ಕನ್ನಡ ವಾರ್ತೆಗಳು

ಅಧಿಕಾರ ಸ್ವೀಕರಿಸಿದ ಒಂದೇ ದಿನದಲ್ಲಿ ಪೌರಕಾರ್ಮಿಕರನ್ನು ಎದುರು ಹಾಕಿ ಕೊಂಡ ಮನಪಾ ಕಮಿಷನರ್

Pinterest LinkedIn Tumblr

mcc_new_offcer_drga

ಮಂಗಳೂರು, ಜ.3 : ದಲಿತ ಸಂಘಟನೆಗಳ ಮನವಿಯ ಮೇರೆಗೆ ಜಪ್ಪು ಮಹಾಕಾಳಿ ಪಡ್ಪುವಿನ ಪೌರ ಕಾರ್ಮಿಕರ ವಸತಿ ನಿಲಯದ ಪರಿಶೀಲನೆಗೆ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ನಾರಾಯಣ ಇಂದು ಭೇಟಿ ನೀಡಿದ್ದರು.ಈ ಸಂದರ್ಭ ಅವರ ಜತೆಯಲ್ಲಿದ್ದ ಮನಪಾದ ನೂತನ ಆಯುಕ್ತೆ ಹೆಫ್ಸಿಬಾ ರಾಣಿ ಕೊರ್ಲಪತಿಯವರು ಪೌರ ಕಾರ್ಮಿಕರ ಮನೆಯೊಳಗೆ ಪ್ರವೇಶಿಸಲು ನಿರಾಕರಿಸಿದ ಘಟನೆ ನಡೆಯಿತು.

ಪೌರ ಕಾರ್ಮಿಕ ಕಾಲನಿಯ ಮನೆಯೊಳಗೆ ಭೇಟಿ ನೀಡಲು ಹೆಫ್ಸಿಬಾ ರಾಣಿ ಕೊರ್ಲಪತಿ ಯವರನ್ನು ಕೋರಿಕೊಂಡಾಗ ಅವರು ನಿರಾಕರಿಸಿ, ‘‘ನಾನು ಫೈಲ್ ನೋಡಿಕೊಂಡು ಭೇಟಿ ನೀಡುತ್ತೇನೆ’’ ಎಂದರು. ಈ ವೇಳೆ ಆಯೋಗದ ಅಧ್ಯಕ್ಷ ನಾರಾಯಣ ಅವರು ಪರಿಪರಿಯಾಗಿ ಕೋರಿಕೊಂಡರೂ ಅದೇ ಉತ್ತರವನ್ನು ನೀಡಿದರು.

ಬಳಿಕ ಆಯೋಗದ ಅಧ್ಯಕ್ಷರು ತಾವೇ ಸಹ ಅಧಿಕಾರಿಗಳ ಜತೆ ವಸತಿ ನಿಲಯವನ್ನು ವೀಕ್ಷಿಸತೊಡಗಿದರು. ಈ ಸಂದರ್ಭ ಸ್ಥಳೀಯ ಮಹಿಳಾ ನಿವಾಸಿಗಳು ತಮ್ಮ ಮನೆಗಳಿಗೆ ಭೇಟಿ ನೀಡಿ ಪರಿಶೀಲಿಸುವಂತೆ ಆಯುಕ್ತೆಯನ್ನು ಕೋರಿ ಕೊಂಡರು. ಆದರೆ ಆಯುಕ್ತೆ ತಮಗೆ ಬಂದ ಮೊಬೈಲ್ ಕರೆಯಲ್ಲಿ ತಲ್ಲೀನರಾಗಿದ್ದರು. ಇದರಿಂದ ಆಕ್ರೋಶಗೊಂಡ ಸ್ಥಳೀಯ ಮಹಿಳೆಯರು, ‘‘ನೀವು ಮತ್ತೆ ಯಾವಾಗ ಬರುವುದು. ಈಗ ಬಂದಿರುವಾಗ ಮನೆಯೊಳಗಿನ ನಮ್ಮ ಸ್ಥಿತಿಯನ್ನು ನೋಡುವುದರಲ್ಲೇನು ನಿಮಗೆ ಸಮಸ್ಯೆ’’ ಎಂದು ಒತ್ತಾಯಿಸಿದರು.

