ಕನ್ನಡ ವಾರ್ತೆಗಳು

ಏಡ್ಸ್ ನಿಯಂತ್ರಣಕ್ಕೆ ದಿಟ್ಟ ಕ್ರಮ :ಸೋಂಕಿತರ ಸಂಖ್ಯೆ ದ.ಕ. ಜಿಲ್ಲೆಯಲ್ಲಿ ಇಳಿಮುಖ.

Pinterest LinkedIn Tumblr

HIV_protetct_photo

ಮಂಗಳೂರು, ಡಿ.16 : ಒಂದು ಸಮಯದಲ್ಲಿ ಏಡ್ಸ್ ಬಗ್ಗೆ ಸಮಾಜದಲ್ಲಿದ್ದ ಭಯದ ವಾತಾವರಣ, ಎಚ್‌ಐವಿ ಸೋಂಕಿತರ ಬಗೆಗಿನ ನಿರ್ಲಕ್ಷದ ಮನೋಭಾವ ಪ್ರಸ್ತುತ ದಿನಗಳಲ್ಲಿ ಬಹುತೇಕ ಕಡಿಮೆಯಾಗಿದ್ದು, ಸೋಂಕಿತರ ಸಂಖ್ಯೆಯೂ ದ.ಕ. ಜಿಲ್ಲೆಯಲ್ಲಿ ಇಳಿಮುಖವಾಗಿದೆ. ಸರಕಾರಿ ಆರೋಗ್ಯ ಇಲಾಖೆಗಳು ಹಾಗೂ ಸರಕಾರೇತರ ಸಂಸ್ಥೆಗಳ ಜಾಗೃತಿ ಕಾರ್ಯಕ್ರಮವೇ ಇದಕ್ಕೆ ಪ್ರಮುಖ ಕಾರಣವೆಂದು ಹೇಳಲಾಗುತ್ತಿದ್ದು, ಪ್ರಸ್ತುತ ಜಿಲ್ಲೆಯು ಎಚ್‌ಐವಿ ಸೋಂಕಿತರ ರಾಜ್ಯ ಪಟ್ಟಿಯಲ್ಲಿ 23ನೆ ಸ್ಥಾನದಲ್ಲಿದೆ. ದ.ಕ. ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಕಿಶೋರ್‌ಕುಮಾರ್ ಹೇಳುವಂತೆ, ದಕ್ಷಿಣ ಕನ್ನಡ ಜಿಲ್ಲೆಯ ಎಆರ್‌ಟಿ ಕೇಂದ್ರದಲ್ಲಿ ನಡೆಸಲಾದ ತಪಾಸಣೆಯಲ್ಲಿ 2007ರಲ್ಲಿ 832 ಗರ್ಭಿಣಿಯರು ಹಾಗೂ ಇತರ 1,245 ಮಂದಿ ಎಚ್‌ಐವಿ ಸೋಂಕು ಕಂಡು ಬಂದಿದ್ದರೆ, 2014ರಲ್ಲಿ 17 ಗರ್ಭಿಣಿಯರು ಹಾಗೂ 586 ಮಂದಿ ಇತರರಲ್ಲಿ ಮಾತ್ರ ಎಚ್‌ಐವಿ ಸೋಂಕು ಪತ್ತೆಯಾಗಿದೆ. 2008ರಲ್ಲಿ 60 ಗರ್ಭಿಣಿಯರು, 1,669 ಇತರರು, 2009ರಲ್ಲಿ 50 ಗರ್ಭಿಣಿಯರು, 1064 ಇತರರು, 2010ರಲ್ಲಿ 47 ಗರ್ಭಿಣಿಯರು, 967 ಇತರರು, 2011ರಲ್ಲಿ 39 ಗರ್ಭಿಣಿಯರು, 877 ಇತರರು, 2012ರಲ್ಲಿ 23 ಗರ್ಭಿಣಿಯರು, 867 ತರರು, 2013ರಲ್ಲಿ 26 ಗರ್ಭಿಣಿಯರು, 686 ಇತರರಲ್ಲಿ ಎಚ್‌ಐವಿ ಸೋಂಕು ಕಂಡುಬಂದಿದೆ. 2014ರ ಜನವರಿಯಿಂದ ಅಕ್ಟೋಬರ್ ವರೆಗೆ ನಡೆಸಿದ ತಪಾಸಣೆ ಯಲ್ಲಿ ಮಂಗಳೂರಿನಲ್ಲಿ 199 ಮಂದಿಯಲ್ಲಿ ಎಚ್‌ಐವಿ ಸೋಂಕು ಪತ್ತೆಯಾಗಿದ್ದು, ಇತರ ರಾಜ್ಯ ಮತ್ತು ಜಿಲ್ಲೆಗಳ 245 ಮಂದಿ ಯಲ್ಲಿ ಸೋಂಕು ಕಂಡು ಬಂದಿದೆ.

