ಕನ್ನಡ ವಾರ್ತೆಗಳು

ಸದನದಲ್ಲಿ ಕೊಂಕಣಿಯಲ್ಲಿ ಮಾತನಾಡಲು ಐವನ್ ವಿಫಲ ಯತ್ನ – ರಾಜ್ಯದ ಎಲ್ಲ ವಿವಿಗಳಲ್ಲಿ ಕೊಂಕಣಿ ಪೀಠ ಸ್ಥಾಪನೆಗೆ ಆಗ್ರಹ

Pinterest LinkedIn Tumblr

ivan_in_lc

ಮಂಗಳೂರು, ಡಿ.16: ಪಿ.ಯು.ಸಿ. ಪದವಿ ಪೂರ್ವ ಹಂತದಲ್ಲಿ ಕೊಂಕಣಿ ಭಾಷೆ ಕಲಿಕೆಗೆ ಲಭ್ಯವಿಲ್ಲ. 2012 ರಲ್ಲಿಯೇ ಕರುಡು ಪಠ್ಯಕ್ರಮವನ್ನು ರಚಿಸಿ ಪದವಿಪೂರ್ವ ಇಲಾಖೆಗೆ ಮನವಿ ನೀಡಿದರೂ ಪಿ.ಯು.ಸಿ. ಮಟ್ಟದಲ್ಲಿ ಕೊಂಕಣಿ ಕಲಿಕೆಗೆ ಅವಕಾಶ ನೀಡಲಾಗಿಲ್ಲ. ಕೊಂಕಣಿ ಭಾಷೆಯ ಅಭಿವೃದ್ಧಿಗಾಗಿ ರಾಜ್ಯದ ಎಲ್ಲಾ ವಿಶ್ವವಿದ್ಯಾನಿಲಯಗಳಲ್ಲಿ ಕೊಂಕಣಿ ಅಧ್ಯಯನ ಪೀಠವನ್ನು ಸ್ಥಾಪಿಸಲು ಕ್ರಮಕೈಗೊಳ್ಳಬೇಕು ಎಂದು ಐವನ್ ಡಿಸೋಜಾ ಆಗ್ರಹಿಸಿದ್ದಾರೆ.

ವಿಧಾನ ಮಂಡಳದ ಪರಿಷತ್ ಕಲಾಪದಲ್ಲಿ ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಐವನ್ ಡಿಸೋಜಾ ಕೊಂಕಣಿಯಲ್ಲಿಯೇ ಪ್ರಶ್ನೆ ಕೇಳಲು ಅವಕಾಶ ಕೋರಿದರು ಸಭಾಪತಿ ಕೊಂಕಣಿ ಭಾಷಾಂತರ ಮಾಡವವರು ಇಲ್ಲಿ ಇಲ್ಲ. ಕೊಂಕಣಿಯಲ್ಲಿ ಮಾತನಾಡಿದರೆ ಸದಸ್ಯರಿಗೆ ತಿಳಿಯುವುದಿಲ್ಲ ಎಂದು ಹೇಳಿದರಾದರೂ ಐವನ್ ಕೊಂಕಣಿಯಲ್ಲಿಯೇ ಮಾತನಾಡುವ ಪಟ್ಟು ಹಿಡಿದಿದ್ದರು. ಕೊಂಕಣಿಯಲ್ಲಿ ಮಾತನಾಡಿದರೆ ದಾಖಲೆಯಾಗುತ್ತದೆಯೇ ವಿನಃ ವಿಷಯ ಚರ್ಚೆಗೆ ಬರುವುದಿಲ್ಲ ಎಂದು ಎಚ್ಚರಿಸಿದ ಬಳಿಕ ಐವನ್ ಕನ್ನಡದಲ್ಲಿ ಪ್ರಶ್ನೆ ಕೇಳಿದರು.  ಕೊಂಕಣಿ ಭಾಷೆಯು ಸಂವಿಧಾನದ ೮ನೆ ಪರಿಚ್ಛೇದದಲ್ಲಿ ಸೇರ್ಪಡೆಗೊಂಡಿದೆ. ಹಿಂದೂ ಮುಸ್ಲಿಂ, ಕ್ರೈಸ್ತ ಸಮುದಾಯದ ಸುಮಾರು 15 ಲಕ್ಷಕ್ಕೂ ಅಧಿಕ ಮಂದಿ ಕೊಂಕಣಿ ಭಾಷೆ ಮಾತನಾಡುತ್ತಾರೆ ಆದರೆ ಕೊಂಕಣಿ ಕಲಿಕೆಯನ್ನು ಉತ್ತಮರ ಕನ್ನಡ,ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ಮಾತ್ರ ಸೀಮಿತಗೊಳಿಸಿರುವುದರಿಂದ ಭಾಷೆಯ ಅಭಿವೃದ್ಧಿಗೆ ಕೊಂಕಣಿ ಭಾಷೆಯ ಅಭಿವೃದ್ದಿಗೆ ಹಿನ್ನಡೆಯಾಗಿದೆ. ಈ ಸಮಸ್ಯೆಯನ್ನು ಬಗೆಹರಿಸಲು ಪ್ರಾಥಮಿಕ ಹಾಗೂ ಪ್ರೌಢ ಮಟ್ಟದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕೊಂಕಣಿ ಭಾಷೆಯನ್ನು ತೃತೀಯ ಭಾಷೆಯಾಗಿ ಕಲಿಯಲು ಅವಕಾಶ ಕಲ್ಪಿಸಬೇಕು ಎಂದು ಐವನ್ ಕೋರಿದರು.

