ಕನ್ನಡ ವಾರ್ತೆಗಳು

ಜೈಲಿನಲ್ಲಿದ್ದ ಗಣಿ ಧಣಿಗೆ ಬಿಡುಗಡೆ ಸಂಭ್ರಮ.

Pinterest LinkedIn Tumblr

jandrdhan_reddy_photo

ಬೆಂಗಳೂರು,ಜ.23  : ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಕಳೆದ ಮೂರೂವರೆ ವರ್ಷದಿಂದ ಜೈಲಿನಲ್ಲಿದ್ದ ಗಣಿ ಧಣಿ, ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರು ಶುಕ್ರವಾರ ಜೈಲಿನಿಂದ ಹೊರ ಬಂದಿದ್ದಾರೆ. ಶುಕ್ರವಾರ ಜನಾರ್ದರ ರೆಡ್ಡಿ ಪರ ವಕೀಲ ಮುನಿರೆಡ್ಡಿ ಅವರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಅಧೀಕ್ಷಕ ಜಯಸಿಂಹ ಅವರನ್ನು ಭೇಟಿ ಮಾಡಿ ಜಾಮೀನಿಗೆ ಸಂಬಂಧಿಸಿದ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದರು. ಬಳಿಕ ರೆಡ್ಡಿಯನ್ನು ಜೈಲುನಿಂದ ಬಿಡುಗಡೆ ಮಾಡಲಾಯಿತು.

ಜೈಲಿನಿಂದ ಹೊರಬಂದ ಜನಾರ್ದನ ರೆಡ್ಡಿಗೆ ಸಹೋದರ ಸೋಮಶೇಖರ ರೆಡ್ಡಿ, ಸ್ನೇಹಿತ ಹಾಗೂ ಮಾಜಿ ಸಚಿವ ಬಿ.ಶ್ರೀರಾಮುಲು, ಶಾಸಕ ಸುರೇಶ್ ಬಾಬು, ಮಾಜಿ ಸಂಸದೆ ಜೆ. ಶಾಂತಾ, ಪತ್ನಿ ಅರುಣಾ ಹಾಗೂ ಇಬ್ಬರು ಮಕ್ಕಳು ಸೇರಿದಂತೆ ಹಲವು ಅಭಿಮಾನಿಗಳು ಅದ್ಧೂರಿ ಸ್ವಾಗತ ನೀಡಿದರು. ಬಳ್ಳಾರಿಗೆ ಹೋಗುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಷರತ್ತು ವಿಧಿಸಿದ ಹಿನ್ನೆಲೆಯಲ್ಲಿ ರೆಡ್ಡಿ ಜೈಲಿನಿಂದ ನೆರವಾಗಿ ಬೆಂಗಳೂರಿನ ಚಾಲುಕ್ಯ ಸರ್ಕಲ್‌ನಲ್ಲಿರುವ ಪಾರಿಜಾತ ನಿವಾಸಕ್ಕೆ ತೆರಳುತಿದ್ದಾರೆ. ರೆಡ್ಡಿ ಬಿಡುಗಡೆ ಹಿನ್ನೆಲೆಯಲ್ಲಿ ಪರಪ್ಪನ ಅಗ್ರಹಾರ ಸುತ್ತಮುತ್ತ ಹೆಚ್ಚಿನ ಭದ್ರತೆ ಒದಗಿಸಲಾಗಿತ್ತು. ನಿನ್ನೆಯಿಂದಲೇ ಜೈಲಿನ ಸುತ್ತ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು.

ಕಳೆದ ಮಂಗಳವಾರ ಒಬಳಾಪುರಂ ಕಂಪನಿಯ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜನಾರ್ದನ ರೆಡ್ಡಿ ಅವರಿಗೆ ಸುಪ್ರೀಂ ಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು. ಅಕ್ರಮ ಗಣಿಗಾರಿಕೆ, ಅಕ್ರಮ ಆಸ್ತಿಗಳಿಕೆ ಪ್ರಕರಣಕ್ಕೆ ಸಂಬಂಧಿಸಿ ಸೆಪ್ಟೆಂಬರ್ 5, 2011ರಲ್ಲಿ ಜನಾರ್ದನ ರೆಡ್ಡಿ ಹಾಗೂ ಒಬಳಾಪುರಂ ಮೈನಿಂಗ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ, ಸಂಬಂಧಿ ಬಿ.ವಿ.ಶ್ರೀನಿವಾಸ್ ರೆಡ್ಡಿ ಅವರನ್ನು ಸಿಬಿಐ ಬಂಧಿಸಿತ್ತು. ಬಳಿಕ ಅವರನ್ನು ಆಂಧ್ರಪ್ರದೇಶದ ಪೆನುಗೊಂಡ ಜೈಲಿನಲ್ಲಿ ಇಡಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ಕೋರಿ ರೆಡ್ಡಿ ಆಂಧ್ರಪ್ರದೇಶ ಹೈಕೋರ್ಟ್ ಮೊರೆ ಹೋಗಿದ್ದರು. ಆದರೆ ಹೈಕೋರ್ಟ್ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. ಬಳಿಕ ರೆಡ್ಡಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.

ಬೇಲೆಕೇರಿ ಅದಿರು ನಾಪತ್ತೆ ಸೇರಿದಂತೆ ಅಕ್ರಮ ಗಣಿಗಾರಿಕೆ, ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ರೆಡ್ಡಿ ವಿರುದ್ಧ ಒಟ್ಟು ಏಳು ಪ್ರಕರಣಗಳು ದಾಖಲಾಗಿದ್ದವು. ಎಲ್ಲಾ ಪ್ರಕರಣಗಳಲ್ಲೂ ಜಾಮೀನು ಪಡೆದಿದ್ದ ರೆಡ್ಡಿ, ಒಬಳಾಪುರಂ ಮೈನಿಂಗ್ ಪ್ರಕರಣದಲ್ಲಿ ಮಾತ್ರ ಜಾಮೀನು ಸಿಗಬೇಕಿತ್ತು. ಈಗ ಅದೂ ಸಿಕ್ಕಿದ್ದು, ರೆಡ್ಡಿ ಜೈಲಿನಿಂದ ಹೊರ ಬಂದಿದ್ದಾರೆ.

Write A Comment