ಕನ್ನಡ ವಾರ್ತೆಗಳು

ಎಂ‌ಆರ್‌ಪಿಎಲ್ ಕೋಕ್- ಸಲ್ಫರ್ ಘಟಕ ಮುಚ್ಚುವಂತ್ತೆ ಆಗ್ರಹಿಸಿ ಎಂಎಸ್.ಇ.ಜೆಡ್ ಕಚೇರಿ ಮುಂಭಾಗ ಪೊರಕೆ ಪ್ರದರ್ಶನಾ ಮೂಲಕ ಪ್ರತಿಭಟನೆ

Pinterest LinkedIn Tumblr

dyfi_porake_protest_1

ಮಂಗಳೂರು :ಎಂಆರ್‌ಪಿಎಲ್ ಮತ್ತು ಎಂಎಸ್ ಇ ಝಡ್‌ನ ಕೈಗಾರಿಕಾ ಮಾಲಿನ್ಯಗಳ ವಿರುದ್ಧ ಹೋರಾಟ ನಿರತ ನಾಗರಿಕರ ಮೇಲೆ ಸುಳ್ಳು ಪ್ರಕರಣ ದಾಖಲಿಸುತ್ತಿರುವ ಕಂಪೆನಿ ಮತ್ತು ಜಿಲ್ಲಾಡಳಿತದ ದೌರ್ಜನ್ಯ ವಿರುದ್ಧ ಹಾಗೂ ಎಂಆರ್‌ಪಿಎಲ್‌ನ ಕೋಕ್, ಸಲ್ಫರ್ ಘಟಕ ಮುಚ್ಚಲು ಒತ್ತಾಯಿಸಿ ಜೋಕಟ್ಟೆ ನಾಗರಿಕ ಹೋರಾಟ ಸಮಿತಿ ವತಿಯಿಂದ ಸೋಮವಾರ ಉರ್ವಸ್ಟೋರ್‌ನಲ್ಲಿರುವ ಎಂಎಸ್ ಇ ಝಡ್‌ ಕಂಪೆನಿಯ ಪ್ರಧಾನ ಕಚೇರಿ ಮುಂಭಾಗ ಪೊರಕೆ ಪ್ರದರ್ಶನದ ಮೂಲಕ ಪ್ರತಿಭಟನೆ ನಡೆಸಲಾಯಿತು.

ಮೊದಲಿಗೆ ಪೊರಕೆ ಕೈಯಲ್ಲಿ ಹಿಡಿದ ನೂರಾರು ಪ್ರತಿಭಟನೆಕಾರರು ಕೊಟ್ಟಾರ ಚೌಕಿಯಿಂದ ಉರ್ವಸ್ಟೋರ್‌ನಲ್ಲಿರುವ ಎಂ ಎಸ್ ಇ ಝಡ್‌ ಕಚೇರಿವರೆಗೆ ಮೆರವಣಿಗೆಯಲ್ಲಿ ತೆರಳಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ಮುಂದುವರಿಸಿದರು.

