ಕನ್ನಡ ವಾರ್ತೆಗಳು

ರಾಜ್ಯ ಮಟ್ಟದ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಕಲಬುರ್ಗಿ ಆಕಾಶವಾಣಿ ಪ್ರಥಮ ಸ್ಥಾನ

Pinterest LinkedIn Tumblr

air_quiaz_photo_2

ಮಂಗಳೂರು,ಜ.03 : ರಾಷ್ಟ್ರೀಯ ಯುವದಿನದ ಅಂಗವಾಗಿ ಆಕಾಶವಾಣಿ ಮಂಗಳೂರು ಕೇಂದ್ರವು ಆಯೋಜಿದ್ದ ರಾಜ್ಯ ಮಟ್ಟದ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಕಲಬುರ್ಗಿ ಆಕಾಶವಾಣಿ ತಂಡವು ಪ್ರಥಮ ಬಹುಮಾನ ಪಡೆದಿದೆ. ರಾಜ್ಯದಿಂದ 13  ಆಕಾಶವಾಣಿ ತಂಡಗಳು ಭಾಗವಹಿಸಿದ್ದವು. ಕಲಬುರ್ಗಿ ಆಕಾಶವಾಣಿಯನ್ನು ಮಲ್ಲಿಕಾರ್ಜುನ ಸಿ. ತಿರುಮಲೆ ಹಾಗೂ ಸಂತೋಷಕುಮಾರ ಬಿ. ನಿಪ್ಪಾಣಿ ಪ್ರತಿನಿಧಿಸಿದ್ದರು. ಆಕಾಶವಾಣಿ ಮಂಗಳೂರು ಕೇಂದ್ರವನ್ನು ಪ್ರತಿನಿಧಿಸಿದ್ದ ಎಕ್ಸಪರ್ಟ್ ಕಾಲೇಜಿನ ವಿಧ್ಯಾರ್ಥಿಗಳಾದ ಐವಾಸ್ ಅಹಮದ್ ಎನ್. ಎ ಮತ್ತು ವರುಣ ಶ್ರೇಯಸ್ ಹಾಗೂ ಆಕಾಶವಾಣಿ ಚಿತ್ರದುರ್ಗ ಕೇಂದ್ರವನ್ನು ಪ್ರತಿನಿಧಿಸಿದ್ದ ಅಣ್ಣಪ್ಪಸ್ವಾಮಿ ಎಮ್ ಮತ್ತು ವೆಂಕಟೇಶ ಎಸ್ ಅವರು ದ್ವಿತೀಯ ಸ್ಥಾನವನ್ನು ಹಂಚಿಕೊಂಡರು. ಮಡಿಕೇರಿ ತಂಡವು ತೃತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು.

ಪ್ರಶ್ನಾವಳಿ ಸುತ್ತು, ಕ್ಷಿಪ್ರ ಸುತ್ತು, ವಾಕ್ಯ ಸರಿ-ತಪ್ಪು ಸುತ್ತು, ಬಹು‌ಆಯ್ಕೆ ಸುತ್ತು, ಧ್ವನಿಸುರುಳಿ ಸುತ್ತು ಎಂದು ವಿವಿಧ ಹಂತದಲ್ಲಿ, ವಿವಿಧ ರೀತಿಯಲ್ಲಿ ಒಟ್ಟು 7  ಹಂತದಲ್ಲಿ ಜರುಗಿಸಲಾಗಿತ್ತು. ಅಂತಿಮ ಹಂತದವರೆಗೂ ಮೊದಲ ಸ್ಥಾನಕ್ಕೆ ತೀವೃ ಪೈಪೋಟಿ ಏರ್ಪಟ್ಟು ಕಲಬುರ್ಗಿ ಆಕಾಶವಾಣಿ ತಂಡ ಮೊದಲ ಸ್ಥಾನವನ್ನುಗಳಿಸುವಲ್ಲಿ ಯಶಸ್ವಿಯಾಯಿತು. ಪ್ರದೀಪ್ ಆನಂದ ಶೆಟ್ಟಿ, ಬಿ. ರಾಮಚಂದ್ರರಾವ್ ಮತ್ತು ಕೆ. ಅಶೋಕ ಅವರು ರಸಪ್ರಶ್ನೆ ನಡೆಸಿಕೊಟ್ಟರು. ಸ್ಕೋರರ್ ಶ್ವೇತಾ ಅನಿಲ್ ಅವರು ಕರ್ತವ್ಯ ನಿರ್ವಹಿಸಿದರು.

ಶುಕ್ರವಾರದಂದು ಮಂಗಳೂರಿನ ಯುನಿವರ್ಸಿಟಿ ಕಾಲೇಜ್‌ನ ಆವರಣದಲ್ಲಿರುವ ರವೀಂದ್ರ ಕಲಾಭವನದಲ್ಲಿ ಮುಂಜಾನೆಯಿಂದ ರಸಪ್ರಶ್ನೆ ಸುತ್ತುಗಳು ಆರಂಭವಾಯಿತು. ಸಮಾರಂಭದ ಉದ್ಘಾಟನೆಯನ್ನು ರಾಜ್ಯ ಕನ್ನಡ ಸಾಹಿತ್ಯ ಪರಿಷತ್‌ನ ಮಾಜಿ ಅಧ್ಯಕ್ಷರಾದ ಧರ್ಮದರ್ಶಿ ಹರಿಕೃಷ್ಣ ಪುನರೂರು ನೆರವೇರಿಸಿದರು. ಯುವಕರು ನಮ್ಮ ದೇಶವನ್ನು ಕಟ್ಟಬೇಕು. ಬಲಿಷ್ಟ ರಾಷ್ಟ್ರವನ್ನು ಕಟ್ಟುವಂತಾದಾಗ ನಮ್ಮ ದೇಶ ಮುಂದುವರೆಯಲು ಸಾಧ್ಯ ಎಂದು ತಮ್ಮ ಉದ್ಘಾಟನಾ ಭಾಷಣದಲ್ಲಿ ತಿಳಿಸಿದರು.

