ಕನ್ನಡ ವಾರ್ತೆಗಳು

ಧರ್ಮ ದೇವರು ದುಡಿಮೆ ಮರೆಯಬೇಡಿ: – ಶ್ರೀ ರಂಭಾಪುರಿ ಜಗದ್ಗುರುಗಳು

Pinterest LinkedIn Tumblr

jain_pura_photo_1

ವಿಜಯಪುರ,ಡಿ.29 : ಆಧುನಿಕತೆ ಮತ್ತು ವೈಚಾರಿಕತೆಯ ಹಿನ್ನೆಲೆಯಲ್ಲಿ ಧರ್ಮ ದೇವರು ಹಾಗೂ ದುಡಿಮೆಯನ್ನು ಎಂದಿಗೂ ಮರೆಯಬಾರದೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಅಭಿಪ್ರಾಯಪಟ್ಟರು. ಅವರು ವಿಜಯಪುರ ತಾಲೂಕಿನ ಜೈನಾಪುರ ಪುನರ್ವಸತಿ ಕೇಂದ್ರದಲ್ಲಿ ನೂತನವಾಗಿ ನಿರ್ಮಾಣಗೊಂಡ ಶ್ರೀ ವೀರಭದ್ರೇಶ್ವರ ಮೂರ್ತಿ ಪ್ರತಿಷ್ಠಾಪನೆ, ಕಳಸಾರೋಹಣ, ಉದ್ಘಾಟನಾ ಅಂಗವಾಗಿ ಜರುಗಿದ ಜನಜಾಗೃತಿ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಜೀವನದ ಉನ್ನತಿಗೆ ಧರ್ಮ ಪರಿಪಾಲನೆಯ ಅಗತ್ಯವಿದೆ. ಆದರ್ಶ ಚಿಂತನೆಗಳು ಬದುಕಿನ ಶ್ರೇಯಸ್ಸಿಗೆ ಬುನಾದಿ. ಬದುಕಿನ ಅಜ್ಞಾನವೆಂಬ ಕತ್ತಲು ಕಳೆಯಲು ಶ್ರೀಗುರುವಿನ ಉಪದೇಶಾಮೃತ ಮುಖ್ಯ. ಕಾಯಿಸಿದ ಬಂಗಾರ ಒಡವೆಯಾಗುತ್ತದೆ. ಬಡಿದ ತಾಮ್ರ ತಂತಿಯಾಗುತ್ತದೆ. ಕೆತ್ತಿದ ಕಲ್ಲು ಮೂರ್ತಿಯಾಗುತ್ತದೆ. ಗುರುವಿನ ಬೋಧಾಮೃತದಿಂದ ಮನುಷ್ಯ ಮಹಾದೇವನಾಗುತ್ತಾನೆ. ಜ್ಞಾನ ಕ್ರಿಯಾತ್ಮಕವಾದ ವೀರಶೈವ ಧರ್ಮ ಸಾಮಾಜಿಕವಾಗಿ ಸಾಮರಸ್ಯಗಳನ್ನುಂಟು ಮಾಡುತ್ತದೆ.

