ಮಂಗಳೂರು, ಜ.7 : ಕಾನೂನು ದುರು ಪಯೋಗಪಡಿಸಿದವರಿಗೆ ಏನು ಶಿಕ್ಷೆ? ದಲಿತರಿಂದ ದಲಿತರಿಗಾಗುವ ಅನ್ಯಾಯಕ್ಕೇನು ಪರಿಹಾರ? ಕಾನೂನು ಯಾರಿಗಾಗಿ ಇರುವುದು? ದಲಿತ ಎಂದರೆ ಯಾರು?
ಇದು ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಸಭಾಂಗಣದಲ್ಲಿ ನಡೆದ ಮಾಸಿಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕುಂದುಕೊರತೆಗಳ ಸಭೆಯಲ್ಲಿ ವಿದ್ಯಾರ್ಥಿನಿಯೊಬ್ಬರಿಂದ ಕೇಳಿಬಂದ ಪ್ರಶ್ನೆಗಳು. ಪ್ರತಿ ಬಾರಿಯೂ ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರ ಹಲವಾರು ರೀತಿಯ ಸಮಸ್ಯೆಗಳ ಚರ್ಚೆಗೆ ವೇದಿಕೆಯಾಗುತ್ತಿದ್ದ ಸಭೆಯು ಈ ಬಾರಿ ಪದವಿ ವಿದ್ಯಾರ್ಥಿನಿ ಲತಾಕಲಾ ಪ್ರಿಯಾ ಎಂಬವರ ಪ್ರಶ್ನೆಗಳ ಮೂಲಕ ಗಮನ ಸೆಳೆಯಿತು. ಸುಳ್ಯದ ಪ್ರಥಮ ದರ್ಜೆ ಕಾಲೇಜಿನ ಅಂತಿಮ ಬಿ.ಎ. ವಿದ್ಯಾರ್ಥಿನಿ ಪ್ರಶ್ನೆಗಳನ್ನು ಕೇಳುತ್ತಿದ್ದ ಸಂದರ್ಭ ಸಭೆಯಲ್ಲಿದ್ದ ಕೆಲವರು ಇಂತಹ ಪ್ರಶ್ನೆಗಳಿಗೆ ಇಲ್ಲಿ ಅವಕಾಶ ಬೇಡ ಎಂದು ಆಕ್ಷೇಪಿಸಿದರು.
ಆದರೆ ಜಿಲ್ಲಾ ಎಸ್ಪಿ ಡಾ.ಎಸ್.ಡಿ.ಶರಣಪ್ಪ ಅತ್ಯಂತ ತಾಳ್ಮೆಯಿಂದ ಆಲಿಸಿ, ಉತ್ತರಿಸುವ ಮೂಲಕ ವಿದ್ಯಾರ್ಥಿನಿಯನ್ನು ಪ್ರೋತ್ಸಾಹಿಸಿದರು. ವೈಯಕ್ತಿಕವಾಗಿ ಯಾವುದೇ ಜಾತಿ, ಧರ್ಮದ ಬಗ್ಗೆ ನಂಬಿಕೆ ಇಲ್ಲದ ಕಾರಣ ದಲಿತ ಯಾರು ಎಂಬ ಪ್ರಶ್ನೆಗೆ ಉತ್ತರಿಸಲು ನಾನು ಸೂಕ್ತ ವ್ಯಕ್ತಿ ಅಲ್ಲ ಎಂದು ಹೇಳುತ್ತಾ ಸಭೆಯಲ್ಲಿದ್ದವರನ್ನು ಉತ್ತರಿಸುವಂತೆ ಕೋರಿದರು. ದಲಿತರಿಂದ ದಲಿತರಿಗಾಗುವ ಅನ್ಯಾಯದ ಪ್ರಶ್ನೆಗೆ, ನೀವೆಲ್ಲಾ ಇಂತಹ ಪೊಲೀಸ್ ಹುದ್ದೆಗೆ ಸೇರ್ಪಡೆಗೊಳ್ಳಬೇಕು. ಪೊಲೀಸ್ ಇಲಾಖೆಯ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಬೇಕು.
