ಕನ್ನಡ ವಾರ್ತೆಗಳು

”ಇತೀ ನಿಮ್ಮ ಪ್ರೀತಿಯ ನೋಟ್‌ಕೇಕ್” ; ಗಂಗೊಳ್ಳಿಯ ಪ್ರಾಚೀನ ವಸ್ತು ಸಂಗ್ರಹಕಾರ ಜಿ.ಭಾಸ್ಕರ ಕಲೈಕಾರ್ ಕೈಯಲ್ಲಿದೆ ಈ ಸಂಗ್ರಹ

Pinterest LinkedIn Tumblr

ಕುಂದಾಪುರ: ಕ್ರಿಸ್‌ಮಸ್ ಕೇಕ್ ತಿಂದು ಋಷಿ ಪಟ್ಟ ನಮಗೆ ಹೊಸವರುಷದಲ್ಲಿಯೂ ರುಚಿಯಾದ ಸಿಹಿ ತಿಂಡಿ ತಿನ್ನುವ ಸದವಕಾಶವೂ ಇದೆ. ಎಲ್ಲೆಡೆಯಲ್ಲಿಯೂ ನೂತನ ರುಚಿಯ ತಿಂಡಿ ತಿನಿಸುಗಳ ಭರವೂರವೇ ನಡೆಯುತ್ತದೆ. ಬಾಯಲ್ಲಿ ನೀರೂರಿದರೇ ಖಂಡಿತ ಆಶ್ಚರ್ಯ ಪಡಬೇಕಾಗಿಲ್ಲ.

Note Cake

ಕೇಕ್……ಬಿಸಿ ಬಿಸಿ ಕೇಕ್ ಅಂದರೆ ಯಾರಿಗೆ ತಾನೇ ಖುಷಿ ಆಗಲ್ಲ ಹೇಳಿ? ನಮೂನಮೂನೆಯ ಕೇಕ್‌ಗಳ ವಿನ್ಯಾಸ – ರುಚಿ ಎಂತಹವರನ್ನೂ ಕೂಡ ಮಾಲ್ ಕಡೆ ಆಕರ್ಷಿಸದೇ ಇರದು. ಮಕ್ಕಳ ಪಾಲಿಗಂತೂ ಕೇಕ್ ಕೇಕೇ ಹಾಕಿಕೊಂಡು ಸಂಭ್ರಮಪಟ್ಟು ತಿನ್ನುವ ತಿನಿಸು. ಕೇಕ್‌ನ ಕ್ರೀಮ್‌ನ್ನು ಸ್ನೇಹಿತರ ಮೊಗಕ್ಕೆ ಹಚ್ಚಿ ಕೇಕ್ ತಿನ್ನುವ ಸಂತಸವನ್ನು ಬಣ್ಣಿಸಲಾಗದು. ಹೀಗಿರುವಲ್ಲಿ ಇಂತಹ ಕೇಕ್‌ಗಳ ನಡುವೆ ಇಲ್ಲೊಂದು ನೋಟ್‌ಕೇಕ್ ಎಲ್ಲರ ಹುಬ್ಬೇರಿಸಿದೆ. ಮುಟ್ಟಿ ನೋಡಿದರೆ ಖುಷಿ ಆಗುತ್ತದೆ. ಚೆಂದವಿದೆ. ಬಿಳಿ ಮತ್ತು ಮಿಶ್ರಣ ಬಣ್ಣಗಳೊಂದಿಗೆ ಎಲ್ಲರನ್ನು ಆಕರ್ಷಿಸುವ ಈ ಕೇಕ್ ನೀವು ಜಗತ್ತಿನ ಯಾವುದೇ ಅಂಗಡಿ – ಮಾಲ್‌ಗಳಲ್ಲಿ ವಿಚಾರಿಸಿದರೂ ಕಾಣಸಿಗದು. ಇದೇ ಇದರ ವಿಶೇಷತೆ ! ಎಂತಹ ಕೇಕ್ ಮಾರಾಯ್ರೇ ಇದು? ಎಂದು ಕೈ ಕೈ ಹಿಸುಕಿಕೊಂಡರೇ ಆಶ್ಚರ್ಯ ಪಡಬೇಕಾಗಿಲ್ಲ. ಇದನ್ನು ನೋಡಲೇ ಬೇಕೆನಿಸಿದರೇ ನೀವು ಖ್ಯಾತ ಪ್ರಾಚೀನ ವಸ್ತು ಸಂಗ್ರಹಕಾರ ಜಿ.ಭಾಸ್ಕರ ಕಲೈಕಾರ್ ಇವರ ಅಚ್ಚರಿಯ ಲೋಕದಲ್ಲೊಮ್ಮೆ ಕಣ್ಣು ಹಾಯಿಸಬೇಕಾಗಿದೆ. ಈ ಕೇಕ್ ಅವರ ಸಂಗ್ರಹದಲ್ಲಿ ಹೊಸ ಸೇರ್ಪಡೆ. ಈ ನೂತನ ಸದಸ್ಯನನ್ನೇ ಮಾತನಾಡಿಸಿದರೇ ಅದುವೇ ತನ್ನ ಪರಿಚಯ ಮಾಡಿಕೊಡುತ್ತದೆ.

