ಕನ್ನಡ ವಾರ್ತೆಗಳು

ಕಸ್ತೂರಿ ರಂಗನ್ ವರದಿ ವಿರುದ್ಧ ಸಂಘಟನೆಗಳು ನೀಡಿದ್ದ ಸುಳ್ಯ ಬಂದ್ ಯಶಸ್ವಿ

Pinterest LinkedIn Tumblr

suly_band_photo_1

ಸುಳ್ಯ, ಡಿ.31 : ಕಸ್ತೂರಿ ರಂಗನ್ ವರದಿ ವಿರುದ್ಧ ಮೂರು ಸಂಘಟನೆಗಳು ಜಂಟಿಯಾಗಿ ಕರೆ ನೀಡಿದ್ದ ಸುಳ್ಯ ತಾಲೂಕು ಬಂದ್ ಯಶಸ್ವಿಯಾಗಿದೆ. ಮಲೆನಾಡು ಜನಹಿತ ರಕ್ಷಣಾ ವೇದಿಕೆ, ಮಲೆನಾಡು ಜಂಟಿ ಕ್ರಿಯಾ ಸಮಿತಿ ಹಾಗೂ ಕೊಲ್ಲಮೊಗ್ರ-ಕಲ್ಮಕಾರು ರೈತ ಹಿತರಕ್ಷಣಾ ವೇದಿಕೆ ಮಂಗಳವಾರ ಈ ಬಂದ್‌ಗೆ ಕರೆ ನೀಡಿತ್ತು. ತಾಲೂಕಿನ ಬಹುತೇಕ ಎಲ್ಲಾ ಕಡೆಗಳಲ್ಲೂ ಮಧ್ಯಾಹ್ನದವರೆಗೆ ಸಂಪೂರ್ಣ ಬಂದ್ ಆಗಿತ್ತು. ಸುಳ್ಯ ನಗರ ಸೇರಿದಂತೆ, ಸುಬ್ರಹ್ಮಣ್ಯ, ಗುತ್ತಿಗಾರು, ಅರಂತೋಡು, ಕಲ್ಲುಗುಂಡಿ, ಪಂಜ ಮೊದಲಾದ ಕಡೆಗಳಲ್ಲೂ ಬಂದ್ ಯಶಸ್ವಿಯಾಗಿದೆ.

ಶಾಲಾ-ಕಾಲೇಜುಗಳಿಗೆ ಮಂಗಳವಾರ ರಜೆ ಸಾರಲಾಗಿತ್ತು. ಸರಕಾರಿ ಕಚೇರಿಗಳು ಎಂದಿನಂತೆ ಕಾರ್ಯಾಚರಿಸಿದವು. ಮಧ್ಯಾಹ್ನದ ತನಕ ಸರಕಾರಿ ಬಸ್ ಓಡಾಟ ಸ್ಥಗಿತಗೊಂಡಿತ್ತು. ಬೆಳಗ್ಗೆ ಕಾಂಗ್ರೆಸ್ ಕಾರ್ಯಕರ್ತರು ಬಸ್ ನಿಲ್ದಾಣದ ಎದುರು ಬಸ್‌ಗಳಿಗೆ ತಡೆ ಒಡ್ಡಿದರು. ಸರ್ವಿಸ್ ವ್ಯಾನ್, ಕಾರುಗಳೂ ಓಡಾಟ ನಡೆಸಲಿಲ್ಲ. ರಿಕ್ಷಾಗಳ ಓಡಾಟ ಭಾಗಶಃ ಇತ್ತು. ದೂರ ದೂರುಗಳಿಗೆ ಹೋಗುವ ವಾಹನಗಳು, ಬಸ್‌ಗಳ ಸಂಚಾರ ಅಬಾಧಿತವಾಗಿತ್ತು.

