ಮಂಗಳೂರು, ಡಿ.5: ವಿಶ್ವ ಕಂಡ ಅತೀ ದೊಡ್ಡ ರಾಸಾಯನಿಕ ದುರಂತಗಳಲ್ಲಿ ಒಂದಾಗಿರುವ 1984ರ ಭೋಪಾಲ್ ಅನಿಲ ದುರಂತದ ಹಿನ್ನೆಲೆಯಲ್ಲಿ ಡಿಸೆಂಬರ್ 4ರಂದು ರಾಷ್ಟ್ರಾದ್ಯಂತ ರಾಸಾಯನಿಕ ದುರಂತ ನಿವಾರಣಾ ದಿನವನ್ನಾಗಿ ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬೈಕಂಪಾಡಿಯ ಭಾರತ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ ಎಲ್‌ಪಿಜಿ ಬಾಟ್ಲಿಂಗ್ ಸ್ಥಾವರದಲ್ಲಿ ಅಚಾನಕ್ಕಾಗಿ ಅನಿಲ ಸೋರಿಕೆಯಾಗಿ ಬೆಂಕಿ ಹತ್ತಿಕೊಂಡ ಪರಿಣಾಮ ಉಂಟಾಗಬಹುದಾದ ಅಪಾಯದ ಸಂದರ್ಭ ಕೈಗೊಳ್ಳಬೇಕಾದ ತುರ್ತು ಕ್ರಮಗಳ ಕುರಿತಂತೆ ಅಣಕು ಪ್ರದರ್ಶನವನ್ನು ಆಯೋಜಿಸಲಾಯಿತು.
ಬೈಕಂಪಾಡಿಯಲ್ಲಿರುವ ಈ ಅನಿಲ ಬಾಟ್ಲಿಂಗ್ ಸ್ಥಾವರವು 650 ಮೆಟ್ರಿಕ್ ಟನ್ ಎಲ್‌ಪಿಜಿ ಶೇಖರಣಾ ಸಾಮರ್ಥ್ಯ ಹೊಂದಿದ್ದು, ಎಲ್‌ಪಿಜಿ ಸ್ಪಿಯರ್‌ನ ಮುಖ್ಯ ಪೈಪ್‌ಲೈನಿಂದ ಲೀಕ್ ಸಂಭವಿಸಿ, ವೇಪರ್ ಕ್ಲೌಡ್ ಉಂಟಾಗಿ ನಂತರ ಇಡೀ ಸ್ಪಿಯರ್ ಬೆಂಕಿಯಿಂದ ಆವರಿಸಿದಾಗ ತಕ್ಷಣ ಸಿಬ್ಬಂದಿ ಎಚ್ಚರಿಕೆಯ ಕರೆಗಂಟೆಯೊಂದಿಗೆ ರಕ್ಷಣಾ ಕಾರ್ಯಕ್ಕೆ ಮುಂದಾಗುತ್ತಾರೆ. ಈ ಸಂದರ್ಭ ಸಮೀಪದ ಎಂಆರ್‌ಪಿಎಲ್‌ನ ಅಗ್ನಿಶಾಮಕ ವಾಹನವು ಆಗಮಿಸಿ ಬೆಂಕಿ ನಂದಿಸಲು ಪ್ರಯತ್ನಿಸಿದರೆ, ರಕ್ಷಣಾ ಕಾರ್ಯಕರ್ತರು ಅಪಾಯದಲ್ಲಿರುವ ಕಾರ್ಮಿಕರನ್ನು ತುರ್ತು ಚಿಕಿತ್ಸೆಗೆ ಕರೆದೊಯ್ಯುವುದು, ಹಾಗೂ ಈ ರೀತಿಯ ಅವಘಡದಿಂದ ಕಾರ್ಮಿಕರನ್ನು ಹಾಗೂ ಎನ್‌ಎಂಪಿಟಿ ವಸತಿ ಸಮುಚ್ಚಯದ ರಸ್ತೆಯಲ್ಲಿನ ಸಾರ್ವಜನಿಕರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವ ಅಣಕು ಪ್ರದರ್ಶನವನ್ನು ನಡೆಸಲಾಯಿತು.