ರಾಜ್ಯ ಸರ್ಕಾರವು 22 ವರ್ಷಗಳ ಹಿಂದೆಯೇ ಕೊಂಕಣಿ ಭಾಷೆಯ ಬೆಳವಣಿಗಾಗಿ ಕೊಂಕಣಿ ಸಾಹಿತ್ಯ ಅಕಾಡೆಮಿಯನ್ನು ಸ್ಥಾಪಿಸಿ, 2007 ರಲ್ಲಿ ಕೊಂಕಣಿ ಭಾಷೆಯನ್ನು ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ತೃತೀಯ ಭಾಷೆಯನ್ನಾಗಿ ಶಾಲಾ ಪಠ್ಯ ಪುಸತಿಕಗಳಲ್ಲಿ ಸೇರಿಸಿ ಪ್ರಸ್ತುತ ಸುಮಾರು 1500 ವಿದ್ಯಾರ್ಥಿಗಳು ಕರಾವಳಿ ಕರ್ನಾಟಕದ 3 ಜಿಲ್ಲೆಗಳಲ್ಲಿ ಕೊಂಕಣಿಯನ್ನು ತೃತೀಯ ಭಾಷೆಯನ್ನಾಗಿ ಅಭ್ಯಾಸ ಮಾಡುತ್ತಿದ್ದಾರೆ. 2012 ರಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕೊಂಕಣಿ ಸೇರ್ಪಡೆಗೊಂಡು ೨೦೬ ವಿದ್ಯಾರ್ಥಿಗಳು ಕೊಂಕಣಿ ತೃತೀಯ ಭಾಷೆಯಲ್ಲಿ ಭಾಷೆ ತೇರ್ಗಡೆಗೊಂಡು ಯಶಸ್ವಿಯಾಗಿದ್ದಾರೆ.

2014-15 ರ ಶೈಕ್ಷಣಿಕ ವರ್ಷದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ವ್ಯಾಪ್ತಿಯ 4 ಖಾಸಗಿ ಕಾಲೇಜುಗಳಲ್ಲಿ ಸೈಂಟ್ ಅಲೋಷಿಯಸ್ ಕಾಲೇಜು ಮಂಗಳೂರು, ರೋಸರಿಯೋ ಪ್ರಥಮ ದರ್ಜೆ ಕಾಲೇಜು ಮಂಗಳೂರು, ಪದುವಾ ಪ್ರಥಮ ದರ್ಜೆ ಕಾಲೇಜು ಮಂಗಳೂರು, ಪೊಂಪೈ ಪ.ದ. ಕಾಲೇಜು ಐಕಳಗಳಲ್ಲಿ ಕಾಲೇಜು ಮಟ್ಟದಲ್ಲಿ ಕೊಂಕಣಿ ಭಾಷೆಯನ್ನು ಐಚ್ಛಿಕ ಭಾಷೆಯಾಗಿ ಅಧ್ಯಯನ ಆರಂಭಗೊಂಡಿದ್ದು ಸುಮಾರು 150 ಕ್ಕೂ ಅಧಿಕ ವಿದ್ಯಾರ್ಥಿಗಳು ಅಭ್ಯಶಿಸುತ್ತಿದ್ದಾರೆ.

ಅದಾಗ್ಯೂ ಅತ್ಯಗತ್ಯ ಮತ್ತು ಪ್ರಮುಖವಾಗಿರುವ ಪದವಿಪೂರ್ವ(ಪಿ.ಯು.ಸಿ) ಹಂತದಲ್ಲಿ ಕೊಂಕಣಿ ಭಾಷೆ ಕಲಿಕೆಗೆ ಲಭ್ಯವಿರುವುದಿಲ್ಲ ಇದರಿಂದ ನಿರಂತರ ಕಲಿಕಾ ಸೌಲಭ್ಯಕ್ಕೆ ತಡೆಯುಂಟಾಗಿದೆ. ಈ ದಿಸೆಯಲ್ಲಿ 2012 ರಲ್ಲಿಯೇ ಕರಡು ಪಠ್ಯಕ್ರಮವನ್ನು (ಸಿಲೆಬಸ್) ಚೌಕಟ್ಟಿನೊಂದಿಗೆ ಮನವಿ ನೀಡಿದರೂ ಪದವಿಪೂರ್ವ ಇಲಾಖೆ ಈವರೆಗೆ ಕ್ರಮ ಕೈಗೊಂಡಿಲ್ಲ ಎಂದು ತಿಳಿಸಿದರೆ.

ಇದಕ್ಕೆ ಉತ್ತರಿಸಿದ ಸಭಾನಾಯಕ ಸಚಿವ ಎಸ್.ಆರ್.ಪಾಟೀಲ್ ಈ ಬಗ್ಗೆ ಸಂಬಂಧಪಟ್ಟ ಇಲಾಖೆಯಿಂದ ಮಾಹಿತಿಯನ್ನು ತರಿಸಿ 30 ದಿನಗಳ ಒಳಗಾಗಿ ಉತ್ತರ ನೀಡುವುದಾಗಿ ಭರವಸೆ ನೀಡಿದರು

Write A Comment