ಕನ್ನಡ ವಾರ್ತೆಗಳು

ಜ.16 ರಿಂದ ಸ್ಪೈಸ್‌ಜೆಟ್ ಹಾರಾಟ ಹುಬ್ಬಳ್ಳಿಗೆ ಸ್ಥಳಾಂತರ

Pinterest LinkedIn Tumblr

spice_jet_photo

ಬೆಳಗಾವಿ,ಜ.06 : ಕುಂದಾನಗರಿಯ ವಿಮಾನಯಾನಿಗಳಿಗೊಂದು ಬೇಸರದ ಸುದ್ದಿ. ಸಾಂಬ್ರಾ ವಿಮಾನ ನಿಲ್ದಾಣದಿಂದ ಸ್ಪೈಸ್ ಜೆಟ್ ಕಂಪನಿಯ ವೈಮಾನಕ ಸೇವೆ ಇನ್ನು ಕೆಲವೇ ದಿನ ಮಾತ್ರ. ಆ ನಂತರ ಈ ನಿಲ್ದಾಣ ಮತ್ತೆ ವಾಯುಪಡೆ ಯೋಧರ ತರಬೇತಿಗೆ ಹಾಗೂ ಆಗೀಗ ಆಗಮಿಸುವ ಗಣ್ಯರ ವಿಮಾನ ಇಳಿಯಲು ಮಾತ್ರ ಸೀಮಿತಗೊಳ್ಳಲಿದೆ.ಎರಡು ವರ್ಷ ಹಿಂದಷ್ಟೇ ಸಾಂಬ್ರಾ ವಿಮಾನ ನಿಲ್ದಾಣದಿಂದ (2012 ನವೆಂಬರ್ 22) ಸ್ಪೈಸ್‌ಜೆಟ್ ಬೆಂಗಳೂರು, ಮುಂಬೈಗಳಿಗೆ ವಿಮಾನ ಸೇವೆ ಪ್ರಾರಂಭಿಸಿತ್ತು. ಆ ಸೇವೆ ಇದೇ ಜನವರಿ 15 ರಂದು ಸ್ಥಗಿತಗೊಳ್ಳಲಿದೆ.

ಆದರೆ, ಜ.16ರಿಂದ ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ವಿಮಾನ ಸೇವೆ ಪುನಾರಂಭವಾಗಲಿದೆ. ಹುಬ್ಬಳ್ಳಿಯಿಂದ ಕಾರ್ಯ ನಿರ್ವಹಿಸಿದಲ್ಲಿ ಸುತ್ತಮುತ್ತಲಿನ ನಗರ, ಪಟ್ಟಣಗಳಿಂದ ಹೆಚ್ಚಿನ ಪ್ರಯಾಣಿಕರು ಸಿಗುತ್ತಾರೆ. ಹುಬ್ಬಳ್ಳಿ ವಿಮಾನ ನಿಲ್ದಾಣ ನಿರ್ವಹಣೆ ಕಾಮಗಾರಿ ಇದ್ದುದರಿಂದ ಅಲ್ಲಿ ವಿಮಾನ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಆ ಹಿನ್ನೆಲೆಯಲ್ಲಿ ಬೆಳಗಾವಿಯಿಂದ ಕಾರ್ಯ ನಿರ್ವಹಿಸಲಾಗುತ್ತಿತ್ತು.ಇದೀಗ ಮತ್ತೆ ಹುಬ್ಬಳ್ಳಿಯಿಂದಲೇ ವಿಮಾನ ಯಾನ ಆರಂಭಿಸಲಾಗುವುದು ಎಂದು ಸ್ಪೈಸ್ ಜೆಟ್ ಕಂಪನಿಯ ಅಧಿಕಾರಿ ತಿಳಿಸಿದ್ದಾರೆ.  ಸಾಂಬ್ರಾ ವಿಮಾನ ನಿಲ್ದಾಣ ಅಭಿವೃದ್ಧಿಗಾಗಿ ಭಾರತೀಯ ವಿಮಾನಯಾನ ಪ್ರಾಧಿಕಾರ (141.87ಕೋಟಿ) ಮತ್ತು ರಕ್ಷಣಾ ಇಲಾಖೆ (151.48 ಕೋಟಿ) ಸಹಭಾಗಿತ್ವದಲ್ಲಿ ಅಭಿವೃದ್ಧಿ ಪಡಿಸಲು ಕೇಂದ್ರ ಸಕಾಂರ 293.35 ಕೋಟಿ ಅನುದಾನ ಮಂಜೂರು ಮಾಡಿದ್ದರೂ ನಿಲ್ದಾಣದ ರನ್‌ವೇಯನ್ನು 1830 ಮೀಟರ್‌ಗೆ ವಿಸ್ತರಿಸುವ ಹಾಗೂ 45 ಮೀಟರ್ ಅಗಲೀಕರಣಗೊಳಿಸುವ ಕಾಮಗಾರಿ ನನೆಗುದಿಗೆ ಬಿದ್ದಿದೆ.

ಬೆಳಗಾವಿಯಿಂದ ವಿಮಾನ ಓಡಿಸುವ ನಿರ್ಧಾರ ಸ್ಪೈಸ್‌ಜೆಟ್ ಕಂಪನಿಯದ್ದು, ಲಾಭ ನಷ್ಟದ ಆಧಾರದಲ್ಲಿ ಅವರು ನಿರ್ಧಾರ ಕೈಗೊಳ್ಳುತ್ತಾರೆ. ವಿಮಾನ ನಿಲ್ದಾಣ ಅಭಿವೃದ್ಧಿಗಾಗಿ ಕರೆಯಲಾಗಿರುವ ಟೆಂಡರ್ ಪ್ರಕ್ರಿಯೆ ಕೊನೆ ಹಂತದಲ್ಲಿ ಇದ್ದು, ವಿಮಾನ ನಿಲ್ದಾಣ ಮೇಲ್ದರ್ಜೆಗೆ ಏರಿಸುವ ಕಾಮಗಾರಿ ಫೆಬ್ರವರಿ ಕೊನೆ ಅಥವಾ ಮಾರ್ಚ್ ಮೊದಲ ವಾರದಲ್ಲಿ ಆರಂಭವಾಗುವ ನಿರೀಕ್ಷೆ ಇದೆ.

Write A Comment