ಕನ್ನಡ ವಾರ್ತೆಗಳು

ಮೋದಿ ದೇಶವನ್ನು ಕಾರ್ಪೋರೇಟ್ ಕಂಪೆನಿಗಳಿಗೆ ಮಾರ ಹೊರಟಿದ್ದಾರೆ ಸಿಪಿ‌ಐ‌ಎಂ 21ನೇ ತಾಲೂಕು ಸಮ್ಮೇಳನದಲ್ಲಿ ಎಸ್. ವರಲಕ್ಷ್ಮಿ ಹೇಳಿಕೆ

Pinterest LinkedIn Tumblr

ಕುಂದಾಪುರ: ಮೇಕ್ ಇನ್ ಇಂಡಿಯಾ ಎನ್ನುತ್ತಲೇ ದೇಶದ ಪ್ರದಾನ ಮಂತ್ರಿ ನರೇಂದ್ರ ಮೋದಿ ದೇಶವನ್ನು ಕಾರ್ಪೋರೇಟ್ ಕಂಪೆನಿಗಳಿಗೆ ಮಾರ ಹೊರಟಿದ್ದಾರೆ. ಅಭಿವೃದ್ಧಿಯ ಮಂತ್ರ ಜಪಿಸುತ್ತಿರುವ ಮೋದಿ ತನ್ನ ಆಪ್ತ ಸ್ನೆಹಿತ ಅದಾನಿಗೆ ಆಸ್ಟ್ರೇಲಿಯಾದಲ್ಲಿ ಆರೂವರೆ ಸಾವಿರ ಕೋಟಿ ರೂಗಳ ವಿದ್ಯುತ್ ಉತ್ಪಾದನಾ ಘಟಕ ಸ್ಥಾಪಿಸಲು ಸಹಾಯಮಾಡಿದ್ದಾರೂ ಯಾಕೆ ಎನ್ನುವ ಸತ್ಯವನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕಾಗಿದೆ ಎಂದು ಸಿಪಿ‌ಐ ರಾಜ್ಯ ಕಾರ್ಯದರ್ಶಿ ಎಸ್. ವರಲಕ್ಷ್ಮಿ ಹೇಳಿದರು.

ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ಕುಂದಾಪುರ ತಾಲೂಕು ಸಮಿತಿ ಹೆಮ್ಮಾಡಿಯಲ್ಲಿ ಹಮ್ಮಿಕೊಂಡ 21 ನೇ ತಾಲೂಕು ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

CPIM_Taluku_Sammelana

ದೇಶದ ಅಭಿವೃದ್ಧಿ ಎಂದರೇನು? ಕಾರ್ಪೋರೇಟ್ ಕಂಪೆನಿಗಳನ್ನು ಹೆಚ್ಚಿಸುವುದೇ? ಕಟ್ಟಡಗಳನ್ನು ನಿರ್ಮಿಸುವುದೇ? ಅಥವಾ ಬಂಡವಾಳ ಹೂಡುವುದೇ ಎನ್ನುವುದನ್ನು ಅಭಿವೃದ್ಧಿ ಮಂತ್ರ ಜಪಿಸುತ್ತಿರುವ ಕೇಂದ್ರ ಸರ್ಕಾರವನ್ನು ಇವತ್ತು ನಾವು ಪ್ರಶ್ನಿಸಬೇಕಾಗಿದೆ. ಇಷ್ಟೆಲ್ಲಾ ಅಭಿವೃದ್ದಿಯ ಬಗ್ಗೆ ಮಾತನಾಡುವಾಗ ಕಾರ್ಮಿಕ ಕುಟುಂಬಗಳ ಅತಂತ್ರತೆಯ ಬಗ್ಗೆ ಏನು ಕ್ರಮ ಕೈಗೊಳ್ಳಲಾಗುತ್ತಿದೆ? ಸರ್ಕಾರ ಇದನ್ನೆಲ್ಲಾ ನೋಡದೇ ತನ್ನದೇ ಅಧಿಕಾರೀಶಾಹೀ ನೀತಿ ಜ್ಯಾರಿಗೊಳಿಸುತ್ತಿರುವುದನ್ನ ಕಾರ್ಮಿಕ ಸಂಘಟನೆಗಳಯ ಪ್ರಬಲವಾಗಿ ವಿರೋಧಿಸಬೇಕಾಗಿದೆ. ಇದೆಲ್ಲಾ ಬಿಜೆಪಿ ಮಾಡುತ್ತಿರುವ ಬೃಹತ್ ನಾಟಕ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗ್ಲೋಬಲ್ ಇಂಡೆಕ್ಸ್ ಎನ್ನುವ ಸಂಸ್ಥೆಯೊಂದು ಸಮೀಕ್ಷೆಯೊಮದನ್ನು ನಡೆಸಿದ್ದು, ಅದರ ಪ್ರಕಾರ ಮುಂದಿನ ಹದಿನೈದು ವರ್ಷಗಳಲ್ಲಿ ಮೂವತ್ತೈದು ಕೋಟಿ ಜನ ಹಳ್ಳಿಗಳನ್ನು ಬಿಟ್ಟು ಪಟ್ಟಣಕ್ಕೆ ವಲಸೆ ಹೊಗುತ್ತಾರೆ. ೨೦೫೦ರ ಒಳಗೆ ಎಪ್ಪತ್ತು ಕೋಟಿ ಜನ ಹಳ್ಳಿಯಿಂದ ನಗರಕ್ಕೆ ವಲಸೆ ಹೋಗುತ್ತಾರೆ ಎನ್ನುವ ಆತಂತಕಕಾರಿ ವರದಿ ಹೊರಹಾಕಿದ್ದು, ಈ ಬಗ್ಗೆ ಏನು ಕ್ರಮ ಕೈಗೊಳ್ಲಲಾಗುತ್ತಿದೆ ಎನ್ನುವುದನ್ನು ಬಿಜೆಪಿ ಸರ್ಕಾರ ಉತ್ತರಿಸಬೆಕಾಗಿದೆ ಎಂದರು.