ಈ ಸಂದರ್ಭ ‘‘ನಾನು ಬೆಳಗ್ಗೆ 6 ಗಂಟೆಗೆ ಬಂದು ನೋಡುತ್ತೇನೆ. ಫೈಲ್ ನೋಡಿಕೊಂಡು ಬರುತ್ತೇನೆ’’ ಎಂದು ಮತ್ತೆ ಅದೇ ಉತ್ತರವನ್ನು ಹೆಫ್ಸಿಬಾ ರಾಣಿ ನೀಡಿದರು. ಅಷ್ಟೊತ್ತಿಗೆ ವಸತಿ ನಿಲಯ ವೀಕ್ಷಿಸಿ ಬಂದ ಆಯೋಗದ ಅಧ್ಯಕ್ಷರು ಅಲ್ಲಿಗೆ ಬಂದರು. ಅವರು ಮತ್ತೆ ಮಹಿಳೆಯರ ಕೋರಿಕೆಯ ಮೇರೆಗೆ ಮಾನವೀಯತೆಯ ದೃಷ್ಟಿ ಯಿಂದಾದರೂ ಒಂದು ಬಾರಿ ಭೇಟಿ ನೀಡಿ ಎಂದು ಆಯುಕ್ತೆಯನ್ನು ಕೋರಿಕೊಂಡರು. ಆದರೆ ಅವರು ‘‘ನಾನು ಖಂಡಿತಾ ಮುಂದೆ ಭೇಟಿ ಮಾಡುತ್ತೇನೆ’’ ಎಂದು ತಮ್ಮ ಹಠವನ್ನು ಮುಂದುವರಿಸಿದರು.

ಇದರಿಂದ ಸಿಡಿಮಿಡಿಗೊಂಡ ಅಧ್ಯಕ್ಷರು, ‘‘ನಾನು ಅಷ್ಟು ದೂರದಿಂದ ಸುಮ್ಮನೆ ಬಂದಿಲ್ಲ. ಇಷ್ಟೊಂದು ಕೇಳಿಕೊಂಡರೂ ತಮ್ಮ ವರ್ತನೆ ಸರಿಯಾಗಿಲ್ಲ. ನಿಯಮಾವಳಿ ಪ್ರಕಾರ ನಡೆದುಕೊಳ್ಳುತ್ತಿಲ್ಲ. ನೀವು ಮೊಬೈಲ್‌ನಲ್ಲೇ ಬ್ಯುಸಿಯಾಗಿದ್ದೀರಿ. ಒಂದು ವೇಳೆ ಈ ಕಟ್ಟಡ ಬಿದ್ದು ಹೋದರೆ ಮನಪಾವೇ ಹೊಣೆಯಾಗಬೇಕಾದಿತು’’ ಎಂದು ಅಸಮಾಧಾನ ವ್ಯಕ್ತಪಡಿಸಿದರು. ‘‘ನಾನು ನಿಯಮಾವಳಿ ಪ್ರಕಾರವೇ ನಡೆದು ಕೊಂಡಿದ್ದೇನೆ. ಆ ಹಿನ್ನೆಲೆಯಲ್ಲೇ ಜತೆಯಾಗಿ ಬಂದಿದ್ದೇನೆ. ನೀವು ಭೇಟಿ ನೀಡಿದ ಸ್ಥಳಗಳಿಗೂ ಭೇಟಿ ನೀಡಿದ್ದೇನೆ. ನಾನು ಮನಪಾ ಅಧಿಕಾರಿ ಜತೆ ಮೊಬೈಲ್ ಫೋನ್‌ನಲ್ಲಿ ಮಾತನಾಡುತ್ತಿರುವುದು. ನೀವು ನನ್ನ ಮೊಬೈಲ್ ಪರಿಶೀಲಿಸಬಹುದು’’ ಎಂಬ ಉಡಾಫೆಯ ಉತ್ತರ ನೀಡಿದರು ಆಯುಕ್ತೆ ಹೆಫ್ಸಿಬಾ.

