ಕನ್ನಡ ವಾರ್ತೆಗಳು

ನೀರಿನಲ್ಲಿ ಕೊಚ್ಚಿ ಹೋದ ಸಹೋದರನ್ನು ಚಾಣಾಕ್ಷತೆಯಿಂದ ರಕ್ಷಿಸಿದ ಪುಟ್ಟ ಬಾಲಕಿ

Pinterest LinkedIn Tumblr

grl_saved_drown_boy

ಹೊಳೆ ನರಸೀಪುರ.ಜ.15  : ನೀರಿನಲ್ಲಿ ಮುಳುಗುತ್ತಿದ್ದ ತನ್ನ ಸಹೋದರನನ್ನು ಚಾಣಾಕ್ಷತೆಯಿಂದ 5 ವರ್ಷದ ಪೋರಿ ರಕ್ಷಿಸಿರುವ ಘಟನೆ ತಾಲೂಕಿನ ಕಾಮಸಮುದ್ರ ಬಳಿಯಲ್ಲಿನ ಮಾವಿನಕೆರೆಯ ಕೇಂದ್ರೀಯ ಜವಾಹರ್ ನವೋದಯ ವಿದ್ಯಾಲಯದ ಆವರಣದಲ್ಲಿ ನಡೆದಿರುವುದಾಗಿ ತಡವಾಗಿ ಬೆಳಕಿಗೆ ಬಂದಿದೆ.

ಕಾಮಸಮುದ್ರ ಗ್ರಾಮದಲ್ಲಿರುವ ನವೋದಯ ವಿದ್ಯಾಲಯದ ಕ್ಯಾಂಪಸ್ ಒಳಗಿರುವ ಹೇಮಾವತಿ ಬಲದಂಡೆ ನಾಲಾ ವ್ಯಾಪ್ತಿಯ ಉಪ ನಾಲೆಯಲ್ಲಿ ಈ ಘಟನೆ ನಡೆದಿದೆ. ಹಾಸನದ ಪೋದಾರ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ 1ನೇ ತರಗತಿ ವ್ಯಾಸಂಗ ಮಾಡುತ್ತಿರುವ ಹೃತ್ವಿಕ್ (6 ವರ್ಷ) ಪ್ರಾಣಾಪಾಯದಿಂದ ಪಾರಾಗಿರುವ ಬಾಲಕ. ಈತನನ್ನು ಬುದ್ಧಿವಂತಿಕೆ ಮತ್ತು ಸಮಯ ಪ್ರಜ್ಞೆಯಿಂದ ರಕ್ಷಿಸಿದ ಸಹೋದರಿ ಪಟ್ಟಣದ ಕೆಎನ್‌ಎ ಶಾಲೆಯಲ್ಲಿ ಯುಕೆಜಿ ವ್ಯಾಸಂಗ ಮಾಡುತ್ತಿರುವ 5 ವರ್ಷದ ನಿಹಾರಿಕ ಈಗ ಎಲ್ಲರ ಶ್ಲಾಘನೆಗೆ ಪಾತ್ರಳಾಗಿದ್ದಾಳೆ.

ಘಟನೆ ವಿವರ :
ಹೃತ್ವಿಕ್ ಪೋಷಕರಾದ ಡಾ.ಲಕ್ಷ್ಮಪ್ಪ ಎನ್. ಛಲವಾದಿ ಹಾಗೂ ಸವಿತಾ ಹಳ್ಳೂರು ವೃತ್ತಿಯಲ್ಲಿ ಶಿಕ್ಷಕರಾಗಿದ್ದು, ಇವರು ಮೂಲತಃ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ವರಗೋಡದಿನ್ನಿ ಗ್ರಾಮದವರು. ಡಾ.ಲಕ್ಷ್ಮಪ್ಪ ನವೋದಯ ವಿದ್ಯಾಲಯದಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪೋಷಕರು ಶಾಲೆಗೆ ತೆರಳಿ ಎಂದಿನಂತೆ ಕರ್ತವ್ಯದಲ್ಲಿ ನಿರತರಾಗಿದ್ದಾರೆ.

ಈ ಸಮಯದಲ್ಲಿ ಶಾಲಾ ಕ್ಯಾಂಪಸ್ ಒಳಗಿರುವ ಉಪ ನಾಲೆ ನೀರಿನಲ್ಲಿ ಆಟವಾಡಲು ಹೋದ ಸಂದರ್ಭದಲ್ಲಿ ಹೃತ್ವಿಕ್ ಆಕಸ್ಮಿಕವಾಗಿ ಕಾಲು ಜಾರಿ ನಾಲೆಗೆ ಬಿದ್ದಿದ್ದಾನೆ. ನೀರಿನ ರಭಸಕ್ಕೆ ಆತ ಕೊಚ್ಚಿ ಹೋಗುವುದನ್ನು ಗಮನಿಸಿದ ಸಹೋದರಿ ನಿಹಾರಿಕ ನಾಲಾ ಆಸುಪಾಸಿನಲ್ಲಿರುವ ಗಿಡವನ್ನು ಭದ್ರವಾಗಿ ಹಿಡಿದುಕೊಳ್ಳುವಂತೆ ಕೂಗಿಕೊಂಡು ಸಲಹೆ ನೀಡಿದ್ದಾಳೆ. ಆಗ ಹೃತ್ವಿಕ್ ನಾಲಾ ಪಕ್ಕದಲ್ಲಿ ಬೆಳೆದಿದ್ದ ಗಿಡವನ್ನು ಭದ್ರವಾಗಿ ಅಪ್ಪಿಕೊಂಡಿದ್ದಾನೆ.

ಕೂಡಲೇ ಸ್ವಲ್ಪ ದೂರದಲ್ಲಿ ಗೋವುಗಳನ್ನು ಕಾಯುತ್ತಿದ್ದ ಕಾಮಸಮುದ್ರ ಗ್ರಾಮದ ರುಕ್ಮಿಣಿ ಎಂಬಾಕೆಯನ್ನು ನಿಹಾರಿಕ ಕೂಗಿ ತನ್ನಣ್ಣ ನೀರಿನಲ್ಲಿ ಮುಳುಗುತ್ತಿರುವುದನ್ನು ತಿಳಿಸಿದ್ದಾಳೆ. ತಕ್ಷಣವೇ ಸ್ಥಳಕ್ಕೆ ಓಡಿಬಂದ ರುಕ್ಮಿಣಿ ಕೈಯಲ್ಲಿದ್ದ ಟವಲ್ ಸಹಾಯದಿಂದ ಹೃತ್ವಿಕ್‌ನನ್ನು ದಡಕ್ಕೆ ಎಳೆದುಕೊಂಡು ಪ್ರಾಣಾಪಾಯದಿಂದ ಪಾರು ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

Write A Comment