ಕನ್ನಡ ವಾರ್ತೆಗಳು

ರಾಜ್ಯ ಯುವಜನಮೇಳ ಸಮಾರೋಪ – ಯುವ ಸಂಘಟನೆಗಳಿಗೆ ಪ್ರೋತ್ಸಾಹ ಧನ ಬಿಡುಗಡೆ ಮಾಡಲು ಸಂಕಲ್ಪ : ಸೊರಕೆ

Pinterest LinkedIn Tumblr

Yuvajana_Mela_End

ಬಂಟ್ವಾಳ, ಡಿ.9(ವಿಟ್ಲ; ರವಿವರ್ಮ ಕೃಷ್ಣರಾಜ ಅರಸರ ವೇದಿಕೆ): ಯುವಕ-ಯುವತಿ ಮಂಡಲಗಳಿಗೆ ಸರಕಾರ ರಾಜಾಶ್ರಯ ನೀಡಬೇಕಾದ ಅಗತ್ಯವಿದ್ದು, ಈ ನಿಟ್ಟಿನಲ್ಲಿ ನೋಂದಾಯಿತ ಯುವ ಸಂಘಟನೆಗಳಿಗೆ ನಿವೇಶನ ಮತ್ತು ಪ್ರೋತ್ಸಾಹಧನ ಬಿಡುಗಡೆ ಮಾಡಲು ರಾಜ್ಯ ಸರಕಾರ ಈಗಾಗಲೇ ಸಂಕಲ್ಪ ತೊಟ್ಟಿದೆ ಎಂದು ನಗರಾಭಿವೃದ್ಧಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದ್ದಾರೆ.

ಅವರು ವಿಟ್ಲ, ಜನಾರ್ದನ ಪೈ ನಗರದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಸೋಮವಾರ ನಡೆದ ರಾಜ್ಯ ಯುವಜನಮೇಳದ ಸಮಾರೋಪ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, ಸರಕಾರಿ ಇಲಾಖೆ, ಸ್ಥಳೀಯ ಆಡಳಿತ ಸಂಸ್ಥೆ ಹಾಗೂ ಗ್ರಾ.ಪಂ.ಗಳ ಅನುದಾನದಲ್ಲಿ ಶೇ.2 ಪ್ರಮಾಣವನ್ನು ಯುವ ಮಂಡಲಗಳ ಅಭಿವೃದ್ಧಿಗೆ ಬಳಸಲು ಕಡ್ಡಾಯ ನಿರ್ದೇಶನ ಜಾರಿ ಮಾಡಲಾಗುವುದು. ಈ ಸಂಬಂಧ ರಾಜ್ಯದ ಯುವ ಮಂಡಲ ಪದಾಧಿಕಾರಿ, ಯುವ ಪ್ರತಿನಿಧಿಗಳೊಂದಿಗೆ ಚರ್ಚಿಸಿ ಸಮಾಲೋಚಿಸಲಾಗುವುದು ಎಂದು ತಿಳಿಸಿದರು. ಯುವಕ ಯುವತಿ ಮಂಡಲಗಳ ನೋಂದಣಿಯನ್ನು ಸಹಕಾರಿ ಇಲಾಖೆಗೆ ವಹಿಸಿಕೊಟ್ಟ ಬಳಿಕ, ನೋಂದಣಿ ಪ್ರಕ್ರಿಯೆಗೆ ಹೊಡೆತ ಬಿದ್ದಿದ್ದು, ಈ ನಿಟ್ಟಿನಲ್ಲಿ ಸರಕಾರ ಮಟ್ಟದಲ್ಲಿ ಇದರ ಪುನರ್‌ಪರಿಶೀಲನೆಯ ಅಗತ್ಯವಿದೆ ಎಂದರು.

ಪಾಸಿಟಿವ್ ಸುದ್ದಿ ಕೊಡಿ! – ಯುವಜನಮೇಳದಲ್ಲಿ ಸಮಾರೋಪ ಭಾಷಣ ಮಾಡಿದ ದ.ಕ.ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ, ಯುವಜನಮೇಳಗಳು ಜಾತಿ-ಮತದ ಎಲ್ಲೆಯನ್ನು ಮೀರಿ ಮನಸ್ಸುಗಳನ್ನು ಕಟ್ಟುವ ಕಾರ್ಯಮಾಡುತ್ತದೆ. ಸಮಾಜವನ್ನು ಕಟ್ಟುವಲ್ಲಿ ಮಾಧ್ಯಮದ ಪಾತ್ರ ಮಹತ್ವದ್ದಾಗಿದೆ ಎಂದ ಅವರು, ಋಣಾತ್ಮಕ ಸುದ್ದಿಗಳಿಂದ ನಾಗರಿಕತೆ ಅರಳುವುದಿಲ್ಲ. ಬದಲಾಗಿ ಸಮಾಜದ ಶಾಂತಿ ಕೆರಳುತ್ತದೆ. ಹಾಗಾಗಿ ಅವುಗಳಿಗೆ ಮನ್ನಣೆ ಕೊಡಬೇಡಿ ಎಂದು ಕಿವಿ ಮಾತು ಹೇಳಿದರು.

