ಬೆಳ್ತಂಗಡಿ, ಜ.19: ಕರಾಯದ ಅಹಿತಕರ ಘಟನೆಗಳ ಬೆನ್ನಲ್ಲೆಯೆ ಬೆಳ್ತಂಗಡಿ ಠಾಣಾ ವ್ಯಾಪ್ತಿಯ ಕನ್ಯಾಡಿ ಮತ್ತು ಪುಂಜಾಲಕಟ್ಟೆ ಠಾಣಾ ವ್ಯಾಪ್ತಿಯ ಕುದ್ರಡ್ಕದ ಮುಸ್ಲಿಮ್ ಧಾರ್ಮಿಕ ಕೇಂದ್ರಗಳ ಮೇಲೆ ದುಷ್ಕಮಿಗಳು ದಾಳಿ ನಡೆಸಿದ ಘಟನೆ ಶನಿವಾರ ರಾತ್ರಿ ಸಂಭವಿಸಿದೆ.
ತಣ್ಣೀರುಪಂತ ಗ್ರಾಮದ ಕುದ್ರಡ್ಕದ ಅಲ್ ಅಮೀನ್ ಜಮಾಅತ್ ಕಮಿಟಿಯ ತಾತ್ಕಾಲಿಕ ಮದ್ರಸ ಕಟ್ಟಡಕ್ಕೆ ಶನಿವಾರ ತಡರಾತ್ರಿ ದುಷ್ಕರ್ಮಿ ಗಳು ಬೆಂಕಿ ಹಚ್ಚಿ ಹಾನಿಗೊಳಿಸಿದ್ದಾರೆ. ಬೆಂಕಿಗೆ ಕಟ್ಟಡದ ಟರ್ಪಾಲ್ ಮತ್ತು ಮಾಡು ಸಂಪೂರ್ಣ ನಾಶವಾಗಿದೆ. ಆರು ತಿಂಗಳ ಹಿಂದೆ ಜಾಗ ಖರೀದಿಸಿ ತಾತ್ಕಾಲಿಕ ಮದ್ರಸ ಕಟ್ಟಡವನ್ನು ನಿರ್ಮಿಸಲಾಗಿತ್ತು.
ರವಿವಾರ ಬೆಳಗಿನ ಜಾವ 3 ಗಂಟೆ ಸುಮಾರಿಗೆ ದುಷ್ಕರ್ಮಿಗಳು ಬಂದು ಬೆಂಕಿ ಹಚ್ಚಿದ್ದಾರೆ. ಇದರ ಸಮೀಪವೇ ಮನೆ ಇದ್ದು ಇಲ್ಲಿನ ಸಾಬ ಬ್ಯಾರಿ ಎಂಬವರು ಎಚ್ಚರಗೊಂಡು ನೋಡಿದಾಗ ಕಟ್ಟಡ ಉರಿಯುತ್ತಿರುವುದು ಕಂಡು ಬಂತು. ಕೂಡಲೇ ಇತರರಿಗೆ ಮಾಹಿತಿ ನೀಡಿ ಬೆಂಕಿ ನಂದಿಸಿದರು. ಘಟನಾ ಸ್ಥಳಕ್ಕೆ ಗ್ರಾ.ಪಂ.ಅಧ್ಯಕ್ಷ ಸದಾನಂದ ಶೆಟ್ಟಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ರಝಾಕ್ ಎಂಬವರು ಪುಂಜಾಲಕಟ್ಟೆ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಎರಡು ಕಡೆಗಳಿಗೂ ಬಂಟ್ವಾಳ ಎಎಸ್ಪಿ ರಾಹುಲ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕನ್ಯಾಡಿಯಲ್ಲಿರುವ ಮಸೀದಿಗೆ ಪೊಲೀಸ್ ರಕ್ಷಣೆ ಒದಗಿಸಲಾಗಿತ್ತು. ತಡರಾತ್ರಿಯ ವೇಳೆ ಬೈಕಿನಲ್ಲಿ ಬಂದ ದುಷ್ಕರ್ಮಿಗಳು ಕರ್ತವ್ಯ ನಿರತರಾಗಿದ್ದ ಪೊಲೀಸರ ಮೇಲೆಯೇ ಕಲ್ಲೆಸೆದು ಪರಾರಿಯಾಗಿದ್ದಾರೆ. ಕನ್ಯಾಡಿ ಮಸೀದಿಯ ಮೇಲೆ ತಿಂಗಳ ಹಿಂದೆ ದುಷ್ಕರ್ಮಿಗಳು ಕಲ್ಲೆಸೆದು ಹಾನಿಗೊಳಿಸಿದ್ದರು. ಆ ಬಳಿಕ ಮಸೀದಿಗೆ ಸಿಸಿ ಕ್ಯಾಮರ ಅಳವಡಿಸಲಾಗಿತ್ತು. ಶನಿವಾರ ರಾತ್ರಿ ನಡೆದ ದಾಳಿಯ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಆರೋಪಿಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿದೆ. ಪೊಲೀಸರಿಗೆ ಆರೋಪಿಗಳ ಸುಳಿವು ಲಭಿಸಿದ್ದು ಹುಡುಕಾಟ ನಡೆಸುತ್ತಿದ್ದಾರೆ. ಕರ್ತವ್ಯದಲ್ಲಿದ್ದ ಪೊಲೀಸರ ಮಾಹಿತಿಯಂತೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗಲಭೆ: ಉಪ್ಪಿನಂಗಡಿ ಠಾಣೆಯಲ್ಲಿ 34 ಪ್ರಕರಣ ದಾಖಲು
ಪುತ್ತೂರು : ಪುತ್ತೂರಿನಲ್ಲಿ ನಡೆದ ವಿರಾಟ್ ಹಿಂದೂ ಹೃದಯ ಸಂಗಮ ಕಾರ್ಯಕ್ರಮದಲ್ಲಿ ಪ್ರಚೋದನಾತ್ಮಕವಾಗಿ ಭಾಷಣ ಮಾಡಿರುವುದರಿಂದ ಉಂಟಾಗಿರುವ ಗಲಭೆಗೆ ಸಂಬಂಧಿಸಿದಂತೆ ಉಪ್ಪಿನಂಗಡಿ ಪೊಲೀಸರು 34 ಪ್ರಕರಣ ದಾಖಲಿಸಿಕೊಂಡಿದ್ದಾರೆ. ಉಪ್ಪಿನಂಗಡಿ ಮತ್ತು ಕರಾಯ ಪ್ರದೇಶದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡ ಲಾಗಿದೆ. ಪೊಲೀಸರು ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿ ನಿರಂತರ ಕಣ್ಗಾವಲು ಇಟ್ಟಿದ್ದಾರೆ. ದಾಳಿಕೋರರ ಬಗ್ಗೆ ಸಾಕ್ಷಗಳು ಲಭ್ಯವಿದ್ದರೂ ಬಂಧನವಾಗದಿರುವುದು ಏಕೆ ಎಂಬುದು ಘಟನೆಯ ಸಂತ್ರಸ್ತರ ಪ್ರಶ್ನೆಯಾಗಿದೆ. ಈ ನಡುವೆ ರವಿವಾರ ಕರಾಯಕ್ಕೆ ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಆಗಮಿಸಿದ್ದು, ಇಲ್ಲಿನ ಭಜನಾ ಮಂದಿರದಲ್ಲಿ ಹಿಂದೂ ಪ್ರಮುಖರೊಂದಿಗೆ ಚರ್ಚೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಪೊಲೀಸರು ರವಿವಾರ ಉಪ್ಪಿನಂಗಡಿ ಸಮಾಜ ಮಂದಿರದಲ್ಲಿ ಶಾಂತಿ ಸಭೆಯನ್ನು ನಡೆಸಿ ಪರಿಸರದ ಎಲ್ಲರೂ ಶಾಂತಿಯನ್ನು ಕಾಪಾಡಿಕೊಳ್ಳುವಂತೆ ವಿನಂತಿಸಿದರು. ಶಾಂತಿ ಸಭೆಯಲ್ಲಿ ಉಪ್ಪಿನಂಗಡಿ ಕೇಂದ್ರ ಜುಮಾ ಮಸೀದಿಯ ಅಧ್ಯಕ್ಷ ಹಾಜಿ ಮುಸ್ತಫಾ ಕೆಂಪಿ, ಜಿಪಂ ಸದಸ್ಯ ಕೇಶವ ಗೌಡ, ಕಾಂಗ್ರೆಸ್ ಮುಖಂಡ ನಝೀರ್ ಮಠ, ಪಿಎಫ್‌ಐನ ಅಝೀಝ್ ನಿಂತಿಕಲ್, ಝಕರಿಯಾ, ಕರುಣಾಕರ ಮತ್ತಿತರರು ಭಾಗವಹಿಸಿ ಸಲಹೆ ಸೂಚನೆ ನೀಡಿದರು.
