ಕನ್ನಡ ವಾರ್ತೆಗಳು

ನಾಳೆಯಿಂದ ಕದ್ರಿ ಶ್ರೀ ಮಂಜುನಾಥ ದೇವಸ್ಥಾನ ವರ್ಷಾವಧಿ ಜಾತ್ರೋತ್ಸವ ಆರಂಭ.

Pinterest LinkedIn Tumblr

Kadri_jatra_Press_1

ಮಂಗಳೂರು,ಜ.14; ಇತಿಹಾಸ ಪ್ರಸಿದ್ಧ ಶ್ರೀ ಕ್ಷೇತ್ರ ಕದ್ರಿ ಶ್ರೀ ಮಂಜುನಾಥ ದೇವರ ವರ್ಷಾವಧಿ ಜಾತ್ರೆಯು ದಿನಾಂಕ 15-1-2015 ರಿಂದ ಮೊದಲ್ಗೊಂಡು 24 ರವರೆಗೆ ಜರಗಲಿರುವುದು.

ಜ.15  ಗುರುವಾರ ತೀರ್ಥಸ್ನಾನ ಪ್ರಾರಂಭಗೊಂಡು ಸಂಜೆ 6 ಗಂಟೆಗೆ ಏಳು ಪಟ್ಟಣ ಮೊಗವೀರ ಮಹಾ ಸಭಾದವರಿಂದ ಧ್ವಜಸ್ತಂಭ ಆರೋಹಣಗೊಳ್ಳಲಿರುವುದು, ರಾತ್ರಿ 10 ಕ್ಕೆ ಧ್ವಜಬಲಿ, ಗರುಡಾರೋಹಣ, ಶ್ರಿ ಮಲರಾಯ ದೈವದ ಭೇಟಿ, ಕಂಚಿಲು ಸೇವೆ ಹಾಗೂ ಸಣ್ಣ ರಥೋತ್ಸವ ಜರಗಲಿರುವುದು. ತಾ. 17 ಶನಿವಾರ, ಬಿಕರ್ನಕಟ್ಟೆ ಸವಾರಿ ಬಲಿ, 18  ರಂದು ಮಲ್ಲಿಕಟ್ಟೆ ಸವಾರಿ ಬಲಿ, 19  ರಂದು ಮುಂಡಾಣಕಟ್ಟೆ ಸವಾರಿ ಬಲಿ, 20 ರಂದು ಕೊಂಚಾಡಿ ಸವಾರಿ ಬಲಿ ಇರುವುದು ಎಂದು ಶ್ರೀ ಕ್ಷೇತ್ರದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಶ್ರೀ ಎ.ಜನಾರ್ಧನ ಶೆಟ್ಟಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು..

Kadri_jatra_Press_2

ಜ,.21  ರಂದು ಬುಧವಾರ ಏಳನೇ ದೀಪೋತ್ಸವ ಜರಗಲಿದ್ದು ಮಧ್ಯಾಹ್ನ ಮಹಾಪೂಜೆಯ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನೆರೆವೇರಲಿದೆ. ಜ 22 ನೇ ಗುರುವಾರದಂದು ಮಧ್ಯಾಹ್ನ ಮಹಾಪೂಜೆಯ ಬಳಿಕ ದೇವರು ರಥಾರೋಹಣವಾಗಿ ಸಂಜೆ 6 ಕ್ಕೆ “ಶ್ರೀ ಮನ್ಮಹಾರಥೋತ್ಸವ, ಬೆಳ್ಳಿ ರಥೋತ್ಸವ” ನಡೆಯಲಿದೆ. ತಾ.23 ನೇ ಶುಕ್ರವಾರ ಕವಾಟೋಧ್ಘಾಟನೆ, ಅವಭೃತ ಸ್ನಾನ ನೆರವೇರಲಿದ್ದು ಜನವರಿ 25  ನೇ ಅಧುತ್ಯವಾರ ಶ್ರಿ ಮಲರಾಯ ದೈವದ ನೇಮ ಜರಗಲಿದೆ. ಪ್ರತಿ ದಿನ ರಾತ್ರಿ 8  ರಿಂದ ಸಾಂಸ್ಕೃತಿಕ ಕಾರ್ಯಕ್ರಮವು ಮಲ್ಲಿಕಾ ಕಲಾವೃಂದ ಕದ್ರಿ ಹಾಗೂ ದೇವಾಲಯದ ಸಹಯೋಗದೊಂದಿಗೆ ರಾಜಾಂಗಣದಲ್ಲಿ ಜರಗಲಿದೆ ಎಂದು ವಿವರ ನೀಡಿದರು.

