ಕುಂದಾಪುರ: ಮಹಿಳೆಯರನ್ನು ಆರ್ಥಿಕವಾಗಿ ಸಬಲಳನ್ನಾಗಿಸುವ ನಿಟ್ಟಿನಲ್ಲಿ ಸರ್ಕಾರ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿದ್ದು, ಸ್ತ್ರೀಶಕ್ತಿ ಗುಂಪುಗಳಿಗೆ ನೀಡುತ್ತಿದ್ದ 5 ಸಾವಿರ ಸುತ್ತುನಿಧಿಯನ್ನು 20 ಸಾವಿರಕ್ಕೇರಿಸಲಾಗಿದೆ. 6% ಬಡ್ಡಿಯಲ್ಲಿ ಒಂದು ಲಕ್ಷ ತನಕ ನೀಡುತ್ತಿದ್ದ ಸಾಲವನ್ನು ೩ಲಕ್ಷಕ್ಕೆ ಏರಿಸಲಾಗಿದೆ. ಮಹಿಳೆಯರಿಗಾಗಿ ಪ್ರತ್ಯೇಕವಾದ ಬ್ಯಾಂಕನ್ನು ತೆರೆಯುವ ಚಿಂತನೆಯನ್ನು ಸರ್ಕಾರ ಹೊಂದಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿನಯಕುಮಾರ್ ಸೊರಕೆ ಹೇಳಿದರು.
ಜಿಲ್ಲಾಡಳಿಯ ಉಡುಪಿ ಜಿಲ್ಲೆ, ಜಿ.ಪಂ., ತಾ.ಪಂ.ಕುಂದಾಪುರ ಇವರ ಸಂಯುಕ್ತ ಆಶ್ರಯದಲ್ಲಿ ತ್ರಾಸಿಯ ಕ್ಲಾಸಿಕ್ ಆಡಿಟೋರಿಂನಲ್ಲಿ ಜ.10 ರಂದು ನಡೆದ ಬೈಂದೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಸರ್ಕಾರದ ವಿವಿಧ ಸವಲತ್ತುಗಳ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಸ್ತುತ ರಾಜ್ಯದಲ್ಲಿ 3 ಲಕ್ಷ ಇಂದಿರಾ ಅವಾಸ್, ಬಸ ವಸತಿ ಮನೆ ಮಂಜೂರಾಗಿದ್ದು, ಬೈಂದೂರು ಕ್ಷೇತ್ರಕ್ಕೆ 500 ಮನೆಗಳು ಇಲ್ಲಿನ ಶಾಸಕರ ಪರಿಶ್ರಮದಿಂದ ಮಂಜೂರಾಗಿದೆ. ನಮ್ಮ ಸರ್ಕರ ಅಧಿಕಾರಕ್ಕೆ ಬರುವಾಗ ಜಿಲ್ಲೆಯಲ್ಲಿ 72 ಸಾವಿರ ಪಡಿತರ ಚೀಟಿ ಅರ್ಜಿ ಬಾಕಿ ಇದ್ದು, ಈಗಾಗಲೇ 63 ಸಾವಿರ ಪಡಿತರ ಚೀಟಿ ವಿತರಿಸಲಾಗಿದ್ದು, ಉಳಿದ 10 ಸಾವಿರ ಬಾಕಿ ಇದ್ದು ಕೂಡಲೆ ವಿತರಿಸಲಾಗುವುದು ಎಂದರು.
ಹೈನುಗಾರರಿಗೆ 4 ರೂ ಪ್ರೋತ್ಸಾಹಧನ ನೀಡಲಾಗುತ್ತಿದೆ. ಶಾಲಾ ಮಕ್ಕಳಿಗೆ ವಾರದ ಐದು ದಿನ ಕ್ಷೀರಭಾಗ್ಯವನ್ನು ವಿಸ್ತರಿಸುವ ಚಿಂತನೆ ನಡೆಯುತ್ತಿದೆ. ಮನಸ್ವಿನಿ ಯೋಜನೆಯ ಮೂಲಕ ೪೦ವರ್ಷ ದಾಟಿದ ಮದುವೆಯಾಗದ ಮಹಿಳೆಯರಿಗೆ ರೂ.500 ಮಾಸಸನ ನೀಡುವ ಯೋಜನ ಪ್ರಗತಿಯಲ್ಲಿದೆ. ಆಶ್ರಯ ಮನೆಗಳ ಸಾಲ ಮನ್ನಾ ಹೀಗೆ ಹಲವಾರು ಜನಕಲ್ಯಾಣ ಕಾರ್ಯಕ್ರಮಗಳನ್ನು ಸರ್ಕಾರ ಹಾಕಿಕೊಂಡಿದೆ ಎಂದು ಅವರು ಹೇಳಿದರು.
ಬೈಂದೂರು ಶಾಸಕ ಕೆ.ಗೋಪಾಲ ಪೂಜಾರಿ ಮಾತನಾಡಿ, ಅದಾಲತ್‌ಗಳ ಮೂಲಕ ಜನರ ಸಮಸ್ಯೆಗೆ ಪರಿಣಾಮಕಾರಿ ಸ್ಪಂದನೆ ದೊರಕುತ್ತಿರುವುದನ್ನು ಮನಗಂಡು ಸಚಿವ ದಿನೇಶ ಗುಂಡೂರಾವ್ ಜೊತೆ ’ಆಹಾರ ಅದಾಲತ್’ ನಡೆಸುವ ಬಗ್ಗೆ ಚರ್ಚಿಸಿದ್ದೇನೆ. ಆಹಾರ ಅದಾಲತ್ ಆದರೆ ಹಲವಾರು ಪಡಿತರ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಬಿಪಿಎಲ್ ಕಾರ್ಡ್ ಸಮಸ್ಯೆ ಕ್ಷೇತ್ರದಲ್ಲಿ ಶೇ.70 ಪರಿಹಾರವಾಗಿದೆ ಎಂದರು.
