ಮಂಗಳೂರು: ಸೌದಿಯಲ್ಲಿ ಒಳ್ಳೆಯ ಕಂಪನಿಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಹಲವರಿಂದ ಹಣ ಪಡೆದು ಕೆಲಸ ಕೊಡಿಸದೆ ವಂಚಿಸಿದ ಬಗ್ಗೆ ನಗರದ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಂಧ್ರಪ್ರದೇಶದ ಕರೀಂ ನಗರ ನಿವಾಸಿ ಚಾಂದ್ ಪಾಷಾ ಎಂಬವರು ದೂರು ನೀಡಿದ್ದು, ಆರೋಪಿಗಳಾದ ಖಾದರ್ ಅಳಕೆ ಹಾಗೂ ಹಸನ್ ಅನ್ವರ್ ಸೌಧಿ ಎಂಬವರು ವಂಚಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
2013ನೇ ಸಾಲಿನಲ್ಲಿ ಅನ್ವರ್ ಜನರಲ್ ಸರ್ವಿಸ್ ಕಾರ್ಪೊರೇಶನ್ ಮುಂಬಯಿ ಇವರ ಸಬ್ ಏಜೆಂಟ್ ಎಂಬುದಾಗಿ ತಿಳಿಸಿ ಹೈದರಾಬಾದ್ ಮೂಲದ ಒಟ್ಟು 19 ಮಂದಿ ಕಾರ್ಮಿಕರಿಗೆ ವಿವಿಧ ರೀತಿಯ ಕೆಲಸ ಆಮಿಷ ಒಡ್ಡಿ ಸೌದಿ ರಾಷ್ಟ್ರದಲ್ಲಿ ಒಳ್ಳೆಯ ಕಂಪನಿಯಲ್ಲಿ ಕೆಲಸ ಕೊಡಿಸುವುದಾಗಿ ಸಬ್ ಏಜೆಂಟರ್‌ಗಳಾದ ಪಲೆಪು ರಾಜಾ ಗಂಗರಾಮ್ ಒರುಗಂಟಿ ದೇವದಾಸ್ ಹಾಗೂ ರೆಂಜಿರ್ಲಾ ರವೀಂದರ್ ಯಾನೆ ರಾಜೇಂದರ್ ಎಂಬವರು ತಲಾ 85ಸಾವಿರ ಹಾಗೂ 65ಸಾವಿರದಂತೆ ಪಡೆದುಕೊಂಡಿದ್ದರು.
ನಂತರ ಆರೋಪಿಗಳಾದ ಖಾದರ್ ಅಳಕೆ ಹಾಗೂ ಹಸನ್ ಅನ್ವರ್ ಸೌದಿ ಮಂಗಳೂರಿನ ನೆಲ್ಲಿಕಾಯಿ ರಸ್ತೆಯಲ್ಲಿರುವ ಅಲ್ ರಹಬ್ ಪ್ಲಾಜಾದಲ್ಲಿರುವ ತಮ್ಮ ಸಂಸ್ಥೆಯ ಮುಖಾಂತರ ವೀಸಾ ಸ್ಟ್ಯಾಂಪಿಂಗ್ ಹಾಗೂ ವೀಸಾ ಕ್ಲಿಯರೆನ್ಸ್ ಮಾಡಿಸಿ ಹೈದರಾಬಾದಿನಿಂದ ಸೌದಿ ಅರೇಬಿಯಾಕ್ಕೆ ಕಳುಹಿಸಿಕೊಟ್ಟಿದ್ದಾರೆ.
ಸೌದಿಗೆ ತೆರಳಿದ್ದ 19 ಮಂದಿಗೆ ಇಖಾಮಾ ಹಾಗೂ ರೆಸಿಡೆನ್ಸಿ ಪರ್ಮಿಟ್ ಮಾಡಿಸಿಕೊಡದ ಕಾರಣ ಇವರ ಪೈಕಿ ಮುರುಗು ಚಿನ್ನ ನರ್ಸಯ್ಯ ಹಾಗೂ ರಗುಲ ಮಲ್ಲೇಶ ಎಂಬವರು ಸೌದಿಯಲ್ಲಿ ಬಂಧನಕ್ಕೊಳಗಾಗಿ ಜೈಲು ಸೇರಿದ್ದಾರೆ. ಉಳಿದವರು ಸರಿಯಾದ ವ್ಯವಸ್ಥೆ ಇಲ್ಲದೇ ಪರದಾಡುತ್ತಿದ್ದಾರೆ. ಇದಕ್ಕೆ ಆರೋಪಿಗಳು ಕಾರಣರಾಗಿದ್ದು, ಸೌದಿ ಅರೇಬಿಯಾದಲ್ಲಿ ಕೆಲಸಕೊಡಿಸುವ ಆಮಿಷ ತೋರಿ ಹಣಪಡೆದು ಕೆಲಸ ಕೊಡಿಸದೇ ಮೋಸ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.