ಜಿಲ್ಲಾ ವಿಪತ್ತು ನಿರ್ವಹಣೆ ಪ್ರಾಧಿಕಾರ, ಜಿಲ್ಲಾ ಬಿಕ್ಕಟ್ಟು ಪರಿಹಾರ ಸಮಿತಿ ಮತ್ತು ದ.ಕ. ಜಿಲ್ಲಾಡಳಿತದ ಸಹಭಾಗಿತ್ವದಲ್ಲಿ ಅಣಕು ಪ್ರದರ್ಶನ ನಡೆಯಿತು. ಪಣಂಬೂರಿನ ಎಂಸಿಎಫ್ ಲಿಮಿಟೆಡ್ ಕಾರ್ಖಾನೆಯ ಎಮರ್ಜೆನ್ಸಿ ಕಂಟ್ರೋಲ್ ರೂಂನ್ನು ಆಫ್ ಸೈಟ್ ಎಮರ್ಜೆನ್ಸಿ ಲೋಕಲ್ ಕಂಟ್ರೋಲ್ ರೂಂ ಆಗಿ ಅಣಕು ಪ್ರದರ್ಶನದಲ್ಲಿ ಉಪಯೋಗಿಸಲಾಯಿತು. ಗೃಹ ರಕ್ಷಕ, ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಯ ವಾಹನಗಳು ಹಾಗೂ ಘಟನೆಯಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗಳಿಗೆ ಸಾಗಿಸಲು ಎಂಸಿಎಫ್, ಬಿಎಎಸ್‌ಎಫ್, ಎಂಆರ್‌ಪಿಎಲ್, ಸೀಕ್ವೆಂಟ್ ಸೈಂಟಿಫಿಕಲ್ ಲಿ., ಪ್ರೈಮಸಿ ಇಂಡಸ್ಟ್ರೀಸ್, ಕೆಐಒಸಿಎಲ್ ಲಿಮಿಟೆಡ್, ಕಾರ್ಡೊಲೈಟ್ ಸ್ಪೆಷಾಲಿಟಿ ಕೆಮಿಕಲ್ಸ್ ಇಂಡಿಯಾ, ಒಎಂಪಿಎಲ್ ಕಾರ್ಖಾನೆಗಳ ಆ್ಯಂಬುಲೆನ್ಸ್ ವ್ಯಾನ್‌ಗಳನ್ನು ಉಪಯೋಗಿಸಲಾಯಿತು.
ಬಳಿಕ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ವಿವಿಧ ಸಂಸ್ಥೆಗಳ ವೀಕ್ಷಕರು ಪ್ರದರ್ಶನದಲ್ಲಿ ಕಂಡು ಬಂದ ಗಮನೀಯ ಅಂಶಗಳು ಹಾಗೂ ಸುಧಾರಣಾ ಅಂಶಗಳ ಕುರಿತಂತೆ ವಿವರ ನೀಡಿದರು. ಮಂಗಳೂರು ಸಹಾಯಕ ಆಯುಕ್ತ ಡಾ.ಅಶೋಕ್, ಜಿಲ್ಲಾ ಬಿಕ್ಕಟ್ಟು ಪರಿಹಾರ ಸಮಿತಿಯ ಶ್ರೀನಿಕೇತನ್, ಎಂಸಿಎಫ್‌ನ ನಿರ್ದೇಶಕ ಪ್ರಭಾಕರ ರಾವ್, ಬಿಪಿಸಿಎಲ್‌ನ ದಿನಕರ ತೋನ್ಸೆ, ಅಗ್ನಿಶಾಮಕ ಇಲಾಖೆಯ ಅಧೀಕ್ಷಕ ವರದರಾಜನ್ ಉಪಸ್ಥಿತರಿದ್ದು ಸಲಹೆ ಸೂಚನೆ ನೀಡಿದರು. ಜಿಲ್ಲಾ ಕಾರ್ಖಾನೆಗಳ ಉಪ ನಿರ್ದೇಶಕ ನಂಜಪ್ಪ ಕಾರ್ಯಕ್ರಮ ನಿರ್ವಹಿಸಿದರು.






