ಕನ್ನಡ ವಾರ್ತೆಗಳು

ಬೆಳಗಾವಿಯಲ್ಲಿ ನಡೆದ 10 ದಿನಗಳ ಚಳಿಗಾಲದ ಅಧಿವೇಶನ ನಿರಾಶೆಯೊಂದಿಗೆ ಅಂತ್ಯ : ಕ್ಯಾಪ್ಟನ್ ಗಣೇಶ್ ಕಾರ್ಣಿಕ್

Pinterest LinkedIn Tumblr

karnik_press_meet_1

ಮಂಗಳೂರು,ಡಿ.23 : ರಾಜ್ಯದ ಜನತೆಯ ಅದರಲ್ಲೂ ವಿಶೇಷವಾಗಿ ಉತ್ತರ ಕರ್ನಾಟಕ ಜನತೆ ಅಪೇಕ್ಷೆಪಟ್ಟ ಬಹು ನಿರೀಕ್ಷಿತ ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆದ ಚಳಿಗಾಲದ 10 ದಿನಗಳ ಅಧಿವೇಶನ ಅತ್ಯಂತ ನಿರಾಶೆಯೊಂದಿಗೆ ಕೊನೆಗೊಂಡಿದೆ. ಕಬ್ಬು ಬೆಳೆಗಾರರ, ಈರುಳ್ಳಿ ಬೆಳೆಗಾರರ, ಮೆಕ್ಕೆ ಜೋಳ ಬೆಳೆಗಾರರ ಹಾಗೂ ಉತ್ತರ ಕರ್ನಾಟಕದ ರೈತರು ತಮ್ಮ ಸಮಸ್ಯೆಗಳಿಗೆ ಪರಿಹಾರ ನಿರೀಕ್ಷಿಸಿ ದೊಡ್ಡ ಪ್ರಮಾಣದ ಪ್ರತಿಭಟನೆ ನಡೆಸಿದರೂ ಯಾವುದೇ ಪರಿಹಾರವನ್ನು ಒದಗಿಸದೇ ಮತ್ತೊಮ್ಮೆ ಹಾರಿಕೆಯ ಉತ್ತರದೊಂದಿಗೆ ಈ ಸರ್ಕಾರ ಬೇಜವಬ್ದಾರಿಯ ಸರ್ಕಾರ ಎಂಬುದನ್ನು ಸಾಬೀತುಪಡಿಸಿದೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಹೇಳಿದರು.

ಮಂಗಳವಾರ ನಗರದಲ್ಲಿ ಸುದ್ಧಿಗಾರರ ಜೊತೆ ಮಾತನಾಡಿದ ಅವರು, ಒಂದು ವರ್ಷದ ಹಿಂದೆ ವಿಠ್ಠಲ್ ಹರಭಾವಿ ಎಂಬ ರೈತ ಆತ್ಮಹತ್ಯೆಯೊಂದಿಗೆ ಉಲ್ಬಣಗೊಂಡ ಕಬ್ಬು ಬೆಳೆಗಾರರ ಸಮಸ್ಯೆ ಮುಂದುವರೆದು ಸರ್ಕಾರ ಘೊಷಣೆ ಮಾಡಿದ ಹಣವನ್ನು ಸಹ ಕಬ್ಬು ಅರೆಯುವ ಕಾರ್ಖಾನೆಗಳ ಮಾಲಕರಿಂದ ರೈತರಿಗೆ ಕೊಡಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದರು.

ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ದಶಕಗಳಿಂದ ನೆನೆಗುದಿಗೆ ಬಿದ್ದು ಆಮೆಗತಿಯಲ್ಲಿ ಸಾಗುತ್ತಿರುವ ಹಲವಾರು ನೀರಾವರಿ ಯೋಜನೆಗಳ ಅನುಷ್ಠಾನದಲ್ಲಿನ ವಿಳಂಬ ನೀತಿ, ವ್ಯಾಪಕ ಬ್ರಷ್ಟಚಾರ, ಸಾವಿರಾರು ಕೋಟಿ ರೂಪಾಯಿಗಳ ನಷ್ಟ, ನಂಜುಂಡಪ್ಪ ವರದಿಯ ಅನುಷ್ಠಾನದಲ್ಲಿನ ವಿಳಂಬ, ಉತ್ತರ ಕರ್ನಾಟಕದ ಹಿನ್ನಡೆಗೆ ಕಾರಣಗಳು ಹಾಗೂ ನಿರ್ದಿಷ್ಟ ಪರಿಹಾರ ಮುಂತಾದವುಗಳ ಬಗ್ಗೆ ಸಾಕಷ್ಟು ಚರ್ಚೆ ನಡೆದು, ಸರ್ಕಾರದಿಂದ ಒಂದು ಖಚಿತ ನಿಲುವನ್ನು ರಾಜ್ಯದ ಜನತೆ ಅಪೇಕ್ಷಿಸಿದ್ದರೂ, ಮುಖ್ಯ ಮಂತ್ರಿಗಳು ನೀಡಿದ ಹಾರಿಕೆಯ ಉತ್ತರ ಮತ್ತು ಯಾವುದೇ ಸ್ಪಷ್ಟ ಯೋಜನೆಗಳನ್ನು ಪ್ರಕಟಿಸದೆ ಇರುವುದು ರಾಜ್ಯದ ಜನತೆಯಲ್ಲಿ ನಿರಾಶೆ ಮೂಡಿಸಿದೆ.

ರಾಜ್ಯ ಸರ್ಕಾರದ ಮಂತ್ರಿ ಮಂಡಲದ 3  ಭ್ರಷ್ಟ ಮಂತ್ರಿಗಳ ವಿರುದ್ಧ ದಾಖಲೆ ಸಹಿತ ಸದನಗಳಲ್ಲಿ ಚರ್ಚಿಸಲು ನಿಯಮಾನುಸಾರ ಅವಕಾಶ ಕೋರಿದ್ದರೂ , ಕ್ಷುಲಕ ಕಾರಣ ನೀಡಿ ಪಾರದರ್ಶಕತೆಯ ಅವಶ್ಯಕತೆಗೆ ತಿಲಾಂಜಲಿ ನೀಡಿ ತಾನು ಭ್ರಷ್ಟ ಸರ್ಕಾರ ಎನ್ನುವುದನ್ನು ಸನ್ಮಾನ್ಯ ಮುಖ್ಯಮಂತ್ರಿಗಳು ದೃಢಪಡಿಸಿದ್ದಾರೆ.

ವಕ್ಫ್ ಸಚಿವರಾದ ಕಮರುಲ್ ಇಸ್ಲಾಮ್‌ರ ವಕ್ಫ್ ಹಗರಣ, ಸನ್ಮಾನ್ಯ ಸಚಿವರಾದ ದಿನೇಶ್ ಗುಂಡುರಾವ್‌ರವರು ಸರ್ಕಾರಿ ಜಮೀನನ್ನು ಅತಿಕ್ರಮಣ ಮಾಡಿ ಲೋಕಾಯುಕ್ತಕ್ಕ ತಪ್ಪು ಮಾಹಿತಿ ನೀಡಿರುವುದು ಹಾಗೂ ಅತಿಕ್ರಮಿಸಿದ ಸರ್ಕಾರಿ ಜಮೀನನ್ನು ವಾಪಾಸ್ಸು ನೀಡುವುದಾಗಿ ಹೇಳಿರುವುದು ಮತ್ತು ಸಕ್ಕರೆ ಸಚಿವರಾದ ಶ್ರೀ ಮಹದೇವ ಪ್ರಸಾದರವರು ಸುಳ್ಳು ಅಫಿಡವಿಟ್ ಸಲ್ಲಿಸಿ ಸರ್ಕಾರಿ ನಿವೇಶನ ಪಡೆದಿರುವುದು ಸದನಗಳಲ್ಲಿ ಚರ್ಚೆಯಾಗಬೇಕಿದ್ದು, ಸರ್ಕಾರ ವಾಸ್ತವದಿಂದ ಪಲಾಯನಗೈಯುತ್ತಿರುವುದು ರಾಜ್ಯದ ಜನತೆಗೆ ಮಾಡಿದ ಘೋರ ಅನ್ಯಾಯವಾಗಿದೆ.