ವಿವಿಧೆಡೆಗಳಲ್ಲಿ ಓಟ್ ಬ್ಯಾಂಕ್ ರಾಜಕಾರಣ ಮಾಡುತ್ತಿರುವ ಬಿಜೆಪಿ ಕಾಂಗ್ರೆಸ್ಸಿನ ಇನ್ನೊಂದು ಮುಖ ಎಂದು ಬಣ್ಣಿಸಿದ ವರಲಕ್ಷ್ಮೀ ಚುನಾವಣೆ ಸಂದರ್ಭದಲ್ಲಿ ಭಾರತದ ಉತ್ತರ ಜಿಲ್ಲೆಗಳಲ್ಲಿ ಮುಸ್ಲಿಮರ ಮತ ಹೆಚ್ಚಿದ್ದು, ಅದಕ್ಕಾಗಿ ಬಿಜೆಪಿ ಮುಸ್ಲಿಮರಿಗೆ ಮಣೆ ಹಾಕುತ್ತಿದೆ. ಆದರೆ ಅದೇ ಕರ್ನಾಟಕದಲ್ಲಿ ಮುಸ್ಲಿಮರ ಮೇಲೆ ದೌರ್ಜನ್ಯ ನಡೆಸುತ್ತಿದೆ ಎಂದು ಆರೋಪಿಸಿದ ಅವರು, ಕಾಂಗ್ರೆಸ್ ಮತ್ತು ಬಿಜೆಪಿಗಳೆರಡು ಕಾರ್ಮಿಕ ವಿರೋಧಿ ನೀತಿಯನ್ನು ಅನುಸರಿಸುತ್ತಿವೆ ಎಂದು ಕಿಡಿಕಾರಿದರು.

ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜಿಲ್ಲೆಯ ಗುಪ್ಪೇಗಾಲ ಎಂಬಲ್ಲಿ ಬಿಸಿಯೂಟಕ್ಕೆ ದಲಿತ ಮಹಿಳೆಯೊಬ್ಬಳು ಅಡುಗೆ ಮಾಡುತ್ತಿದ್ದಾಳೆ ಎನ್ನುವ ಕಾರಣಕ್ಕೆ ಅಲ್ಲಿ ಇದುವರೆಗೂ ಆಕೆ ಮಾಡಿದ ಅಡುಗೆಯನ್ನು ಬಡಿಸಲಾಗುತ್ತಿಲ್ಲ. ಕಾರ್ಮಿಕರು, ದಲಿತರು ಎಲ್ಲಿಯವರೆಗೆ ಎಚ್ಚೆತ್ತುಕೊಳ್ಲುವುದಿಲ್ಲವೋ ಅಲ್ಲಿಯ ವರೆಗೆ ಇಂತಹಾ ದೌರ್ಜನ್ಯಗಳು ನಡೆಯುತ್ತಲೇ ಇರುತ್ತವೆ ಎಂದವರು ಆಕ್ರೋಶ ವ್ಯಕ್ತಪಡಿಸಿದರು.

ಪಕ್ಷದ ಹಿರಿಯ ಮುಖಂಡ ಯು. ದಾಸ್ ಭಂಡಾರಿ ಧ್ವಜಾರೋಹಣಗೈದರು. ಜಿಲ್ಲಾ ಕಾರ್ಯಕಾರಿ ಮಂಡಳಿ ಸದಸ್ಯರಾದ ಕೆ. ಶಂಕರ್ , ವಿಶ್ವನಾಥ ರೈ, ಭಾಲಕೃಷ್ಣ ಶೆಟ್ಟಿ, ಜಿಲ್ಲಾ ಸಮಿತಿ ಸದಸ್ಯರಾದ ಹೆಚ್, ನರಸಿಂಹ, ರಾಜೀವ ಪಡುಕೋಣೆ, ವೆಂಕಟೇಶ್ ಕೋಣಿ, ಜಿ.ಡಿ.ಸಂಜು, ಜಯಂತ ಉಪಸ್ಥಿತರಿದ್ದರು.

ಇದೇ ಸಂದರ್ಭ ಕುಂದಾಪುರ ತಾಲೂಕು ಸಮಿತಿಯನ್ನು ಬರ್ಖಾಸ್ತುಗೊಳಿಸಿ ಕುಂದಾಪುರ ವಲಯ ಮತ್ತು ಬೈಂದೂರು ವಲಯ ಸಮಿತಿಗಳನ್ನು ಅಸ್ತಿತ್ವಕ್ಕೆ ತರಲಾಯಿತು. ಬೈಂದೂರು ವಲಯ ಸಮಿತಿ ಕಾರ್ಯದರ್ಶಿಯಾಗಿ ಸುರೇಶ್ ಕಲ್ಲಾಗರ ಮತ್ತು ಕುಂದಾಪುರ ವಲಯ ಸಮಿತಿ ಕಾರ್ಯದರ್ಶಿಯನ್ನಾಗಿ ಹೆಚ್. ನರಸಿಂಹ ಅವರನ್ನು ಸಮ್ಮೇಳನ ಆಯ್ಕೆ ಮಾಡಿತು. ಮಹಾಬಲ ವಡೇರಹೋಬಳಿ ಸ್ವಾಗತಿಸಿದರು. ಸುರೇಶ್ ಕಲ್ಲಾಗರ ವಂದಿಸಿದರು.

Write A Comment