ಸಮಾಜಘಾತುಕ ಶಕ್ತಿಗಳ ಕಡಿವಾಣಕ್ಕೆ ಕ್ರಮ: ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ರಿಕೆಯೊಂದಿಗೆ ಮಾತನಾಡಿದ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ‘‘ಘಟನಾ ಸ್ಥಳ ದಲ್ಲಿ ದ.ಕ. ಜಿಲ್ಲಾ ಎಸ್ಪಿ, ಎಎಸ್ಪಿ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಮೊಕ್ಕಾಂ ಹೂಡಿದ್ದಾರೆ.
ಆರೋಪಿಗಳನ್ನು ಗುರುತಿಸಿ ಪ್ರಕರಣ ದಾಖಲಿಸುವ ಕೆಲಸದಲ್ಲಿ ಪೊಲೀಸರು ನಿರತರಾಗಿದ್ದಾರೆ. ನಾನು ಹಾಗೂ ಬೆಳ್ತಂಗಡಿ ಶಾಸಕ ವಸಂತ ಬಂಗೇರ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇವೆ. ಸಮಾಜ ಘಾತುಕ ಶಕ್ತಿಗಳಿಗೆ ಕಡಿವಾಣ ಹಾಕಲು ಬಿಗಿ ಕಾರ್ಯಾಚರಣೆ ನಡೆಸುವಂತೆ ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಪೊಲೀಸರು ತಮ್ಮ ಕೆಲಸ ಮಾಡುತ್ತಿದ್ದಾರೆ. ಎಲ್ಲವೂ ಒಮ್ಮೆಲೆ ಆಗುವುದಿಲ್ಲ ಎಂಬುದನ್ನು ಸಾರ್ವಜನಿಕರು ಮನಗಾಣಬೇಕು’’ ಎಂದು ಹೇಳಿದ್ದಾರೆ.
ಬಂಧನ ಕಾರ್ಯಾಚರಣೆಗೆ ತಂಡ ರಚನೆ: ದ.ಕ. ಜಿಲ್ಲಾ ಎಸ್ಪಿ
ಉಪ್ಪಿನಂಗಡಿ, ಕರಾಯ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ಗಲಭೆ, ಸಂಘರ್ಷಗಳಲ್ಲಿನ ಆರೋಪಿ ಗಳನ್ನು ಈಗಾಗಲೇ ಗುರುತಿಸಲಾಗಿದೆ. ಅವರ ಬಂಧನಕ್ಕೆ ವಿಶೇಷ ತಂಡಗಳನ್ನು ರಚಿಸಲಾಗಿದ್ದು, ಕಾರ್ಯಾಚರಣೆ ಆರಂಭಗೊಂಡಿದೆ. ಕನ್ಯಾಡಿಯಲ್ಲಿ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿರುವ ಆರೋಪಿಗಳಲ್ಲಿ ಒಬ್ಬನನ್ನು ಬಂಧಿಸಲಾಗಿದೆ. ಸಣ್ಣ ಪುಟ್ಟ ದಾಂಧಲೆ ಮಾಡುವವರ ಮೇಲೆ ನಿಗಾ ಇಡಲಾಗಿದೆ.
ದಾಂಧಲೆ ಮಾಡಿ ಪರಾರಿಯಾಗುವವರನ್ನು ಗುರುತಿಸುವುದಕ್ಕಾಗಿಯೇ ಉಪ್ಪಿನಂಗಡಿ, ಮಡ್ಯಂತಾರು, ಪೂಂಜಾಲಕಟ್ಟೆ, ನೆಕ್ಕಿಲಾಡಿ ಸಹಿತ ಆಯ್ದೆ ಪ್ರದೇಶಗಳಲ್ಲಿ ಶನಿವಾರ ದಿಂದಲೇ ಸಿಸಿ ಕ್ಯಾಮರಾ ಅಳವಡಿಸುವ ಕಾರ್ಯ ನಡೆಯುತ್ತಿದೆ ಎಂದು ದ.ಕ. ಜಿಲ್ಲಾ ಎಸ್ಪಿ ಡಾ.ಶರಣಪ್ಪ ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.