ಕನ್ನಡ ವಾರ್ತೆಗಳು

ಮನಪಾ ಕಸ ವಿಲೇವಾರಿ ಗುತ್ತಿಗೆಯಲ್ಲಿ ವ್ಯಾಪಕ ಭ್ರಷ್ಟಾಚಾರ: ಕಾರ್ಪೊರೇಟರ್ ಅಝೀಝ್ ಕುದ್ರೋಳಿ ಆರೋಪ

Pinterest LinkedIn Tumblr
Ajiz-kudroli_iligation
ಮಂಗಳೂರು, ಜ.24: ‘‘ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕಸ ವಿಲೇವಾರಿಯ ಗುತ್ತಿಗೆಯನ್ನು ಆ್ಯಂಟೋನಿ ವೇಸ್ಟ್ ಕಂಪೆನಿಯವರಿಗೆ ನೀಡುವ ವಿಷಯದಲ್ಲಿ ಕಾನೂನು ಗಾಳಿಗೆ ತೂರಿದ್ದು, ವ್ಯಾಪಕ ಭ್ರಷ್ಟಾಚಾರ ನಡೆದಿರುವುದು ಸ್ಪಷ್ಟವಾಗಿದೆ’’ ಎಂದು ಜೆಡಿಎಸ್ ನಾಯಕ, ಕಾರ್ಪೊರೇಟರ್ ಅಝೀಝ್ ಕುದ್ರೋಳಿ ಆರೋಪಿಸಿದ್ದಾರೆ.
‘‘ಈ ಹಿಂದೆ ಮಂಗಳೂರು ಮಹಾನಗರ ಪಾಲಿಕೆಯ ಕಸದ ವಿಲೇವಾರಿ ಗುತ್ತಿಗೆಗೆ ತಿಂಗಳಿಗೆ 64 ಲಕ್ಷ ರೂ. ನೀಡಲಾಗುತ್ತಿತ್ತು. ಕಳೆದ ಹತ್ತು ವರ್ಷಗಳಿಂದ ಈ ಮೊತ್ತದಲ್ಲಿ ಬದಲಾವಣೆ ಮಾಡಿಲ್ಲ. ದರಲ್ಲಿ ಶೇ.50ರಷ್ಟು ಹೆಚ್ಚಿಸಿದ್ದರೂ ಸ್ಥಳೀಯರೇ ಕಸದ ವಿಲೇವಾರಿ ಚೆನ್ನಾಗಿ ಮಾಡುತ್ತಿದ್ದರು. ಆದರೆ ಈ ದರವನ್ನು ಮೂರು ಪಟ್ಟು ಹೆಚ್ಚಿಸಿ ಬಂಡವಾಳ ಶಾಹಿ ಕಂಪೆನಿಗೆ ಕಸ ವಿಲೇವಾರಿಗಾಗಿ ತಿಂಗಳಿಗೆ 1.42 ಕೋಟಿ ರೂ.ಗೆ ನೀಡುವ ಒಪ್ಪಂದ ಮಾಡಕೊಳ್ಳಲಾಗಿದೆ. ಈ ಒಪ್ಪಂದ ಎಷ್ಟು ಅಪಾಯಕಾರಿಯಾಗಿದೆಯೆಂದರೆ ಪ್ರತೀ ವರ್ಷ ಕಸದ ವಿಲೇವಾರಿಯ ಮಾಸಿಕ ವೆಚ್ಚ ಹೆಚ್ಚುತ್ತ ಹೋಗಿ ಆ್ಯಂಟೋನಿ ವೇಸ್ಟ್ ಕಂಪೆನಿ ಏಳು ವರ್ಷಗಳ ಗುತ್ತಿಗೆ ಮುಗಿಯುವ ಹೊತ್ತಿಗೆ ತಿಂಗಳಿಗೆ 4 ಕೋಟಿ ರೂ. ಪಡೆಯಲಿದೆ. ಈ ರೀತಿ ಜನರ ತೆರಿಗೆಯ ಹಣವನ್ನು ಖಾಸಗಿ ಕಂಪೆನಿಯೊಂದಕ್ಕೆ ಬೇಕಾಬಿಟ್ಟಿ ಹಂಚಲಾಗುತ್ತಿದೆ’’ ಎಂದು ಅಝೀಝ್ ಆರೋಪಿಸಿದ್ದಾರೆ.
