ಕನ್ನಡ ವಾರ್ತೆಗಳು

ಕಾಂಗ್ರೆಸ್ ಸರ್ಕಾರದಿಂದ ಶಾಂತಿಯುತ ಪ್ರತಿಭಟನೆ ನಡೆಸುವ ಹಕ್ಕನ್ನು ಹತ್ತಿಕುವ ಪ್ರಯತ್ನ : ಮೋನಪ್ಪ ಭಂಡಾರಿ ಆರೋಪ

Pinterest LinkedIn Tumblr

monnappa_Bhandry_Press_1

ಮಂಗಳೂರು : ಮಂಗಳೂರು ಮಹಾನಗರಪಾಲಿಕೆಗೆ ಆಯುಕ್ತರ ನೇಮಕ ಪ್ರಕ್ರಿಯೆಯು ಜಿಲ್ಲೆಯ ಕಾಂಗ್ರೆಸ್ ನಾಯಕರ ಒಳಜಗಳದಿಂದ ನೆನೆಗುದಿಗೆ ಬಿದ್ದಿದ್ದು, ನಗರಪಾಲಿಕೆಯ ಅಭಿವೃದ್ಧಿ ಕಾಮಗಾರಿಗಳು ಸಂಪೂರ್ಣ ಸ್ಥಗಿತಗೊಂಡಿದ್ದು, ಈ ಬಗ್ಗೆ ತೀರಾ ನಿರ್ಲಕ್ಷ್ಯ ತಾಳಿರುವ ನಗರಾಭಿವೃದ್ಧಿ ಸಚಿವ ಶ್ರೀ ವಿನಯಕುಮಾರ್ ಸೊರಕೆ ಇಂದು ನಗರದ ಖಾಸಗೀ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬರುವುದನ್ನು ಅರಿತು ಬಿಜೆಪಿ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶನ ಮಾಡಿ ಪ್ರತಿಭಟಿಸಲು ನಿರ್ಧರಿಸಿದ್ದರು. ಆದರೆ ಶಾಂತಿಯುತ ಪ್ರತಿಭಟನೆಗೆ ಸಿದ್ಧರಾದ ಬಿಜೆಪಿ ಕಾರ್ಯಕರ್ತರನ್ನು ಬಂಧಿಸಿರುವುದು ಜನತೆಗೆ ಪ್ರಜಾಪ್ರಭುತ್ವ ರೀತಿಯಲ್ಲಿ ಪ್ರತಿಭಟನೆ ನಡೆಸುವ ಹಕ್ಕನ್ನು ಕಸಿದುಕೊಂಡಂತಾಗಿದೆ ಎಂದು ಬಿಜೆಪಿ ಮುಖಂಡ, ವಿಧಾನ ಪರಿಷತ್ ಮಾಜಿ ಸದಸ್ಯ ಮೋನಪ್ಪ ಭಂಡಾರಿ ಟೀಕಿಸಿದ್ದಾರೆ.

ಸೋಮವಾರ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಚಿವರು ಬಿಜೆಪಿ ಪ್ರತಿಭಟನೆಯನ್ನು ತಿಳಿದುಕೊಂಡು ಪೊಲೀಸರ ಮುಖಾಂತರ ಶಾಂತಿಯುತ ಪ್ರತಿಭಟನೆಗೆ ನಿರ್ಧರಿಸಿದ್ದ ಬಿಜೆಪಿ ಕಾರ್ಯಕರ್ತರನ್ನು ಬಂಧಿಸಿದ ಅನಂತರ ಕಾರ್ಯಕ್ರಮಕ್ಕೆ ವಿಳಂಬವಾಗಿ ಆಗಮಿಸಿರುವುದು ಸಚಿವರ ಪ್ರಜಾಪ್ರಭುತ್ವ ವಿರೋಧಿ ನಿಲುವನ್ನು ಸೂಚಿಸುತ್ತದೆ ಎಂದು ಹೇಳಿದರು.