suly_band_photo_3aaa

ಪ್ರತಿಭಟನಾ ಜಾಥಾ :
ಬಾಧಿತ ಗ್ರಾಮಗಳಿಂದ ಬಂದ ವಾಹನಗಳು ಗುತ್ತಿ ಗಾರಿನಿಂದ ಒಟ್ಟಾಗಿ ಬಂದು ಪೈಚಾರಿನಲ್ಲಿ ಸೇರಿತು. ಅಲ್ಲಿಂದ ಶಾಸ್ತ್ರಿ ವೃತ್ತದವರೆಗೆ ವಾಹನ ಜಾಥಾ ನಡೆ ಯಿತು. ಅಲ್ಲಿಂದ ಪ್ರತಿಭಟನಕಾರರ ಕಾಲ್ನಡಿಗೆ ಜಾಥಾ ಗಾಂಧಿ ನಗರದವರೆಗೆ ತೆರಳಿ ಅಲ್ಲಿಂದ ರಥಬೀದಿಯ ಮೂಲಕ ತಾಲೂಕು ಕಚೇರಿಯ ಮುಂಭಾಗದಲ್ಲಿ ಸಮಾಪನಗೊಂಡಿತು. ಸುಳ್ಯ ನಪಂ ಅಧ್ಯಕ್ಷ ಎನ್. ಎ.ರಾಮಚಂದ್ರ ಜಾಥಾಕ್ಕೆ ಚಾಲನೆ ನೀಡಿದರು. ಬಾಧಿತ ಗ್ರಾಮಗಳಿಂದ ಹಲವು ವಾಹನಗಳಲ್ಲಿ ಜನ ಬಂದಿದ್ದರೆ, ಇತರ ಗ್ರಾಮಗಳಿಂದಲೂ ಪ್ರತಿಭಟನೆಗೆ ಬಂದಿದ್ದರು. ಎಲ್ಲಾ ಪಕ್ಷಗಳ ನಾಯಕರು, ಕಾರ್ಯ ಕರ್ತರು ಒಟ್ಟಾಗಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.

ಸಂಘಟನೆಗಳ ಪ್ರಮುಖರಾದ ದಾಮೋದರ ಗುಂಡ್ಯ, ಜಯಪ್ರಕಾಶ್ ಕೂಜುಗೋಡು, ಬಿ.ಸಿ. ವಸಂತ, ಬಾಲಸುಬ್ರಹ್ಮಣ್ಯ ಭಟ್, ವಸಂತ ಕಿರಿಬಾಗ, ಸೋಮಸುಂದರ ಕೂಜುಗೋಡು, ಡಿ.ಎಸ್. ಹರ್ಷಕುಮಾರ್, ಕಾಂಗ್ರೆಸ್ ನಾಯಕರಾದ ನಿತ್ಯಾನಂದ ಮುಂಡೋಡಿ, ಭರತ್ ಮುಂಡೋಡಿ, ಪಿ.ಸಿ. ಜಯರಾಮ, ಪಿ.ಎಸ್.ಗಂಗಾಧರ್, ಪುರುಷೋತ್ತಮ ಬಂಗಾರಕೋಡಿ, ಬಿಜೆಪಿ ನಾಯಕರಾದ ವೆಂಕಟ್ ದಂಬೆಕೋಡಿ, ಪ್ರಕಾಶ್ ಹೆಗ್ಡೆ, ಪಿ.ಕೆ.ಉಮೇಶ್, ನವೀನ್‌ಕುಮಾರ್ ಮೇನಾಲ, ಜೆಡಿಎಸ್ ನಾಯಕರಾದ ಸಂತೋಷ್ ಜಾಕೆ, ದಿನೇಶ್ ಮಡಪ್ಪಾಡಿ ಮತ್ತಿತರರು ಪ್ರತಿಭಟನೆಯ ಮುಂಚೂಣಿಯಲ್ಲಿದ್ದರು. ಜಾಥಾ ತೆರಳುವ ಹೊತ್ತು ಸಂಚಾರ ವ್ಯವಸ್ಥೆ ಸ್ಥಗಿತಗೊಂಡಿತ್ತು. ತಾಲೂಕು ಕಚೇರಿಯ ಎದುರು ಪ್ರತಿಭಟನಾ ಸಭೆಯ ಬಳಿಕ ತಹಶೀಲ್ದಾರ್ ಮೂಲಕ ಸರಕಾರಗಳಿಗೆ ಮನವಿ ಸಲ್ಲಿಸಲಾಯಿತು.