ಗುತ್ತಿಗೆ ವಹಿಸುವಲ್ಲಿಯೂ ಕಾನೂನು ಉಲ್ಲಂಘನೆ ಮಾಡಲಾಗಿದೆ. ಟೆಂಡರ್ ಪ್ರಕ್ರಿಯೆ ಆರೇಳು ತಿಂಗಳ ಅವಧಿಯದ್ದಾಗಿರುತ್ತದೆ. ಆರು ತಿಂಗಳಲ್ಲಿ ಕೆಲಸ ಆರಂಭವಾಗದೆ ಇದ್ದರೆ ಪುನಃ ಟೆಂಡರ್ ಕರೆಯಬೇಕು ಎಂದು ನಿಯಮ ಹೇಳುತ್ತದೆ. ಆದರೆ ಆ್ಯಂಟೋನಿ ವೇಸ್ಟ್ ಕಂಪೆನಿಯವರಿಗೆ ಕಸ ವಿಲೇವಾರಿಯ ಗುತ್ತಿಗೆವಹಿಸಲು ಭಾರೀ ಉದಾರತೆ ತೋರಲಾಗಿದೆ. ಟೆಂಡರ್ ಪಾಸ್ ಮಾಡಿ 3.5 ವರ್ಷಗಳ ಬಳಿಕ ಕಾಮಗಾರಿಯ ಅವಕಾಶ ನೀಡಲಾಗಿದೆ ಎಂದವರು ತಿಳಿಸಿದರು.
ಆ್ಯಂಟೋನಿ ವೇಸ್ಟ್ ಕಂಪೆನಿಯವರ ಕಸ ವಿಲೇವಾರಿಯ ಯಂತ್ರಗಳು ಇನ್ನೂ ಸಾರಿಗೆ ಇಲಾಖೆಯಲ್ಲಿ ನೋಂದಣಿ ಆಗಿಲ್ಲ. ವಾಹನಗಳು ನಗರದ ರಸ್ತೆಯಲ್ಲಿ ಓಡಾಡುವಂತಿಲ್ಲ ಎಂದಿ ರುವಾಗ ಕಸದ ವಿಲೇವಾರಿ ಮಾಡುವುದಾದರೂ ಹೇಗೆ? ಹಾಗಿರುವಾಗ ಈ ಸಂಸ್ಥೆಯವರು ಶುಕ್ರವಾರ ನಗರಾಭಿವೃದ್ಧಿ ಸಚಿವರ ಉಪಸ್ಥಿತಿಯಲ್ಲಿ ತಮ್ಮ ಕೆಲಸದ ಉದ್ಘಾಟನೆ ಮಾಡಿದ್ದಾರೆ. ಅಂದರೆ ಕಾನೂನು ಉಲ್ಲಂಘಿಸಿ ಮಾಡುವ ಕೆಲಸಕ್ಕೆ ಸಚಿವರ ಸಹಕಾರ ಇದೆಯೇ ಎಂದು ಅಝೀಝ್ ಕುದ್ರೋಳಿ ಅನುಮಾನ ವ್ಯಕ್ತಪಡಿಸಿದ್ದಾರೆ.
ನ್ಯಾಯಾಲಯಕ್ಕೆ ಸುಳ್ಳು ಮಾಹಿತಿ:
ಮಂಗಳೂರು ಮಹಾನಗರದಲ್ಲಿ ಜ.1ರಿಂದಲೇ ಕಸ ವಿಲೇವಾರಿ ಮಾಡುತ್ತಿದ್ದೇವೆ ಎಂದು ಆ್ಯಂಟೋನಿ ವೇಸ್ಟ್ ಕಂಪೆನಿಯವರು ಹೈಕೋರ್ಟ್‌ಗೆ ಸುಳ್ಳು ಮಾಹಿತಿ ನೀಡಿದ್ದಾರೆ. ಇಂದಿನ ಉದ್ಘಾಟನೆ ಕಾರ್ಯಕ್ರಮವೇ ಅವರ ಸುಳ್ಳಿಗೆ ಸ್ಪಷ್ಟ ಸಾಕ್ಷಿ ಎಂದು ಅಝೀಝ್ ಕುದ್ರೋಳಿ ಆರೋಪಿಸಿದ್ದಾರೆ.
ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯ ಕಸ ವಿಲೇವಾರಿಯ ಗುತ್ತಿಗೆಯನ್ನು ಆ್ಯಂಟೋನಿ ವೇಸ್ಟ್ ಕಂಪೆನಿಗೆ ನಿಯಮಬಾಹಿರವಾಗಿ ನೀಡಲಾಗಿದೆ ಎಂಬುದಾಗಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿಯ ದಾವೆ ಹೂಡಲಾಗಿದೆ. ಈ ಪ್ರಕರಣದ ವಿಚಾರಣೆಯ ವೇಳೆ ಆ್ಯಂಟೋನಿ ವೇಸ್ಟ್ ಕಂಪೆನಿಯು ಕಳೆದ ಡಿ.15ರಂದು ಪ್ರಾಯೋಗಿಕ ಕಸ ವಿಲೇವಾರಿ ಮಾಡಿದೆ. ಜ.1ರಿಂದ ಪೂರ್ಣಪ್ರಮಾಣದಲ್ಲಿ ವಿಲೇವಾರಿ ನಡೆಸುತ್ತಿದ್ದೇವೆ.
300 ಕಾರ್ಮಿಕರು ದುಡಿಯುತ್ತಿದ್ದು, ಅವರಿಗೆ 35 ಲಕ್ಷ ರೂಪಾಯಿ ಪಾವತಿಸುತ್ತಿದ್ದೇವೆ ಎಂದು ಲಿಖಿತ ಹೇಳಿಕೆಯನ್ನು ಕಂಪೆನಿಯ ವಕೀಲರು ಹೈಕೋರ್ಟ್‌ಗೆ ನೀಡಿದ್ದಾರೆ. ಆದರೆ (ಜ.23ರಂದು) ಕಸ ವಿಲೇವಾರಿಯ ಉದ್ಘಾಟನೆ ನೆರವೇರಿದ್ದು, ಜ.1ರಿಂದ ಕಸದ ವಿಲೇವಾರಿ ನಡೆಯುತ್ತಿಲ್ಲ ಎಂಬುದಕ್ಕೆ ಇದು ಸ್ಪಷ್ಟ ಸಾಕ್ಷಿಯಾಗಿದೆ. ಇದಕ್ಕಿಂತ ಮಹತ್ವದ ವಿಷಯ ಎಂದರೆ ಜ.1ರಿಂದ ಆ್ಯಂಟೋನಿ ವೇಸ್ಟ್ ಕಂಪೆನಿಯವರು ನಗರದಲ್ಲಿ ಕಸದ ವಿಲೇವಾರಿ ಮಾಡುತ್ತಿದ್ದಾರೆ ಎಂದಾದರೆ ಇಷ್ಟು ದಿನಗಳವರೆಗೆ ಮಂಗಳೂರು ಮಹಾನಗರ ಪಾಲಿಕೆಯ ವತಿಯಿಂದ ಹಿಂದಿನ ಗುತ್ತಿಗೆದಾರರಿಗೆ ಮತ್ತು ಪಾಲಿಕೆ ಸಿಬ್ಬಂದಿಗೆ ಹಣ ಪಾವತಿಸುತ್ತಿರುವುದು ಏಕೆ ಎಂಬುದಾಗಿ ಅಝೀಝ್ ಪ್ರಶ್ನಿಸಿದ್ದಾರೆ.
ಜ.1ರಿಂದ ಆ್ಯಂಟೋನಿ ವೇಸ್ಟ್ ಕಂಪೆನಿಯವರು ಕಸದ ವಿಲೇವಾರಿ ಮಾಡುತ್ತಿದ್ದಾರೆ ಎಂದಾದರೆ ಅಂದಿನಿಂದ ಇಂದಿನವರೆಗೆ ನಗರದಲ್ಲಿ ಈ ಸಂಸ್ಥೆಯ ವಾಹನಗಳು ಓಡಾಡಿದ ಬಗ್ಗೆ ದಾಖಲೆಗಳಾದರೂ ಎಲ್ಲಿ ಇವೆ ಎಂಬ ಪ್ರಶ್ನೆಗೂ ಕಂಪೆನಿಯವರು ಉತ್ತರಿಸಬೇಕಿದೆ ಎಂದು ಅಝೀಝ್ ತಿಳಿಸಿದ್ದಾರೆ.
ವರದಿ ಕೃಪೆ : ವಾರ್ತಾ ಭಾರತಿ

 

Write A Comment