dyfi_porake_protest_2 dyfi_porake_protest_3 dyfi_porake_protest_4

ಪ್ರತಿಭಟನಕಾರರನ್ನುದ್ದೇಶಿಸಿ ಜೋಕಟ್ಟೆ ನಾಗರಿಕ ಹೋರಾಟ ಸಮಿತಿಯ ಸಂಚಾಲಕ ಬಿ.ಎಸ್. ಹುಸೈನ್ ಅವರು ಮಾತನಾಡಿ, ಕಳವಾರು ಸುತ್ತಮುತ್ತಲ ಗ್ರಾಮಸ್ಥರ ಬದುಕಿನ ನೆಮ್ಮದಿಗೆ ಕಂಟಕವಾಗಿರುವ ವಿಷಪೂರಿತ ಕೋಕ್, ಸಲ್ಫರ್ ಘಟಕ ಮುಚ್ಚಲು ಒತ್ತಾಯಿಸಿ ಎಂಆರ್ ಪಿ ಎಲ್ ಹಾಗೂ ಎಸ್ ಇ ಝಡ್ ವಿರುದ್ದ ನಾಗರಿಕರು ಹಲವು ತಿಂಗಳುಗಳಿಂದ ನಡೆಸುತ್ತಿರುವ ಹೋರಾಟವನ್ನು ಜಿಲ್ಲಾಡಳಿತ ಮತ್ತು ಕಂಪೆನಿ ಪೊಲೀಸ್ ಬಲಪ್ರಯೋಗಿಸಿ ದಮನಿಸುತ್ತಿದೆ. ಜನತೆಯ ನ್ಯಾಯಯುತ ಬೇಡಿಕೆಗೆ ಜಿಲ್ಲಾಡಳಿತ ಯಾವುದೇ ಸ್ಪಂದನೆ ನೀಡದಿರುವುದರಿಂದ ಕಂಪೆನಿ ಪರಿಸರದಲ್ಲಿ ಹೋರಾಟ ತೀವ್ರಗೊಳಿಸಬೇಕಾಯಿತು.

ಕಳೆದ ಒಂದು ತಿಂಗಳಿನಿಂದ ಎಸ್ ಇ ಝಡ್‌ನ ರಸ್ತೆ ಮತ್ತು ಕಂಪೌಂಡು ಕಾಮಗಾರಿಯನ್ನು ಸ್ಥಳೀಯ ಜನತೆ ನಾಗರಿಕ ಹೋರಾಟ ಸಮಿತಿಯ ನೇತೃತ್ವದಲ್ಲಿ ತಡೆ ಹಿಡಿದಿದ್ದಾರೆ. ಇಷ್ಟಾದರೂ ಸಮಸ್ಯೆ ಪರಿಹರಿಸಲು ಕ್ರಮಕೈಗೊಳ್ಳದ ಕಂಪೆನಿ ಮತ್ತು ಜಿಲ್ಲಾಡಳಿತ ಹೋರಾಟವನ್ನು ಹತ್ತಿಕ್ಕುವ ಭಾಗವಾಗಿ ನಾಗರಿಕ ಹೋರಾಟ ಸಮಿತಿಯ ಮುಖಂಡರ ಮೇಲೆ ಸರಣಿ ಸುಳ್ಳು ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸುತ್ತಿದೆ ಈ ಹಿನ್ನೆಲೆಯಲ್ಲಿ ಕೋಕ್, ಸಲ್ಫರ್ ಘಟಕದ ಸಮಸ್ಯೆ ಬಗೆಹರಿಸಲು ಒತ್ತಾಯಿಸಿ ಹಾಗೂ ಸುಳ್ಳು ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದನ್ನು ವಿರೋಧಿಸಿ ಜೋಕಟ್ಟೆ ನಾಗರಿಕ ಹೋರಾಟ ಸಮಿತಿ ವತಿಯಿಂದ ಈ ಪ್ರತಿಭಟನೆಯನ್ನು ಹಮ್ಮಿಕೊಳ್ಳಬೇಕಾಯಿತು ಎಂದು ಹೇಳಿದರು.

dyfi_porake_protest_6 dyfi_porake_protest_5

ಸಾರ್ವಜನಿಕರ ಸಮಸ್ಯೆಗೆ ಕಾರಣವಾಗಿರುವ ಎಂಆರ್‌ಪಿಎಲ್ ಕೋಕ್ ಹಾಗೂ ಸಲ್ಫರ್ ಘಟಕವನ್ನು ಕೂಡಲೇ ಮುಚ್ಚಬೇಕು. ಹಾಗೂ ಎಸ್.ಇ.ಜೆಡ್ ದೋರಣೆ ವಿರುದ್ಧ ಧ್ವನಿ ಎತ್ತಿದ್ದ ಹೋರಾಟಗಾರರ ಮೇಲೆ ದಾಖಲಿಸಿರುವ ಸುಳ್ಳು ಕೇಸನ್ನು ರದ್ಧು ಪಡಿಸಬೇಕು ಎಂದು ಡಿ.ವೈ.ಎಫ್.ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಆಗ್ರಹಿಸಿದರು.

Write A Comment