ಕನ್ನಡ ವಾರ್ತೆಗಳು

ನೀಲಯ್ಯ ಗೌಡ ನಿಗೂಡ ಸಾವು ಪ್ರಕರಣ : ಶಂಕಿತ ಆರೋಪಿ ಸೆರೆ

Pinterest LinkedIn Tumblr

Bjp_Mohan_alva

ಪುತ್ತೂರು,ಡಿ.28: ಪುತ್ತೂರು ತಾಲೂಕಿನ ಒಳಮೊಗ್ರು ಗ್ರಾಮದ ಕೈಕಾರ ಸಮೀಪದ ಕಾಪಿಕಾಡು ತೊಟ್ಲ ಎಂಬಲ್ಲಿ ಗುರುವಾರ ರಾತ್ರಿ ನಡೆದಿದ್ದ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಸಂಪ್ಯ ಠಾಣಾ ಪೊಲೀಸರು ಬಿಜೆಪಿ ಮುಖಂಡರೊಬ್ಬರನ್ನು ಶನಿವಾರ ಸಂಜೆ ವಶಕ್ಕೆ ತೆಗೆದುಕೊಂಡಿರುವುದಾಗಿ ತಿಳಿದು ಬಂದಿದೆ.

ಕೆದಂಬಾಡಿ ಗ್ರಾಮದ ಸನ್ಯಾಸಿಗುಡ್ಡೆ ಸಮೀಪದ ಕೋಡಿಯಡ್ಕ ನಿವಾಸಿ ನೀಲಯ್ಯ ಗೌಡ(43) ಎಂಬವರ ಮೃತದೇಹ ಕಾಪಿಕಾಡು ತೊಟ್ಲ ಸಮೀಪದ ರಸ್ತೆ ಬದಿಯಲ್ಲಿನ ಪೊದೆಯಲ್ಲಿ ಗುರುವಾರ ರಾತ್ರಿ ಪತ್ತೆಯಾಗಿತ್ತು. ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದ ಸಂಪ್ಯ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿ ಶನಿವಾರ ಸಂಜೆ ಕೆದಂಬಾಡಿ ಗ್ರಾಮದ ಮುಂಡಾಳ ನಿವಾಸಿ ಮೋಹನ ಆಳ್ವ ಎಂಬವರನ್ನು ವಶಕ್ಕೆ ತೆಗೆದುಕೊಂಡಿರುವುದಾಗಿ ತಿಳಿಸಿದ್ದಾರೆ.

ಬಿಜೆಪಿ ರೈತ ಮೋರ್ಚಾದ ತಾಲೂಕು ಪ್ರಧಾನ ಕಾರ್ಯದರ್ಶಿಯಾಗಿರುವ ಮೋಹನ ಆಳ್ವ ಶನಿವಾರ ಸಂಜೆ ತನ್ನ ಪತ್ನಿ ಮತ್ತು ಮಕ್ಕಳೊಂದಿಗೆ ಕಾವಿನ ಖಾಸಗಿ ವಿದ್ಯಾಸಂಸ್ಥೆಯ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಕಾರಿನಲ್ಲಿ ತೆರಳುತ್ತಿದ್ದ ವೇಳೆಯಲ್ಲಿ ಸಂಪ್ಯ ಪೊಲೀಸರು ಕೆದಂಬಾಡಿಯ ಸಾರೆಪುಣಿ ಎಂಬಲ್ಲಿ ಕಾರನ್ನು ತಡೆದು ನಿಲ್ಲಿಸಿ ಮೋಹನ ಆಳ್ವರನ್ನು ವಶಕ್ಕೆ ತೆಗೆದುಕೊಂಡಿರುವುದಾಗಿ ಮಾಹಿತಿ ಲಭಿಸಿದೆ. ಮೃತ ನೀಲಯ್ಯ ಗೌಡರಿಗೆ ಮೋಹನ ಆಳ್ವರು ಈ ಹಿಂದೆ ತಮ್ಮ ಮನೆಯ ಸಮೀಪ ಕರೆತಂದು ಆಶ್ರಯ ನೀಡಿದ್ದರು.

ಮೋಹನ ಆಳ್ವರ ಕೆಲಸದ ಆಳಾಗಿಯೂ ದುಡಿಯುತ್ತಿದ್ದ ನೀಲಯ್ಯ ಗೌಡರು ಇತ್ತೀಚೆಗೆ ಅವರೊಂದಿಗೂ ವೈರತ್ವ ಕಟ್ಟಿಕೊಂಡಿದ್ದರು. ಇವರಿಬ್ಬರ ನಡುವೆ ಜಾಗದ ವಿಚಾರಕ್ಕೆ ಸಂಬಂಸಿಯೂ ತಕರಾರು ನಡೆದಿತ್ತು ಎನ್ನಲಾಗಿದೆ. ಪೊಲೀಸರು ನೀಲಯ್ಯ ಗೌಡರ ಮೊಬೈಲ್ ಕರೆಯನ್ನು ಆಧರಿಸಿ ಮೋಹನ ಆಳ್ವರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.

Write A Comment