ಮಂಗಳೂರು, ಜ.5 : ಮಂಗಳೂರು ಕೆಥೊಲಿಕ್ ಧರ್ಮಪ್ರಾಂತದ ವಾರ್ಷಿಕ ಪರಮ ಪ್ರಸಾದ ಮೆರವಣಿಗೆ ಬಿಷಪ್ ಅ.ವಂ. ಡಾ.ಅಲೋಶಿಯಸ್ ಪಾವ್ಲ್ ಡಿಸೋಜ ನೇತೃತ್ವದಲ್ಲಿ ರವಿವಾರ ನಡೆಯಿತು. ಮಿಲಾಗ್ರಿಸ್ ಚರ್ಚ್‌ನಿಂದ ರೊಸಾರಿಯೊ ಕೆಥೆಡ್ರಲ್ ಚರ್ಚ್ ತನಕ ಸಾಗಿದ ಮೆರವಣಿಗೆಯಲ್ಲಿ ಭಾರೀ ಸಂಖ್ಯೆಯಲ್ಲಿ ಕ್ರೈಸ್ತರು ಭಾಗವಹಿಸಿದ್ದರು.
ಜ.14ರಂದು ಸಂತ ಪದವಿ ಗೇರಲಿರುವ ಗಂಗೊಳ್ಳಿ ಮತ್ತು ಪಾನೀರ್ ಚರ್ಚ್‌ಗಳಲ್ಲಿ 1681- 1684 ವರ್ಷಗಳ ಅವಧಿಯಲ್ಲಿ ಸೇವೆ ಸಲ್ಲಿಸಿದ್ದ ಧರ್ಮಗುರು ಜೋಸಫ್ ವಾಝ್‌ರ ಪ್ರತಿಮೆಯ ಮೆರವಣಿಗೆ ಈ ವರ್ಷದ ಕಾರ್ಯಕ್ರಮದ ವಿಶೇಷತೆ. ಮಿಲಾಗ್ರಿಸ್ ಚರ್ಚ್‌ನಲ್ಲಿ ಬಿಷಪ್ ನೇತೃತ್ವದಲ್ಲಿ ಬಲಿ ಪೂಜೆಯ ಬಳಿಕ ಪರಮ ಪ್ರಸಾದದ ಮೆರವಣಿಗೆ ಆರಂಭವಾಯಿತು. ರೊಸಾರಿಯೋ ಕೆಥೆಡ್ರಲ್ ಚರ್ಚ್ ಆವರಣದಲ್ಲಿ ಪರಮ ಪ್ರಸಾದದ ಆರಾಧನೆ ನಡೆಯಿತು. ರೇ.ದೀ ಫೆರ್ನಾಡಿಸ್ ಬೈಬಲ್ ವಾಚಿಸಿ ಪ್ರವಚನ ನೀಡಿದರು. ಬಿಷಪ್ ತಮ್ಮ ಸಂದೇಶದಲ್ಲಿ 2015ನೆ ವರ್ಷವನ್ನು ‘ಅರ್ಪಣಾ ಮನೋಭಾವದ ಜೀವನ’ ವರ್ಷ ಎಂಬುದಾಗಿ ಆಚರಿಸಲಾಗುವುದು. ಹೊಸ ವರ್ಷವು ಶಾಂತಿ, ಪ್ರೀತಿ ಮತ್ತು ಭದ್ರತೆ ತರಲಿ ಎಂದು ಹಾರೈಸಿದರು.
ಪ್ರತಿಮೆ ಆಶೀರ್ವಚನ: ಪುನೀತ ಜೋಸಫ್ ವಾಝ್‌ರ ಪ್ರತಿಮೆ ಯನ್ನು ಬಿಷಪ್ ಆಶೀರ್ವಚನ ಮಾಡಿ ಅದನ್ನು ಮುಡಿಪು ವಲಯದ ಪ್ರಧಾನ ಗುರು ಗ್ರೆಗರಿ ಡಿಸೋಜ ಮತ್ತು ಪಾನೀರ್ ದಯಾ ಮಾತೆ ಚರ್ಚ್ ನ ಧರ್ಮಗುರು .ವಿನ್ಸೆಂಟ್ ಡಿಸೋಜರಿಗೆ ಹಸ್ತಾಂತರಿಸಿದರು. ಬಳಿಕ ಪ್ರತಿಮೆಯನ್ನು ಪಾನೀರ್ ಚರ್ಚ್‌ಗೆ ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು. ಜ.5ರಿಂದ ಜ.8ರ ತನಕ ಅಲ್ಲಿ ಪ್ರತೀ ದಿನ ಸಂಜೆ 5ರಿಂದ 6 ಗಂಟೆ ತನಕ ನೊವೇನಾ ಪ್ರಾರ್ಥನೆ ನಡೆಯಲಿದೆ ಹಾಗೂ ಜ.9ರಂದು ಅದನ್ನು ಪಾನೀರ್ ಚರ್ಚ್‌ನಿಂದ ಮುಡಿಪು ಜೋಸಫ್ ವಾಝ್ ಪುಣ್ಯ ಕ್ಷೇತ್ರಕ್ಕೆ ಕೊಂಡೊಯ್ಯಲಾಗುವುದು. ಜೋಸಫ್ ವಾಝ್‌ರನ್ನು ಸಂತ ರೆಂದು ಘೋಷಿಸುವ ಜ.14ರಿಂದ 16ರ ತನಕ ಮುಡಿಪು ಕ್ಷೇತ್ರದಲ್ಲಿ ವಿವಿಧ ಕಾರ್ಯಕ್ರಮಗಳು ಜರಗಲಿವೆ.