ಮಂಗಳವಾರ ಪತ್ರಿಕೆಗಳಲ್ಲಿ ಉಳಾಯಿಬೆಟ್ಟಿನ ಸುದ್ದಿ ಹೆಚ್ಚು ಪ್ರಾಮುಖ್ಯತೆ ಪಡೆದುಕೊಳ್ಳದೆ, ಮನಸ್ಸು ಕಟ್ಟುವ ಯುವಜನ ಮೇಳದ ಸುದ್ದಿಗೆ ಹೆಚ್ಚು ಪ್ರಾಶಸ್ತ್ಯ ಪಡೆದುಕೊಳ್ಳಲಿ ಎಂದು ಆಶಿಸಿದರಲ್ಲದೆ, ಮಾಧ್ಯಮಗಳು ಪಾಸಿಟಿವ್ ಸುದ್ದಿಗಳಿಗೆ ಹೆಚ್ಚು ಒತ್ತು ಕೊಡುವ ಮೂಲಕ, ನಾಡಿನ ಸಂಸ್ಕೃತಿ, ಜೀವನೋಲ್ಲಾಸವನ್ನು ಪ್ರತಿಬಿಂಬಿಸಬೇಕು ಎಂದು ಕರೆ ನೀಡಿದರು. ಯುವಜನ ಮೇಳದ ಸಮಾರೋಪ ಸಮಾರಂಭಕ್ಕೆ ಆಗಮಿಸಬೇಕಿದ್ದ ಆರೋಗ್ಯ ಸಚಿವ ಯು.ಟಿ.ಖಾದರ್ ಸಮಾರೋಪ ಸಮಾರಂಭ ಮುಗಿದ ಬಳಿಕ ಆಗಮಿಸಿದರು. ಸಂಜೆಯಿಂದಲೇ ಸಚಿವ ಯು.ಟಿ.ಖಾದರ್ ಕಾರ್ಯಕ್ರಮಕ್ಕೆ ಆಗಮಿಸುತ್ತಾರೆ ಎಂದು ಹೇಳಲಾಗಿತ್ತು. ಆದರೆ ಕಾರ್ಯಕ್ರಮದ ಒತ್ತಡದಿಂದ ಖಾದರ್ ಯುವಜನ ಮೇಳದ ಸ್ಥಳಕ್ಕೆ ಆಗಮಿಸುವಾಗ ರಾತ್ರಿ 8:30 ಕಳೆದಿತ್ತು. ಸಚಿವರನ್ನು ವೇದಿಕೆಗೆ ಆಹ್ವಾನಿಸಿದ ಯುವಜನಮೇಳ ಸಮಿತಿ ಕಾರ್ಯಾಧ್ಯಕ್ಷ ಎಂ.ಎಸ್.ಮುಹಮ್ಮದ್, ಆರೋಗ್ಯ ಇಲಾಖೆಯ ಎಲ್ಲಾ ಸಿಬ್ಬಂದಿ ಯುವಜನಮೇಳದ ಯಶಸ್ಸಿಗೆ ನೀಡಿದ ಸಹಕಾರವನ್ನು ನೆನಪಿಸಿ, ಸಚಿವರಿಗೆ ಕೃತಜ್ಞತೆ ಸಲ್ಲಿಸಿದರು.

