರು ಬರಬಹುದು ನಾವು ಮುಂದಿನ ದಿನಗಳಲ್ಲಿ ಕಾರ್ಯಕರ್ತರನ್ನು ಒಗ್ಗೂಡಿಸಿ ೧೫೦ಕ್ಕೂ ಹೆಚ್ಚು ಶೀಟನ್ನು ಗೆಲ್ಲುತ್ತೇವೆ. ಮುಂದಿನ ದೆಹಲಿ ಚುನಾವಣೆಯಲ್ಲಿ ಸಂಪೂರ್ಣ ಬಹುಮತ ಬರುತ್ತದೆ ಎಂದು ಹೇಳಿದರು.

ಉಡುಪಿ ಚಿಕ್ಕಮಗಳೂರು ಲೋಕಸಭಾ ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ಮುಂಬರುವ ಗ್ರಾ.ಪಂ. ಚುನಾವಣೆಯಲ್ಲಿ ಬಿಜೆಪಿ ಕಾರ್ಯಕರ್ತರನ್ನು ತಳಮಟ್ಟದಲ್ಲಿಯೇ ಸಜ್ಜುಗೊಳಿಸಬೇಕು. ನಾನು ಸಂಸದ ಸ್ಥಾನಕ್ಕೆ ಚುನಾವಣೆಗೆ ನಿಂತಾಗ ಹಾಲಾಡಿ ಶ್ರೀನಿವಾಸ ಶೆಟ್ಟಿಯವರು ಹಾಗೂ ಕಿರಣ್ ಕೊಡ್ಗಿಯವರ ಸಂಪೂರ್ಣ ಬೆಂಬಲದಿಂದ ಅತಿ ಹೆಚ್ಚು ಬಹುಮತಗಳ ಅಂತರದಿಂದ ಆಯ್ಕೆಯಾಗಿದ್ದೇನೆ ಎಂದರು.

ನಂತರ ಪತ್ರಿಕೆಯೊಂದಿಗೆ ಮಾತನಾಡಿದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಮತದಾರರು ನನ್ನನ್ನು ಪಕ್ಷೇತರರಾಗಿ ಆಯ್ಕೆ ಮಾಡಿದ್ದಾರೆ. ನಾನು ಪಕ್ಷೇತರ ಅಭ್ಯರ್ಥಿಯಾಗಿ ಮುಂದುವರಿಯುತ್ತೇನೆ. ಅಂದಿನಿಂದ ಇಂದಿನವರೆಗೂ ನಿರೀಕ್ಷೆಗೂ ಮೀರಿ ನನ್ನ ಹಿತೈಷಿಗಳು ನನ್ನ ತೀರ್ಮಾನದೊಂದಿಗೆ ಬದ್ಧರಾಗಿದ್ದಾರೆ. ನರೇಂದ್ರ ಮೋದಿ ಪ್ರಧಾನಿಯಾದಾಗಲೂ ನನ್ನ ಹಿತೈಷಿಗಳು ನನ್ನೊಂದಿಗಿದ್ದಾರೆ. ನರೇಂದ್ರ ಮೋದಿ ಹವಾ ನನ್ನ ಹಿತೈಷಿಗಳ ವಿಶ್ವಾಸಕ್ಕೆ ಧಕ್ಕೆ ತಂದಿಲ್ಲ ಎಂಬುದು ಹೆಮ್ಮೆ ತಂದಿದೆ. ಆದರೆ ಅವರಿಗೂ ಒಂದು ಅವಕಾಶ ಬೇಕು ಎನ್ನುವ ಕಾರಣಕ್ಕೆ ಮುಂದಿನ ದಿನಗಳಲ್ಲಿ ರಾಜಕೀಯ ಪಕ್ಷಗಳಿಗೆ ಸೇರುವ ಬಗ್ಗೆ ಅವರ ತೀರ್ಮಾನಕ್ಕೇ ಬಿಟ್ಟಿದ್ದೇನೆ. ಅದು ಅವರ ಹಕ್ಕು ಕೂಡಾ. ನಾನು ಮಾತ್ರ ಹೀಗೆಯೇ ಇರುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.

ಸಂಸದರ ಭೇಟಿ ಸಂದರ್ಭ ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷ ವಿಕ್ರಮಾರ್ಜುನ ಹೆಗ್ಡೆ, ಬಿಜೆಪಿ ಮುಖಂಡ ಕಿರಣ್ ಕುಮಾರ್ ಕೊಡ್ಗಿ ಅಮಾಸೆಬೈಲು, ಜಿಲ್ಲಾ ಪಂ. ಉಪಾಧ್ಯಕ್ಷ ಪ್ರಕಾಶ್ ಮೆಂಡನ್, ಜಿ.ಪಂ. ಸದಸ್ಯರುಗಳಾದ ರಶ್ವತ್ ಕುಮಾರ್ ಶೆಟ್ಟಿ ಗಣಪತಿ ಶ್ರೀಯಾನ್, ತಾ.ಪಂ.ಅದ್ಯಕ್ಷ ಭಾಸ್ಕರ ಬಿಲ್ಲವ , ತಾ.ಪಂ. ಮಾಜಿ ಅದ್ಯಕ್ಷೆ ದೀಪಿಕಾ ಶೆಟ್ಟಿ, ತಾ.ಪಂ.ಸದಸ್ಯರಾದ ರಾಘವೇಂದ್ರ ಬಾಳಿಕೆರೆ, ಹಾಲಾಡಿ ರಮೇಶ್, ಸಾಲಿಗ್ರಾಮ ಪಟ್ಟಣ ಪಂಚಾಯತ್ ಅಧ್ಯಕ್ಷ ರಾಜು ಪೂಜಾರಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Write A Comment