ಉಳಿದಂತೆ ಬಂಟ್ವಾಳದ 46, ಬೆಳ್ತಂಗಡಿಯ 47, ಪುತ್ತೂರಿನ 43, ಸುಳ್ಯದ 6 ಮಂದಿಯಲ್ಲಿ ಎಚ್‌ಐವಿ ಸೋಂಕು ಪತ್ತೆಯಾಗಿದೆ. ಒಟ್ಟು ಸೋಂಕಿತರ ಪೈಕಿ 385 ಪುರುಷರು ಹಾಗೂ 201 ಮಹಿಳೆಯರಿದ್ದಾರೆ.
2006 ರಿಂದ 2014ರ ಅಕ್ಟೋಬರ್‌ವರೆಗೆ 1,443 ಮಂದಿ ಪುರುಷರು, 1,081 ಮಂದಿ ಮಹಿಳೆಯರು, 287 ಮಂದಿ 15 ವರ್ಷಕ್ಕಿಂತ ಕೆಳಗಿನ ಮಕ್ಕಳು(ಒಟ್ಟು 2,811) ಇವರಿಗೆ ಎಆರ್‌ಟಿ ಕೇಂದ್ರದಿಂದ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಡಾ.ಕಿಶೋರ್ ವಿವರ ನೀಡಿದ್ದಾರೆ. ಎಆರ್‌ಟಿ ಕೇಂದ್ರದಲ್ಲಿ ನೋಂದಾ ಯಿತರಲ್ಲಿ ಈವರೆಗೆ ಕೇವಲ ಶೇ.17ರಷ್ಟು ಮಾತ್ರ ಮರಣ ಪ್ರಮಾಣ ದಾಖಲಾಗಿದೆ. ಸೋಂಕು ಪತ್ತೆಯಾಗಿ ನಿರಂತರ ಚಿಕಿತ್ಸೆಯ ಮೂಲಕ ಸುಮಾರು 18 ವರ್ಷ ಗಳಿಂದ ಆರೋಗ್ಯಯುತ ಜೀವನ ನಡೆಸುತ್ತಿರುವ ಉದಾಹರಣೆಗಳು ಸಾಕಷ್ಟಿವೆ. ಸೋಂಕು ಪತ್ತೆಯಾದ ತಕ್ಷಣದಿಂದ ಚಿಕಿತ್ಸೆ ಆರಂಭಿಸಿ, ನಿರಂತರವಾಗಿ ಔಷಧಿ ಮುಂದು ವರಿಸಿದಲ್ಲಿ ಸಾಮಾನ್ಯರಂತೆ ಜೀವನ ನಡೆಸುವುದು ಸಾಧ್ಯ ಎಂದರು.

ತಾಯಿಯಿಂದ ಮಗುವಿಗೆ ಹರಡದಂತೆ ಕ್ರಮ:
ಬಹುತೇಕವಾಗಿ ಎಚ್‌ಐವಿ ಸೋಂಕಿತರ ಪ್ರಮಾಣ ಹೆಚ್ಚಾಗು ವಲ್ಲಿ ಎಚ್‌ಐವಿ ಸೋಂಕಿತ ಗರ್ಭಿಣಿ ತಾಯಿಯಿಂದ ಮಗುವಿಗೆ ವರ್ಗಾವಣೆ ಪ್ರಮುಖ ಕಾರಣವಾಗಿತ್ತು. ಆದರೆ ಪ್ರಸ್ತುತ ದಿನಗಳಲ್ಲಿ ತಾಯಿಯಿಂದ ಮಗುವಿಗೆ ಎಚ್‌ಐವಿ ಹರಡದಂತೆ ತಡೆಗಟ್ಟಲು ಔಷಧಿಯನ್ನು ನೀಡಲಾಗುತ್ತಿದೆ. ಗರ್ಭಿಣಿ ಸ್ತ್ರೀಯರಲ್ಲಿ ಸೋಂಕು ಪತ್ತೆಯಾದ ತಕ್ಷಣ ಔಷಧ ನೀಡಲಾಗುತ್ತದೆ. ಮಗುವಿನ ಜನನದ ಬಳಿಕ ಒಂದೂವರೆ ತಿಂಗಳು, ಆರು ತಿಂಗಳು, ಒಂದು ವರ್ಷ, ಒಂದೂವರೆ ವರ್ಷ ಪ್ರಾಯ ಈ ನಾಲ್ಕು ಹಂತಗಳಲ್ಲಿ ತಪಾಸಣೆ ನಡೆಸಲಾಗುತ್ತದೆ. ಒಂದೂವರೆ ವರ್ಷದ ಬಳಿಕ ಹೆತ್ತವರಿಂದ ಸೋಂಕು ಹರಡುವ ಸಾಧ್ಯತೆಯಿಲ್ಲ. ಕಳೆದ ಒಂದು ವರ್ಷದ ಅವಧಿಯಲ್ಲಿ ಎಚ್‌ಐವಿ ಸೋಂಕಿತ ಒಂದು ಮಗು ಕೂಡಾ ಜನಿಸಿಲ್ಲ ಎಂದು ಡಾ.ಕಿಶೋರ್ ಹೇಳುತ್ತಾರೆ. ದ.ಕ. ಜಿಲ್ಲೆಯಲ್ಲಿ ಸರಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ಕೆಎಂಸಿ ಆಸ್ಪತ್ರೆಯಲ್ಲಿ ಎಆರ್‌ಟಿ ಕೇಂದ್ರ ಗಳು ಕಾರ್ಯಾಚರಿಸುತ್ತಿವೆ. ಬಂಟ್ವಾಳ, ಬೆಳ್ತಂಗಡಿ, ಪುತ್ತೂರು, ಮೂಡುಬಿದಿರೆಯಲ್ಲಿ ಕಾರ್ಯಾ ಚರಿಸುತ್ತಿರುವ ಲಿಂಕ್ ಎಆರ್‌ಟಿ ಕೇಂದ್ರಗಳ ಮೂಲಕ ಆಯಾ ವ್ಯಾಪ್ತಿಯ ಸೋಂಕಿತರಿಗೆ ಔಷಧ ವಿತರಿಸಲಾಗುತ್ತಿದೆ ಎಂದು ಡಾ. ಕಿಶೋರ್ ತಿಳಿಸಿದರು.

