ಕುಂದಾಪುರ: ಇಲ್ಲಿನ ಚಿಕ್ಕನ್‌ಸಾಲ್ ರಸ್ತೆ ಮೂಲಕವಾಗಿ ಕುಂದಾಪುರ ನಗರಕ್ಕೆ ಆಗಮಿಸುತ್ತಿದ್ದ ಸ್ಯಾಂಟ್ರೋ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಲ್ಲಿ ನಿಲ್ಲಿಸಿದ್ದ ಕಾರಿಗೆ ಡಿಕ್ಕಿ ಹೊಡೆದು ಬಳಿಕ ಮುಖ್ಯರಸ್ತೆಗೆ ಆಗಮಿಸಿ ಶ್ರೀ ಗಣೇಶ್ ಸ್ಟೋರ್‍ಸ್ ಎದುರು ನಿಲ್ಲಿಸಿದ ಎರಡು ದ್ವಿಚಕ್ರವಾಹನಗಳಿಗೆ ಡಿಕ್ಕಿ ಹೊಡೆದು ಬಳಿಕ ಅಂಗಡಿಗೆ ನುಗ್ಗಿದ ಘಟನೆ ಶನಿವಾರ ಮಧ್ಯಾಹ್ನ ಕುಂದಾಪುರದ ಹಳೆ ಬಸ್ಸು ನಿಲ್ದಾಣದಲ್ಲಿ ನಡೆದಿದೆ.
ಕುಂದಾಪುರ ನಿವಾಸಿ ರಮೇಶ್ ಎನ್ನುವವರೇ ಕಾರು ಚಲಾಯಿಸುತ್ತಿದ್ದವರು. ಅಪಘಾತದಲ್ಲಿ ಬಸ್ಸು ನಿಲ್ದಾಣದಲ್ಲಿ ನಿಂತಿದ್ದ ಕೋಟೇಶ್ವರ ನಿವಾಸಿ ದಿವಾಕರ ಎನ್ನುವವರು ಗಾಯಗೊಂಡಿದ್ದಾರೆ.
ಘಟನೆ ವಿವರ: ಕುಂದಾಪುರದ ಸಂಗಂ ಮೂಲಕವಾಗಿ ಚಿಕ್ಕನ್‌ಸಾಲ್ ರಸ್ತೆಯಿಂದ ನಗರಕ್ಕೆ ಪ್ರವೇಶಿಸುತ್ತಿದ್ದ ವೇಳೆ ಸ್ಯಾಂಟ್ರೋ ಕಾರಿನ ಚಾಲಕ ರಮೇಶ್ ಕಾರಿನ ನಿಯಂತ್ರಣ ಕಳೆದುಕೊಂಡಿದ್ದು, ಇಲ್ಲಿನ ವಾಣಿಜ್ಯ ಸಂಕೀರ್ಣದ ಎದುರು ನಿಲ್ಲಿಸಿದ್ದ ಕಾರಿಗೆ ಡಿಕ್ಕಿ ಹೊಡೆದು ನಿಲ್ಲಿಸದೆಯೇ ಮುಂದಕ್ಕೆ ಸಾಗಿದ್ದಾರೆ, ಮುಂದಕ್ಕೆ ಹೋದಾಗಲೂ ಕಾರು ವೇಗವಾಗಿದ್ದ ಕಾರಣ ಕಾರಿನ ನಿಯಂತ್ರಣ ತಪ್ಪಿ ಹಳೆ ಬಸ್ಸು ನಿಲ್ದಾಣದ ಸಮೀಪದಲ್ಲಿಯೇ ಇರುವ ಶ್ರೀ ಗಣೇಶ್ ಸ್ಟೋರ್‍ಸ್ ಎದುರಿನ ಸ್ಕೂಟಿಗೆ ಡಿಕ್ಕಿಯಾಗಿದೆ. ಇದರಿಂದ ಸ್ಕೂಟಿ ಪಕ್ಕದಲ್ಲಿ ನಿಂತಿದ್ದ ಯುವತಿಗೆ ಚಿಕಪುಟ್ಟ ಗಾಯವಾಗಿದೆ. ಅಷ್ಟಕ್ಕೂ ನಿಲ್ಲದೇ ಮುಂದೆ ಸಾಗಿದ ಕಾರು ಇನ್ನೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಅಂಗಡಿ ಕೋಣೆಯ ಫಿಲ್ಲರ್ (ಗೋಡೆ)ಗೆ ಡಿಕ್ಕಿ ಹೊಡೆದು ನಿಂತಿದೆ. ಅಪಘಾತದಲ್ಲಿ ದ್ವಿಚಕ್ರವಾಹನ ಕಾರಿನಡಿಗೆ ಸಿಲುಕಿ ಜಖಂಗೊಂಡಿದೆ.
ತಪ್ಪಿದ ಭಾರೀ ದುರಂತ: ಶನಿವಾರವಾದ ಕಾರಣ ಸಂತೆಗೆ ಬರುವ ಜನಸಂದಣಿ ಒಂದೆಡೆಯಾದರೇ ಮಧ್ಯಾಹ್ನ ಶಾಲೆಗೆ ಶಾಲೆ-ಕಾಲೇಜಿಗೆ ರಜೆಯಿರುವ ಕಾರಣ ಮನೆಗೆ ತೆರಳುವ ನೂರಾರು ವಿದ್ಯಾರ್ಥಿಗಳು ಈ ಭಾಗದಲ್ಲಿ ಬಸ್ಸು ಕಾಯಲು ನಿಂತಿರುತ್ತಾರೆ. ಅಪಘಾತ ನಡೆದ ಸಮಯದಲ್ಲಿ ಹೆಚ್ಚು ಪ್ರಯಾಣಿಕರಿಲ್ಲದ ಕಾರಣ ಹಾಗೂ ನಿಂತಿದ್ದ ಪ್ರಯಾಣಿಕರ ಸಮಯಪ್ರಜ್ಞೆ ಹಾಗೂ ಜಾಗರುಕತೆಯಿಂದಾಗಿ ಸಂಭವನೀಯ ದುರಂತವೊಂದು ತಪ್ಪಿದಂತಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಸಂಚಾರಿ ಪೊಲಿಸರು ಇರಲಿಲ್ಲ: ಶನಿವಾರ ಹಳೆ ಬಸ್ಸು ನಿಲ್ದಾಣದ ಪ್ರದೇಶದಲ್ಲಿ ಜನಸಂದಣಿ ಜಾಸ್ಥಿಯಿರುವುದು ಮಾಮೂಲಿಯಾಗಿದೆ. ನಿತ್ಯ ಈ ಭಾಗದಲ್ಲಿ ಟ್ರಾಫಿಕ್ ಪೊಲೀಸರು ಇರುತ್ತಾರಾದರೂ ಶನಿವಾರ ಮಾತ್ರ ಇಲ್ಲಿ ಸಂಚಾರಿ ಪೊಲೀಸ್ ಸಿಬ್ಬಂದಿಯಿರಲಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಟ್ರಾಫಿಕ್ ಗೊಂದಲವಿರುವ ಈ ಪ್ರದೇಶದಲ್ಲಿ ನಿತ್ಯ ಹಲವು ವಾಹನ ಸವಾರರು ಗೊಂದಲಕ್ಕೀಡಾಗುತಿದ್ದು ಇಲ್ಲಿ ನಿತ್ಯ ಪೊಲೀಸರನ್ನು ನಿಯೋಜಿಸಬೇಕು ಹಾಗೂ ಟ್ರಾಫಿಕ್ ಗೊಂದಲಕ್ಕೆ ಸಂಚಾರಿ ಪೊಲೀಸರು ಕಡಿವಾಣ ಹಾಕಬೇಕೆಂದು ಸ್ಥಳೀಯ ನಾಗರೀಕರು ಹಾಗೂ ನಿತ್ಯ ಪ್ರಯಾಣಿಕರು ಆಗ್ರಹಿಸಿದ್ದಾರೆ.