ವಿದ್ಯಾವಂತ, ಪ್ರತಿಭಾವಂತ ಯುವಕ ಯುವತಿಯರಿಗೆ ಅವಕಾಶದ ಕೊರತೆ ಇಲ್ಲ ಎಂದರು. ಪೊಲೀಸ್ ಇಲಾಖೆಗೆ ಸೇರ್ಪಡೆಗೊಳ್ಳಲು ಪರೀಕ್ಷೆಯ ಸಂದರ್ಭ ನಾನಾ ಕಾರಣಗಳನ್ನೊಡ್ಡಿ ಆರಂಭಿಕ ಹಂತದಲ್ಲೇ ಅನರ್ಹಗೊಳಿಸುತ್ತಾರೆಂಬ ದಲಿತ ನಾಯಕರೊಬ್ಬರ ನಿರಾಶೆಯ ಮಾತುಗಳಿಗೆ ಪ್ರತಿಕ್ರಿಯಿಸಿದ ಡಾ.ಶರಣಪ್ಪ, ಈ ಬಾರಿ ಜಿಲ್ಲೆಯಲ್ಲಿ ಪೊಲೀಸ್ ಇಲಾಖೆಯ ಹುದ್ದೆಗಳಿಗೆ ನಡೆದ ನೇಮಕಾತಿಯು ಮೊಬೈಲ್ ವೆಬ್‌ಕಾಸ್ಟಿಂಗ್ ಮೂಲಕ ನಡೆದಿದೆ. ಹಾಗಾಗಿ ನಾಲ್ಕೈದು ಬಾರಿ ಪರೀಕ್ಷೆಗೊಳಪಡಿಸಿ ಅರ್ಹರನ್ನು ಆಯ್ಕೆ ಮಾಡುವ ಪ್ರಕ್ರಿಯೆ ನಡೆದಿದೆ. ಯಾರಿಗೂ ಅನ್ಯಾಯವಾಗಲು ಬಿಟ್ಟಿಲ್ಲ ಎಂದರು.
ಪೊಲೀಸ್ ಹುದ್ದೆಗೆ ದ.ಕ. ಜಿಲ್ಲೆಯ ಅಭ್ಯರ್ಥಿಗಳ ನಿರಾಸಕ್ತಿ:
ಈ ಬಾರಿ ಪೊಲೀಸ್ ಇಲಾಖೆಯ 50 ಹುದ್ದೆಗಳಿಗೆ ಜಿಲ್ಲೆಯಲ್ಲಿ ನಡೆದ ನೇಮಕಾತಿ ಸಂದರ್ಭ 1,238 ಅರ್ಜಿಗಳು ಬಂದಿತ್ತು. ಅದರಲ್ಲಿ 650 ಮಂದಿ ದೈಹಿಕ ಪರೀಕ್ಷೆಗೆ ಹಾಜರಾಗಿದ್ದು, ಉತ್ತೀರ್ಣರಾಗಿರುವವರ ಸಂಖ್ಯೆ 315. ಇದರಲ್ಲಿ ಆಯ್ಕೆಯಾಗುವವರಲ್ಲಿ ದ.ಕ. ಜಿಲ್ಲೆಯವರು ಅತೀ ವಿರಳ. ಇಲಾಖೆಯ ಬಗ್ಗೆ ಪ್ರಥಮವಾಗಿ ಆಸಕ್ತಿ ಬೆಳೆಸಿಕೊಳ್ಳಿ ಎಂದು ಎಸ್ಪಿ ಕರೆ ನೀಡಿದರು. ಜಿಲ್ಲಾ ಮಟ್ಟದ ದಲಿತ ಮಾಸಿಕ ಸಭೆಯಲ್ಲಿ ನಾಗರಿಕ ಹಕ್ಕು ನಿರ್ದೇಶನಾಲಯ, ಅಂಬೇಡ್ಕರ್ ಅಭಿವೃದ್ಧಿ ನಿಗಮ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಭಾಗವಹಿಸಬೇಕೆಂಬ ನಿರ್ದೇಶನವಿದ್ದರೂ ಭಾಗವಹಿಸುತ್ತಿಲ್ಲ. ಈ ಬಗ್ಗೆ ಸರಕಾರಕ್ಕೆ ನಿರ್ಣಯ ಮಾಡಿ ಕಳುಹಿಸಬೇಕೆಂದು ದಲಿತ ನಾಯಕ ಎಸ್.