ಕನ್ನಡ ವಾರ್ತೆಗಳು

ದ.ಕ. ಜಿಲ್ಲೆಯಲ್ಲಿ ಮಲೇರಿಯಾ ಅಧಿಕ ಪ್ರಮಾಣದ ಪ್ರಕರಣ ಪತ್ತೆ.

Pinterest LinkedIn Tumblr

dc_maleriya_meet

ಮಂಗಳೂರು,ಜ.23 : 2014ರಲ್ಲಿ ರಾಜ್ಯದಲ್ಲಿ ದಾಖಲಾದ 14,569 ಮಲೇರಿಯಾ ಪ್ರಕರಣಗಳಲ್ಲಿ 8,240 ಪ್ರಕರಣಗಳು ದ.ಕ. ಜಿಲ್ಲೆಯಲ್ಲೇ ಪತ್ತೆಯಾಗಿವೆ. ಇದು ರಾಜ್ಯದಲ್ಲಿ ಪತ್ತೆಯಾದ ಒಟ್ಟು ಮಲೇರಿಯಾ ಪ್ರಕರಣದ ಶೇ.56ರಷ್ಟಿದೆ. ದ.ಕ. ಜಿಲ್ಲೆಯ ಒಟ್ಟು ಮಲೇರಿಯಾ ಪ್ರಕರಣಗಳಲ್ಲಿ ಮಂಗಳೂರು ನಗರ ಪ್ರದೇಶದಲ್ಲಿ ಶೇ.88 ಪ್ರಕರಣಗಳು ಪತ್ತೆಯಾಗಿವೆ ಎಂದು ಗುರುವಾರ ದ.ಕ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಮಲೇರಿಯಾ ನಿಯಂತ್ರಣ ಕುರಿತಾದ ಸಭೆಯಲ್ಲಿ ಡಾ. ಪ್ರಕಾಶ್ ಅವರು ತಿಳಿಸಿದರು.

ದ.ಕ. ಜಿಲ್ಲೆಯಲ್ಲಿ 2005ರಲ್ಲಿ ಅಧಿಕ ಪ್ರಮಾಣದಲ್ಲಿ ಜನಸಾಮಾನ್ಯರನ್ನು ಕಾಡಿದ್ದ ಮಲೇರಿಯಾ, 2006ರಲ್ಲಿ ಶೇ.21ಕ್ಕೆ ಇಳಿಕೆಯಾಗಿತ್ತು. 2007ರಲ್ಲಿ ಶೇ.18, 2008 ರಲ್ಲಿ ಶೇ.13, 2009ರಲ್ಲಿ ಶೇ.16, 2010ರಲ್ಲಿ ಶೇ.16, 2011ರಲ್ಲಿ ಶೇ. 26, 2012 ರಲ್ಲಿ ಶೇ.38 ಹಾಗೂ 2013ರಲ್ಲಿ ಇದು ಶೇ.43 ರಷ್ಟಿತ್ತು ಎಂದು ಡಾ.ಪ್ರಕಾಶ್ ವಿವರ ನೀಡಿದರು. ವಲಸೆ ಕಾರ್ಮಿಕರಿಂದ ಅಧಿಕ ಸಂಖ್ಯೆಯಲ್ಲಿ ಮಲೇರಿಯಾ ಹರಡುವಿಕೆ: ಮಲೇರಿಯಾ ಪೀಡಿತ ರಾಜ್ಯಗಳಾದ ಮೇಘಾಲಯ, ನಾಗಲ್ಯಾಂಡ್, ಒಡಿಶಾ ಮೊದಲಾದ ರಾಜ್ಯಗಳಿಂದ ಕರ್ನಾಟಕಕ್ಕೆ ಅದರಲ್ಲೂ ಮುಖ್ಯವಾಗಿ ಮಂಗಳೂರಿಗೆ ಕಟ್ಟಡ ಕಾರ್ಮಿಕರಾಗಿ ಬರುವ ಕಾರ್ಮಿಕರಲ್ಲಿ ಈ ಮಲೇರಿಯಾ ಕಂಡುಬರುತ್ತಿವೆ.

ಮಾತ್ರವಲ್ಲದೆ ಹರಡುತ್ತಿದೆ. ಈ ಹಿನ್ನಲೆಯಲ್ಲಿ ವಲಸೆ ಕಾರ್ಮಿಕರ ರಕ್ತ ತಪಾಸಣೆಯ ಜತೆಗೆ ಸೂಕ್ತ ಆರೋಗ್ಯ ಮಾಹಿತಿಯನ್ನು ಒದಗಿಸಬೇಕು. ಕಟ್ಟಡ ನಿರ್ಮಾಣ ಕೆಲಸದ ಸ್ಥಳಗಳಿಗೆ ನಿರಂತರ ಆರೋಗ್ಯ ಅಧಿಕಾರಿಗಳು ಭೇಟಿ ನೀಡಿ ಕಟ್ಟಡದ ಸ್ಥಳಗಳಲ್ಲಿ ಕೈಗೊಳ್ಳಲಾದ ಸುರಕ್ಷತಾ ಕ್ರಮಗಳು, ಕಾರ್ಮಿಕರ ಆರೋಗ್ಯ ತಪಾಸಣೆ ಮಾಡಬೇಕು. ಹಾಗೂ ರೋಗ ತಡೆಗೆ ಸಂಬಂಧಿಸಿ ಸೂಕ್ತ ಮುಂಜಾಗೃತಾ ಕ್ರಮಗಳ ಬಗ್ಗೆ ತಿಳಿಹೇಳಬೇಕು ಹಾಗೂ ಅವರು ಆ ಕ್ರಮಗಳನ್ನು ಅನುಸರಿಸುವುದನ್ನು ಪರಿಶೀಲಿಸಬೇಕು ಎಂದು ಡಾ.ಪ್ರಕಾಶ್ ಮನಪಾದ ಹಿರಿಯ ಹಾಗೂ ಆರೋಗ್ಯ ಅಧಿಕಾರಿಗಳಿಗೆ ಸಲಹೆ ನೀಡಿದರು.