ಶ್ರೀ ಜಗದ್ಗುರು ರೇಣುಕಾಚಾರ್ಯರು ಅಹಿಂಸಾದಿ ಧ್ಯಾನ ಪರ್ಯಂತರವಾದ ದಶಧರ್ಮ ಸೂತ್ರಗಳನ್ನು ಬೋಧಿಸಿ ಬಾಳಿಗೆ ಬೆಳಕು ತೋರಿದ್ದಾರೆ. ರಂಭಾಪುರಿ ಪೀಠದ ಕ್ಷೇತ್ರ ಮತ್ತು ಗೋತ್ರಪುರುಷನಾಗಿ ಪೂಜೆಗೊಳ್ಳುವ ಶ್ರೀ ವೀರಭದ್ರೇಶ್ವರ ಜೈನಾಪುರದಲ್ಲಿ ನೆಲೆಗೊಂಡಿರುವುದು ನಮಗೆ ಸಂತಸ ತಂದಿದೆ. ಶ್ರೀ ವೀರಭದ್ರೇಶ್ವರಸ್ವಾಮಿಯ ಕ್ರಿಯಾಕತೃತ್ವ ಶಕ್ತಿ ಅಪಾರ. ನಾಡಿನ ಉದ್ದಗಲಕ್ಕೂ ಜಾತಿ ಮತ ಪಂಥಗಳೆನ್ನದೆ ಎಲ್ಲ ಸಮುದಾಯದವರು ಪೂಜಿಸುತ್ತಾರೆ. ಜೈನಾಪುರ ಪುನರ್ವಸತಿ ಕೇಂದ್ರದಲ್ಲಿ ನೂತನವಾಗಿ ನಿರ್ಮಾಣಗೊಂಡ ಭವ್ಯ ಮತ್ತು ಸುಂದರ ವೀರಭದ್ರೇಶ್ವರ ದೇವಸ್ಥಾನ ನೋಡಿ ನಮಗೆ ಅತ್ಯಂತ ಸಂತೋಷ ತಂದಿದೆ ಎಂದ ಅವರು ಇದಕ್ಕಾಗಿ ಶ್ರಮಿಸಿದ ದಾನಿಗಳಿಗೆ ಮತ್ತು ಸೇವೆಯನ್ನು ಶ್ಲಾಘಿಸಿದರು.

ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಗಿರಿಸಾಗರದ ರುದ್ರಮುನಿ ಶಿವಾಚಾರ್ಯರು ಮಾತನಾಡಿ ಮುಳುಗಡೆಯಲ್ಲಿ ಬಂದ ಹಣ ದೇವಸ್ಥಾನದ ನಿರ್ಮಾಣ ಕಾರ್ಯಕ್ಕೆ ಸಾಕಾಗಲಿಲ್ಲ ರಂಭಾಪುರಿ ಶ್ರೀಗಳ ಕರೆಗೆ ಸದ್ಭಕ್ತರೆಲ್ಲ ಸೇರಿ ಇಂದು ವೀರಭದ್ರ ಇಲ್ಲಿ ನೆಲೆ ನಿಲ್ಲಲು ಕಾರಣರಾಗಿದ್ದಾರೆ. ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಮಾಡಿದ್ದಾರೆ ಎಂದು ಜೈನಾಪುರ ಹಾಗೂ ಸುತ್ತಲಿನ ಗ್ರಾಮದ ಭಕ್ತರ ಕುರಿತು ಅವರು ಹೇಳಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಶಿವಾನಂದ ಪಾಟೀಲ ಭಾರತ ದೇಶದಲ್ಲಿ ಶ್ರೇಷ್ಠತೆಯಿಂದ ಸತ್ಯದಿಂದ ಮುನ್ನಡೆಸುವುದು. ಬದುಕು ಕಲಿಸುವ ಧರ್ಮ ವೀರಶೈವ ಧರ್ಮ, ಊರಿನ ಜನರೆಲ್ಲ ಸೇರಿ ಹಣ ಸಂಗ್ರಹಿಸಿ, ಶ್ರಮವಹಿಸಿ ನಿರ್ಮಿಸಿ ಈ ವೀರಭದ್ರೇಶ್ವರ ದೇವಾಲಯ ಭವ್ಯವಾಗಿದ್ದು ಈ ಊರಿಗೆ ಶೋಭೆ ತಂದಿದೆ ಎಂದರು.