ವಿಟ್ಲ ಗ್ರಾ.ಪಂ. ಅಧ್ಯಕ್ಷೆ ಭವಾನಿ ರೈ ಅಧ್ಯಕ್ಷತೆವಹಿಸಿದ್ದು, ಜಿ.ಪಂ. ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡ, ಜಿ.ಪಂ. ಸದಸ್ಯರಾದ ಚೆನ್ನಪ್ಪ ಕೋಟ್ಯಾನ್, ಸಂತೋಷ್ ಕುಮಾರ್ ರೈ, ಕೇಶವ ಗೌಡ ಉಪ್ಪಿನಂಗಡಿ, ಶೈಲಜಾ ಕೆ.ಟಿ.ಭಟ್, ತಾ.ಪಂ. ಸದಸ್ಯರಾದ ದಿನೇಶ್ ಅಮ್ಟೂರು, ಜೂಲಿಯಾನ್ ಮೇರಿ ಲೋಬೋ, ಉಷಾ ಕೆ., ಉಷಾ ಅಂಚನ್ ಕುಮಾರಿ, ದಿನೇಶ್ ಮೆದು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖಾ ಉಪನಿರ್ದೇಶಕ ಎಂ.ಎಸ್.ರಮೇಶ್, ರಾಜ್ಯ ಯುವಜನ ಒಕ್ಕೂಟದ ಕಾರ್ಯದರ್ಶಿ ಡಾ.ಎಸ್. ಬಾಲಾಜಿ, ಯುವಜನಮೇಳ ಸಮಿತಿಯ ಪ್ರಧಾನ ಕಾರ್ಯದರ್ಶಿ ವಿ.ಎನ್. ಸುದರ್ಶನ ಪಡಿಯಾರ್, ಯುವಜನ ಸಮಿತಿಯ ವಿಟ್ಲ ಅಧ್ಯಕ್ಷ ಲೋಕರಾಜ್ ವಿ.ಎಸ್., ಮಹಿಳಾ-ಮಕ್ಕಳ ಅಭಿವೃದ್ಧಿ ಇಲಾಖೆಯ ನಿರೂಪಣಾಧಿಕಾರಿ ಸುಂದರ ಪೂಜಾರಿ, ತಹಶೀಲ್ದಾರ್ ಮುಹಮ್ಮದ್ ಇಸ್ಹಾಕ್, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಸಿಪ್ರಿಯನ್ ಮಿರಾಂದ ಉಪಸ್ಥಿತರಿದ್ದರು.

ಯುವಜನಮೇಳ ಸಮಿತಿಯ ಕಾರ್ಯಾಧ್ಯಕ್ಷ, ಜಿ.ಪಂ. ಸದಸ್ಯ ಎಂ.ಎಸ್. ಮುಹಮ್ಮದ್ ಸ್ವಾಗತಿಸಿದರು. ನಿವೃತ್ತ ಶಿಕ್ಷಕ ಮಹಾಬಲೇಶ್ವರ ಹೆಬ್ಬಾರ್ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ಬಿ.ರಾಮಚಂದ್ರ ರಾವ್, ಕಲಾವಿದ ಮಂಜು ವಿಟ್ಲ, ವಸತಿ ಸಮಿತಿ ಅಧ್ಯಕ್ಷ ವಿ.ರಮಾನಾಥ ವಿಟ್ಲ ಕಾರ್ಯಕ್ರಮ ಸಂಯೋಜಿಸಿದರು. ಬಂಟ್ವಾಳ ತಾ.ಯುವಜನ ಒಕ್ಕೂಟದ ಅಧ್ಯಕ್ಷ ಕೆ.ಸುಭಾಶ್ಚಂದ್ರ ಶೆಟ್ಟಿ ವಂದಿಸಿದರು. 3 ದಿನಗಳ ಕಾಲ ನಡೆದಿದ್ದ ಯುವಜನಮೇಳದ ಸ್ಪರ್ಧಾ ವಿಜೇತರಿಗೆ ಅತಿಥಿಗಣ್ಯರು ಬಹುಮಾನ ನೀಡಿ ಗೌರವಿಸಿದರು. ಮೂರು ದಿನಗಳ ಸ್ಪರ್ಧಾ ಕಾರ್ಯಕ್ರಮ, ಸಭಾ ಕಾರ್ಯ ಕ್ರಮಗಳನ್ನು ಒಂದು ನಿಮಿಷವೂ ಬಿಡುವಿಲ್ಲದೆ ನಿರೂಪಿಸಿದ ಶಿಕ್ಷಕ, ಕಲಾವಿದ ಬಿ. ರಾಮಚಂದ್ರ ರಾವ್ ಅವರ ಕಂಠಸಿರಿ, ಸ್ವರದಲ್ಲಿನ ಏರಿಳಿತ, ಮಾತುಗಾರಿಕೆ ಶೈಲಿ ಸಭಿಕರ ಗಮನ ಸೆಳೆದಿದ್ದು, ಎಲ್ಲರ ಮನಸೂರೆಗೊಂಡಿದೆ.

Write A Comment