karnik_press_meet_2

ರಾಜ್ಯದಲ್ಲಿ ಅಧಿಕಾರ ಸ್ವೀಕರಿಸಿದ ದಿನದಿಂದ ರಾಜ್ಯದ ಎಲ್ಲಾ ಜನರ ಶ್ರೀಯೋಭಿವೃದ್ಧಿಯನ್ನು ಗಮನಿಸಬೇಕಾದ ರಾಜ್ಯ ಸರ್ಕಾರ ತನ್ನ ಜವಬ್ದಾರಿ ಮರೆತು ಯಾವುದೊ ಒಂದು ಸಮುದಾಯದ ಸಣ್ಣ ಗುಂಪಿನ ಹಿತವನ್ನು ಮುಂದಿಟ್ಟುಕೊಂಡು ರಾಜಕೀಯ ಲಾಭಕ್ಕಾಗಿ ಹೊರಟಿರುವುದು ಅತ್ಯಂತ ಖಂಡನೀಯ ಎಂದು ಕಾರ್ಣಿಕ್ ವಿಷಾದ ವ್ಯಕ್ತ ಪಡಿಸಿದರು..

ಸಂವಿಧಾನದ ಆಶಯದಂತೆ ಮತ್ತು ಮಹತ್ಮಾ ಗಾಂಧಿಜೀಯವರ ಕನಸಿನಂತೆ ಗೋ ತಳಿ ಸಂತತಿಯ ಅಭಿವೃದ್ಧಿಗಾಗಿ ಈ ಹಿಂದಿನ ಸರ್ಕಾರ 1964 ರ ಗೋ ಹತ್ಯಾ ನಿಷೇಧದ ಕಾನೂನಿಗೆ ಸಂಶೋಧನೆ ತಂದು ಇನ್ನಷ್ಟು ಜೀವ ತುಂಬಿದ್ದರೂ ಆ ಕಾನೂನನ್ನು ಹಿಂಪಡೆಯುವ ಮೂಲಕ ಸರ್ಕಾರ ತಾನು ರಾಜ್ಯದ ಬಹು ಸಂಖ್ಯಾತ ಸಮುದಾಯದ ಆಶೋತ್ತರಗಳ ವಿರೋಧಿ ಎಂಬುದನ್ನು ದೃಢಪಡಿಸಿದೆ.

ಜಾತ್ಯಾತೀತ ರಾಷ್ಟ್ರದಲ್ಲಿ ಸರ್ವಧರ್ಮ ಸಮಭಾವ ಯಾವುದೇ ನಾಗರಿಕ ಸರ್ಕಾರದ ಜವಬ್ದಾರಿಯಾಗಿದ್ದು, ಕೇವಲ ಬಹು ಸಂಖ್ಯಾತ ಧಾರ್ಮಿಕ ಸಂಸ್ಥೆಗಳ ಆಡಳಿತದಲ್ಲಿ ಮೂಗು ತೂರಿಸಲು ಅನುಕೂಲವಾಗುವ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳ ಮತ್ತು ಧರ್ಮಾದಾಯ ದತ್ತಿಗಳ ವಿಧೇಯಕ ಮಂಡನೆಯ ಮೂಲಕ ಬಹು ಸಂಖ್ಯಾತ ಸಮುದಾಯದ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸುವ ಕರ್ನಾಟಕ ಸರ್ಕಾರದ ಈ ಒಡೆದು ಆಳುವ ನೀತಿಯನ್ನು ಭಾರತೀಯ ಜನತಾ ಪಾರ್ಟಿ ಉಗ್ರವಾಗಿ ಖಂಡಿಸುತ್ತದೆ.

ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ, ಮಾನ್ಯ ಉಚ್ಚ ನ್ಯಾಯಾಲಯ ಹಾಗೂ ಸರ್ವೋಚ್ಚ ನ್ಯಾಯಾಲಯಗಳ ತೀರ್ಪುಗಳನ್ನು ಪರಿಗಣಿಸದೇ ಅನುದಾನಿತ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿಗಳಿಗೆ ಕನ್ನಡ ಬಡ್ತಿ ನೀಡಲು ನಿರಾಕರಿಸಿ ಈ ಕುರಿತಾಗಿ ವಿಧೇಯಕದ ಮಂಡನೆ ಮಾಡುವ ಮೂಲಕ ರಾಜ್ಯ ಸರ್ಕಾರ ತನ್ನ ಶಿಕ್ಷಕ ವಿರೋಧಿ ನೀತಿಯನ್ನು ಹಾಗೂ ಕನ್ನಡ ವಿರೋಧಿ ನೀತಿಯನ್ನು ಅನುಸರಿಸುತ್ತಿರುವ ರೀತಿಯನ್ನು ಭಾರತೀಯ ಜನತಾ ಪಾರ್ಟಿ ಖಂಡಿಸುತ್ತಾ, ಶಿಕ್ಷಕರಿಗೆ ನ್ಯಾಯ ಒದಗಿಸುವ ತನ್ನ ಹೋರಾಟವನ್ನು ಹಾಗೂ ಶಿಕ್ಷಕರ ನ್ಯಾಯೋಚಿತವಾದ ಬೇಡಿಕೆಗಳನ್ನು ಧಮನಿಸುವ ರಾಜ್ಯ ಸರ್ಕಾರದ ಸರ್ವಾಧಿಕಾರಿ ಧೋರಣೆಯನ್ನು ಭಾರತೀಯ ಜನತಾ ಪಾರ್ಟಿ ಖಂಡಿಸುತ್ತದೆ.

ರಾಜ್ಯದ ಜನತೆಯನ್ನು ಆತಂಕಕ್ಕೀಡು ಮಾಡಿರುವ ಶಾಲಾಗಳಲ್ಲಿ ನಡೆಯುತ್ತಿರುವ ದೌರ್ಜನ್ಯ, ಅತ್ಯಾಚಾರ ಹಾಗೂ ಲೈಂಗಿಕ ಕಿರುಕುಳಗಳಿಂದ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಕುಸಿತ ಮುಂತಾದವುಗಳ ಕುರಿತು ಸದನಗಳಲ್ಲಿ ನಿಯಮಾನುಸಾರ ವಿಸ್ತೃತ ಚರ್ಚೆ ನಡೆಸಲು ಹಾಗೂ ಸೂಕ್ತ ಪರಿಹಾರ ಕಂಡುಕೊಳ್ಳುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದರೂ ಸರ್ಕಾರ ಚರ್ಚೆಯಿಂದಲೇ ಪಲಾಯನಗೈದಿರುವುದು ಅತ್ಯಂತ ನಾಚಿಕೆಗೇಡು. ಭಾರತೀಯ ಜನತಾ ಪಾರ್ಟಿ ರಾಜ್ಯದ ಈ ಎಲ್ಲಾ ಸಮಸ್ಯೆಗಳ ಕುರಿತು ತನ್ನ ಹೋರಾಟ ಮುಂದುವರೆಸುತ್ತಾ, ಕರ್ನಾಟಕ ರಾಜ್ಯದ ಅತ್ಯಂತ ಅಧಕ್ಷ, ಬೇಜಬ್ದಾರಿಯ ಹಾಗೂ ಒಡೆದು ಆಳುವ ನೀತಿಯನ್ನು ಅನುಸರಿಸುತ್ತಿರುವ ಸರ್ಕಾರ ವಿರುದ್ಧ ಮುಂದಿನ ದಿನಗಳಲ್ಲಿ ತನ್ನ ಪ್ರತಿಭಟನೆಯನ್ನು ಇನ್ನೂ ತೀವ್ರಗೊಳಿಸಲಿದೆ ಎಂದು ಗಣೇಶ್ ಕಾರ್ಣಿಕ್ ಹೇಳಿದರು.

Write A Comment