ಈ ಸಂದರ್ಭದಲ್ಲಿ ಹಕ್ಕುಪತ್ರ, ಪಡಿತರ ಚೀಟಿ, ಭಾಗ್ಯಲಕ್ಷ್ಮೀ, ಮನೆ ಮಂಜೂರಾತಿ ಪತ್ರ, ಸ್ತ್ರೀ ಶಕ್ತಿ ಸುತ್ತುನಿಧಿ, ಉಳುಮೆ ಯಂತ್ರ, ಪವರ್ ವ್ಹೀಡರ್, ವಿಕಲಚೇತನರಿಗೆ ಗಾಲಿಕುರ್ಚಿ ಹೀಗೆ 8 ಇಲಾಖೆಗಳಿಂದ 1307 ಫಲಾನುಭವಿಗಳಿಗೆ ಸವಲತ್ತು ವಿತರಿಸಲಾಯಿತು.
ಕುಂದಾಪುರ ತಾಲೂಕು ಪಂಚಾಯಿತಿ ಅಧ್ಯಕ್ಷ ಭಾಸ್ಕರ ಬಿಲ್ಲವ ಸಭೆಯ ಅಧ್ಯಕ್ಷತೆವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಜಿ.ಪಂ.ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಗೌರಿ ದೇವಾಡಿಗ, ಜಿ.ಪಂ.ಸದಸ್ಯೆ ಇಂದಿರಾ ಶೆಟ್ಟಿ, ತಾ.ಪಂ.ಸದಸ್ಯ ರಾಜು ಪೂಜಾರಿ, ಎಚ್.ಮಂಜಯ್ಯ ಶೆಟ್ಟಿ, ಕೆ.ರಮೇಶ ಗಾಣಿಗ, ಪಂಚಾಯತ್ ರಾಜ್ ಒಕ್ಕೂಟದ ಅಧ್ಯಕ್ಷ ಅಡಿಕೆಕೊಡ್ಲು ಉದಯಕುಮಾರ್ ಶೆಟ್ಟಿ, ತ್ರಾಸಿ ಗ್ರಾ.ಪಂ.ಅಧ್ಯಕ್ಷೆ ವನಿತಾ ಹಾಗೂ ಎಲ್ಲಾ ಗ್ರಾ.ಪಂ.ಅಧ್ಯಕ್ಷರು, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಶೇಷಪ್ಪ ಸ್ವಾಗತಿಸಿ, ಅಕ್ಷರದಾಸೋಹದ ಸೀತಾರಾಮ ಶೆಟ್ಟಿ ಕೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಮಾಜ ಕಲ್ಯಾಣ ಇಲಾಖೆಯ ಸದಾನಂದ ವಂದಿಸಿದರು.
’ವಾರಾಹಿ ಕೆಲಸಕ್ಕೆ ವೇಗ ನೀಡುವ ಕೆಲಸವಾಗಿದ್ದು, ಕಾಲುವೆಗಳಲ್ಲಿ ನೀರು ಹರಿಸುವ ವಿಚಾರದಲ್ಲಿ ನಾವು ಬದ್ಧವಾಗಿದ್ದೇವೆ. ಪ್ರತಾಪಚಂದ್ರ ಶೆಟ್ಟರ ನೇತೃತ್ವದಲ್ಲಿ ಧರಣಿ ನಡೆಯುತ್ತಿರುವ ಸ್ಥಳಕ್ಕೆ ಸಚಿವರಾದ ಶ್ರೀನಿವಾಸ್ ಪ್ರಸಾದ್, ಬೃಹತ್ ನೀರಾವರಿ ಸಚಿವ ಎಂ.ಬಿ ಪಾಟೀಲ್, ಅರಣ್ಯ ಸಚಿವ ರಮಾನಾಥ ರೈ ಜೊತೆಗೂಡಿ ಜ.16ಕ್ಕೆ ಭೇಟಿ ನೀಡಲಿದ್ದೇವೆ.
ಕಸ್ತೂರಿ ರಂಗನ್ ವರದಿಯ ಬಗ್ಗೆ ಜ.೨೧ರಂದು ನಡೆಯುವ ಸಚಿವ ಉಪಸಂಪುಟ ಸಭೆಯಲ್ಲಿ ಚರ್ಚಿಸಿ, ಈ ಭಾಗದ ಜನರಿಗೆ ತೊಂದರೆಯಾಗದ ರೀತಿಯಲ್ಲಿ ನಿರ್ಣಯಗಳನ್ನು ತಗೆದುಕೊಂಡು ಕೇಂದ್ರ ಸರ್ಕಾರಕ್ಕೆ ಕಳುಹಿಸುವ ಕೆಲಸ ಮಾಡಲಿದ್ದೇವೆ’-ವಿನಯಕುಮಾರ್ ಸೊರಕೆ
’ಮೀನುಗಾರರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಸಲುವಾಗಿ ಮುಂದಿನ ತಿಂಗಳು 6ರಂದು ಮರವಂತೆಯಲ್ಲಿ ಕಾರ್ಯಕ್ರಮ ಆಯೋಜಿಸಿದ್ದು, ಬ್ರೇಕ್‌ವಾಟರ್‌ಗಳಿಗೆ ಗುದ್ದಲಿ ಪೂಜೆ ಕಾರ್ಯಕ್ರಮ ನಡೆಯಲಿದೆ’-ಕೆ.ಗೋಪಾಲ ಪೂಜಾರಿ
