‘ಹೋರಾಟ ಹಿಂಸಾರೂಪ ತಾಳುವ ಮುನ್ನ ಎಚ್ಚೆತ್ತುಕೊಳ್ಳಿ’
ಕಸ್ತೂರಿ ರಂಗನ್ ವರದಿ ವಿರುದ್ಧದ ತಮ್ಮ ಹೋರಾಟ ಉಗ್ರ ರೂಪ ತಾಳುವ ಮುನ್ನ ಎಚ್ಚರಗೊಳ್ಳುವಂತೆ ಪ್ರತಿಭಟನಕಾರರು ಸರಕಾರಕ್ಕೆ ಕರೆ ನೀಡಿದ್ದಾರೆ.ಸುಳ್ಯ ತಾಲೂಕು ಕಚೇರಿ ಮುಂಭಾಗದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ರೈತ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಹಮೀದ್ ಇಡ್ನೂರು, ಈ ಹೋರಾಟ ಸರಕಾರಗಳಿಗೆ ನಾವು ನೀಡುವ ಎಚ್ಚರಿಕೆ. ಈ ಎಚ್ಚರಿಕೆಯನ್ನು ಗಂಭೀರವಾಗಿ ತೆಗೆದುಕೊಳ್ಳದಿದ್ದರೆ ನಮ್ಮ ಹೋರಾಟ ಇನ್ನಷ್ಟು ವಿಸ್ತಾರಗೊಳ್ಳುತ್ತದೆ ಎಂದರು. ದಿಕ್ಸೂಚಿ ಭಾಷಣ ಮಾಡಿದ ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಅಧ್ಯಕ್ಷ ಕಿಶೋರ್ ಶಿರಾಡಿ ಮಾತನಾಡಿ, ಅಭಿವೃದ್ಧಿ ಹೆಸರಿನಲ್ಲಿ, ಪರಿಸರ ಹೆಸರಿನಲ್ಲಿ ಗ್ರಾಮಗಳಲ್ಲಿ ಭಯೋತ್ಪಾದನೆ ಬಿತ್ತುವ ಕೆಲಸವನ್ನು ಅಧಿಕಾರಿಗಳು ಮಾಡುತ್ತಿದ್ದಾರೆ. ಅಧಿಕಾರಿ ವರ್ಗದವರೇ ನಕ್ಸಲರಾ ಗುತ್ತಿದ್ದಾರೆ. ಮನುಷ್ಯರಿಗಿಂತ ಪ್ರಾಣಿ ಗಳಿಗೆ ಹೆಚ್ಚು ಬೆಲೆ ನೀಡುವ ಕಸ್ತೂರಿ ರಂಗನ್ ವರದಿ ಜಾರಿಯಾದರೆ ನಾವೇ ಪ್ರಾಣಿಗಳಾಗಿ ನಿಮ್ಮನ್ನು ಕಚ್ಚುವ ದಿನ ದೂರವಿಲ್ಲ ಎಂದರು. ನಾವು ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಹೇಡಿಗಳಲ್ಲ, ನಮ್ಮ ಅಸ್ತಿತ್ವಕ್ಕಾಗಿ ಯಾವ ಕೆಲವನ್ನು ಬೇಕಾದರೂ ಮಾಡಿ ಗಲ್ಲು ಶಿಕ್ಷೆಗೂ ನಾವು ಸಿದ್ಧ. ಪ್ರತಿಭಟನೆ ಹಿಂಸಾರೂಪ ತಾಳುವ ಮುನ್ನ ಸರಕಾರಗಳು ಎಚ್ಚೆತ್ತುಕೊಳ್ಳಬೇಕು ಎಂದವರು ಹೇಳಿದರು.

