ಕನ್ನಡ ವಾರ್ತೆಗಳು

ಸಮಾಜದಲ್ಲಿ ಜಾತಿ ಜಾತಿಗಳ ನಡುವೆ ಸಂಘರ್ಷ ಸೃಷ್ಟಿಸುವ ವ್ಯವಸ್ಥಿತ ಹುನ್ನಾರ ನಡೆಯುತ್ತಿದೆ; ಜಿ.ಭಾಸ್ಕರ ಮಯ್ಯ

Pinterest LinkedIn Tumblr

ಕುಂದಾಪುರ: ಜಾತ್ಯಾತೀತ ಎನ್ನುವ ಮೂಲಕವೇ ಸಮಾಜದಲ್ಲಿ ಜಾತಿ ಜಾತಿಗಳ ನಡುವೆ ಸಂಘರ್ಷ ಸೃಷ್ಟಿಸುವ ವ್ಯವಸ್ಥಿತ ಹುನ್ನಾರಗಳು ನಡೆಯುತ್ತಿದ್ದು, ಇದಕ್ಕೆ ಜಾತ್ಯಾತೀತೆಯ ಸ್ಪಷ್ಟ ವ್ಯಾಖ್ಯಾನದ ಅರಿವಿಲ್ಲದಿರುವುದು ಕೂಡಾ ಕಾರಣವಾಗಿದೆ. ಪ್ರತಿಯೊಬ್ಬರು ದಿನ ನಿತ್ಯವೂ ಉಪಯೋಗಿಸುವ ಈ ಶಬ್ದದ ಖಚಿತ ಅರ್ಥವನ್ನು ಕೆದುಕುತ್ತಾ ಹೋಗದೇ ಇದರ ಸಾಧಕ ಬಾಧಕಗಳ ಬಗ್ಗೆ ವಿಮರ್ಶಿಸುತ್ತಾ ಹಾಗೇಯೇ ಉಪಯೋಗಿಸುವುದು ಒಳಿತು ಎಂದು ವಿಚಾರವಾದಿ, ನಿವೃತ್ತ ಪ್ರಾಧ್ಯಾಪಕ ಜಿ.ಭಾಸ್ಕರ ಮಯ್ಯ ಹೇಳಿದರು.

SFI_Taluku_Sammelana

ಕುಂದಾಪುರ ಕಾರ್ಮಿಕ ಭವನದಲ್ಲಿ ರವಿವಾರ ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್.ಎಫ್.ಐ) ಆಶ್ರಯದಲ್ಲಿ ನಡೆದ ತಾಲೂಕು ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.

