ಕನ್ನಡ ವಾರ್ತೆಗಳು

ಫ್ಲೆಕ್ಸ್ ಮತ್ತು ಪ್ಲಾಸ್ಟಿಕ್ ನಿಷೇಧಿಕ್ಕೆ ಶ್ರೀಘ್ರದಲ್ಲೇ ರಾಜ್ಯ ಸರ್ಕಾರ ಆದೇಶ.

Pinterest LinkedIn Tumblr

siddaramayya

ಬೆಂಗಳೂರು,ಜ.20: ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಫ್ಲೆಕ್ಸ್ ಮತ್ತು ಪ್ಲಾಸ್ಟಿಕ್ ನಿಷೇಧಿಸಲು ರಾಜ್ಯ ಸರ್ಕಾರ ಮುಂದಾಗಿದ್ದು, ಸದ್ಯದಲ್ಲೇ ಈ ಸಂಬಂಧ ಆದೇಶ ಹೊರಡಿಸಲು ನಿರ್ಧರಿಸಿದೆ.  ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಬಿಬಿಎಂಪಿ ಅಧಿಕಾರಿಗಳ ಸಭೆಯಲ್ಲಿ ಈ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಫ್ಲೆಕ್ಸ್ ಹಾವಳಿ ಬಗ್ಗೆ ಹೈಕೋರ್ಟ್ ಪದೇ ಪದೆ ನೀಡಿದ ಎಚ್ಚರಿಕೆ ಹಿನ್ನೆಲೆಯಲ್ಲಿ ಸರ್ಕಾರ ಈ ಕ್ರಮ ತೆಗೆದುಕೊಂಡಿದೆ.

ಪ್ರಾಯೋಗಿಕವಾಗಿ ಈ ಎರಡೂ ಆದೇಶ ಬೆಂಗಳೂರು ನಗರದಲ್ಲಿ ಮೊದಲು ಜಾರಿಗೆ ಬರಲಿದೆ. ಫ್ಲೆಕ್ಸ್ ನಿಷೇಧದ ನಂತರ ಯಾರಾದರೂ ನಗರದಲ್ಲಿ ಮತ್ತೆ ಫ್ಲೆಕ್ಸ್ ಹಾಕಿದರೆ ಅವರನ್ನು ಕಾನೂನು ರೀತ್ಯ ಸರ್ಕಾರ ದಂಡಿಸಲಿದೆ. ಅಷ್ಟು ಮಾತ್ರವಲ್ಲ ಯಾರು ಫ್ಲೆಕ್ಸ್ ತಯಾರಿಸುತ್ತಾರೋ ಅವರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತದೆ. ಒಂದೊಮ್ಮೆ ಫ್ಲೆಕ್ಸ್ ಹಾಕಲೇಬೇಕಾದ ಅನಿವಾರ್ಯ ಸನ್ನಿವೇಶ ನಿರ್ಮಾಣವಾದಾಗ ಪರವಾನಗಿ ಪಡೆದು ಜಾಹೀರಾತು ಫಲಕಗಳನ್ನು ಮಾತ್ರ ಹಾಕಬಹುದು ಎಂದು ಸಭೆ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ.

ಇದರ ಜತೆಗೆ ಪ್ಲಾಸ್ಟಿಕ್ ಕೈ ಚೀಲ ಬಳಕೆಯನ್ನೂ ನಿಷೇಧಿಸಲು ನಿರ್ಧರಿಸಲಾಗಿದೆ. ಪ್ರಾಯೋಗಿಕವಾಗಿ ಬೆಂಗಳೂರು ನಗರದಲ್ಲಿ ಮೊದಲು ಜಾರಿಗೆ ತರುತ್ತೇವೆ. ನಂತರ ರಾಜ್ಯಾದ್ಯಂತ ವಿಸ್ತರಿಸಲಾಗುವುದು. ಸಾರ್ವಜನಿಕರು ಈ ವಿಚಾರದಲ್ಲಿ ಸರ್ಕಾರದ ಜತೆ ಸಹಕರಿಸಬೇಕು. ಪ್ಲಾಸ್ಟಿಕ್ ನಿಷೇಧ ಮಾಡಿದರೂ ಹೊರ ರಾಜ್ಯಗಳಿಂದ ಅವುಗಳನ್ನು ತರುವ ಅಪಾಯ ಇರುವುದರಿಂದ ಚೆಕ್‌ಪೋಸ್ಟ್‌ಗಳಲ್ಲಿ ಪರಿಶೀಲನೆ ಚುರುಕುಗೊಳಿಸಲಾಗುವುದು ಎಂದು ಹೇಳಿದರು.

Write A Comment