suly_band_photo_2

ಮಲೆನಾಡು ಜಂಟಿ ಕ್ರಿಯಾ ಸಮಿತಿ ಅಧ್ಯಕ್ಷ ಪ್ರದೀಪ್‌ಕುಮಾರ್ ಕೆ.ಎಲ್. ಮಾತನಾಡಿ, ಅಮರ ಕ್ರಾಂತಿಯ ಸ್ವಾತಂತ್ರ್ಯ ಹೋರಾಟದ ಬಳಿಕ ಅತೀ ದೊಡ್ಡ ರೈತ ದಂಗೆ ಇಲ್ಲಿ ಕಸ್ತೂರಿ ರಂಗನ್ ವಿರುದ್ಧ ಆರಂಭಗೊಂಡಿದೆ ಎಂದು ವ್ಯಾಖ್ಯಾನಿಸಿದರಲ್ಲದೆ, ಮಲೆನಾಡು ಉಳಿವಿಗಾಗಿ ಪ್ರತ್ಯೇಕ ರಾಜ್ಯವನ್ನೋ, ಸ್ವಾಯತ್ತ ರಾಜ್ಯವನ್ನೋ ಕೇಳುವ ದಿನ ದೂರವಿಲ್ಲ ಎಂದರು. ನಾಯಕರ ಬೆಂಬಲ: ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಎಸ್.ಅಂಗಾರ, ಕಸ್ತೂರಿ ರಂಗನ್ ವಿಚಾರದಲ್ಲಿ ಆಧಿಕಾರಿಗಳು ಜನ ಪ್ರತಿನಿಧಿಗಳನ್ನು ಕತ್ತಲಿನಲ್ಲಿಟ್ಟಿದ್ದಾರೆ. ಸಮಿತಿ ಸಭೆಯ ಹಿಂದಿನ ದಿನವಷ್ಟೇ ಜನಪ್ರತಿನಿಧಿಗಳಿಗೆ ಹೇಳುವ ದಾರ್ಷ್ಟ್ಯತನ ಅಧಿಕಾರಿಗಳಲ್ಲಿದೆ ಎಂದರಲ್ಲದೆ, ಜನಗಳಿದ್ದರೆ ಮಾತ್ರ ಸರಕಾರ ಎಂದು ಎಲ್ಲರೂ ಮನಗಾಣ ಬೇಕು. ಹೋರಾಟದಿಂದ ಲಾಭ ಪಡೆಯುವ ಸಣ್ಣತನವನ್ನು ಮಾತ್ರ ಯಾರೂ ಮಾಡಬಾರದು ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವೆಂಕಪ್ಪಗೌಡ ಮಾತನಾಡಿ, ಎಲ್ಲಾ ರಾಜಕೀಯ ಪಕ್ಷಗಳು ಒಗ್ಗಟ್ಟಾಗಿ ನಡೆಸಿದ ಪ್ರತಿಭಟನೆಗೆ ಜಯ ಸಿಕ್ಕೇ ಸಿಗುತ್ತದೆ ಎಂದರು. ಬಸ್ ಹೊತ್ತಿಸುವ, ಅಧಿಕಾರಿಗಳನ್ನು ಕಂಬಕ್ಕೆ ಕಟ್ಟುವಂತಹ ಹೋರಾಟಕ್ಕೆ ಮುಂದಾಗುವುದಕ್ಕಿಂತ ಮುನ್ನ ಸರಕಾರ ಎಚ್ಚೆತ್ತುಕೊಳ್ಳಬೇಕು ಎಂದು ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಪಿಲಿ ಹೇಳಿದರು. ಜೆಡಿಎಸ್ ಮುಖಂಡ ಜಾಕೆ ಮಾಧವ ಗೌಡ ಮಾತನಾಡಿ, ರೈತರ ನೋವು ನಮ್ಮ ನೋವು ಎಂದು ಎಲ್ಲರೂ ತಿಳಿದುಕೊಳ್ಳಬೇಕು. ಅನಿವಾರ್ಯವಾದರೆ ರಾಜಕೀಯ ಪಕ್ಷಗಳ ನಾಯಕರು ರಾಜೀನಾಮೆ ನೀಡಿ ಹೋರಾಟಕ್ಕೆ ಧುಮುಕಬೇಕು ಎಂದರು. ರಾಜ್ಯ ಸಮಾಜ ಕಲ್ಯಾಣ ಮಂಡಳಿಯ ಅಧ್ಯಕ್ಷೆ ದಿವ್ಯಪ್ರಭಾ ಚಿಲ್ತಡ್ಕ, ಬಿಜೆಪಿ ನಾಯಕ ಎ.ವಿ. ತೀರ್ಥರಾಮ, ರೈತ ಮುಖಂಡ ದುರ್ಗಾದಾಸ್ ಮಲ್ಲಾರ, ಜಿ.ಪಂ. ಸದಸ್ಯ ಕೆ.ಎಸ್. ದೇವರಾಜ್ ಮತ್ತಿತರರು ಮಾತನಾಡಿದರು.

Write A Comment