ಸಮಾರಂಭದಲ್ಲಿ ಕಲಾದಗಿಯ ಚಂದ್ರಶೇಖರ ಶಿವಾಚಾರ್ಯರು, ಹಾಗೂ ಬಬಲೇಶ್ವರದ ಮಹಾದೇವ ಶಿವಾಚಾರ್ಯರು, ಮಮದಾಪುರ ಮುರುಘೇಂದ್ರ ಸ್ವಾಮಿಜಿ ಉಪದೇಶಾಮೃತ ನೀಡಿದರು.
ಮುತ್ತತ್ತಿ ಗುರುಲಿಂಗ ಶಿವಾಚಾರ್ಯರು, ಬಿಲ್‌ಕೆರೂರ ಸಿದ್ಧಲಿಂಗ ಶಿವಾಚಾರ್ಯರು, ಮಸೂತಿ ಪ್ರಭುಕುಮಾರ ಶಿವಾಚಾರ್ಯರು, ತೊರವಿ ಸೋಮಶೇಖರ ಶಿವಾಚಾರ್ಯರು, ಜೈನಾಪುರ ರೇಣುಕ ಶಿವಾಚಾರ್ಯರು ಹಾಗೂ ಕೊಣ್ಣೂರು ಪ್ರಭುದೇವರು ಇನ್ನೂ ಅನೇಕ ಮಠಾಧೀಶರು ಧರ್ಮಸಭೆಯಲ್ಲಿ ಉಪಸ್ಥಿತರಿದ್ದರು.

ಬಸವರಾಜ ದೇಸಾಯಿ, ಕುಮಾರ ದೇಸಾಯಿ, ಆರ್.ಸಿ.ದೇಸಾಯಿ, ಶಿವನಗೌಡ ಪಾಟೀಲ, ಸಿದ್ದಣ್ಣ ದೇಸಾಯಿ, ಡಾ|| ಮಹೇಶ ಪಾಟೀಲ್, ಪ್ರಶಾಂತ ದೇಸಾಯಿ, ಶಂಕರ ಅವಟಿ, ಮಲ್ಲಪ್ಪ ಅವಟಿ. ವಿಠ್ಠಲ ಕಿರಶೂರ, ಧರಿಯಪ್ಪ ಕೊಂತಿಕಲ್, ಪ್ರಭುಸ್ವಾಮಿ ಹಿರೇಮಠ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ದೇವಸ್ಥಾನ ನಿಮಾಣ ಕಾರ್ಯಕ್ಕೆ ದೇಣಿಗೆ ನೀಡಿ ಕಾರ್ಯಕ್ರಮದ ಅನ್ನಸಂತರ್ಪಣೆ ನಿರ್ವಹಿಸಿದ ಮಲ್ಲಪ್ಪ ಅವಟಿ ಸೇರಿದಂತೆ ಸಾಮಾಜಿಕ ಸೇವೆಗೈದ ಸಾಧಕರನ್ನು ಸನ್ಮಾನಿಸಲಾಯಿತು.

ಗುರು ಬೆಳ್ಳುಬ್ಬಿ ಸ್ವಾಗತಿಸಿದರು, ಶಿವಾನಂದ ರೂಗಿ ನಿರೂಪಿಸಿರು. ಬಿ.ಪಿ ಕುಲಕರ್ಣಿ ವಂದಿಸಿದರು. ಸಭೆಗೂ ಮುನ್ನ ಗ್ರಾಮದ ವಿವಿಧ ರಸ್ತೆಯ ಮೂಲಕ ರಂಭಾಪುರಿ ಜಗದ್ಗುರುಗಳ ಅಡ್ಡಪಲ್ಲಕ್ಕಿ ನೇರವೇರಿತು. ಕರಡಿಮಜಲು, ಡೊಳ್ಳುಕುಣಿತ, ಕುದುರೆ ಕುಣಿತ, ವೀರಗಾಸೆ, ೧೦೦೮ ಕುಂಭಮೇಳಗಳು ವಿವಿಧ ವೇಷಭೂಷಣ ತೊಟ್ಟ ಗೊಂಬೆಗಳು ಉತ್ಸವಕ್ಕೆ ಮೆರಗು ತಂದವು.

Write A Comment