ಪ್ರಸ್ತುತ ಪರಿಸ್ಥಿತಿಯಲ್ಲಿ ಜಾತಿ ಹಾಗೂ ಧರ್ಮಗಳ ನಡುವೆ ವಿಷಬೀಜ ಬಿತ್ತುವುದರ ಜೊತೆಗೆ ಎತ್ತಿ ಕಟ್ಟುವ ಕ್ಷುಲ್ಲಕ ಮನೋಭಾವ ಹೆಚ್ಚಾಗುತ್ತಿದೆ. ಇದರಿಂದಾಗಿ ಪ್ರತಿಯೊಬ್ಬರೂ ಮಾನಸಿಕ ನೆಮ್ಮದಿ ಕಳೆದುಕೊಳ್ಳುವಂತಾಗಿದೆ. ಮಹಾತ್ಮಾ ಗಾಂಧೀಯವರು ಜಾತ್ಯಾತೀತ ನಾಯಕರೆನ್ನಿಸಿಕೊಂಡಂತೆಯೇ ಕೆಲವೊಂದು ಬಾರಿ ಸ್ವಜಾತಿ ಪ್ರೀತಿ ಅವರನ್ನು ಕಾಡುತ್ತಿತ್ತು. ಅದೇ ಕಾರಣಕ್ಕೆ ಮಹಮ್ಮದ್ ಆಲಿ ಜಿನ್ನಾ ಹಾಗೂ ಗಾಂಧೀಜಿಯ ನಡುವೆ ಕೆಲವು ಬಾರಿ ಸಂಘರ್ಷಗಳೂ ನಡೆದದ್ದೂ ಇದೆ. ಅದೇ ಸಂಪ್ರದಾಯ ಮುಂದಕ್ಕೂ ಬೆಳೆಯುತ್ತಾ ಬಂದಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಅಧ್ಯಯನಶೀಲರಾಗಬೇಕು. ಆ ಮೂಲಕ ವಾಸ್ತವ ಜಗತ್ತನ್ನು ಅರ್ಥಮಾಡಿಕೊಳ್ಳಬೇಕು. ಜೊತೆಗೆ ಸಾಮಾಜಿಕವಾಗಿ ಬಲಿಷ್ಟವಾಗಿರುವ ಸಂಘಟನೆಯನ್ನು ರೂಪುಗೊಳಿಸಬೇಕು. ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ರಾಷ್ಟ್ರಾಭಿಮಾನಿಗಳಾಗಿ ರೂಪುಗೊಳ್ಳಬೇಕೆ ಹೊರತು ಯಾವುದೇ ಧರ್ಮದ, ಜಾತಿಯ ಅನುಯಾಯಿಗಳಾಗಬಾರದು. ಹಾಗಾದಾಗ ಮಾತ್ರ ಉತ್ತಮ ಸಮಾಜದ ನಿರ್ಮಾಣ ಸಾಧ್ಯ ಎಂದವರು ಹೇಳಿದರು.

ಎಸ್.ಎಫ್.ಐ ರಾಜ್ಯ ಕಾರ್ಯದರ್ಶಿ ಗುರುರಾಜ ದೇಸಾಯಿ ಮಾತನಾಡಿ, ಕರ್ನಾಟಕದಲ್ಲಿ ರಾಮಕೃಷ್ಣ ಹೆಗ್ಗಡೆ ಸರ್ಕಾರ ಚಾಲನೆ ನೀಡಿದ ಶಿಕ್ಷಣ ಖಾಸಗೀಕರಣ ಪ್ರಕ್ರಿಯೆ ಇಂದು ರಾಜ್ಯದಲ್ಲಿ ಖಾಸಗಿ ಶಾಲೆಗಳನ್ನು ಹೆಚ್ಚುವಂತೆ ಮಾಡಿದೆ. ಪರಿಣಾಮವಾಗಿ ಈಗ ೨೨ ಸಾವಿರ ಖಾಸಗಿ ಶಿಕ್ಷಣ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದ್ದು, ಇದರಲ್ಲಿ ಬಹುತೇಕ ನಮ್ಮ ಶಾಸಕರ ಒಡೆತನದಲ್ಲಿರುವುದು ವಿಪರ್ಯಾಸ. ಒಟ್ಟಾರೆ ಶಿಕ್ಷಣ ಇಂದು ಮಾರಾಟದ ಸರಕಾಗಿ ಬಿಟ್ಟಿದೆ ಎನ್ನುವುದು ಖಾತ್ರಿಯಾಗಿದೆ ಎಂದು ಆರೋಪಿಸಿದರು.

ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್.ಎಫ್.ಐ) ತಾಲೂಕು ಅಧ್ಯಕ್ಷ ಗಣೇಶ್ ದಾಸ್ ಅವರು ಧ್ವಜಾರೋಹಣ ಗೈದರು. ಮುಖ್ಯ ಅತಿಥಿಗಳಾಗಿ ಎಸ್.ಎಫ್.ಐ ರಾಜ್ಯ ಕಾರ್ಯದರ್ಶಿ ಗುರುರಾಜ ದೇಸಾಯಿ, ಎಸ್.ಎಫ್.ಐ ಮಾಜಿ ಮುಖಂಡ ನಾಸೀರ್, ಡಿ.ವೈ.ಎಫ್.ಐ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ರಾಜೇಶ್ ವಡೇರಹೋಬಳಿ, ಎಸ್.ಎಫ್.ಐ ರಾಜ್ಯ ಸಮಿತಿಯ ಸದಸ್ಯ ಶ್ರೀಕಾಂತ ಹೆಮ್ಮಾಡಿ, ಮುಖಂಡರುಗಳಾದ ಸುರೇಶ್ ಕಲ್ಲಾಗರ, ನರಸಿಂಹ ಎಚ್. ಉಪಸ್ಥಿತರಿದ್ದರು.

