ಕನ್ನಡ ವಾರ್ತೆಗಳು

ನಿಧಾನವಾಗಿ ಚಲಿಸುವಂತೆ ಬಸ್-ಟಿಪ್ಪರ್ ಚಾಲಕರಿಗೆ ಸಾರ್ವಜನಿಕರ ಎಚ್ಚರಿಕೆ

Pinterest LinkedIn Tumblr

moodbidri_accident_photo_1

ಮೂಡುಬಿದ್ರೆ,ಡಿ.29 : ಮಂಗಳೂರು-ಕಾರ್ಕಳ ಎಕ್ಸ್‍ಪ್ರೆಸ್ ಬಸ್ ಮತ್ತು ಟಿಪ್ಪರ್‍ಗಳನ್ನು ತಡೆ ಹಿಡಿದ ಮಿಜಾರಿನ ನಾಗರಿಕ ಹಿತ ರಕ್ಷಣಾ ವೇದಿಕೆ ಕಾರ್ಯಕರ್ತರು ಮತ್ತು ಸಾರ್ವಜನಿಕರು ನಿಧಾನವಾಗಿ ಚಲಿಸುವಂತೆ ಎಚ್ಚರಿಕೆ ನೀಡಿದ ಘಟನೆ ಮಿಜಾರು ಬೆಳ್ಳೆಚ್ಚಾರು ಕ್ರಾಸ್ ಬಳಿ ಆದಿತ್ಯವಾರ ನಡೆದಿದೆ.

ಶನಿವಾರದಂದು ತಮ್ಮದೇ ಊರಿನ ಮಹಿಳೆಯೋರ್ವರನ್ನು ಬಸ್ ಬಲಿ ತೆಗೆದುಕೊಂಡಿದ್ದು, ಈ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ನಾಗರಿಕ ಹಿತರಕ್ಷಣಾ ವೇದಿಕೆಯು ಹೈವೇಯಲ್ಲಿ ಸಾಗಿಬಂದ ಖಾಸಗಿ ಬಸ್‍ಗಳು ಮತ್ತು ಟಿಪ್ಪರ್‍ಗಳನ್ನು ತಡೆದು ಬದಿಗೆ ನಿಲ್ಲಿಸಿ ಚಾಲಕರಿಗೆ ನಿಧಾನ ಚಲಿಸಿ, ಯಾರ್ಯಾರದ್ದೋ ಜೀವ ಧರ್ಮಕ್ಕೆ ತೆಗೆಯಬೇಡಿ. ನಿಮಗೆ ಬಸ್ಸಿನಲ್ಲಿ ಡ್ರೈವಿಂಗ್ ಕೆಲಸ ಮಾಡಲು ಇಷ್ಟವಿದ್ದರೆ ಮಾತ್ರ ಮಾಡಿ, ಯಾರದ್ದೋ ಜೀವವನ್ನು ಬಲಿ ತೆಗೆಯಲು ಕೆಲಸ ಮಾಡಬೇಡಿ. ಇದು ನಿಮಗೆ ಮೊದಲ ಹಂತದಲ್ಲಿ ಎಚ್ಚರಿಕೆ ನೀಡುತ್ತಿದ್ದೇವೆ. ಇನ್ನು ಮುಂದೆ ಎಲ್ಲಿಂದದಾದರೂ ಇಂತಹ ಬಸ್ ಅತಿ ವೇಗದಿಂದ ಬರುತ್ತಿದೆ ಎಂದು ಮಾಹಿತಿ ಬಂದರೆ ನಿಮ್ಮ ಬಸ್‍ಗಳನ್ನು ಮಿಜಾರಿನಲ್ಲಿ ನಿಲ್ಲಿಸಿ ತಕ್ಕ ಬುದ್ಧಿ ಕಲಿಸುತ್ತೇವೆ ಎಂದು ತಿಳಿಸಿದ್ದಾರೆ.

moodbidri_accident_photo_2

ಈ ಕಿವಿಮಾತುಗಳನ್ನು ಕೇಳುವ ಆಸಕ್ತಿ ತೋರದೇ ವಾಹನ ಮುನ್ನಡೆಸುವ ಉತ್ಸಾಹದಲ್ಲಿದ್ದ ಕೆಲ ಚಾಲಕರ ಜತೆ ಬಿಸಿಯಾಗಿ ಏರು ಧ್ವನಿಯಲ್ಲೂ ಎಚ್ಚರಿಸುವ ಕೆಲಸ ನಡೆಯಿತು. ನಿಮ್ಮ ಮಾಲಕರ ಮೂಲಕ ಸಮಸ್ಯೆಯನ್ನು ಸಾರಿಗೆ ಅಧಿಕಾರಿಗಳ ಗಮನಕ್ಕೂ ತನ್ನಿ ಎನ್ನುವ ಸಲಹೆಗಳೂ ಸಾರ್ವಜನಿಕರಿಂದ ಕೇಳಿ ಬಂದವು. ಯಾವುದೇ ಅಪಘಾತಗಳಾದಾಗ, ಯಾರೇ ಸಾವನ್ನಪ್ಪಿದರೂ ವಾಹನ ಸ್ಟೇಷನಿಗೆ, ಹೆಣ ಪೋಸ್ಟ್ ಮಾರ್ಟಂಗೆ ಹಾಗೂ ಚಾಲಕನಿಗೆ ಜಾಮೀನು ನೀಡಿ ಮನೆಗೆ ಕಳಿಸಲಾಗುತ್ತದೆ. ಆದರೆ ಪೋಲೀಸ್ ಇಲಾಖೆಯಾಗಲೀ, ಸಾರಿಗೆ ಇಲಾಖೆಯ ಸಂಬಂಧಪಟ್ಟವ ರಾಗಲೀ ರಸ್ತೆಯ ಸಮಸ್ಯೆಗಳ ಕುರಿತು ಜಿಲ್ಲಾಡಳಿತ ಯಾ ಮೇಲಾಧಿಕಾರಿಗಳಿಗೆ ಸಮಸ್ಯೆ ಪರಿಹರಿಸುವ ಕುರಿತು ಸಲಹಾ ವರದಿ ನೀಡುತ್ತಿಲ್ಲ.

ಇನ್ನೊಂದೆಡೆ ನಿಮಿಷ ಕ್ಕೊಂದರಂತೆ ಬಸ್‍ಗಳಿಗೆ ಪರ್ಮಿಟ್ ನೀಡುವ ಸಾರಿಗೆ ಇಲಾಖೆಯೂ ಅದರ ದುಷ್ಪರಿಣಾಮಗಳ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಇಲ್ಲಿ ಬಸ್ ಮಾಲಕರ ಒತ್ತಡಕ್ಕೆ ಕಮಿಷನ್, ಕಲೆಕ್ಷನ್ ಹೆಸರಿನಲ್ಲಿ ವೇಗದ ಚಾಲನೆಗೆ ಮುಂದಾಗುವ ಚಾಲಕರ ಬಗ್ಗೆ ಬಸ್ಸಿನಲ್ಲಿರುವ ಪ್ರಯಾಣಿಕರೂ ಎಚ್ಚರಿಸುವ ಕಾಲ ಬರಲಿದೆ ಎಂದು ವೇದಿಕೆಯ ಕಾರ್ಯದರ್ಶಿ ಸುಧಾಕರ ಪೂಂಜಾ ಮಾಧ್ಯಮದೊಂದಿಗೆ ಅನಿಸಿಕೆ ಹಂಚಿಕೊಂಡರು.

Write A Comment