‘‘ನೀವೊಂದು ದಿನ ಈ ಮನೆಯಲ್ಲಿ ವಾಸವಾಗಿ ನೋಡಿ. ಆಗ ನಿಮಗೆ ಈ ಮಹಿಳೆಯರ ನೋವು ಅರ್ಥವಾಗುತ್ತದೆ’’ ಎಂದು ಆಯೋಗದ ಅಧ್ಯಕ್ಷರು ಮತ್ತೆ ಆಯುಕ್ತರನ್ನು ತರಾಟೆಗೈದಾಗ, ‘‘ಇಲ್ಲಿ ವಾಸ ಮಾಡಬೇಕೋ, ಇದಕ್ಕಿಂತ ಕಡೆಯದಾದ ಸ್ಲಂನಲ್ಲಿ ವಾಸ ಮಾಡಬೇಕು ಎಂಬುದನ್ನು ಅಗತ್ಯವಿದ್ದಲ್ಲಿ ಚಿಂತಿಸೋಣ’’ ಎಂದು ಆಯೋಗದ ಅಧ್ಯಕ್ಷರಿಗೆ ಎದುರುತ್ತ ನೀಡಿದರು. ಈ ಮಾತುಗಳಿಂದ ಕುಪಿತರಾದ ಆಯೋಗದ ಅಧ್ಯಕ್ಷರು, ಹಾಗಾದರೆ ನಾನೇನು ಮಾಡಬೇಕು ಅದನ್ನು ಮಾಡುತ್ತೇನೆ. ಈ ಬಗ್ಗೆ ಸರಕಾರದ ಗಮನಕ್ಕೆ ತರುತ್ತೇನೆ ಎಂದು ಮುನಿಸಿನಿಂದ ತೆರಳಿದಾಗ, ಆಯುಕ್ತರು ಕೂಡಾ ಅಲ್ಲಿಂದ ತಮ್ಮ ವಾಹನದಲ್ಲಿ ತೆರಳಿದರು.

ಆಯುಕ್ತೆಯ ವರ್ತನೆ ಉದ್ಧಟತನದ್ದು :  ಎಸ್.ಪಿ.ಆನಂದ

ಸ್ಥಳೀಯ ನಿವಾಸಿಗಳು ಹಾಗೂ ಆಯೋಗದ ಅಧ್ಯಕ್ಷರು ಅಷ್ಟೊಂದು ಮನವಿ ಮಾಡಿದರೂ ಮನೆಯೊಳಗೆ ಭೇಟಿ ನೀಡದೆ ಉದ್ಧಟತನ ತೋರಿಸಿದ ಮನಪಾದ ನೂತನ ಆಯುಕ್ತೆಯ ವರ್ತನೆ ದಲಿತ ಸಮುದಾಯವನ್ನು ನಿರ್ಲಕ್ಷಿಸಿದಂತಾಗಿದೆ. ಅವರ ವರ್ತನೆ ಅಧಿಕಾರಿಗಳ ಪೌರ ಕಾರ್ಮಿಕರ ಮೇಲಿನ ಕಾಳಜಿ ಏನು ಎಂಬುದನ್ನು ಪ್ರದರ್ಶಿಸಿದಂತಾಗಿದೆ ಎಂದು ಈ ಸಂದರ್ಭ ಉಪಸ್ಥಿತರಿದ್ದ ದ.ಕ. ಜಿಲ್ಲಾ ದಸಂಸ (ಅಂಬೇಡ್ಕರ್‌ವಾದ) ಸಂಘಟನಾ ಸಂಚಾಲಕ ಹಾಗೂ ಪೌರ ಕಾರ್ಮಿಕರು ಮತ್ತು ನಾಲ್ಕನೆ ದರ್ಜೆ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಪಿ.ಆನಂದ ಪ್ರತಿಕ್ರಿಯಿಸಿದ್ದಾರೆ.

