ಕನ್ನಡ ವಾರ್ತೆಗಳು

ಬೆಳ್ತಂಗಡಿಯ ಸಂತೆಕಟ್ಟೆ ಹಾಗೂ ಚರ್ಚ್‌ರೋಡ್‌ನ ಅಂಗಡಿಗಳಿಗಳಲ್ಲಿ ಬೆಂಕಿ ಅಪಘಾತ : ಲಕ್ಷಾಂತರ ರೂ. ಸೊತ್ತು ಬೆಂಕಿಗಾಹುತಿ

Pinterest LinkedIn Tumblr

Belthangadi_Shop_Fire_1

ಬೆಳ್ತಂಗಡಿ: ಬೆಳ್ತಂಗಡಿಯ ಸಂತೆಕಟ್ಟೆ ಹಾಗೂ ಚರ್ಚ್‌ರೋಡ್‌ನ ಅಂಗಡಿಗಳಿಗೆ ಶುಕ್ರವಾರ ರಾತ್ರಿ ಬೆಂಕಿ ಅಪಘಾತ ಸಂಭವಿಸಿದ್ದು ಲಕ್ಷಾಂತರ ರೂ. ನಷ್ಟ ಸಂಭವಿಸಿದೆ. ಬೆಳ್ತಂಗಡಿ ಸಂತೆಕಟ್ಟೆ ಪಟ್ಟಣ ಪಂಚಾಯತ್ ವಾಣಿಜ್ಯ ಸಂಕೀರ್ಣದ ಮಳಿಗೆಗಳಿಗೆ ಬೆಂಕಿ ಹಚ್ಚಿಕೊಂಡಿದ್ದು ಒಂದು ಅಂಗಡಿ ಬಹುತೇಕ ಸುಟ್ಟು ಹೋಗಿದ್ದು ಅಕ್ಕಪಕ್ಕದ ಎರಡು ಅಂಗಡಿ ಭಾಗಶಃ ಹಾನಿಗೊಳಗಾಗಿದೆ.

ರಾತ್ರಿ ಸುಮಾರು 1-15ರ ಸಮಯಕ್ಕೆ ಪುಷ್ಪವತಿ ಎಂಬವರಿಗೆ ಸ್ಟೇಷನರಿ ಅಂಗಡಿಗೆ ಬೆಂಕಿ ಹಚ್ಚಿಕೊಂಡು ಬಹುತೇಕ ಭಸ್ಮಗೊಂಡಿದೆ. ಇವರ ಅಂಗಡಿಯಲ್ಲಿದ್ದ ಸೊತ್ತುಗಳು ಭಸ್ಮಗೊಂಡಿದ್ದು ಸುಮಾರು 8 ಲಕ್ಷ ರೂ.ನಷ್ಟು ನಷ್ಟ ಸಂಭವಿಸಿದೆ. ಪಕ್ಕದ ಖಾಸಿಂ ಎಂಬವರಿಗೆ ಸೇರಿದ ಅಡಿಕೆ ಅಂಗಡಿ ಹಾಗೂ ಸುಭೋದ್ ಜೈನ್ ಎಂಬವರ ಸ್ಟುಡಿಯೋಗಳಿಗೆ ಹಬ್ಬಿತ್ತು. ಶಬರಿಮಲೆ ಯಾತ್ರಾರ್ಥಿಗಳು ಅಂಗಡಿಗೆ ಬೆಂಕಿ ಬಿದ್ದದನ್ನು ಗಮನಿಸಿ ಅಗ್ನಿಶಾಮಕ ದಳದವರಿಗೆ ಮಾಹಿತಿ ನೀಡಿದ್ದರು. ರೌಂಡ್ಸ್‌ನಲ್ಲಿದ್ದ ಎಸ್.ಐ. ಪ್ರಕಾಶ್ ಮತ್ತು ಸಿಬಂದಿಗಳು ಸ್ಥಳಕ್ಕಾಗಮಿಸಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡರು. 2 ಅಗ್ನಿಶಾಮಕ ದಳದ ವಾಹನಗಳು ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.

ಎಎಸ್‌ಪಿಯವರ ಕಾರ್ಯಾಚರಣೆ: ಅಂಗಡಿಗೆ ಬೆಂಕಿ ತಗಲಿಕೊಂಡಿದ್ದ ಮಾಹಿತಿ ತಿಳಿದು ಬಂಟ್ವಾಳ ಎಎಸ್‌ಪಿ ರಾಹುಲ್ ಕುಮಾರ್ ಮತ್ತು ಲಿಂಗಪ್ಪ ಬಿ.ಆರ್ ಸ್ಥಳಕ್ಕಾಗಮಿಸಿದರು. ಎಎಸ್‌ಪಿಯವರು ಅಡಿಕೆ ಅಂಗಡಿಯೊಳಗಿದ್ದ ಅಡಿಕೆ ಮೂಟೆಗಳನ್ನು ತಾವೇ ಹೊತ್ತು ಸಾಗಿಸಿ ನಷ್ಟ ಸಂಭವಿಸದಂತೆ ಮುಂಜಾಗ್ರತೆ ವಹಿಸಿದರು. ಎಎಸ್‌ಪಿ ನೇತತ್ವದ ಪೋಲಿಸ್ ತಂಡ ರಾತ್ರಿ ಇಡೀ ಗಸ್ತು ತಿರುಗಿ ತಾಲೂಕಿನಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಿದರು.

ಇನ್ನೊಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳ್ತಂಗಡಿ ಚರ್ಚ್ ರೋಡ್‌ನ ಕುದ್ರಡ್ಕ ಎಂಟರ್ ಪ್ರೈಸಸ್‌ಗೆ ಯಾರೋ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ. ತಡರಾತ್ರಿ 11-30ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದ್ದು ಅದರ ರಭಸಕ್ಕೆ ಅಂಗಡಿಯ ಮುಂದಿಟ್ಟಿದ್ದ ಗ್ಲಾಸ್ ಹಾಗೂ ಪೈವುಡ್‌ಗಳು ಹಾನಿಯಾಗಿದ್ದು ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಹಾನಿಯಾಗಿರುವುದಾಗಿ ಅಂಗಡಿ ಮಾಲಕ ಅಬ್ದುಲ್ ಖಾದರ್ ಬೆಳ್ತಂಗಡಿ ಪೋಲಿಸರಿಗೆ ದೂರು ನೀಡಿದ್ದಾರೆ. ಘಟನಾ ಸ್ಥಳಗಳಿಗೆ ಶಾಸಕ ಕೆ. ವಸಂತ ಬಂಗೇರ ಅವರು ಭೇಟಿ ನೀಡಿದ್ದಾರೆ.

Write A Comment