ಸಮ್ಮೇಳನಕ್ಕೆ ಮುನ್ನ ಕಳೆದ ವರ್ಷ ಮರಣವನ್ನಪ್ಪಿದ ವಿದ್ಯಾರ್ಥಿಗಳಾದ ಪಶ್ಚಿಮ ಬಂಗಾಳದ ಎಸ್.ಎಫ್.ಐ. ಹಾಗೂ ಡಿವೈ‌ಎಫ್‌ಐ ಕಾರ್ಯಕರ್ತರಿಗೆ, ಸುಪ್ರಿತಾ ಪೂಜಾರಿ, ರತ್ನಾ ಕೊಠಾರಿ, ನಂದಿತಾ ಹಾಗೂ ಪ್ರಗತಿ ಪರ ಚಿಂತಕ ಯು. ಆರ್. ಅನಂತ ಮೂರ್ತಿಯವರಯ ಆತ್ಮಕ್ಕೆ ಚಿರಶಾಂತಿ ಕೋರಿ ಮೌನ ಪ್ರಾರ್ಥನೆ ಮೂಲಕ ಶ್ರದ್ದಾಂಜಲಿ ಸಲ್ಲಿಸಲಾಯಿತು. ಅಕ್ಷಯ್ ಸ್ವಾಗತಿಸಿದರು. ಆಪ್ರಿನ್ ಕಾರ್ಯಕ್ರಮ ನಿರ್ವಹಿಸಿದರು.

ಸಮ್ಮೇಳನದಲ್ಲಿ ನಿರ್ಣಯಿಸಿದ ಬೇಡಿಕೆಗಳು : ಎಸ್.ಎಫ್.ಐ ಸಂಘಟನೆ ಗಟ್ಟಿಗೊಳಿಸುವುದು, ರತ್ನಾ ಕೊಠಾರಿ ನಿಗೂಢ ಸಾವಿನ ಪ್ರಕರಣವನ್ನು ಭೇದಿಸಲು ಸರ್ಕಾರ ಇಲಾಖೆಯ ಮೇಲೆ ಒತ್ತಡ ತರಲು ಆಗ್ರಹ, ಖಾಸಗೀ ಕಾಲೇಜುಗಳ ಡೊನೇಶನ್ ಹಾವಳಿ ತಡೆಗಟ್ಟುವಂತೆ ಕ್ರಮಕ್ಕೆ ಒತ್ತಾಯ, ಜಿಲ್ಲಾ ಶಿಕ್ಷಣ ರೆಗ್ಯೂಲೇಟಿಂಗ್ ಪ್ರಾಧಿಕಾರ ರಚನೆಗೆ ಒತ್ತಾಯ, ವಿದ್ಯಾರ್ಥಿಗಳಿಗಾಗಿ ಹೆಚ್ಚುವರಿ ಸರ್ಕಾರೀ ಬಸ್ ಒತ್ತಾಯ, ಶಿಕ್ಷಣ ಪದ್ಧತಿಯ ಅಮೂಲಾಗ್ರ ಬದಲಾವಣೆಗೆ ಆಗ್ರಹ, ವಸತಿ ನಿಲಯಗಳ ಬಲವರ್ಧನೆಗೆ ಕ್ರಮಕ್ಕೆ ಆಗ್ರಹ – ಇವು ತಾಲೂಕು ಸಮ್ಮೇಳನದಲ್ಲಿ ಚರ್ಚಿತವಾದ ಪ್ರಮುಖ ಅಂಶಗಳು

Write A Comment