2011-12ರ ವಸತಿ ಯೋಜನೆ ಅನ್ವಯ ಗ್ರಾಮೀಣ ಪ್ರದೇಶದಲ್ಲಿ ನಾಲ್ಕು ಹಾಗೂ ನಗರ ಪ್ರದೇಶದಲ್ಲಿ ನಾಲ್ಕು ಮನೆಗಳನ್ನು ವಿಶೇಷ ಮುತು ವರ್ಜಿಯಲ್ಲಿ ಎಚ್‌ಐವಿ ಸೋಂಕಿತರಿಗೆ ಮಂಜೂರು ಮಾಡಲಾಗಿದ್ದು, ಪ್ರಸಕ್ತ ಸಾಲಿನಲ್ಲಿ 95 ಮಂದಿ ಅರ್ಜಿಸಲ್ಲಿಸಿದ್ದಾರೆ. ಹಿಂದುಳಿದ ಮತ್ತು ಅಲ್ಪ ಸಂಖ್ಯಾತರ ಇಲಾಖೆ ಮೂಲಕ ಎಂಟು ಮಂದಿಗೆ ಸಾಲ ಸೌಲಭ್ಯ, ಎರಡು ಮಂದಿಗೆ ಉದ್ಯೋಗಿನಿ ಯೋಜನೆ, 21 ಮಂದಿಗೆ ಅಂತ್ಯೋ ದಯ ಪಡಿತರ ಚೀಟಿ ನೀಡಲಾಗಿದೆ ಎಂದು ಡಾ. ಕಿಶೋರ್‌ಕುಮಾರ್ ತಿಳಿಸಿದರು.

ಮಕ್ಕಳಿಗೆ ಗೌರವ ಧನ:
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೂಲಕ ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ಹೆತ್ತವರು ಇಲ್ಲದ ಎಚ್‌ಐವಿ ಸೋಂಕಿತ ಮಕ್ಕಳಿಗೆ ಪ್ರತಿ ತಿಂಗಳು 750 ರೂ. ಹಾಗೂ ಪೋಷಕರು ಇರುವ ಮಕ್ಕಳಿಗೆ 650 ರೂ. ಹಾಗೂ ವಾರ್ಷಿಕ ಶಿಕ್ಷಣ ವೆಚ್ಚಕ್ಕಾಗಿ 500 ರೂ. ನೀಡಲಾಗುತ್ತಿದೆ ಎಂದು ಮಕ್ಕಳ ರಕ್ಷಣಾಧಿಕಾರಿ ಉಸ್ಮಾನ್ ತಿಳಿಸಿದ್ದಾರೆ. ಎಆರ್‌ಟಿ ಕೇಂದ್ರದಲ್ಲಿ ನೋಂದಾಯಿತರಾದವರಿಗೆ ಮಾತ್ರ ಈ ಸೌಲಭ್ಯ ಲಭ್ಯವಿದ್ದು, ಆಸ್ಪತ್ರೆಗೆ ಪ್ರತಿ ತಿಂಗಳು ಚಿಕಿತ್ಸೆಗೆ ಆಗಮಿಸುವವ ರಿಗೂ ಪ್ರಯಾಣ ವೆಚ್ಚ ನೀಡಲಾಗುವುದು ಎಂದವರು ಹೇಳಿದರು.

Write A Comment