ಸಾಮಾಜಿಕ ಕಾರ್ಯಕರ್ತರಾದ ಜೋಸೆಫ್ ಡಿಸೋಜ ಸಭೆಯಲ್ಲಿ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಾ.ಪ್ರಕಾಶ್, ಮಲೇರಿಯಾ ನಿಯಂತ್ರಣಕ್ಕೆ ಸಂಬಂಧಿಸಿ ಫಾಗಿಂಗ್‌ಗೆ ಹೆಚ್ಚಿನ ಉತ್ತೇಜನವನ್ನು ನೀಡಲಾಗುತ್ತಿಲ್ಲ. ಹಾಗಿದ್ದರೂ ನಿಯಂತ್ರಣ ಕ್ರಮವಾಗಿ ಮನಪಾ ವ್ಯಾಪ್ತಿಯಲ್ಲಿ ಫಾಗಿಂಗ್ ನಡೆಸಲಾಗುತ್ತದೆ ಎಂದರು. ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಮಕೃಷ್ಣ ರಾವ್, ಮನಪಾ ಆಯುಕ್ಕೆ ಹೆಫ್ಸಿಬಾರಾಣಿ ಕೊರ್ಲಪಟಿ, ವೆನ್ಲಾಕ್ ಆಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕಿ ಡಾ.ರಾಜೇಶ್ವರಿ ದೇವಿ ಉಪಸ್ಥಿತರಿದ್ದರು.

ದ.ಕ. ಅದರಲ್ಲೂ ಮುಖ್ಯವಾಗಿ ಮಂಗಳೂರಿನಲ್ಲಿ ಮಲೇರಿಯಾ ಪ್ರಕರಣಗಳು ಉಲ್ಬಣಗೊಳ್ಳುತ್ತಿರುವ ಬಗ್ಗೆ ಡಾ.ಪ್ರಕಾಶ್ ಆತಂಕಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ, ಬಾಗಲಕೋಟೆಯಂತಹ ಜಿಲ್ಲೆಯಲ್ಲಿ ನಿಯಂತ್ರಣ ಸಾಧ್ಯ ಆಗುವುದಾದರೆ ಮಂಗಳೂರಿನಲ್ಲಿ ಏಕೆ ಸಾಧ್ಯವಿಲ್ಲ. ಈ ಬಗ್ಗೆ ಸೂಕ್ತ ಕ್ರಮಗಳ ಬಗ್ಗೆ ಜಿಲ್ಲೆ ಹಾಗೂ ನಗರದ ಅಧಿಕಾರಿಗಳಿಗೆ ಮಾಹಿತಿ ಒದಗಿಸಿ ಎಂದು ತಿಳಿಸಿದರು. 10 ದಿನಗಳೊಳಗೆ ಮನಪಾ ಆಯುಕ್ತರನ್ನೊಳಗೊಂಡ ಅಧಿಕಾರಿ ಮಟ್ಟದ ಆಂತರಿಕ ಸಭೆ ನಡೆಸಿ ಸೂಕ್ತ ಕ್ರಮ ಕೆಗೊಳ್ಳುವಂತೆ ಜಿಲ್ಲಾಧಿಕಾರಿ ನಿರ್ದೇಶಿಸಿದರು.

ಮಲೇರಿಯಾ ಸಾವು ನಿಯಂತ್ರಣಕ್ಕೆ ಪ್ರಮುಖ ಆದ್ಯತೆ: 
ದ.ಕ. ಜಿಲ್ಲೆಯಲ್ಲಿ 2014ರಲ್ಲಿ 17 ಶಂಕಿತ ಮಲೇರಿಯಾ ಸಾವು ಪ್ರಕರಣಗಳು ವರದಿಯಾಗಿದ್ದರೆ, 2 ಅಧಿಕೃತ ಸಾವುಗಳು ಸಂಭವಿಸಿವೆ. ಈ ಹಿನ್ನೆಲೆಯಲ್ಲಿ ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿ ಮಲೇರಿಯಾ ಸಾವು ಪ್ರಕರಣಗಳನ್ನು ನಿಯಂತ್ರಿಸುವ ಬಗ್ಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ ಎಂದು ಡಾ.ಪ್ರಕಾಶ್ ತಿಳಿಸಿದರು.

Write A Comment