monnappa_Bhandry_Press_2

ಈ ಹಿಂದೆ ಮಹಾನಗರಪಾಲಿಕೆಯ ಕಚೇರಿ ಮುಂಭಾಗದಲ್ಲಿ ಬಿಜೆಪಿ ಪ್ರತಿಭಟನೆ ನಡೆಸಿದಾಗ ಮಹಾಪೌರರಾದ ಮಹಾಬಲ ಮಾರ್ಲರು, ಮಹಾನಗರಪಾಲಿಕೆಯಲ್ಲಿ ಆಯುಕ್ತರ ನೇಮಕ ವಿಳಂಬದಿಂದ ಯಾವುದೇ ಸಮಸ್ಯೆಯಿಲ್ಲ, ಅಭಿವೃದ್ಧಿ ಕಾರ್ಯಗಳು ತನ್ನಿಂತಾನೇ ನಡೆಯುತ್ತಲೇ ಇರುತ್ತದೆ ಎಂದು ನಾಗರಿಕರನ್ನು ತಪ್ಪು ದಾರಿಗೆಳೆದಿದ್ದರು. ವಾಸ್ತವಿಕವಾಗಿ, ನಗರದ ಬಹುಮುಖ್ಯ ಅಭಿವೃದ್ಧಿ ಕಾಮಗಾರಿಗಳಾದ ಬಸ್ ನಿಲ್ದಾಣ, ಪರಿಶಿಷ್ಠ ವರ್ಗ ಪಂಗಡಗಳಿಗಾಗಿ ಕಲ್ಯಾಣ ಯೋಜನೆಗಳು, ಕಚೇರಿ ಕಂಪ್ಯೂಟರೀಕರಣ ಪ್ರಸ್ತಾವ, ಮಾರುಕಟ್ಟೆ ನಿರ್ಮಾಣ, ಕಾಂಕ್ರೀಟ್ ರಸ್ತೆ, ಪುಟ್‌ಪಾತ್, ರಸ್ತೆ ಅಗಲೀಕರಣ ಮುಂತಾದ ಅನೇಕ ಯೋಜನೆಗಳು ಅನುಷ್ಠಾನಕ್ಕಾಗಿ ಆಯುಕ್ತರ ಅಂಕಿತಕ್ಕಾಗಿ ತಡೆಹಿಡಿಯಲ್ಪಟ್ಟಿದೆ. ನೂತನ ಆಯಕ್ತರ ನೇಮಕ ಆಗದೆ ಆಡಳಿತ ಯಂತ್ರ ಬಹುತೇಕ ಸ್ಥಬ್ದಗೊಂಡಿದೆ ಎಂದು ಆರೋಪಿಸಿದರು.

ಮುಂದಿನ ದಿನಗಳಲ್ಲಿ ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳದಿದ್ದಲ್ಲಿ ಬಿಜೆಪಿ ತೀವ್ರ ತರನಾದ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಿದೆ. ತಮ್ಮ ಒಳಜಗಳ ಮತ್ತು ಅರ್ಹ ವ್ಯಕ್ತಿ ಲಭ್ಯವಿಲ್ಲ ಎಂಬ ಕ್ಷುಲ್ಲಕ ಕಾರಣ ನೀಡಿ ಆಯುಕ್ತರ ನೇಮಕವನ್ನು ಮುಂದೂಡುತ್ತಿರುವ ನಗರಾಭಿವೃದ್ಧಿ ಸಚಿವ ವಿನಯಕುಮಾರ್ ಸೊರಕೆ ಮತ್ತು ಮುಖ್ಯಮಂತ್ರಿ ಸಿದ್ಧರಾಮಯ್ಯನವರು ನಗರದಲ್ಲಿ ಭಾಗವಹಿಸುವ ಪ್ರತೀ ಕಾರ್ಯಕ್ರಮದಲ್ಲಿಯೂ ಅವರಿಗೆ ಕರಿಪತಾಕೆ ತೋರಿಸಿ ಪ್ರತಿಭಟನೆ ನಡೆಸಲಾಗುವುದು. ಇದಕ್ಕೂ ಪ್ರತಿಕ್ರಿಯಿಸದಿದ್ದಲ್ಲಿ, ರಸ್ತೆ ತಡೆ, ಧರಣಿ ಸತ್ಯಾಗ್ರಹಗಳನ್ನು ನಡೆಸಲಿದೆ. ಮಾತ್ರವಲ್ಲದೆ ಕೌನ್ಸಿಲ್‌ನ ಒಳಗೂ ಪ್ರತಿಭಟಿಸಲಾಗುವುದು ಎಂದು ಭಂಡಾರಿ ಎಚ್ಚರಿಕೆ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ರವಿಶಂಕರ್ ಮಿಜಾರ್, ಸತೀಶ್ ಪ್ರಭು, ಮಹಾನಗರ ಪಾಲಿಕೆಯ ವಿಪಕ್ಷ ನಾಯಕ ಪ್ರೇಮಾನಂದ ಶೆಟ್ಟಿ, ಕಾರ್ಪೊರೇಟರ್ ರೂಪಾ.ಡಿ.ಬಂಗೇರಾ ಮುಂತಾದವರು ಉಪಸ್ಥಿತರಿದ್ದರು.

Write A Comment