ಕನ್ನಡ ವಾರ್ತೆಗಳು

ಕೋಡಿ ಗಲಭೆ : ಕುಂದಾಪುರದಲ್ಲಿ ಹಲ್ಲೆ ನಡೆಸಿದ ಆರು ಆರೋಪಿಗಳ ಬಂಧನ

Pinterest LinkedIn Tumblr

ಕುಂದಾಪುರ: ಬೂದಿ ಮುಚ್ಚಿದ ಕೆಂಡದಂತಿದ್ದ ಕೋಡಿಯಲ್ಲಿ ಭಾನುವಾರ ರಾತ್ರಿ ಕೋಮು ದ್ವೇಷ ಭುಗಿಲೆದ್ದ ಪರಿಣಾಮ ಇಬ್ಬರು ಯುವಕರು ಕುಂದಾಪುರದ ಚಿನ್ಮಯೀ ಆಸ್ಪತ್ರೆಗೆ ದಾಖಲಾದ ಸಂದರ್ಭ ಆಕ್ರೋಶಿತ ಯುವಕರು ಅಮಾಯಕ ಮುಸ್ಲಿಂ ಯುವಕನಿಗೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆಗೆ ಸಂಬಂಧಿಸಿದಂತೆ ಇಬ್ಬರನ್ನು ಕುಂದಾಪುರ ಪೊಲೀಸರು ಬಂಧಿಸಿದ್ದು, ಬಂಧಿತ ಆರೋಪಿಗಳನ್ನು ರಂಜನ್ ಮತ್ತು ರಾಕೇಶ್ ಎಂದು ಗುರುತಿಸಲಾಗಿದ್ದು ಕೋಡಿಯಲ್ಲಿ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಕಿರ್, ಸಾದ್ವಿಕ್, ಅರ್ಷದ್ ಹಾಗೂ ಅಬ್ದುಲ್ ರೆಹಮಾನ್ ಎಂಬುವರನ್ನು ಬಂಧಿಸಿ, ವೈದ್ಯಕೀಯ ತಪಾಸಣೆಗೊಳಪಡಿಸಿದ ನಂತರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

Kodi_Communal_Issue (4)

(ಫೈಲ್ ಫೋಟೋ)

ಘಟನೆಯ ಹಿನ್ನೆಲೆ : ಭಾನುವಾರ ರಾತ್ರಿ ಕೋಡಿಯ ಹಳೆ‌ಅಳಿವೆಯಲ್ಲಿ ನಡೆದ ಭಿನ್ನ ಕೋಮುಗಳ ಯುವಕರ ನಡುವೆ ಹೊಡೆದಾಟ ಪ್ರಕರಣದಲ್ಲಿ ಗಂಭೀರ ಗಾಯಗೊಂಡಿದ್ದ ಹಳವಳ್ಳಿಯ ಭರತ್ (17) ಹಾಗೂ ರಂಜಿತ್ (22) ಎಂಬುವರನ್ನು ಖಾಸಗೀ ಆಸ್ಪತ್ರೆಗೆ ದಾಖಲಿಸಿದ್ದ ಹಿನ್ನೆಲೆಯಲ್ಲಿ ಹಿಂದೂ ಯುವಕರು ಆಸ್ಪತ್ರೆಯ ಮುಂದೆ ಜಮಾಯಿಸಿದ್ದರು. ಇದೇ ಸಂದರ್ಭ ಕುಂದಾಪುರದ ಚಿನ್ಮಯೀ ಆಸ್ಪತ್ರೆಯಲ್ಲಿ ಔಷಧಿ ತೆಗೆದುಕೊಂಡು ಹೋಗುತ್ತಿದ್ದ ಮಹಮ್ಮದ್ ಅವೇಜ್(17) ಎಂಬಾತನಿಗೆ ಕಿಡಿಗೇಡಿಗಳು ಅಡ್ಡಗಟ್ಟಿ ನೀನು ಯಾರು ಎಂದು ಕೇಳಿದ್ದಾರೆ. ಆತ ಹೆಸರು ಹೇಳಿದ ತಕ್ಷಣ ಹೆಸರು ಕೇಳಿ ಹಲ್ಲೆ ನಡೆಸಿದ ಪರಿಣಾಮ ಗಂಭೀರ ಗಾಯಗೊಂಡು ಆಸ್ಪತ್ರೆ ಸೇರಿದ್ದು, ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಉಡುಪಿ ಎಸ್ಪಿ ಕೆ. ಅಣ್ಣಾಮಲೈ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿದ ಕುಂದಾಪುರ ನೂತನ ಡಿವೈ‌ಎಸ್ಪಿ ಎಂ ಮಂಜುನಾಥ ಶೆಟ್ಟಿ ನೇತೃತ್ವದಲ್ಲಿ ವೃತ್ತ ನಿರೀಕ್ಷಕ ದಿವಾಕರ ಪಿ.ಎಂ. ಮತ್ತು ಕುಂದಾಪುರ ಉಪನಿರೀಕ್ಷಕ ನಾಸಿರ್ ಹುಸೇನ್ ಮತ್ತು ಪೊಲೀಸರು ಹಲ್ಲೆ ಪ್ರಕರಣದ ಪ್ರಮುಖ ಆರೋಪಿಗಳನ್ನು ಬಂಧಿಸಿದ್ದು, ಉಳಿದ ಆರೋಪಿಗಳಿಗೆ ಬಲೆ ಬೀಸಿದ್ದಾರೆ.

ಮೂರು ಕಡೆ ಚೆಕ್‌ಪೋಸ್ಟ್ : ಭಾನುವಾರ ನಡೆದ ಘರ್ಷಣೆಗೆ ಸಂಬಂಧಿಸಿ ಕೋಡಿಯಲ್ಲಿ ಮೂರು ಕಡೆ ಚೆಕ್ ಪೋಸ್ಟ್ ಹಳವಳ್ಳಿ, ರಾಮನಗರ ಗಜೇಂದ್ರ ಕಾಮತ್ ಅಂಗಡಿ ಸಮೀಪ, ಎಂ.ಕೋಡಿಯಲ್ಲಿ ಹೊರಠಾಣೆ ನಿರ್ಮಿಸಲಾಗಿದ್ದು, ಪ್ರತೀ ಚೆಕ್ ಪೋಸ್ಟ್‌ನಲ್ಲಿ ಇಬ್ಬರು ಪೊಲೀಸ್ ಸಿಬ್ಬಂದಿಗಳು, ಹೊರಠಾಣೆಯಲ್ಲಿ ಇಬ್ಬರು ಸಿಬ್ಬಂದಿಗಳು ಹಾಗೂ ಓರ್ವ ಎ‌ಎಸ್‌ಐ ನಿಯುಕ್ತಿಗೊಳಿಸಲಾಗಿದೆ.

Write A Comment