‘‘ನೂತನ ಮನಪಾ ಆಯುಕ್ತರ ವರ್ತನೆ ಬೇಸರ ತರಿಸಿದೆ. ಅವರು ಮತ್ತೆ ಭೇಟಿ ನೀಡುವ ಪ್ರಶ್ನೆಯಲ್ಲ. ಅಲ್ಲಿಯವರೆಗೂ ಬಂದಿದ್ದು, ಆಯೋಗದ ಅಧ್ಯಕ್ಷರೇ ಖುದ್ದಾಗಿ ಅಷ್ಟೊಂದು ವಿನಂತಿಸಿಕೊಂಡರೂ ಅವರು ಮನೆ ಪ್ರವೇಶಕ್ಕೆ ನಿರಾಕರಿಸಿರುವುದು ಅಧಿಕಾರಿಗಳ ದಲಿತ ನಿರ್ಲಕ್ಷ ನೀತಿಯನ್ನು ವ್ಯಕ್ತಪಡಿಸಿದೆ’’ ಎಂದು ದಸಂಸ ಮಂಗಳೂರು ತಾಲೂಕು ಸಂಚಾಲಕ ಜಗದೀಶ್ ಪಾಂಡೇಶ್ವರ ಹೇಳಿದರು.

‘‘ನಗರವನ್ನೆಲ್ಲಾ ಸ್ವಚ್ಛ ಮಾಡುವ ನಮಗೆ ಭದ್ರತೆಯೇ ಇಲ್ಲ’’

‘‘ಕಳೆದ 10 ವರ್ಷಗಳಿಂದಲೂ ನಾವು ಈ ಪಾಳು ಬಿದ್ದಿರುವ ಕಟ್ಟಡದಲ್ಲಿ ಪ್ರಾಣವನ್ನು ಕೈಯಲ್ಲೇ ಹಿಡಿದುಕೊಂಡು ದಿನ ಸಾಗಿ ಸುತ್ತಿದ್ದೇವೆ. ನಗರವನ್ನೆಲ್ಲಾ ಶುಚಿಗೊಳಿಸುವ ನಮ್ಮ ಜೀವನಕ್ಕೆ ಯಾವುದೇ ಭದ್ರತೆ ಇಲ್ಲ. ರಾತ್ರಿ ಹಗಲಲ್ಲಿ ಕಟ್ಟಡ ಬಿದ್ದು ಅದರಲ್ಲೇ ಮಣ್ಣಾದರೂ ಕೇಳುವವರಿಲ್ಲ’’ ಇದು ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಮಹಾ ಕಾಳಿಪಡ್ಪುವಿನಲ್ಲಿರುವ ಪೌರ ಕಾರ್ಮಿಕರ ವಸತಿ ನಿಲಯದ ನಿವಾಸಿಗಳ ಅಳಲು. ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ನಾರಾಯಣ ಇಂದು ತಮ್ಮ ವಸತಿ ನಿಲಯಕ್ಕೆ ಭೇಟಿ ನೀಡಿದ ಸಂದರ್ಭ ಅಲ್ಲಿನ ಪೌರ ಕಾರ್ಮಿಕರ ಮಹಿಳೆಯರು ತಮ್ಮ ನೋವನ್ನು ಬಿಚ್ಚಿಟ್ಟರು.

ಪಾಳು ಬಿದ್ದ ಕಟ್ಟಡದಲ್ಲಿ 36 ಕುಟುಂಬಗಳ ಅತಂತ್ರ ಬದುಕು!  ಅಲ್ಲಲ್ಲಿ ಕಿತ್ತು ಹೋದ ಸಿಮೆಂಟ್, ಮುರಿದು ಬಿದ್ದ ಕಿಟಕಿ, ಬಾಗಿಲುಗಳು, ಮಳೆಗಾಲದಲ್ಲಿ ಸೋರುವ ಮೇಲ್ಛಾವಣಿ, ಬಿರುಕು ಬಿಟ್ಟ ಗೋಡೆಗಳು, ಅದ್ಯಾವಾಗ ಬಿದ್ದುಬಿಡುವುದೋ ಅನ್ನೋ ಸ್ಥಿತಿಯಲ್ಲಿರುವ ಕಟ್ಟಡದ ಆಧಾರ ಕಂಬಗಳು….!