ಜನವರಿ 15 ನೇ ಗುರುವಾರ ಪೂರ್ವಾಹ್ನ ಕದ್ರಿ ಕಂಬಳದಿಂದ ಶ್ರೀ ಕ್ಷೇತ್ರಕ್ಕೆ ಹೊರೆಕಾಣಿಕೆ ಮೆರೆವಣಿಗೆ ಸಾಗಲಿದ್ದು ಭಕ್ತಾದಿಗಳು ಈ ಕಾರ್ಯಕ್ರಮದಲ್ಲೂ ಸಹಭಾಗಿಗಳಾಗುವಂತೆ ಕ್ಷೇತ್ರದ ವ್ಯವಸ್ಥಾಪನ ಸಮಿತಿ ಸದಸ್ಯ ಎಸ್.ಪ್ರದೀಪ್ ಕುಮಾರ್ ಕಲ್ಕೂರ ವಿನಂತಿಸಿದರು.

Kadri_jatra_Press_3

ಅನ್ನ ಸಂತರ್ಪಣಾ ನಿಧಿ ಸಂಗ್ರಹ :

ಶ್ರೀ ಕ್ಷೇತ್ರದಲ್ಲಿ ಯಾತ್ರಾರ್ಥಿಗಳಿಗೆ ಪ್ರತಿದಿನವೂ ಮಧ್ಯಾಹ್ನ ಅನ್ನ ಸಂತರ್ಪಣೆ ನಡೆಯುತ್ತಿದ್ದು ಈ ಬಗ್ಗೆ ಭಕ್ತಾದಿಗಳು ರೂ5,000/- ವನ್ನು ಒಂದು ದಿನ ಸಂತರ್ಪಣಾ ಸೇವೆಯಾಗಿಯೂ ರೂ, 25,000/- ಮೇಲ್ಪಟ್ಟು ಶಾಶ್ವತ ಅನ್ನ ಸಂತರ್ಪಣಾ ನಿಧಿಗಾಗಿಯೂ ನೀಡಬಹುದಾಗಿದ್ದು ಈ ಬಗ್ಗೆ ವಿವರಗಳಿಗೆ ಕ್ಷೇತ್ರದ ಕಚೇರಿಯನ್ನು ಸಂಪರ್ಕಿಸುವಂತೆ ಕಲ್ಕೂರ ತಿಳಿಸಿದರು. ಆದರೆ ಶ್ರೀ ಕ್ಷೇತ್ರದ ವತಿಯಿಂದ ದೇಣಿಗೆ ಸಂಗ್ರಹ ಮಾಡಲು ಯಾವೂದೇ ವ್ಯಕ್ತಿಗಳನ್ನು ನೇಮಕ ಮಾಡಿಲ್ಲ. ಕ್ಷೇತ್ರದ ಹೆಸರು ದುರ್ಬಳಕೆ ಮಾಡಿಕೊಂಡು ದೇಣಿಗೆ ಸಂಗ್ರಹಕ್ಕೆ ಬಂದರೆ ಅಂಥವರಿಗೆ ದೇಣಿಗೆ ನೀಡಬಾರದು. ಕ್ಷೇತ್ರದ ಅಭಿವೃದ್ಧಿಗೆ ನೀಡುವ ಯಾವೂದೇ ರೀತಿಯ ದೇಣಿಗೆಯನ್ನು ಕ್ಷೇತ್ರದಲ್ಲೇ ಬಂದು ನೀಡುವಂತೆ ಕಲ್ಕೂರ ಅವರು ಮನವಿ ಮಾಡಿದರು.

Kadri_jatra_Press_4

ಸಾವಿರ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ :

ಜಾತ್ರೆ ನಡೆಯುವ ಸಂದರ್ಭ ಪ್ರತಿನಿತ್ಯ ಕ್ಷೇತ್ರದ ವೇದಿಕೆಯಲ್ಲಿ ಸಾಂಸ್ಕ್ರತಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಸುಮಾರು ಒಂದು ಸಾವಿರ ಕಲಾವಿದರಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ಜರಗಲಿರುವುದು ಎಂದು ಪ್ರದೀಪ್ ಕುಮಾರ್ ಕಲ್ಕೂರ ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ದೇರಬೈಲ್ ವಿಠಲದಾಸ ತಂತ್ರಿ, ವ್ಯವಸ್ಥಾಪನ ಸಮಿತಿಯ ಕಾರ್ಯನಿರ್ವಹಣಾಧಿಕಾರಿ ಶ್ರೀ ನಿಂಗಯ್ಯ, ಸಮಿತಿ ಸದಸ್ಯರಾದ ಡಾ| ಅನಂತಕೃಷ್ಣ ಭಟ್, ಶ್ರೀಮತಿ ನಿವೇದಿತಾ ಶೆಟ್ಟಿ ಹಾಗೂ ಸುಧಾಕರ್ ರಾವ್ ಪೇಜಾವರ್ ಉಪಸ್ಥಿತರಿದ್ದರು.

Write A Comment