ಮಂಗಳೂರು, ಜ.13: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡಮಿಯ 2014ನೆ ಸಾಲಿನ ಗೌರವ ಪ್ರಶಸ್ತಿ, ಪುಸ್ತಕ ಬಹುಮಾನ ಮತ್ತು ಯುವ ಪುರಸ್ಕಾರಕ್ಕೆ ಆಯ್ಕೆ ನಡೆಸಲಾಗಿದೆ ಎಂದು ಅಕಾಡಮಿ ಅಧ್ಯಕ್ಷ ರಾಯ್ ಕ್ಯಾಸ್ತಲಿನೊ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು.
ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಜ.18ರಂದು ಸಂಜೆ 4:30ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶಸ್ತಿ, ಬಹುಮಾನ, ಪುರಸ್ಕಾರ ಪ್ರದಾನ ಮಾಡಲಿದ್ದಾರೆ ಎಂದು ಅವರು ಹೇಳಿದರು.
ಅಕಾಡಮಿಯ ಗೌರವ ಪ್ರಶಸ್ತಿಯ ಸಾಹಿತ್ಯ ವಿಭಾಗದಲ್ಲಿ ಕನ್ನಡ ಸಾಹಿತ್ಯದಲ್ಲಿ 30ಕ್ಕೂ ಅಧಿಕ ಪುಸ್ತಕಗಳನ್ನು ಬರೆದಿರುವ 82ರ ಹರೆಯದ ಪದ್ಮಾ ಶೆಣೈ ಅವರು ಆಯ್ಕೆಯಾಗಿದ್ದಾರೆ. ಜಾನಪದ ವಿಭಾಗದಲ್ಲಿ ನೃತ್ಯ, ನಾಟಕ, ಚಲನಚಿತ್ರ ಮತ್ತು ಇತರ ಸಮಾರಂಭಗಳಲ್ಲಿ ಪ್ರಸಾದನ ಕಾರ್ಯ ನಿರ್ವಹಿಸುತ್ತಿದ್ದು, ನಾಟಕ ಸಂಗೀತದಲ್ಲಿ ತೊಡಗಿಕೊಂಡಿರುವ 84ರ ಹರೆಯದ ಧಾರವಾಡದ ಗಜಾನನ ಮಹಾಲೆ ಆಯ್ಕೆಯಾಗಿದ್ದಾರೆ. ಕಲೆ ವಿಭಾಗದಲ್ಲಿ ಕೊಂಕಣಿ ನಾಟಕ ರಚನೆ ಮತ್ತು ನಿರ್ದೇಶನದಲ್ಲಿ ಕಾರ್ಯನಿರ್ವಹಿಸಿರುವ, ಕನ್ನಡ ನಾಟಕ ರಂಗದಲ್ಲಿಯೂ ನಾಲ್ಕು ದಶಕಗಳಿಂದ ಕಾರ್ಯ ನಿರ್ವಹಿಸುತ್ತಿರುವ 65ರ ಹರೆಯದ ಕೋಣಿ ಶೇಷಗಿರಿ ನಾಯಕ್ ಆಯ್ಕೆಯಾಗಿದ್ದಾರೆ ಎಂದು ಅವರು ಹೇಳಿದರು.
ಕೊಂಕಣಿ ಪುಸ್ತಕ ಬಹುಮಾನಕ್ಕೆ ಮಣಿಪಾಲದ ಡಾ.ನಾಗೇಶ್ ಕುಮಾರ್ ಜಿ.ರಾವ್ ಅವರ ಕೊಂಕಣಿ ಕವನ ‘ಮಾಗಣಿ ಕೃಷ್ಣ ತುಕಾ’್ಕ, ಹಾಸನದ ಜೆ.ವಿ. ಕಾರ್ಲೊ ಅವರ ಕೊಂಕಣಿ ಲೇಖನ ‘ಗಾಂಧಿಚೆಂ ಪರ್ಜಳಿಕ್ ಫುಡರ್‌ಪಣ್, ಕಿನ್ನಿಗೋಳಿಯ ನವೀನ್ ಕುಂರ್ಬಿಲ್‌ರ ಕೊಂಕಣಿ ಸಣ್ಣಕಥೆ ‘ದೇವಾಚ್ಯಾ ಭಾಗೆವಂತಾಂನೊ’ ಕೃತಿಗಳು ಆಯ್ಕೆಯಾಗಿವೆ. ಕೊಂಕಣಿ ಯುವ ಪುರಸ್ಕಾರಕ್ಕೆ ಸಂಗೀತ ಕ್ಷೇತ್ರದಲ್ಲಿ ಅರಳುವ ಪ್ರತಿಭೆ ಮೈಸೂರಿನ ಅಶ್ವಿನ್ ಎಂ. ಪ್ರಭುರನ್ನು ಆಯ್ಕೆ ಮಾಡಲಾಗಿದೆ.
ಯೋಗ ವಿಭಾಗದಲ್ಲಿ ಕೊಂಕಣಿ ಯುವ ಪುರಸ್ಕಾರಕ್ಕೆ ಬೆಂಗಳೂರಿನ ಪ್ರಜ್ವಲ್ ಎಂ. ನಾಯಕ್ ಆಯ್ಕೆಯಾಗಿದ್ದಾರೆ. ಇವರು 2ನೆ ರಾಜ್ಯ ಮಟ್ಟದ ಯೋಗಾಸನ ಚಾಂಪಿಯನ್‌ಶಿಪ್‌ನಲ್ಲಿ ಪ್ರಥಮ, 11ನೆ ದಕ್ಷಿಣ ಭಾರತೀಯ ಯೋಗಾಸನ ಚಾಂಪಿಯನ್‌ಶಿಪ್‌ನಲ್ಲಿ ದ್ವಿತೀಯ ಸ್ಥಾನ, ನಾಲ್ಕನೆ ಅಂತಾರಾಷ್ಟ್ರೀಯ ಯೋಗಾಸನ ಚಾಂಪಿಯನ್‌ಶಿಪ್‌ನಲ್ಲಿ ಮೊದಲನೆ ಸ್ಥಾನ ಪಡೆದು ಚಿನ್ನದ ಪದಕ ಗಳಿಸಿದ್ದಾರೆ.ಧಾರವಾಡ ಆಕಾಶವಾಣಿಯಲ್ಲಿ ಕೊಂಕಣಿ ವಿಭಾಗದಲ್ಲಿ ಕಾರ್ಯಕ್ರಮ ಉದ್ಘೋಷಕರಾಗಿ ಕಾರ್ಯ ನಿರ್ವಹಿಸುತ್ತಿರುವ ಅರುಣ್ ನಾಯ್ಕಿ ಮಾಧ್ಯಮ ವಿಭಾಗದ ಯುವ ಪುರಸ್ಕಾರ ವಿಜೇತರು ಎಂದು ರಾಯ್ ಕ್ಯಾಸ್ತಲಿನೊ ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಅಕಾಡಮಿಯ ಸದಸ್ಯರಾದ ದೇವದಾಸ್ ಪೈ, ಲೊರೆನ್ಸ್ ಉಪಸ್ಥಿತರಿದ್ದರು.
