ಕುಂದಾಪುರ: ಉಡುಪಿ ಜಿಲ್ಲಾ ಪೊಲೀಸ್ ಹಾಗೂ ಕುಂದಾಪುರ ಪೊಲೀಸ್ ಠಾಣೆ ವತಿಯಿಂದ ಅಪರಾಧ ತಡೆ ಮಾಸಾಚರಣೆ-2014 ಹಾಗೂ ಉಡುಪಿ ಜಿಲ್ಲಾ ಪೊಲೀಸ್ ವತಿಯಿಂದ ನಡೆಸಿದ ನಾಗರಿಕ ಬಂದೂಕು ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭವು ಕುಂದಾಪುರದ ಈಸ್ಟ್-ವೆಸ್ಟ್ ಕ್ಲಬ್ಬಿನಲ್ಲಿ ಸೋಮವಾರ ರಾತ್ರಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉಡುಪಿ ಎಸ್ಪಿ ರಾಜೇಂದ್ರ ಪ್ರಸಾದ್ ಅವರು ಈ ಸಂದರ್ಭ ಮಾತನಾಡಿ, ಪೊಲೀಸರಿಗೆ ಬಂದೂಕು, ಗನ್ನು ಸೇರಿದಂತೆ ಹಲವು ಶಸ್ತ್ರಗಳ ಬಗ್ಗೆ ಹಾಗೂ ಅದರ ಉಪಯೋಗದ ಬಗ್ಗೆ ಮಾಹಿತಿಯಿರುತ್ತದೆ ಅಲ್ಲದೇ ಅದನ್ನು ಎಲ್ಲಿ ಯಾವಾಗ ಉಪಯೋಗಿಸಬೇಕೆಂಬ ಬಗ್ಗೆ ತರಬೇತಿಯೂ ಇರುತ್ತದೆ.ಸಾಮಾನ್ಯ ಜನರಿಗೆ ಇಂತಹ ಬಂದೂಕು ತರಬೇತಿಗಳ ಮೂಲಕ ಅದನ್ನು ತಿಳಿಸಲಾಗುತ್ತದೆ. ಬಂದೂಕು ತರಬೇತಿ ನೀಡುವ ಮೂಲ ಉದ್ದೇಶ ಆತ್ಮರಕ್ಷಣೆಗಗಿಯೇ ಹೊರತು ಬಂದೂಕು ಪರವಾನಿಗೆ ಪಡೆದವರು ಇದನ್ನು ದುರುಪಯೋಗ ಮಾಡಿಕೊಳ್ಳಬಾರದು. ಅತ್ಯಾಚಾರ, ಸುಲಿಗೆ ಹಾಗೂ ನಮ್ಮ ಮೇಲೆಯೇ ದೌರ್ಜನ್ಯ ನಡೆಯುತ್ತಿದೆ ಎನ್ನುವ ಪರಿಸ್ಥಿತಿಯಲ್ಲಿ ನಮ್ಮ ಕೈಯಲ್ಲಿ ಶಸ್ತ್ರವೊಂದಿದ್ದರೇ ಯಾವುದೇ ಭಯವಿಲ್ಲ, ಹಾಗೆಂದು ಸಣ್ಣ ಸಣ್ಣದ್ದಕ್ಕೂ ಶಸ್ತ್ರ ಉಪಯೋಗಿಸಿದರೇ ಮುಂದೇ ಕಾನೂನಿನ ಕೈಗೆ ಸಿಲುಕಿ ಪರಿತಪಿಸಬೇಕಾದ ಪರಿಸ್ಥಿತಿ ನಾಗರಿಕರಾದ್ದಾಗುತ್ತದೆ ಎಂದು ಎಚ್ಚರಿಸಿದರು.
ನೆರೆದ ನಾಗರಿಕರಿಗಾಗಿ ಪೊಲೀಸ್ ಇಲಾಖೆಯ ವತಿಯಿಂದ ಅಪರಾಧ ನಡೆಯುವ ಬಗ್ಗೆ, ಮೊಬೈಲ್ ಕೆಡುಕಿನ ಬಗ್ಗೆ ಕಿರುಚಿತ್ರವನ್ನು ಪ್ರದರ್ಶಿಸಲಾಯಿತು. ಬಂದೂಕು ತರಬೇತಿ ಪಡೆದ 28 ಜನರಿಗೆ ಈ ಸಂದರ್ಭದಲ್ಲಿ ಪ್ರಮಾಣ ಪತ್ರವನ್ನು ಎಸ್ಪಿ ಅವರು ಹಸ್ತಾಂತರಿಸಿದರು.
ಈ ಸಂದರ್ಭ ಉಡುಪಿ ಜಿಲ್ಲಾ ಹೆಚ್ಚುವರಿ ಪೊಲಿಸ್ ವರಿಷ್ಠಧಿಕಾರಿ ಸಂತೋಷ್ ಕುಮಾರ್, ಕಾರ್ಕಳ ಉಪವಿಭಾಗದ ಎ.ಎಸ್ಪಿ ಅಣ್ಣಾಮಲೈ, ಕುಂದಾಪುರ ಎಸಿ ಚಾರುಲತಾ ಸೋಮಲ್, ಬಂದೂಕು ತರಬೇತಿ ಪಡೆದ ಮೊಳಹಳ್ಳಿ ಗಣೇಶ ಶೆಟ್ಟಿ ಮೊದಲಾದವರಿದ್ದರು.
ಕುಂದಾಪುರ ಸರ್ಕಲ್ ಇನ್ಸ್ಪೆಕ್ಟರ್ ದಿವಾಕರ ಪಿ.ಎಂ. ಸ್ವಾಗತಿಸಿ, ಗೃಹರಕ್ಷಕದಳದ ಸೆಕೆಂಡ್-ಇನ್ ಕಮಾಂಡೆಂಟ್ ಕೆ.ಸಿ. ರಾಜೇಶ್ ಕಾರ್ಯಕ್ರಮ ನಿರ್ವಹಿಸಿದರು.