ಓವರ್ ಟು ನೋಟ್‌ಕೇಕ್ ………..
ನನ್ನ ಹೆಸರು ನೋಟ್‌ಕೇಕ್. ಸೆಪ್ಟೆಂಬರ್ ೨೦೧೪ರಲ್ಲಿ ನನ್ನ ಜನನವಾಯಿತು. ನೀವು ನನ್ನನ್ನು ಮುಟ್ಟಬಹುದು. ಮೃದುವಾಗಿ ಒತ್ತಿ ಸಂತಸ ಪಡಬಹುದು. ಕೈಯಲ್ಲಿ ಹಿಡಿದುಕೊಂಡು ನನ್ನ ಭಾರ ಅಳೆಯಬಹುದು. ಜಗತ್ತಿನ ಯಾವುದೇ ಬೇಕರಿಗಳಲ್ಲಿ ನಾನು ನಿಮಗೆ ಕಾಣಸಿಗೋದಿಲ್ಲ ನೆನಪಿರಲಿ. ಯಾರದ್ದೇ ನಾಲಿಗೆಯ ರುಚಿಗೆ ಸಾಕ್ಷಿಯಾಗಲು ನಾನು ಸಾಧ್ಯವಿಲ್ಲ. ನನಗೆ ರೂಪವಿದೆ. ಅಂತಹ ರುಚಿಯಿಲ್ಲ. ಪರಿಮಳ ಏನೇಂದು ನೀವು ತಿಳಿಯಬೇಕಾದರೆ ನನ್ನನ್ನು ಬಲವಾಗಿ ಮೂಸಿದರೆ ಹಣದ ನೋಟಿನ ಪರಿಮಳ ನಿಮ್ಮ ಮೂಗಿಗೆ ಬಡಿಯುತ್ತದೆ. ಯಸ್…..ನಿಜ…..ನಾನು ನೋಟಿನ ಕೇಕ್ ! ಭಾರತೀಯ ರಿಸರ್ವ್ ಬ್ಯಾಂಕ್‌ನಲ್ಲಿ ನನ್ನನ್ನು ತಯಾರಿಸಲಾಯಿತು.

ರೂಪಾಯಿ 100, 500 ಮತ್ತು 1000ದ ಜೀವ ಬಿಡುವ ಸ್ಥಿತಿಯಲ್ಲಿದ್ದ ಹಳೇ ನೋಟುಗಳನ್ನೆಲ್ಲ ಒಟ್ಟು ಮಾಡಿ ಯಂತ್ರದಲ್ಲಿ ಪೌಡರ್ ಮಾಡಲಾಯಿತು. ಅದನ್ನು ಗಮ್ ಮೂಲಕ ಮಿಶ್ರಣ ಮಾಡಿ ಕೇಕ್ ರೂಪದಲ್ಲಿ ನನ್ನನ್ನು ಸೃಷ್ಠಿ ಮಾಡಲಾಯಿತು. ನನ್ನನ್ನು ಸಡನ್ ಆಗಿ ನೋಡಿದರೇ ಕೇಕ್ ತರಹನೂ, ಸಾಬೂನು ಬಿಲ್ಲೆ ತರಹನೂ ಕಾಣಿಸುತ್ತೇನೆ. ಆದರೇ ಸೃಷ್ಟಿಕರ್ತ ಬ್ರಹ್ಮ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನನ್ನನ್ನು ನೋಟ್ ಕೇಕ್ ಎಂದು ನಾಮಕರಣ ಮಾಡಿ ಸಂತೋಷದಿಂದ ಬೆಂಗಳೂರಿನಲ್ಲಿ ನಡೆದ ವಸ್ತು ಪ್ರದರ್ಶನದಲ್ಲಿ ಗ್ರಾಹಕರಿಗೆ ಉಚಿತವಾಗಿ ನನ್ನನ್ನು ಕೊಡುಗೆಯಾಗಿ ನೀಡಲಾಯಿತು. ನನ್ನ ಉಳಿದ ಸ್ನೇಹಿತರನ್ನು ತುಂಬಾ ಗ್ರಾಹಕರು ವಿವಿದೆಡೆ ಕೊಂಡೊಯ್ದರು.

ನನ್ನನ್ನು ಮಾತ್ರ ಅಪೂರ್ವ ಸಂಗ್ರಹಕಾರ ಜಿ.ಬಿ.ಕಲೈಕಾರ್ ಎತ್ತಿಕೊಂಡು ನಿನ್ನನ್ನು ಅಚ್ಚರಿಯ ಗೂಡಲ್ಲಿ ಬೆಚ್ಚಗೆ ಇಡುತ್ತೇನೆ. ಜನ ದಿನದಿನಿ ಬಂದು ನಿನ್ನನ್ನು ನೋಡಿ ಹೋಗುವಂತೆ ಮಾಡುತ್ತೇನೆ. ನೀನು ನನ್ನೊಂದಿಗೆ ಇದ್ದರೆ ಫೇಮಸ್ ಆಗುತ್ತೀ ಎಂದು ಕರೆದುಕೊಂಡು ಬಂದರು. ಇದೀಗ ಗಂಗೊಳ್ಳಿಯಲ್ಲಿ ವಾಸಮಾಡಿಕೊಂಡಿದ್ಧೇನೆ. ನನ್ನನ್ನು ಭೇಟಿ ಮಾಡಬೇಕೆನಿಸಿದರೆ ಧಾರಳ ಮಾಡಬಹುದು. ಹೊಸವರ್ಷದ ಶುಭಾಶಯಗಳು.

ಪ್ರೀತಿ ಇರಲಿ, ಇತೀ ನಿಮ್ಮವ
ನೋಟ್‌ಕೇಕ್ ಗಂಗೊಳ್ಳಿ

ಬರಹ : ರವಿಕುಮಾರ್ ಗಂಗೊಳ್ಳಿ
ಚಿತ್ರ : ಸುರಭಿ ಗಂಗೊಳ್ಳಿ

Write A Comment