ಪಿ. ಆನಂದ ಸಭೆಯಲ್ಲಿ ಆಗ್ರಹಿಸಿದರು. ಸುಳ್ಯ ತಾಲೂಕಿನಲ್ಲಿ ದಲಿತರೆಂಬ ಮುಖವಾಡ ಹಾಕಿಕೊಂಡು ತೊಂದರೆ ನೀಡುವ ಕೆಲಸ ಕೆಲವರಿಂದ ನಡೆಯುತ್ತಿದೆ ಎಂದು ಸಭೆಯಲ್ಲಿ ಮೋಹನ್ ಎಂಬವರು ದೂರಿದಾಗ, ಈ ಬಗ್ಗೆ ಸಂಘದ ಹಿರಿಯರ ಗಮನಕ್ಕೆ ತಂದಲ್ಲಿ ಸಮಸ್ಯೆ ಬಗೆಹರಿಸಬಹುದು ಎಂದು ಎಸ್ಪಿ ಸೂಚಿಸಿದರು. ಈ ಸಂದರ್ಭ ದಲಿತ ಮುಖಂಡರ ಮಾಹಿತಿ ಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ, ಆಯಾ ಪೊಲೀಸ್ ಠಾಣೆಗಳಲ್ಲಿ ಸಂಗ್ರಹಿಸಿಡುವ ವ್ಯವಸ್ಥೆ ಆಗಬೇಕಾಗಿದೆ ಎಂದು ದಲಿತ ನಾಯಕ ಗೋಪಾಲ ಕಾಡುಮಠ ಅಭಿಪ್ರಾಯಿಸಿದರು.
ಶಾಲಾ ಕಾಲೇಜು ಮಕ್ಕಳ ಸುರಕ್ಷತೆಗಾಗಿ ಕಾರ್ಯಕ್ರಮ:
ಶಾಲಾ ಕಾಲೇಜುಗಳಲ್ಲಿ ರ್ಯಾಗಿಂಗ್, ಲೈಂಗಿಕ ದೌರ್ಜನ್ಯ, ಶಿಕ್ಷಕರಿಂದ ಕಿರುಕುಳ, ಖಾಸಗಿ ಭದ್ರತಾ ಸಿಬ್ಬಂದಿ ನಿಯೋಜನೆ ಸೇರಿದಂತೆ ವಿವಿಧ ರೀತಿಯಲ್ಲಿ ಮಕ್ಕಳ ಸುರಕ್ಷತೆಯ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯಿಂದ ಸೂಕ್ತ ನಿರ್ದೇಶನ, ತರಬೇತಿ, ಮಾಹಿತಿ ಕಾರ್ಯಕ್ರಮ ನಡೆಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಪ್ರಸ್ತುತ ಈ ಕಾರ್ಯ ಪ್ರಾಥಮಿಕ ಹಂತದಲ್ಲಿದೆ ಎಂದು ಮಕ್ಕಳ ಸುರಕ್ಷತೆಯ ಕುರಿತು ಸಭೆಯಲ್ಲಿ ವ್ಯಕ್ತವಾದ ಪ್ರಶ್ನೆಯೊಂದಕ್ಕೆ ಜಿಲ್ಲಾ ಎಸ್ಪಿ ಡಾ.ಶರಣಪ್ಪ ಪ್ರತಿಕ್ರಿಯಿಸಿದರು
