ಮಂಗಳೂರು, ಡಿ.09: ನಗರದ ಸುತ್ತಮುತ್ತ ನಡೆಯುತ್ತಿರುವ ಅಹಿತಕರ ಘಟನೆಗಳ ಕುರಿತಂತೆ ಜನ ಶಾಂತಿಯಿಂದ ವರ್ತಿಸಬೇಕು. ವಿನಾ ಕಾರಣ ಸುಳ್ಳು ಸುದ್ದಿಗಳನ್ನು ಹರಡಬೇಡಿ, ಕಾನೂನು ಕೈಗೆತ್ತಿಕೊಳ್ಳಬೇಡಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸುಳ್ಳು ಸುದ್ದಿಗಳನ್ನು ಹರಡುವವರು ದೇಶದ್ರೋಹಿಗಳು ಎಂದು ಆಕ್ರೋಶ ವ್ಯಕ್ತಪಡಿಸಿದರು. ಸುಳ್ಳು ಸುದ್ದಿಗಳನ್ನು ವೈಭವೀಕರಿಸುತ್ತಿರುವುದರಿಂದ ಅಹಿತಕರ ಘಟನೆಗಳಿಗೆ ಕಾರಣವಾಗುತ್ತಿದ್ದು, ಪೊಲೀಸ್ ಇಲಾಖೆ ತನ್ನ ಕರ್ತವ್ಯವನ್ನು ನಿರ್ವಹಿಸುತ್ತಿದೆ ಎಂದು ಅವರು ಹೇಳಿದರು.
ಕಸ್ತೂರಿರಂಗನ್ ವರದಿ ಕುರಿತಂತೆ ರಾಜ್ಯದ ಮುಖ್ಯಮಂತ್ರಿಯಾಗಿದ್ದ, ಪ್ರಸ್ತುತ ಕಾನೂನು ಸಚಿವರಾಗಿರುವ ಡಿ.ವಿ.ಸದಾನಂದ ಗೌಡರು ಬಾಲಿಶ ಹೇಳಿಕೆಯನ್ನು ನೀಡಿದ್ದಾರೆಂದು ಸಚಿವ ರೈ ಟೀಕಿಸಿದರು. ಕಸ್ತೂರಿ ರಂಗನ್ ವರದಿ ಕುರಿತಂತೆ ಆರು ರಾಜ್ಯಗಳು ಕೇಂದ್ರಕ್ಕೆ ವರದಿ ಸಲ್ಲಿಸಬೇಕಾಗಿದೆ. ಕೇರಳವನ್ನು ಹೊರತುಪಡಿಸಿ ಗುಜರಾತ್, ಮಹಾರಾಷ್ಟ್ರ, ಗೋವಾ, ತಮಿಳುನಾಡು ಸರಕಾರದಿಂದಲೂ ವರದಿ ಸಲ್ಲಿಕೆಯಾಗಿಲ್ಲ. ಹಾಗಿದ್ದರೂ ಡಿ.ವಿ. ಸದಾನಂದ ಗೌಡರು ಕರ್ನಾಟಕ ವರದಿ ಸಲ್ಲಿಕೆಯಲ್ಲಿ ವಿಳಂಬ ಮಾಡಿದೆ ಎಂದು ಹೇಳಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ರಾಜ್ಯವಾದ ಗುಜರಾತ್‌ನಿಂದಲೂ ವರದಿ ಸಲ್ಲಿಕೆಯಾಗಿಲ್ಲ. ಡಿ.ವಿ.ಯವರು ಪ್ರಧಾನಿ ಬಳಿ ಅವರು ಯಾಕೆ ಕೊಟ್ಟಿಲ್ಲ ಎಂದು ಕೇಳಲಿ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.
ಕಸ್ತೂರಿ ರಂಗನ್ ವರದಿ ಸಲ್ಲಿಸಬೇಕಾಗಿರುವುದು ಕೇಂದ್ರ ಸರಕಾರಕ್ಕೆ. ಆದರೆ ಸುಪ್ರೀಂ ಕೋರ್ಟ್‌ಗೆ ವರದಿ, ಅಫಿದಾವಿತ್ ಸಲ್ಲಿಸಿಲ್ಲ ಎಂಬ ಹೇಳಿಕೆ ನೀಡಿರುವುದನ್ನು ನೋಡಿದರೆ ಕಾನೂನು ಮಂತ್ರಿಯಾಗಿ ಇಂತಹ ಕನಿಷ್ಠ ತಿಳುವಳಿಕೆ ಇಲ್ಲ ಎಂದಾದರೆ ಸಾರ್ವಜನಿಕರ ಪಾಡೇನು ಎಂದು ರೈ ಪ್ರಶ್ನಿಸಿದರು. ಕಸ್ತೂರಿ ರಂಗನ್ ವರದಿ ಕುರಿತಂತೆ ರಾಜ್ಯ ಸರಕಾರ ರಾಜ್ಯ ಮಟ್ಟದ ಸಮಿತಿಯ ಮೂಲಕ ಎಲ್ಲಾ ಜಿಲ್ಲೆಗಳಲ್ಲಿ ಸಭೆ ನಡೆಸಿ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿದೆ. ಜನರ ಭಾವನೆಗಳಿಗೆ ಪೂರಕವಾಗಿ ವರದಿ ನೀಡಬೇಕೆಂಬುದು ಸರಕಾರದ ಆಶಯ. ಹಾಗಾಗಿ ತರಾತುರಿಯಲ್ಲಿ ವರದಿ ನೀಡುವ ಪ್ರಶ್ನೆ ಇಲ್ಲ. ಕೇರಳಕ್ಕಿಂತಲೂ ಹೆಚ್ಚು ಸರಳೀಕರಣದೊಂದಿಗೆ ಜನಸ್ನೇಹಿ ವರದಿಯನ್ನು ಕೇಂದ್ರಕ್ಕೆ ಸಲ್ಲಿಸಲಾಗುವುದು ಎಂದು ಸಚಿವ ರೈ ಹೇಳಿದರು.
ಗೋಷ್ಠಿಯಲ್ಲಿ ಮೇಯರ್ ಮಹಾಬಲ ಮಾರ್ಲ, ಜಿಲ್ಲಾ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್, ಶಶಿಧರ ಹೆಗ್ಡೆ, ಮಿಥುನ್ ರೈ, ಪದ್ಮನಾಭ ನರಿಂಗಾನ, ಕೃಪಾ ಆಳ್ವ, ನಝೀರ್ ಬಜಾಲ್, ಸುಧೀರ್ ಟಿ.ಕೆ., ಅಪ್ಪಿ ಮೊದಲಾದವರು ಉಪಸ್ಥಿತರಿದ್ದರು.