air_quiaz_photo_1

ಆಕಾಶವಾಣಿಯು ವಿನೂತನ ಪ್ರಯೋಗಗಳನ್ನು ಮಾಡುತ್ತ, ಇಂತಹ ಸಮಾಜಮುಖಿ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸುತ್ತಿರುವದು ನಮಗೆಲ್ಲಾ ಹೆಮ್ಮೆ ತಂದಿದೆ. ಇಲ್ಲಿ ಸೋಲು ಗೆಲುವು ಮುಖ್ಯವಲ್ಲ. ಭಾಗವಹಿಸುವಿಕೆ ಹಾಗೂ ರಾಜ್ಯದ ವಿವಿಧ ಕಡೆಗಳಿಂದ ಬಂದಿರುವುದೇ ನಿಮ್ಮ ಮುಖ್ಯ ಸಾಧನೆ ಎಂದು ಮುಖ್ಯ ಅತಿಥಿಯಾಗಿ ಆಗಮಿಸಿದ್ದ ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತು ಮತ್ತು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷರಾದ ಪ್ರದೀಪಕುಮಾರ ಕಲ್ಕೂರ ನುಡಿದರು.

ಸಮಾರಂಭದ ಅಧ್ಯಕ್ಷ ಸ್ಥಾನ ವಹಿಸಿದ್ದ ನಿಲಯದ ಸಹಾಯಕ ನಿರ್ದೇಶಕರಾದ ಡಾ ವಸಂತಕುಮಾರ ಪೆರ್ಲ ಅವರು ರಾಷ್ಟ್ರೀಯ ಯುವದಿನದ ಅಂಗವಾಗಿ ರಾಜ್ಯ ಮಟ್ಟದ ರಸಪ್ರಶ್ನೆ ಇಲ್ಲಿ ಆಗುತ್ತಿರುವದು ನಮಗೆಲ್ಲಾ ಹೆಮ್ಮೆ ತಂದಿದೆ. ನಮ್ಮ ರಚನಾತ್ಮಕ ಕಾರ್ಯಕ್ರಮದಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ. ಆಕಾಶವಾಣಿಯು ಎಲ್ಲಾ ವಯೋಮಾನದವರಿಗಾಗಿ ಹಲವಾರು ವಿಭಿನ್ನ ಕಾರ್ಯಕ್ರಮಗಳನ್ನು ಬಿತ್ತರಿಸುತ್ತದೆ. ತಾವು ಅದರಲ್ಲಿ ಪಾಲ್ಗೊಂಡಾಗ ನಮ್ಮ ಕೆಲಸ ಸಾರ್ಥಕವಾಗುತ್ತದೆ. ದೇಶದ ಶೇ. 98  ಜನರನ್ನು ತಲುಪುವ ಏಕೈಕ ಮಾಧ್ಯಮ ಆಕಾಶವಾಣಿ, ಆದ ಕಾರಣ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮನ್’ಕಿ ಬಾತ್’, ಕಾರ್ಯಕ್ರಮಕ್ಕೆ ಆಕಾಶವಾಣಿಯನ್ನು ಬಳಸಿಕೊಂಡಿರುವದು ಎಂದು ನುಡಿದರು.

air_quiaz_photo_3

ಬೆಂಗಳೂರು, ಧಾರವಾಡ, ಕಲಬುರ್ಗಿ, ಭದ್ರಾವತಿ, ಮೈಸೂರು, ಹಾಸನ, ಮಡಿಕೇರಿ, ಹೊಸಪೇಟೆ, ಕಾರವಾರ, ರಾಯಚೂರು, ವಿಜಯಪುರ, ಚಿತ್ರದುರ್ಗ ಹಾಗೂ ಮಂಗಳೂರು ತಂಡಗಳು ಭಾಗವಹಿಸಿದ್ದವು. ಸದಾನಂದ ಹೊಳ್ಳ ಸರ್ವರನ್ನು ಸ್ವಾಗತಿಸಿದರು. ಕೆ. ಅಶೋಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ ಸದಾನಂದ ಪೆರ್ಲ ವಂದನಾರ್ಪಣೆ ಮಾಡಿದರು. ಡಾ. ಶರಭೇಂದ್ರ ಸ್ವಾಮಿ ಕಾರ್ಯಕ್ರಮ ನಿರ್ವಹಿಸಿದರು. ಕಾಲೇಜಿನ ವಿದ್ಯಾರ್ಥಿಗಳು, ಸಾರ್ವಜನಿಕರಿಂದ ಕಾರ್ಯಕ್ರಮ ಮೆಚ್ಚುಗೆ ಪಡೆಯಿತು.

Write A Comment