ಇದು 3 ಮಹಡಿಗಳ ಪೌರ ಕಾರ್ಮಿಕರ ವಸತಿ ನಿಲಯದ ದುಸ್ಥಿತಿ. ಇಂತಹ ಪಾಳು ಬಿದ್ದ ಕಟ್ಟಡದಲ್ಲಿ 36 ಪೌರ ಕಾರ್ಮಿಕ ಕುಟುಂಬಗಳು ತಮ್ಮ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಕಳೆದ ಹಲವು ವರ್ಷಗಳಿಂದ ರಾತ್ರಿ ಹಗಲನ್ನು ಕಳೆಯುತ್ತಿವೆ. ವಾಸಿಸಲು ಆಯೋಗ್ಯವಾಗಿರುವ ಶಿಥಿಲಗೊಂಡಿರುವ ಈ ಕಟ್ಟಡವನ್ನು ಕೆಡವಿ ಹೊಸ ಕಟ್ಟಡವನ್ನು ರಚಿಸಬೇಕೆಂದು ಹಲವಾರು ವರ್ಷಗಳಿಂದ ಇಲ್ಲಿ ವಾಸಿಸುತ್ತಿರುವ ಪೌರ ಕಾರ್ಮಿಕರು ದಲಿತ ಸಂಘಟನೆಗಳ ನೇತೃತ್ವದಲ್ಲಿ ಮನವಿ, ಹೋರಾಟ ನಡೆಸುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನುವುದು ಸ್ಥಳೀಯ ನಿವಾಸಿಗಳ ಹತಾಶೆಯ ಮಾತುಗಳು.

‘‘ನಮಗೆ ವಸತಿಗೆ ಪರ್ಯಾಯ ವ್ಯವಸ್ಥೆ ಇಲ್ಲ. ಹಾಗಾಗಿ ಇಲ್ಲಿಯೇ ಮಕ್ಕಳು ಮರಿಗಳೊಂದಿಗೆ ಬದುಕು ಸಾಗಿಸಬೇಕಾಗಿದೆ. ನಮ್ಮ ಕಷ್ಟ ಜನಪ್ರತಿನಿಧಿಗಳಿಗಾಗಲಿ, ಅಧಿಕಾರಿಗಳಿಗಾಗಲಿ ಅರ್ಥ ವಾಗುವುದಿಲ್ಲ. ನಾವು ಜೀವಂತವಾಗಿರುವಾಗಲೇ ನಮಗೊಂದು ಪುನರ್ವಸತಿ ವ್ಯವಸ್ಥೆ ಕಲ್ಪಿಸುವ ಬದಲು ನಾಳೆ ಏನಾದರೂ ಕಟ್ಟಡ ಕುಸಿದು ನಾವು ಸತ್ತ ಮೇಲೆ ನೀಡುವ ಪರಿಹಾರ ಯಾರಿಗಾಗಿ’’ ಎಂಬ ಆಕ್ರೋಶದ ನುಡಿಗಳು ಆಯೋಗದ ಅಧ್ಯಕ್ಷರ ಎದುರು ನಿವಾಸಿಗಳಿಂದ ವ್ಯಕ್ತವಾದವು.

ಇದಕ್ಕೂ ಮುನ್ನ ಪಾಂಡೇಶ್ವರದ ಪೌರ ಕಾರ್ಮಿಕರ ಕಾಲನಿಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳನ್ನು ಪರಿಶೀಲಿಸಿ ಕ್ರಮಕ್ಕೆ ಅಧಿಕಾರಿಗಳಿಗೆ ಸೂಚಿಸಿದರು. ಬಳಿಕ ಅಲ್ಲೇ ಸಮೀಪದ ರೈಲ್ವೆ ಕಾಲನಿ ಬಳಿಯ ಮನಪಾದ 80 ಸೆಂಟ್ಸ್ ಜಾಗಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಪೌರ ಕಾರ್ಮಿಕರಿಗೆ ಸಮುದಾಯ ಭವನ ನಿರ್ಮಿಸಲು ಈ ಜಾಗ ಸೂಕ್ತವಾಗಿದ್ದು, ಇದನ್ನು ಪರಿಗಣಿಸುವಂತೆ ದಲಿತ ನಾಯಕರ ಆಗ್ರಹದ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

Write A Comment